ಕೊನೇ ಚುನಾವಣೆಯಲ್ಲಿ ಕೋಲಾರವೇ ಸಿದ್ದು ಅಖಾಡವಾಗುತ್ತಾ. ಸಿದ್ದರಾಮಯ್ಯ ವರುಣಾ, ಬಾದಾಮಿ, ಚಾಮುಂಡೇಶ್ವರಿ ಮೂರನ್ನೂ ಬಿಟ್ಟು ಕೋಲಾರದಲ್ಲಿ ನಿಲ್ತಾರಾ? ಚಾಮುಂಡಿರಾಮಯ್ಯ, ವರುಣಾರಾಮಯ್ಯ, ಬಾದಾಮಿ ರಾಮಯ್ಯ ಈ ಬಾರಿ ಕೋಲಾರಾಮಯ್ಯರಾಗ್ತಾರಾ? ಈಗ ಕರ್ನಾಟಕ ರಾಜಕೀಯದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕೋಲಾರ ವ್ಯೂಹ ತಯಾರಾಗುತ್ತಿದೆ. ಸಿದ್ದು ಹೊಸ ಅಖಾಡ ಇವತ್ತೇ ಫಿಕ್ಸ್ ಆಗುವ ಚಾನ್ಸ್ ಜಾಸ್ತಿ. ರಾಜ್ಯದ ಕಾಂಗ್ರೆಸ್ಸಿಗರ, ಮತದಾರರ ನಿರೀಕ್ಷೆಗೆ ಯಕ್ಷಪ್ರಶ್ನೆಗೆ ಭಾನುವಾರವೇ ಉತ್ತರ ಸಿಗಲಿದೆ.

ಇದು ಅಚ್ಚರಿಯೂ ಅಲ್ಲ. ಅನಿರೀಕ್ಷಿತವೂ ಅಲ್ಲ. ಸಿದ್ದರಾಮಯ್ಯ ಕೋಲಾರ ವಿಧಾನಸಭಾ ಕ್ಷೇತ್ರದಿಂದಲೇ ಸ್ಪರ್ಧಿಸಲು ತಯಾರಾಗಿರುವುದು ನಿಗೂಢ ರಹಸ್ಯವೂ ಅಲ್ಲ. ಇವತ್ತಿಡೀ ದಿನ ಕೋಲಾರದಲ್ಲಿ ಇರಲಿರುವ ಸಿದ್ದು, ಗ್ರೌಂಡ್ ರಿಯಾಲಿಟಿ ನೋಡುತ್ತಿದ್ದಾರೆ.
ಸಿದ್ದು ಕೋಲಾರ ಯಾತ್ರೆಯಲ್ಲಿ ಕೋಲಾರಮ್ಮ ದೇವಾಲಯ, ಮೆಥೋಡಿಸ್ಟ್ ಚರ್ಚ್, ಕಾಲೇಜ್ ಸರ್ಕಲ್ನಲ್ಲಿರೋ ಮಹರ್ಷಿ ವಾಲ್ಮೀಕಿ ಪ್ರತಿಮೆ, ಇಟಿಸಿಎಂ ವೃತ್ತದಲ್ಲಿರೋ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ, ಮಹಾತ್ಮ ಗಾಂಧಿ ಪ್ರತಿಮೆ, ಬಂಗಾರಪೇಟೆ ವೃತ್ತದಲ್ಲಿರೋ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆ, ಕನಕ ಮಂದಿರ, ಯೋಗಿ ಶ್ರೀ ನಾರಾಯಣ ಯತೀಂದ್ರ ಪ್ರತಿಮೆ, ಕ್ಲಾಕ್‌ಟವರ್ ದರ್ಗಾ, ವೇಮಗಲ್‌ರಸ್ತೆಯ ಕುರುಬರಹಳ್ಳಿ ಗೇಟ್ ಬಳಿಯಿರುವ ಶ್ರೀ ಆಂಜನೇಯ ದೇವಾಲಯ, ಗರುಡಾಪಾಳ್ಯದಲ್ಲಿರುವ ದಿವಂಗತ ಭೈರೇಗೌಡ ಸಮಾಧಿ ಭೇಟಿ ಇದೆ. ದೇವಸ್ಥಾನ-ಚರ್ಚ್-ದರ್ಗಾ ಭೇಟಿ ಮೂಲಕ ಹಿಂದೂ-ಕ್ರೈಸ್ತ-ಮುಸಲ್ಮಾನರನ್ನೂ ತಲುಪಲಿರುವ ಸಿದ್ದು, ಕುರುಬರಿಗಾಗಿ ರಾಯಣ್ಣ, ಕನಕ ಪ್ರತಿಮೆ, ದಲಿತರಿಗಾಗಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುತ್ತಾರೆ. ಜಿಲ್ಲೆಯ ಪ್ರತಿಷ್ಠಿತ ನಾಯಕ ಭೈರೇಗೌಡರ ಸಮಾಧಿ ಸ್ಥಳಕ್ಕೆ ಭೇಟಿ ನೀಡುವ ಮೂಲಕ ಒಕ್ಕಲಿಗರ ಮನವೊಲಿಕೆಯನ್ನೂ ಮಾಡ್ತಾರೆ. ಅಂದಹಾಗೆ ಇದಕ್ಕೂ ಮುನ್ನ 2 ಸಮೀಕ್ಷೆ ನಡೆಸಲಾಗಿದ್ದು ಒಂದು ಸಮೀಕ್ಷೆಯಲ್ಲಿ ಸಿದ್ದು ಪರ ಶೇ.60 ಹಾಗೂ ಇನ್ನೊಂದು ಸಮೀಕ್ಷೆಯಲ್ಲಿ ಶೇ.59 ಜನಬೆಂಬಲ ವ್ಯಕ್ತವಾಗಿದೆ.
ಸಿದ್ದುರನ್ನು ಗೆಲ್ಲಿಸ್ತೇವೆ ಎಂದು ಹಾಲಿ ಶಾಸಕ ಶ್ರೀನಿವಾಸ್ ಗೌಡ್ರು ( ಜೆಡಿಎಸ್ ಶಾಸಕ. ಈಗ ಕಾಂಗ್ರೆಸ್ಸಿಗ) ಕೂಡಾ ಹೇಳಿದ್ದಾರೆ.
ಜಿಲ್ಲಾ ಕಾಂಗ್ರೆಸ್ ನಾಯಕರು ರೆಡಿಯಿದ್ದಾರೆ. ಆದರೆ ಕೋಲಾರ ಕಾಂಗ್ರೆಸ್’ನಲ್ಲಿ ಎರಡು ಬಣಗಳಿವೆ.
ಒಂದು ಬಣಕ್ಕೆ ಮಾಜಿ ಸಂಸದ ಕೆ.ಎಚ್ ಮುನಿಯಪ್ಪ ಲೀಡರ್, ಮತ್ತೊಂದು ಬಣಕ್ಕೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ನಾಯಕ. ಒಬ್ಬರ ಮುಖ ಕಂಡ್ರೆ ಒಬ್ರಿಗೆ ಆಗಲ್ಲ. ಇಬ್ಬರೂ ಒಟ್ಟಾಗಿ ಕೆಲಸ ಮಾಡೋ ಭರವಸೆ ಕೊಟ್ಟಿದ್ದಾರಂತೆ. ಆದರೆ ಚಾಮುಂಡೇಶ್ವರಿಯಲ್ಲಿ ಬಿದ್ದಂತಹ ಒಳ ಏಟನ್ನು ಸಿದ್ದರಾಮಯ್ಯ ಮರೆಯಬಾರದು. ಹೀಗಾಗಿ ಟೆನ್ಷನ್ನಿನಲ್ಲಿಯೇ ಸಿದ್ದು ಕೋಲಾರ ಯಾತ್ರೆ ಕೈಗೊಂಡಿದ್ದಾರೆ.



