ಸಿದ್ದೇಶ್ವರ ಶ್ರೀಗಳು ಕಾವಿ ಧರಿಸಿ ಜಗದ್ಗುರುಗಳಂತೆ ಓಡಾಡುತ್ತಿರಲಿಲ್ಲ. ಐಷಾರಾಮಿ ಕಾರು ಇರಲಿಲ್ಲ. ಭಕ್ತರೇ ಕರೆದುಕೊಂಡು ಹೋಗುತ್ತಿದ್ದರು. ಕರೆತಂದು ಬಿಡುತ್ತಿದ್ದರು. ನಿಮ್ಮನ್ನು ಕರೆದುಕೊಂಡು ಹೋಗೋಕೆ 6 ಗಂಟೆಗೆ ಬರುತ್ತೇನೆ ಎಂದವರು ಹತ್ತು ನಿಮಿಷ ತಡವಾದರೆ ಅದೇ ಹಾದಿಯಲ್ಲಿ ನಡೆಯುತ್ತಾ ಹೊರಟು ಬಿಡುತ್ತಿದ್ದರು. ಅದಕ್ಕೆ ಬೇಸರವನ್ನೆಂದೂ ಮಾಡಿಕೊಳ್ಳುತ್ತಿರಲಿಲ್ಲ.



ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಸಿದ್ದಪ್ಪಾಜಿ ನರೇಂದ್ರ ಮೋದಿಯವರ ಜೊತೆ ವೇದಿಕೆ ಹಂಚಿಕೊಂಡಾಗ ಹಲವು ಭಕ್ತರು ಅಚ್ಚರಿಪಟ್ಟಿದ್ದರು. ಆ ಅಚ್ಚರಿಗೆ ಕಳಶವಿಟ್ಟಂತೆ ತುಂಬಿದ ವೇದಿಕೆಯಲ್ಲಿ ಮೋದಿಯನ್ನು ಅಪಾರವಾಗಿ ಹೊಗಳಿಬಿಟ್ಟಿದ್ದರು. ಸಿದ್ದೇಶ್ವರ ಸ್ವಾಮೀಜಿಯವರಿಂದ ಹೊಗಳಿಸಿಕೊಂಡ ಏಕೈಕ ರಾಜಕಾರಣಿ ಪ್ರಧಾನಿ ನರೇಂದ್ರ ಮೋದಿ. ಅವರಿಗೆ ರಾಜಕೀಯ ನಾಯಕರು ಗೊತ್ತಿರಲಿಲ್ಲವೆಂದಲ್ಲ, ಆದರೆ ಯಾರನ್ನೂ ವಿಶೇಷವಾಗಿ ಮಾತನಾಡಿಸುವ ಗೋಜಿಗೆ ಹೋಗುತ್ತಿರಲಿಲ್ಲ. ಅವರನ್ನು ಭೇಟಿ ಮಾಡಲೆಂದು ಆಶ್ರಮಕ್ಕೆ ಹೋದರೆ ವಿಶೇಷ ಆತಿಥ್ಯವನ್ನೇನೂ ಕೊಡುತ್ತಿರಲಿಲ್ಲ. ಎಲ್ಲ ಭಕ್ತರಂತೆ ಅವರೂ ಒಬ್ಬರು ಎಂಬಂತೆಯೇ ನೋಡುತ್ತಿದ್ದರು. ಯಾವ ರಾಜಕಾರಣಿಯ ಮನೆ ಬಾಗಿಲಿಗೂ ಹೋದವರಲ್ಲ. ಯಾರೊಬ್ಬರ ಪರ ಲಾಬಿ ಮಾಡಿದವರಲ್ಲ. ಯಾವ ರಾಜಕಾರಣಿಯೂ ಅವರಿಗೆ ಆತ್ಮೀಯ ಅಂತರಂಗದ ಮಿತ್ರರಾಗಲೇ ಇಲ್ಲ.
ಅವರ ಪ್ರವಚನಗಳಿಗೆ ಹಲವು ರಾಜಕಾರಣಿಗಳೂ ಹೋಗುತ್ತಿದ್ದರು. ಆದರೆ ಅವರಿಗೂ ಅಷ್ಟೆ, ವೇದಿಕೆಯ ಕೆಳಗೆ ಚಾಪೆ ಹಾಸಿಕೊಂಡು ಕೂರಬೇಕು, ಅಷ್ಟೆ. ಎಂತಹ ಶ್ರೀಮಂತನೇ ಆಗಲಿ, ಎಂತಹ ದೊಡ್ಡ ಮಂತ್ರಿಯೇ ಆಗಲಿ, ಮುಖ್ಯಮಂತ್ರಿಯೇ ಆಗಲಿ.. ಅವರಿಗೆ ಬಡವರೂ ಒಂದೇ. ಬಲ್ಲಿದನೂ ಒಂದೇ.

ಹೀಗಾಗಿಯೇ ನರೇಂದ್ರ ಮೋದಿ ಜೊತೆ ವೇದಿಕೆ ಹಂಚಿಕೊಂಡಾಗ ಹಲವರು ಅಚ್ಚರಿಯಿಂದ ಬೆರಗಾಗಿದ್ದರು. ಆದರೆ ಮೋದಿಯ ವಿರೋಧಿಗಳು ಕೂಡಾ ಸಿದ್ದಪ್ಪಾಜಿಯವರನ್ನು ಟೀಕಿಸೋಕೆ ಹೋಗಿರಲಿಲ್ಲ. ಏಕೆಂದರೆ ಸಿದ್ದಪ್ಪಾಜಿಯವರ ಪ್ರಾಮಾಣಿಕತೆ ಅವರಿಗೆ ಗೊತ್ತಿತ್ತು. ಅವರು ಕೇವಲ ಪದ್ಮಶ್ರೀಯನ್ನಷ್ಟೇ ಅಲ್ಲ, ಕರ್ನಾಟಕ ವಿವಿ ಕೊಡಮಾಡಲು ಬಯಸಿದ್ದ ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನೂ ನಿರಾಕರಿಸಿದ್ದರು. ಅವರು ನಿರಾಕರಣೆ ಮಾಡಿದ್ದ ಪ್ರಶಸ್ತಿಗಳ ಸಂಖ್ಯೆ ದೊಡ್ಡದು.
ಅವರ ಪ್ರವಚನಕ್ಕೆ ದುಡ್ಡು ಕೊಡಬೇಕಿರಲಿಲ್ಲ. ಭಕ್ತರಿಗೆ ಊಟ, ಮತ್ತಿತರ ವ್ಯವಸ್ಥೆ ಮಾಡುವುದಕ್ಕೆ ಚಂದಾ ಎತ್ತಿದ್ದು ಗೊತ್ತಾದಾಗ ವೇದಿಕೆಯಲ್ಲೇ ಬಹಿರಂಗವಾಗಿ ಹೇಳಿ ಚಂದಾ ಕೊಟ್ಟಿದ್ದವರಿಗೆ ವಾಪಸ್ ಕೊಡಿಸಿದ ಉದಾಹರಣೆಗಳಿವೆ. ಭಕ್ತರು ಕೊಡುವ ಕಾಣಿಕೆಗಳಿಗೆ ನಮಸ್ಕರಿಸಿ, ಅಲ್ಲಿಯೇ ಯಾರಾದರೊಬ್ಬರಿಗೆ ಕೊಟ್ಟು ಬರಿಗೈಲಿಯೇ ಹೋಗುತ್ತಿದ್ದ ಸ್ವಾಮಿಗಳಿಗೆ ರಾಜಕೀಯ ಕಟ್ಟಿಕೊಂಡು ಏನಾಗಬೇಕಿತ್ತು.. ಅಲ್ಲವೇ..



