ಹಲವು ಟಿವಿ ಚಾನೆಲ್ಲುಗಳು ಸಮೀಕ್ಷೆ ಮಾಡುತ್ತವೆ. ನಾವೇ ನಂ.1 ಎಂದು ಹೇಳಿಕೊಳ್ಳುವ ಟೈಮ್ಸ್ ನೌ, ರಿಪಬ್ಲಿಕ್ ಟಿವಿ, ಇಂಡಿಯಾ ಟಿವಿ, ಇಂಡಿಯಾ ಟುಡೇ, ಎಬಿಪಿ ನ್ಯೂಸ್.. ಹೀಗೆ ಒಂದೆರಡಲ್ಲ.. ಹಲವು ಟಿವಿ ಚಾನೆಲ್ಲುಗಳು, ಏಜೆನ್ಸಿಗಳು ಸಮೀಕ್ಷೆ ನಡೆಸುತ್ತವೆ. ಎಲ್ಲ ಸಮೀಕ್ಷೆಗಳು ಗುಜರಾತ್ನಲ್ಲಿ ಬಿಜೆಪಿಗೆ ಬಹುಮತ ನೀಡಿವೆ. ಕಾಂಗ್ರೆಸ್ಗೆ 2ನೇ ಸ್ಥಾನ ನೀಡಿವೆ. ಆಮ್ ಆದ್ಮಿಗೆ 3ನೇ ಸ್ಥಾನ ಕೊಟ್ಟಿವೆ. ಆಮ್ ಆದ್ಮಿ, ಕಾಂಗ್ರೆಸ್ಸಿನ ವೋಟುಗಳನ್ನು ನುಂಗಲಿದೆ ಎನ್ನುವುದು ಎಲ್ಲ ಸಮೀಕ್ಷೆಗಳ ಸಾರ. ಆದರೆ ಎಲ್ಲರೂ ಕಾಯುತ್ತಿದ್ದ ಟುಡೇಸ್ ಚಾಣಕ್ಯ ಸಮೀಕ್ಷೆ ಅಚ್ಚರಿಗಳ ಮೇಲೆ ಅಚ್ಚರಿ ಕೊಟ್ಟಿದೆ.

ಟುಡೇಸ್ ಚಾಣಕ್ಯ ಇರುವುದೇ ಅಚ್ಚರಿ ಕೊಡುವುದಕ್ಕೆ. ಸುಮಾರು 15 ವರ್ಷಗಳಿಂದ ಸಮೀಕ್ಷೆ ನಡೆಸುತ್ತಿರೋ ಟುಡೇಸ್ ಚಾಣಕ್ಯ ಸಮೀಕ್ಷೆಗಳು ಫೇಲ್ ಆಗಿದ್ದು ಅಪರೂಪ. 2017ರಲ್ಲಿ ಬಿಜೆಪಿ ಲೋಕಸಭೆಯಲ್ಲಿ ಬಹುಮತ ಗಳಿಸಲಿದೆ, 2019ರಲ್ಲಿ 300ರ ಗಡಿ ದಾಟಲಿದೆ ಎಂದು ಸಮೀಕ್ಷೆ ಹೇಳಿದ್ದಾಗ ಅದು ಮಾಧ್ಯಮಗಳ ಪಾಲಿಗೆ ಅತಿರಂಜನೀಯ ಸಮೀಕ್ಷೆ ಎನಿಸಿತ್ತು. ಉತ್ತರ ಪ್ರದೇಶದಲ್ಲೂ ಅಷ್ಟೆ, ಉತ್ಪ್ರೇಕ್ಷಿತ ಅಂಕಿಅಂಶ ನೀಡುತ್ತಾರೆಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಅವೆಲ್ಲವೂ ನಿಜವಾಗಿದೆ ಎನ್ನುವುದು ಟುಡೇಸ್ ಚಾಣಕ್ಯ ಸಮೀಕ್ಷೆಯ ವಿಶೇಷ. ದೆಹಲಿಯಲ್ಲಿ ಆಮ್ ಆದ್ಮಿ ಫಲಿತಾಂಶವನ್ನೂ ಸರಿಯಾಗಿಯೇ ಲೆಕ್ಕ ಹಾಕಿತ್ತು ಟುಡೇಸ್ ಚಾಣಕ್ಯ. ಈಗ ಗುಜರಾತ್ ಮತ್ತು ಹಿಮಾಚಲದ ಸರದಿ.

ಎಲ್ಲ ಸಮೀಕ್ಷೆಗಳು ಗುಜರಾತಿನಲ್ಲಿ ಬಿಜೆಪಿಗೆ ಕನಿಷ್ಠ 110ರಿಂದ 140 ಸ್ಥಾನ ನೀಡಿವೆ. ಇದು ಸರಾಸರಿ ಲೆಕ್ಕವಷ್ಟೇ. ಕೆಲವು ಸಮೀಕ್ಷೆಗಳು ಕಡಿಮೆ ಸೀಟು ಕೊಟ್ಟಿವೆ. ಕೆಲವು ಹೆಚ್ಚು. ಆದರೆ ಟುಡೇಸ್ ಚಾಣಕ್ಯ ಸಮೀಕ್ಷೆ 150ಕ್ಕೂ ಹೆಚ್ಚು ಸ್ಥಾನ ನೀಡಿದೆ. ಪ್ಲಸ್-ಮೈನಸ್ ಅಂದಾಜು 11 ಎಂದಿದೆ. ಅಂದರೆ ಬಿಜೆಪಿ ಗುಜರಾತಿನಲ್ಲಿ ಕನಿಷ್ಠ 143, ಗರಿಷ್ಠ 157 ಸ್ಥಾನ ಗೆಲ್ಲಬೇಕು. ಇಂಡಿಯಾ ಟುಡೇ ಕೂಡಾ 150 ಸ್ಥಾನ ನೀಡಿದೆಯಾದರೂ ಪ್ಲಸ್-ಮೈನಸ್ ಅಂದಾಜು ಸುಮಾರು 20 ಸ್ಥಾನ ನೀಡಿದೆ. ಅದನ್ನು ಸಮೀಕ್ಷೆಯ ಲೆಕ್ಕ ಎನ್ನೋಕೆ ಆಗಲ್ಲ. ಏಕೆಂದರೆ ಸಮೀಕ್ಷೆಗಳ ಅಂದಾಜು ಪ್ಲಸ್-ಮೈನಸ್ ಅಂದಾಜು 10ರ ಆಸುಪಾಸಿನಲ್ಲಿಯೇ ಇರಬೇಕು. ಹೀಗಾಗಿ ಚಾಣಕ್ಯ ಸಮೀಕ್ಷೆ ಕುತೂಹಲ ಹುಟ್ಟಿಸಿರುವುದು ಸತ್ಯ.
ಕಾಂಗ್ರೆಸ್ 19 ಸ್ಥಾನ ಗಳಿಸಬಹುದು ಎಂದಿದೆ ಚಾಣಕ್ಯ ಸಮೀಕ್ಷೆ. ಪ್ಲಸ್ ಮೈನಸ್ ಅಂದಾಜು 09. ಆಮ್ ಆದ್ಮಿಗೆ 11ರ ರಿಸಲ್ಟ್ ಕೊಟ್ಟಿರೋ ಚಾಣಕ್ಯ 7ರ ಪ್ಲಸ್ ಮೈನಸ್ ಅಂದಾಜು ಕೊಟ್ಟಿದೆ. ಇತರರಿಗೆ ಕೇವಲ 2 ಸ್ಥಾನ ನೀಡಿದೆ. ಇದು ಎಲ್ಲ ಸಮೀಕ್ಷೆಗಳಿಗಿಂತಲೂ ಭಿನ್ನವಾಗಿದೆ.
ಕೆಲವರು ಚಾಣಕ್ಯ ಸಂಸ್ಥೆಯನ್ನು ಹಾಗೂ ಅದರ ಸಮೀಕ್ಷೆಯನ್ನು ಬಿಜೆಪಿ ಪ್ರೊಪಗಾಂಡ ಎನ್ನುವವರೂ ಇದ್ದಾರೆ. ಆದರೆ ಚಾಣಕ್ಯ ಅದಕ್ಕೆಲ್ಲ ತಲೆ ಕೆಡಿಸಿಕೊಂಡಿಲ್ಲ. ಕರ್ನಾಟಕ, ಪ.ಬಂಗಾಳ, ಬಿಹಾರ, ತಮಿಳುನಾಡು, ದೆಹಲಿ.. ಹೀಗೆ ಹಲವು ರಾಜ್ಯಗಳಲ್ಲಿ ಬಿಜೆಪಿಗೆ ವ್ಯತಿರಿಕ್ತವಾದ ಸಮೀಕ್ಷೆಯನ್ನೂ ನೀಡಿದೆ. ಬಿಜೆಪಿಯವರಷ್ಟೇ ಅಲ್ಲ, ಪ್ರತಿಯೊಬ್ಬರೂ ಚಾಣಕ್ಯ ಸಮೀಕ್ಷೆಯನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡುವಂತಾಗಿದೆ.
ಗುಜರಾತಿನಲ್ಲಿ ಬಿಜೆಪಿ ಶೇ.50ರಷ್ಟು ವೋಟ್ ಶೇರ್ ಪಡೆಯಲಿದ್ದು, ಕಾಂಗ್ರೆಸ್ ಶೇ.26 ಹಾಗೂ ಆಮ್ ಆದ್ಮಿ ಶೇ.20ರಷ್ಟು ವೋಟು ಪಡೆಯಲಿದೆ.

ಕೇವಲ ಗುಜರಾತಿನಲ್ಲಷ್ಟೇ ಅಲ್ಲ, ಅತ್ತ ಹಿಮಾಚಲದಲ್ಲೂ ಅಷ್ಟೆ. ಇಂಡಿಯಾ ಟಿವಿ ಬಿಟ್ಟರೆ ಬಹುತೇಕ ಸಮೀಕ್ಷೆಗಳು ಬಿಜೆಪಿಗೆ ಬಹುಮತ ನೀಡಿವೆ. ಆದರೆ ಇಂಡಿಯಾ ಟಿವಿ ಮಾತ್ರ ಕಾಂಗ್ರೆಸ್ಗೆ ಅಧಿಕಾರ ರಚನೆಯ ಅವಕಾಶ ಹೆಚ್ಚು ಎಂದಿದೆ. ಟುಡೇಸ್ ಚಾಣಕ್ಯ ಪ್ರಕಾರ ಹಿಮಾಚಲದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಸಮಬಲದ ಹೋರಾಟ ಸಾಧಿಸಲಿವೆ. ಪ್ಲಸ್ ಮೈನಸ್ 7ರ ಅನುಪಾತದಲ್ಲಿ ಎರಡೂ ಪಕ್ಷಗಳಿಗೆ 33 ಸ್ಥಾನ ನೀಡಿದೆ ಚಾಣಕ್ಯ. ಅಂದರೆ ಫೋಟೋ ಫಿನಿಶ್ ರಿಸಲ್ಟ್ ಹೆಚ್ಚು ಬರಲಿವೆ. ಅಧಿಕೃತ ರಿಸಲ್ಟ್ ಬರುವವರೆಗೆ ಹೇಳೋಕೆ ಸಾಧ್ಯವಾಗದಂತ ಸ್ಥಿತಿ ಹಿಮಾಚಲ ಪ್ರದೇಶದಲ್ಲಿ ಇರಲಿದೆ.
ಆದರೆ.. ಏನೇ ಇದ್ದರೂ ಅಧಿಕೃತ ಫಲಿತಾಂಶಕ್ಕೆ ಡಿಸೆಂಬರ್ 8ವರೆಗೆ ಕಾಯಲೇಬೇಕು. ಬೇರೆ ದಾರಿಯಲ್ಲ.



