ಹಿಂದೂ ಶಬ್ಧ ನಮ್ಮದಲ್ಲ ಅದು ಪರ್ಷಿಯನ್ನರಿಂದ ಬಂದಿದ್ದು. ಭಾರತಕ್ಕೂ ಹಿಂದೂ ಪದಕ್ಕೂ ಸಂಬಂಧವೇ ಇಲ್ಲ. ಪರ್ಷಿಯನ್ ಎಲ್ಲಿಯದು ಎಂದು ಗೊತ್ತಲ್ಲ. ಇರಾಕ್, ಇರಾನ್ ಕಡೆಯದ್ದು. ನೀವು ವಿಕಿಪೀಡಿಯಾದಲ್ಲಿ ಹುಡುಕಿದರೆ ಸತ್ಯ ಗೊತ್ತಾಗುತ್ತೆ. ಹಿಂದು ಶಬ್ಧ ಹೇಗೆ ಬಂತು ಅನ್ನೋದು ಚರ್ಚೆಯಾಗಬೇಕು. ಹಿಂದೂ ಶಬ್ಧದ ಅರ್ಥ ಗೊತ್ತಾದ್ರೆ ನಿಮಗೆ ನಾಚಿಕೆ ಬರುತ್ತೆ. ಹಿಂದೂ ಶಬ್ದದ ಅರ್ಥ ಬಹಳ ಅಶ್ಲೀಲವಾಗಿದೆ. ಎಲ್ಲಿಂದಲೋ ತಂದು ನಮ್ಮ ಮೇಲೆ ಹೇರುತ್ತಿದ್ದಾರೆ. ಇದು ಯಾರದ್ದು ಎಲ್ಲಿಂದ ಬಂತು ಅಂತಾ ಚರ್ಚೆ ಆಗಲಿ. ಇಲ್ಲಿ ಬಹಳ ವಿಚಿತ್ರ ಇತಿಹಾಸ ಇದೆ.. ಹೀಗೆ ಹೇಳಿದವರು ಕಾಂಗ್ರೆಸ್ ಮುಖಂಡ, ಮಾಜಿ ಮಂತ್ರಿ ಸತೀಶ್ ಜಾರಕಿಹೊಳಿ.
ಬೆಳಗಾವಿಯ ನಿಪ್ಪಾಣಿಯಲ್ಲಿ ಇಂಥದ್ದೊಂದು ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ. ಸತೀಶ್ ಜಾರಕಿಹೊಳಿ ಕೇವಲ ಶಾಸಕರಲ್ಲ, ಕೆಪಿಸಿಸಿ ಕಾರ್ಯಾಧ್ಯಕ್ಷರೂ ಹೌದು. ಪಕ್ಷದಲ್ಲಿ ಪ್ರಭಾವಿ ನಾಯಕ. ಸಿದ್ದರಾಮಯ್ಯನವರ ಪರಮಾಪ್ತರಲ್ಲಿ ಒಬ್ಬರು. ಹಿಂದೂ ಎಂಬ ಪದದ ಅರ್ಥವೇ ಅಶ್ಲೀಲ ಎಂದಿದ್ದಾರೆ. ಅಶ್ಲೀಲ ಎಂದರೆ ಏನೆಂದು ಹೇಳಿಲ್ಲ. ಇವರಿಗೆ ಸಾಥ್ ಕೊಟ್ಟವರು ಪೆದ್ದಲಿಂಗ ಮಠದ ಜ್ಞಾನ ಪ್ರಕಾಶ ಸ್ವಾಮೀಜಿ.
ಇಷ್ಟಕ್ಕೂ ಹಿಂದೂ ಪದ ಎಲ್ಲಿಂದ ಬಂತು? ಅವರೇ ಹೇಳಿರುವ ವಿಕಿಪೀಡಿಯಾದ ಪ್ರಕಾರವೇ ಇದು ಸಂಸ್ಕೃತದ ಪದ. ಸಂಸ್ಕೃತ ಮೂಲವೇ ಭಾರತ ಎನ್ನುವುದು ಇತಿಹಾಸ ಹೇಳುವ ಸತ್ಯ. ವಿಕಿಪೀಡಿಯಾದ ಪ್ರಕಾರವೇ ಹಿಂದೂ ಎಂಬ ಪದದಿಂದ ಭಾರತೀಯರನ್ನು ಗುರುತಿಸಿದವರು ಪರ್ಷಿಯನ್ನರೇ. ಅದಕ್ಕೆ ಕಾರಣವೂ ಇದೆ. ಪರ್ಷಿಯನ್ನರು ಭಾರತದ ಕಡೆ ಬಂದಾಗ ಸಿಂಧೂ ನದಿ ತೀರದಲ್ಲಿದ್ದವರು ಹಿಂದೂಗಳು ಎಂದು ಕರೆದರು. ಪರ್ಷಿಯನ್ನರಲ್ಲಿ ಸ ಅಕ್ಷಕರವಿಲ್ಲ. ಸ ಕಾರಕ್ಕೆ ಬದಲಾಗಿ ಹ ಕಾರ ಬಳಸುತ್ತಾರೆ. ಬೆಂಗಾಳಿಗಳು ವ ಅಕ್ಷರದ ಬದಲಿಗೆ ಬ ಅಕ್ಷರ ಬಳಸುತ್ತಾರಲ್ಲ.. ಹಾಗೆಯೇ ಪರ್ಷಿಯನ್ನರು ಸ ಕಾರಕ್ಕೆ ಬದಲು ಹ ಕಾರ ಬಳಸುತ್ತಾರೆ.
ಭಾರತದಲ್ಲಿ ಹಿಂದೂ ಎಂಬ ಪದವೇ ಇರಲಿಲ್ಲ. ನೂರಕ್ಕೆ ನೂರರಷ್ಟು ಸತ್ಯ. ವೇದಗಳಲ್ಲಾಗಲೀ, ಪುರಾಣಗಳಲ್ಲಾಗಲೀ ಉಪನಿಷತ್ತುಗಳಲ್ಲಾಗಲೀ ಹಿಂದೂ ಪದದ ಉಲ್ಲೇಖವಿಲ್ಲ. ಬದಲಿಗೆ ಸನಾತನ ಧರ್ಮ ಎಂಬ ಪದ ಬಳಕೆ ಇದೆ. ಅದಕ್ಕೆ ಕಾರಣವೂ ಇದೆ. ಭಾರತ ಹೊರಗಿನ ಧರ್ಮದ ಸಂಪರ್ಕಕ್ಕೂ ಬಂದಿರಲಿಲ್ಲ. ತಮ್ಮದೊಂದು ಧರ್ಮ, ಅದಕ್ಕೊಂದು ಹೆಸರಿಡಬೇಕು ಎಂಬ ಕಲ್ಪನೆಯೂ ಇರಲಿಲ್ಲ. ಆದರೆ ಸತೀಶ್ ಜಾರಕಿಹೊಳಿಯವರ ವಾದ ಗುರುತ್ವಾಕರ್ಷಣೆ ನಿಯಮ ಕಂಡು ಹಿಡಿಯುವ ಮುನ್ನ ಮೇಲಕ್ಕೆ ಎಸೆದದ್ದು ಭೂಮಿಗೆ ಬೀಳುತ್ತಲೇ ಇರಲಿಲ್ಲ ಎನ್ನುವಂತಿದೆ ಎನ್ನುವ ಮಾತಂತೂ ಸತ್ಯ.
ಇನ್ನು ಹಿಂದೂ ಧರ್ಮ ಎನ್ನುವುದು ಬೇರೆ ಧರ್ಮಗಳಿಗಿಂತ ವಿಭಿನ್ನ. ಹಿಂದೂ ಎನ್ನುವುದು ಜೀವನ ಕ್ರಮ. ಹಿಂದೂ ಧರ್ಮದ ಸ್ಥಾಪಕರಾರು ಎಂಬುದಕ್ಕೂ ಉತ್ತರವಿಲ್ಲ. ಇಸ್ಲಾಂಗೆ ಪೈಗಂಬರ್ ಇರುವಂತೆ, ಕ್ರಿಶ್ಚಿಯನ್ನರಿಗೆ ಯೇಸು ಇರುವಂತೆ ಒಬ್ಬ ವ್ಯಕ್ತಿಯಿಂದ ರೂಪಿತವಾದ ಧರ್ಮವಲ್ಲ. ಅಂದಹಾಗೆ ಹಿಂದೂ ಪದಕ್ಕೆ ಪರ್ಷಿಯನ್ ಭಾಷೆಯಲ್ಲಿ ಅಶ್ಲೀಲ ಅರ್ಥವಿದೆ ಎಂದು ಹೇಳಿದ್ದಾರೆ. ಅಶ್ಲೀಲ ಎಂದರೆ ಏನು? ಅರ್ಥವೇನು ಅನ್ನೋದು ಗೊತ್ತಾಗುತ್ತಿಲ್ಲ. ಪರ್ಷಿಯನ್ ಭಾಷೆಯನ್ನೇನಾದರೂ ಸತೀಶ್ ಜಾರಕಿಹೊಳಿ ಕಲಿತಿದ್ದಾರೆಯೇ?
ಅಂದಹಾಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಈ ಹೇಳಿಕೆಯನ್ನು ವಾಪಸ್ ಪಡೆಯುವಂತೆ ಆದೇಶ ಕೊಟ್ಟಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾಗಿ ಆರ್ಡರ್ ಮಾಡಿದ್ದಾರೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಕೂಡಾ ಈ ಹೇಳಿಕೆ ದುರದೃಷ್ಟಕರ. ತಿರಸ್ಕರಿಸಲು ಅರ್ಹವಾಗಿದೆ ಎಂದಿದ್ದಾರೆ. ಆದರೆ ಸತೀಶ್ ಜಾರಕಿಹೊಳಿಯವರದ್ದು ಮಾತ್ರ ಸಮರ್ಥನೆ. ಸತೀಶ್ ಜಾರಕಿಹೊಳಿ ಎಲ್ಲ ದಾಖಲೆಗಳನ್ನಿಟ್ಟುಕೊಂಡೇ ಹೇಳಿದ್ದಾರಂತೆ. ಇದು ನನ್ನ ದಾಖಲೆಯಲ್ಲ, ಹೇಳಿಕೆಯಲ್ಲ. ದಾಖಲೆಗಳ ಹೇಳಿಕೆ ಎನ್ನುತ್ತಿದ್ದಾರೆ ಸತೀಶ್ ಜಾರಕಿಹೊಳಿ.



