ಹಿಂದೂ ಎಂಬ ಪದ ಬಂದಿದ್ದು ಪರ್ಷಿಯಾದಿಂದ. ಪರ್ಷಿಯಾಗೂ ಭಾರತಕ್ಕೂ ಏನು ಸಂಬಂಧ? ಹಿಂದೂ ಪದಕ್ಕೆ ಅತ್ಯಂತ ಕೆಟ್ಟ ಅರ್ಥವಿದೆ. ಅಶ್ಲೀಲ ಅರ್ಥವಿದೆ ಎಂದು ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದರು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ. ವಿವಾದ ಭುಗಿಲೆದ್ದಿತ್ತು. ಪರಿಸ್ಥಿತಿಯನ್ನು ತಕ್ಷಣ ಅರ್ಥ ಮಾಡಿಕೊಂಡ ರಣದೀಪ್ ಸುರ್ಜೇವಾಲಾ ಸತೀಶ್ ಜಾರಕಿಹೊಳಿಯವರ ಈ ಹೇಳಿಕೆಗೂ, ಪಕ್ಷಕ್ಕೂ ಸಂಬಂಧವಿಲ್ಲ ಎಂದುಬಿಟ್ಟರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಾನು ಕೆಪಿಸಿಸಿ ಅಧ್ಯಕ್ಷನಾಗಿ ತಕ್ಷಣ ಕ್ಷಮಾಪಣೆ ಕೇಳುವಂತೆ ಸೂಚಿಸುತ್ತೇನೆ ಎಂದರು. ಆದರೆ ಅದು ಸತೀಶ್ ಜಾರಕಿಹೊಳಿ. ಕ್ಷಮೆ ಕೇಳೋದಿರಲಿ, ನನ್ನ ಮಾತಿನಲ್ಲಿ ತಪ್ಪಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡ್ತೇನೆ. ರಾಜಕೀಯ ಬಿಡ್ತೇನೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೇ ಒಂದು ಕಮಿಟಿ ಮಾಡಿ. ಸಂಶೋಧಕರ ಮೂಲಕ ನನ್ನ ಹೇಳಿಕೆ ತಪ್ಪು ಎಂದು ಸಾಬೀತು ಮಾಡಿ ಎಂದು ಸವಾಲು ಹಾಕಿದರು. ತೇಪೆ ಹಚ್ಚಲು ಕಾಂಗ್ರೆಸ್ಸಿಗರು ಮಾಡಿದ್ದೆಲ್ಲವನ್ನೂ ಒಂದೇ ಏಟಿನಲ್ಲಿ ತೊಳೆದು ಹಾಕಿದ್ದರು.
ಬಿಜೆಪಿಯವರು ತಿರುಗಿಬಿದ್ದರು. ನಾನು ಸ್ವಾಭಿಮಾನಿ ಹಿಂದೂ ಅಭಿಯಾನ ಕೈಗೊಂಡರು. ರಾಜ್ಯಾದ್ಯಂತ ಪ್ರತಿಭಟನೆಗಳಾದವು. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಸಿಎಂ ಬಸವರಾಜ ಬೊಮ್ಮಾಯಿ, ಸಿಟಿ ರವಿ, ಅರುಣ್ ಸಿಂಗ್, ಆರ್.ಅಶೋಕ್, ಕೆ.ಸುಧಾಕರ್, ನಳಿನ್ ಕುಮಾರ್ ಕಟೀಲು, ಸುನಿಲ್ ಕುಮಾರ್, ಅಶ್ವತ್ಥ್ ನಾರಾಯಣ್, ಈಶ್ವರಪ್ಪ, ಅರಗ ಜ್ಞಾನೇಂದ್ರ.. ಹೀಗೆ ಎಲ್ಲರೂ ತಿರುಗಿಬಿದ್ದರು.
ಕಾಂಗ್ರೆಸ್ಸಿಗರಿಗೆ ಈ ಹೇಳಿಕೆಗೂ ಪಕ್ಷಕ್ಕೂ ಸಂಬಂಧವಿಲ್ಲ. ನಾವು ಈ ಹೇಳಿಕೆ ಒಪ್ಪುವುದಿಲ್ಲ ಎಂಬುದನ್ನು ಬಿಟ್ಟರೆ ಬೇರೇನನ್ನೂ ಮಾಡಲಾಗದ ಸ್ಥಿತಿ. ಅದಕ್ಕೆ ಕಾರಣವೂ ಇದೆ. ಸತೀಶ್ ಜಾರಕಿಹೊಳಿ ಬೆಳಗಾವಿ ಜಿಲ್ಲೆಯ ಪ್ರಭಾವಿ ಮುಖಂಡ. ರಮೇಶ್ ಜಾಕಿಹೊಳಿ, ಬಾಲಚಂದ್ರ ಜಾರಕಿಹೊಳಿ, ಲಖನ್ ಜಾರಕಿಹೊಳಿ.. ಇವರದ್ದೆಲ್ಲ ಒಂದೇ ಕುಟುಂಬ. ಪಕ್ಷ ಮಾತ್ರ ಬೇರೆ ಬೇರೆ. ಈ ಕುಟುಂಬದವರು ಯಾವ ಪಕ್ಷದಲ್ಲಿ ನಿಂತರೂ ಗೆಲ್ಲುತ್ತಾರೆ. ತಾವಷ್ಟೇ ಅಲ್ಲದೆ ತಮ್ಮವರನ್ನೂ ಗೆಲ್ಲಿಸಿಕೊಳ್ತಾರೆ. ಜೊತೆಗೆ ವಾಲ್ಮೀಕಿ ಸಮುದಾಯದ ನಾಯಕರು. ಇವರು ಗೆಲ್ಲೋಕೆ ಪಕ್ಷ ಮುಖ್ಯವಲ್ಲ. ಆದರೆ ಇವರಿಗೆ ತಮಗೆ ಬೇಕಾದವರನ್ನು ಗೆಲ್ಲಿಸುವ ಮತ್ತು ಸೋಲಿಸುವ ಶಕ್ತಿಯಿದೆ. ಹೀಗಾಗಿಯೇ ಇವರು ಪಕ್ಷಕ್ಕೆಲ್ಲ ಡೋಂಟ್ ಕೇರ್. ಹೀಗಾಗಿಯೇ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆದರೂ, ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ ಅವರಾದರೂ ಮನವೊಲಿಸಬೇಕೇ ಹೊರತು, ಆರ್ಡರ್ ಮಾಡೋಕಾಗಲ್ಲ. ಆದರೆ ಮೊದಲ ದಿನ ಡಿಕೆ ಶಿವಕುಮಾರ್ ಆದೇಶ ನೀಡಿದ್ದರು. ಈಗ ಕೊನೆಗೂ ವಿಷಾದ ವ್ಯಕ್ತಪಡಿಸಿದ್ದಾರೆ. ಕ್ಷಮೆ ಕೇಳಿಲ್ಲ.
ನನ್ನ ಮಾತಿನಿಂದ ಹಿಂದೂಗಳು ಗೊಂದಲಕ್ಕೊಳಗಾಗಬಾರದು ಎಂಬ ಕಾರಣಕ್ಕೆ ಹೇಳಿಕೆ ಹಿಂಪಡೆಯುತ್ತಿದ್ದೇನೆ. ಆ ಹೇಳಿಕೆಯಿಂದ ಯಾರ ಮನಸ್ಸಿಗಾದರೂ ನೋವಾಗಿದ್ದಲ್ಲಿ ವಿಷಾದ ವ್ಯಕ್ತಪಡಿಸುತ್ತೇನೆ ಎಂದಿದ್ದಾರೆ ಸತೀಶ್ ಜಾರಕಿಹೊಳಿ. ಆದರೆ ಮಾತು ಅಷ್ಟಕ್ಕೇ ಮುಗಿಯುವುದಿಲ್ಲ. ಜೊತೆಯಲ್ಲೇ ನನ್ನ ಮಾತನ್ನು ಮಾಧ್ಯಮಗಳು ತಿರುಚಿವೆ. ಅಪಪ್ರಚಾರ ನಡೆಯತ್ತಿದೆ ಎಂದಿರುವ ಸತೀಶ್ ಜಾರಕಿಹೊಳಿ ಈ ಪದದ ಅರ್ಥ ಮೂಲದ ಬಗ್ಗೆ ತನಿಖಾ ಕಮಿಟಿ ರಚಿಸಬೇಕು. ಅದರರ್ಥ ಅದು ಕ್ಷಮೆ ಅಲ್ಲ. ವಿಷಾದ ಮಾತ್ರ. ಬಿಜೆಪಿಗೀಗ ಹೊಸ ಸವಾಲ್. ಈ ಅರ್ಧಂಬರ್ಧ ಕ್ಷಮೆ ವಿಷಾದವನ್ನು ಒಪ್ಪಬೇಕೋ.. ತಿರಸ್ಕರಿಸಬೇಕೋ.. ಹೋರಾಟ ಮುಂದುವರಿಸಬೇಕೋ.. ಎಂಬ ಗೊಂದಲ. ಗೊಂದಲ ಮುಂದುವರೆಯಲಿದೆ.



