ಪಿಎಫ್‍ಐ ಬ್ಯಾನ್ ಬೆನ್ನಲ್ಲೇ ಪಿಎಫ್‍ಐ ಮುಖಂಡರು, ಕಾಂಗ್ರೆಸ್ ಮುಖಂಡರು ಹಾಗೂ ಬಿಜೆಪಿ ವಿರೋಧಿಗಳು ಕೇಳುತ್ತಿರುವುದು ಇದು. ಆರ್.ಎಸ್.ಎಸ್ ಬ್ಯಾನ್ ಮಾಡಿ. ವಿಶ್ವ ಹಿಂದೂ ಪರಿಷತ್ ಬ್ಯಾನ್ ಮಾಡಿ. ಭಜರಂಗ ದಳ ಬ್ಯಾನ್ ಮಾಡಿ ಎಂಬ ಕೂಗು ಕೇಳಿಬರುತ್ತಿದೆ. ಕೇಂದ್ರ ಮಟ್ಟದಲ್ಲಿ ಲಾಲೂ ಪ್ರಸಾದ್ ಯಾದವ್, ಅಸಾದುದ್ದೀನ್ ಒವೈಸಿ, ರಾಜ್ಯ ಮಟ್ಟದಲ್ಲಿ ಬಿ.ಕೆ.ಹರಿಪ್ರಸಾದ್ ಮೊದಲಾದವರು ಆರ್.ಎಸ್.ಎಸ್. ಬ್ಯಾನ್ ಬಗ್ಗೆ ಆಗ್ರಹಿಸುತ್ತಿದ್ದಾರೆ. ಕಾಂಗ್ರೆಸ್‍ನ ಕೆಲವು ನಾಯಕರು ಹಾಗೂ ಎಡಪಕ್ಷಗಳು ಆರ್.ಎಸ್.ಎಸ್. ಬ್ಯಾನ್ ಮಾಡುವಂತೆ ಒತ್ತಾಯಿಸುತ್ತಿವೆ.
ಆರ್.ಎಸ್.ಎಸ್. ಕೂಡಾ ಸ್ವಯಂ ಸೇವಾ ಸಂಸ್ಥೆಯೇ. ಈ ಆರ್.ಎಸ್.ಎಸ್. ಕೂಡಾ ದೇಶದಲ್ಲಿ ಬ್ಯಾನ್ ಆಗಿತ್ತು. ಒಂದಲ್ಲ.. ಎರಡಲ್ಲ.. ಮೂರು ಬಾರಿ. ಮೂರು ಬಾರಿಯೂ ನಿಷೇಧ ಹೇರಿದಾಗ ಇದ್ದದ್ದು ಕಾಂಗ್ರೆಸ್ ಸರ್ಕಾರವೇ. ನಿಷೇಧ ವಾಪಸ್ ತೆಗೆದುಕೊಂಡಿದ್ದೂ ಕೂಡಾ ಕಾಂಗ್ರೆಸ್ ಸರ್ಕಾರವೇ.
ಮೊದಲ ಬಾರಿ ನಿಷೇಧ ಹೇರಿದ್ದು 1948ರಲ್ಲಿ. ಮಹಾತ್ಮ ಗಾಂಧೀಜಿ ಹತ್ಯೆಯ ನಂತರ ಸರ್ದಾರ್ ವಲ್ಲಭ ಬಾಯಿ ಪಟೇಲರು ನಿಷೇಧ ಹೇರಿದ್ದರು. ಸಾವರ್ಕರ್ ಅವರನ್ನು ಬಂಧಿಸಲಾಗಿತ್ತು. ಗೋಡ್ಸೆಗೆ ಬೆಂಬಲ ನೀಡಿದ್ದಾರೆ ಹಾಗೂ ಗೋಡ್ಸೆಯ ಹಿಂದೆ ಸಂಘ ಪರಿವಾರ ಇದೆ ಎಂದು ಆರೋಪಿಸಲಾಗಿತ್ತು. ಆದರೆ ಆರೋಪ ವಿಚಾರಣೆ ವೇಳೆ ಬಿದ್ದು ಹೋಯಿತು. ಹೀಗಾಗಿ 18 ತಿಂಗಳ ನಂತರ ಆರ್.ಎಸ್.ಎಸ್. ಮೇಲಿನ ನಿಷೇಧ ವಾಪಸ್ ಪಡೆದುಕೊಳ್ಳಲಾಯಿತು. ನಿಷೇಧ ವಾಪಸ್ ತೆಗೆದುಕೊಂಡವರೂ ಸರ್ದಾರ್ ವಲ್ಲಭ ಬಾಯಿ ಪಟೇಲರೇ.
ಎರಡನೇ ಬಾರಿ ಆರ್.ಎಸ್.ಎಸ್. ಮೇಲೆ ನಿಷೇಧ ಹೇರಿದ್ದು 1975ರಲ್ಲಿ. ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿ ವಿರೋಧಿ ಹೋರಾಟದಲ್ಲಿ ಆರ್.ಎಸ್.ಎಸ್. ಮುಂಚೂಣಿಯಲ್ಲಿತ್ತು. ಮೂರನೇ ಬಾರಿ ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಆರ್.ಎಸ್.ಎಸ್.ನ್ನು ನಿಷೇಧಿಸಲಾಗಿತ್ತು. ಈ ಎರಡೂ ನಿಷೇಧಗಳನ್ನು ಕೆಲವೇ ತಿಂಗಳಲ್ಲಿ ಸರ್ಕಾರ ವಾಪಸ್ ಪಡೆದಿತ್ತು.



