

ನಮಗೆ ನೀವು ಪ್ರತಿಕ್ರಿಯಿಸಿದ ರೀತಿ ಅದ್ಭುತ. ಯೋಜನೆಗೆ ಬೇಕಾದ ಭೂಮಿಯನ್ನು, ಅಗತ್ಯವಾದ ನೀರಿನ ಸೌಕರ್ಯವನ್ನು ಎಷ್ಟು ವೇಗವಾಗಿ ಮಾಡಿದರು ಎಂದರೆ 36 ತಿಂಗಳಲ್ಲೇ ಈ ಪ್ರಾಜೆಕ್ಟ್ ಎದ್ದು ನಿಂತಿತು. 1320 ಮೆ.ವ್ಯಾ. ಸೂಪರ್ ಥರ್ಮಲ್ ಪ್ರಾಜೆಕ್ಟ್ ಕಾರ್ಯಾರಂಭ ಮಾಡಿದೆ. ಇಂತಾದ್ದೊಂದು ಇಚ್ಚಾಶಕ್ತಿಯನ್ನು ನಾನು ದೇಶದ ಎಲ್ಲಿಯೂ ನೋಡಿಲ್ಲ. ಇಂಥಾದ್ದೊಂದು ಮಾತು ಹೇಳಿ ಹೊಗಳಿದ್ದು ಗೌತಮ್ ಅದಾನಿ.
ಅದಾನಿಯನ್ನು ಹೊಗಳುತ್ತಲೇ ನಮ್ಮ ರಾಜ್ಯಕ್ಕೆ ಯಾರು ಬಂದು ಬಂಡವಾಳ ಹೂಡುತ್ತೇನೆ ಎಂದರೂ ಸ್ವಾಗತಿಸುತ್ತೇನೆ. ಅದು ಅಂಬಾನಿಯೇ ಆಗಲಿ, ಅದಾನಿಯೇ ಆಗಲಿ, ಅಮಿತ್ ಶಾ ಮಗ ಜಯ್ ಶಾನೇ ಆಗಲಿ.. ನಮಗೆ ಉದ್ಯೋಗ ನೀಡುವ ಉದ್ಯಮಪತಿಗಳು ಬೇಕು ಅಷ್ಟೇ ಎಂದವರು ಅಶೋಕ್ ಗೆಹ್ಲೋಟ್. ರಾಜಸ್ತಾನ ಮುಖ್ಯಮಂತ್ರಿ. ಇವರು ಕಾಂಗ್ರೆಸ್ನ ಸಿಎಂ ಅನ್ನೋದು ನೆನಪಿನಲ್ಲಿರಲಿ.
ಇದನ್ನು ವಿಶೇಷವಾಗಿ ಹೇಳೋಕೆ ಕಾರಣವೂ ಇದೆ. ಏಕೆಂದರೆ ಇವರದ್ದೇ ಪಕ್ಷದ ಅಧಿನಾಯಕರಲ್ಲೊಬ್ಬರಾದ ರಾಹುಲ್ ಗಾಂದಿ ಎಲ್ಲಾದರೂ ಭಾಷಣಕ್ಕೆ ನಿಂತರೆ, ಒಂದು ಸುದ್ದಿಗೋಷ್ಟಿ ನಡೆಸಿದರೆ ಅಂಬಾನಿ, ಅದಾನಿಯವರ ಟೀಕೆಯಿಲ್ಲದರೆ ಮುಗಿಯೋದೇ ಇಲ್ಲ. ಅವರಿಬ್ಬರೂ ಮೋದಿ ಟೀಮಿನ ಉದ್ಯಮಿಗಳು ಎಂದೇ ಜರೆಯುತ್ತಾರೆ.


ಇದೀಗ ಗೆಹ್ಲೋಟ್ ನೇತೃತ್ವದ ತಮ್ಮದೇ ಸರ್ಕಾರ ಇರುವ ರಾಜಸ್ತಾನದಲ್ಲಿ ಅದಾನಿ ಹೂಡಿಕೆ ಮಾಡಿದ್ದಾರೆ. ಅದೂ ಸಣ್ಣ ಪುಟ್ಟ ಯೋಜನೆಯಲ್ಲ. 10 ವರ್ಷಗಳಲ್ಲಿ 65 ಸಾವಿರ ಕೋಟಿಯ ಹೂಡಿಕೆ ಅದು. ಅದಕ್ಕವರು ಸಮರ್ಥನೆಯನ್ನೂ ಕೊಟ್ಟಿದ್ದಾರೆ. ನಮ್ಮವರಿಗೆ ಉದ್ಯೋಗ ನೀಡಬೇಕು. ಅದೇ ನಮ್ಮ ಗುರಿ ಅನ್ನೋದು. ಜೊತೆಗೊಂದು ಮಾತನ್ನೂ ಹೇಳುತ್ತಾರೆ. ನಮ್ಮ ಷರತ್ತು ಮತ್ತು ಕಾನೂನುಗಳಿಗೆ ಬದ್ಧವಾಗಿರಬೇಕು ಅನ್ನೋದು.
ಗುಜರಾತಿಗಳ ಧೈರ್ಯ ಮತ್ತು ವ್ಯಾಪಾರ ಚಾತುರ್ಯಕ್ಕೆ ದೊಡ್ಡ ಇತಿಹಾಸವೇ ಇದೆ. ಸ್ವಾತಂತ್ರ್ಯ ಪೂರ್ವದಿಂದಲೂ ಅವರು ಉದ್ಯಮಿಗಳು. ಅವರ ಲಿಸ್ಟಿಗೆ ಅದಾನಿ ಈಗ ಹೊಸ ಸೇರ್ಪಡೆ ಎನ್ನುವಾಗ ಅಶೋಕ್ ಗೆಹ್ಲೋಟ್ ಅದಾನಿಯನ್ನು ಕೇವಲ ಅದಾನಿ ಅನ್ನೋದಿಲ್ಲ. ಅದಾನಿ ಭಾಯ್ ಎನ್ನುತ್ತಾರೆ. ನಾನು ಉದ್ಯಮಿಗಳ, ಕಾರ್ಪೊರೇಟ್ಗಳ ವಿರೋಧಿ ಅಲ್ಲ. ಏಕಸ್ವಾಮ್ಯತೆಗೆ ವಿರೋಧಿ ಇದ್ದೇನೆ. ಗೆಹ್ಲೋಟ್ ಅವರ ಕ್ರಮದಲ್ಲಿ ನಾನು ಪ್ರತಿಪಕ್ಷದಲ್ಲೇ ಇರಲು ಬಯಸುತ್ತೇನೆ ಎನ್ನುವುದು ಕಾಂಗ್ರೆಸ್ನ ರಾಹುಲ್ ಗಾಂಧಿ ಮಾತು.
ಈಗ ಅದಾನಿ ಗ್ರೂಪ್ಗೆ ಇಷ್ಟು ದೊಡ್ಡ ಹೂಡಿಕೆಗೆ ಅವಕಾಶ ಕೊಟ್ಟಿರುವ ರಾಜಸ್ತಾನದಲ್ಲಿರೋದು ಬಿಜೆಪಿ ಸರ್ಕಾರವಲ್ಲ. ಕಾಂಗ್ರೆಸ್ ಸರ್ಕಾರವೇ. ಅದಾನಿಯವರೇ ಹೇಳಿರೋ ಪ್ರಕಾರ 36 ತಿಂಗಳ ಹಿಂದೆ ಪ್ರಪೋಸಲ್ ಕೊಟ್ಟು ಈಗ ಕಾರ್ಯಾರಂಭವನ್ನೂ ಮಾಡಿದೆ. ಅಂದರೆ 3 ವರ್ಷಗಳ ಹಿಂದೆ ಶುರುವಾಗಿದ್ದ ಯೋಜನೆ ಇದು. ಇನ್ನೂ ಇಂಟ್ರೆಸ್ಟಿಂಗ್ ವಿಚಾರವೆಂದರೆ ಅಂಬಾನಿ, ಅದಾನಿಯನ್ನು ಟೀಕಿಸುತ್ತಿರುವುದು ಕೇವಲ ಕಾಂಗ್ರೆಸ್ ಅಲ್ಲ. ಮಮತಾ ಬ್ಯಾನರ್ಜಿ, ಸ್ಟಾಲಿನ್ ಕೂಡಾ ಇದ್ದಾರೆ. ಆದರೆ ಈ ಬಿಜೆಪಿಯೇತರ ರಾಜ್ಯಗಳಲ್ಲಿ ಅದಾನಿ ಈ ವರ್ಷ ಹೂಡಿರುವ ಬಂಡವಾಳ ಎಷ್ಟು ಗೊತ್ತೇ? 2 ಲಕ್ಷ ಕೋಟಿಗೂ ಹೆಚ್ಚು.
ಮಮತಾ ಬ್ಯಾನರ್ಜಿಯವರ ಪ.ಬಂಗಾಳದಲ್ಲಿ 10 ಸಾವಿರ ಕೋಟಿ ಹೂಡಿಕೆ ಮಾಡಿದ್ದಾರೆ. ಬಂದರು ಮೂಲಭೂತ ಸೌಕರ್ಯ, ಸಮುದ್ರದೊಳಗೆ ಕೇಬಲ್ ಅಳವಡಿಕೆ, ಡೇಟಾ ಇಂಡಸ್ಟ್ರಿಗೆ 10 ಸಾವಿರ ಕೋಟಿ, ಒಂದು ಬಂದರು ನಿರ್ಮಾಣಕ್ಕೆ ವಿಶೇಷ ಆರ್ಥಿಕ ವಲಯಕ್ಕೆ 25 ಸಾವಿರ ಕೋಟಿ ಬಂಡವಾಳ ಹೂಡುತ್ತಿದ್ದಾರೆ. ಅದು ರಾಜ್ಯ ಸರ್ಕಾರದ್ದೇ ಯೋಜನೆ.

ಆಂಧ್ರ ಪ್ರದೇಶದಲ್ಲಿ ಸೋಲಾರ್ ಇಂಡಸ್ಟ್ರಿಗೆ 60 ಸಾವಿರ ಕೋಟಿ ಹೂಡಿಕೆ ಮಾಡುತ್ತಿದ್ದರೆ ಒಡಿಶಾದಲ್ಲಿ 58 ಸಾವಿರ ಕೋಟಿ ಹೂಡಿಕೆಗೆ ಹೆಬ್ಬಾಗಿಲು ತೆರೆಯಲಾಗಿದೆ. ತಮಿಳುನಾಡಿನಲ್ಲೂ 25 ಸಾವಿರ ಕೋಟಿಗೂ ಹೆಚ್ಚು ಬಂಡವಾಳ ಹೂಡಿಕೆ ಮಾಡಲಾಗಿದೆ.
ಅಲ್ಲಿಗೆ ಅರ್ಥವಾಗುವುದು ಇಷ್ಟೇ. ಉದ್ಯಮಿಗಳು ಎಲ್ಲರಿಗೂ ಬೇಕು. ರಾಜಕಾರಣಿಗಳಿಗೂ ಬೇಕು. ಆದರೆ ಅವರು ಟೀಕಿಸಿದಾಗ ಟೀಕೆ ಸಹಿಸಿಕೊಳ್ಳಬೇಕು. ಅಷ್ಟೆ. ರಾಜಕೀಯದಲ್ಲಿ ಯಾರೂ ಶಾಶ್ವತ ಶತ್ರುಗಳೂ ಅಲ್ಲ. ಶಾಶ್ವತ ಮಿತ್ರರೂ ಅಲ್ಲ. ಆದರೆ ಉದ್ಯಮಿಗೆ ಬಿಸಿನೆಸ್ಸಿನಲ್ಲಿ ಶತ್ರುಗಳೇ ಇರುವುದಿಲ್ಲ. ಶತ್ರುತ್ವವೂ ಇರುವುದಿಲ್ಲ. ಬೇಕಿರೋದು ಬಿಸಿನೆಸ್ಸು ಮಾತ್ರ.



