

ಪಿಎಫ್ಐ ಸಂಘಟನೆಯನ್ನು ಕೇಂದ್ರ ಸರ್ಕಾರ ನಿಷೇಧ ಪಟ್ಟಿಗೆ ಸೇರಿಸಿದೆ. ಇನ್ನು 5 ವರ್ಷ ಪಿಎಫ್‍ಐ ಮೇಲೆ ನಿಷೇಧಾಜ್ಞೆ ಇರಲಿದೆ. ಪಿಎಫ್‍ಐ ಅಷ್ಟೇ ಅಲ್ಲ.. ಪಿಎಫ್‍ಐ ಅಂಗಸಂಸ್ಥೆಗಳನ್ನೂ ಸೇರಿಸಿ ಒಟ್ಟು 8 ಸಂಸ್ಥೆಗಳಿಗೆ ಕೇಂದ್ರ ನಿಷೇಧ ಹೇರಿದೆ. ದೇಶದ ಸಮಗ್ರತೆ, ಭಾವೈಕ್ಯತೆಗೆ ಧಕ್ಕೆ, ಧರ್ಮ ಧರ್ಮಗಳ ನಡುವೆ ಕಿಚ್ಚು ಹಚ್ಚುವ ಸಂಚು, ಭಯೋತ್ಪಾದನೆಗೆ ಕುಮ್ಮಕ್ಕು ಇರುವ ಸಂಘಟನೆಗಳ ಜೊತೆ ನಂಟು, ದೇಶದ ವಿರುದ್ಧ ಸಂಚು ಆರೋಪಗಳಿಗೆ ಸಾಕ್ಷಿಗಳನ್ನು ಸಂಗ್ರಹಿಸಿ ಯುಎಪಿಎ ಆಕ್ಟ್ ಅಡಿಯಲ್ಲಿ ಈ ಸಂಘಟನೆಗಳನ್ನು ನಿಷೇಧಿಸಿದೆ ಕೇಂದ್ರ ಸರ್ಕಾರ.
ಇವೇ ಆ ನಿಷಿದ್ಧ ಸಂಘಟನೆಗಳು.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಮತ್ತು ಪಿಎಫ್ಐ ಅಂಗಸಂಸ್ಥೆಗಳಾದ ರಿಹಬ್ ಇಂಡಿಯಾ ಫೌಂಡೇಶನ್ (ಆರ್ ಐಎಫ್), ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್ಐ), ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ (ಎಐಐಸಿ), ನ್ಯಾಷನಲ್ ಕಾನ್ಫೆಡರೇಶನ್ ಆಫ್ ಹ್ಯೂಮನ್ ರೈಟ್ಸ್ ಆರ್ಗನೈಸೇಶನ್ (ಎನ್ ಸಿಎಚ್ ಆರ್ ಒ), ನ್ಯಾಷನಲ್ ವುಮೆನ್ಸ್ ಫ್ರಂಟ್, ಜೂನಿಯರ್ ಫ್ರಂಟ್, ಎಂಪವರ್ ಇಂಡಿಯಾ ಫೌಂಡೇಶನ್ ಮತ್ತು ರಿಹ್ಯಾಬ್ ಫೌಂಡೇಶನ್ ಕೇರಳವನ್ನು ನಿಷೇಧಿಸಲಾಗಿದೆ.
ನಿಷೇಧವಾಯ್ತು. ಮುಂದೇನು? ಈ ಪ್ರಶ್ನೆ ಸಹಜ. ಈ ಆದೇಶದ ನಂತರ..
ಈ ಸಂಘಟನೆಗಳಿಗೆ ಇನ್ನು ಮುಂದೆ ಕಾನೂನಿನ ಮಾನ್ಯತೆ ಇರುವುದಿಲ್ಲ.
ಈ ಸಂಘಟನೆಯವರು ಸಾಮಾಜಿಕವಾಗಿ ಗುಂಪುಗೂಡುವಂತಿಲ್ಲ.
ಈ ಸಂಘ ಸಂಸ್ಥೆಗಳು ಹಣಕಾಸು ವ್ಯವಹಾರ ನಡೆಸುವಂತಿಲ್ಲ.
ಬ್ಯಾಂಕ್ ಖಾತೆಗಳು ಸೀಝ್ ಆಗಲಿವೆ.
ಹೊಸ ಸದಸ್ಯರನ್ನು ನೇಮಕ ಮಾಡಿಕೊಳ್ಳುವ ಹಾಗಿಲ್ಲ. ಇರುವ ಸದಸ್ಯರ ಹುದ್ದೆಗೆ ಮಾನ್ಯತೆ ಇಲ್ಲ. ಅನುಮಾನ ಬಂದರೆ ಬಂಧಿಸುವ ಸಾಧ್ಯತೆಯೂ ಇದೆ.
ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು.
ಅಷ್ಟೇ ಅಲ್ಲ, ಸಂಘಟನೆ ಹೆಸರಲ್ಲಿ ಸಭೆ ಸಮಾರಂಭ ಸೇರುವಂತಿಲ್ಲ. ಸಂಘಟನೆ ವೇದಿಕೆ ಬಳಸಿಕೊಂಡು ಪ್ರತಿಭಟನೆ ನಡೆಸುವಂತಿಲ್ಲ. ಸರಳವಾಗಿ ಹೇಳಬೇಕೆಂದರೆ ದೇಶದ ಯಾವುದೇ ಸಂಘಟನೆಗಳಿಗಿರುವ ಮೂಲಭೂತ ಹಕ್ಕುಗಳು ಈ ಸಂಘಟನೆಗೆ ಹಾಗೂ ಈ 8 ಸಂಘಟನೆಗಳ ಸದಸ್ಯರಿಗೆ ಇರುವುದಿಲ್ಲ. ಸಂಘಟನೆ ಹೆಸರಲ್ಲಿ ಮಾತ್ರ.
ಆದರೆ.. ಇಲ್ಲೊಂದು ಅಪಾಯವೂ ಇದೆ. ಈ ಹಿಂದೆ ಸಿಮಿ ಸಂಘಟನೆ ನಿಷೇದಿಸಿತ್ತು. 2002ರಲ್ಲಿ ನಿಷೇಧಿಸಲ್ಪಟ್ಟಿದ್ದ ಸಂಘಟನೆ 2006ರಲ್ಲಿ ಪಿಎಫ್‍ಐ ಎಂಬ ಹೊಸ ಸ್ವರೂಪದೊಂದಿಗೆ ಜನ್ಮ ತಾಳಿತ್ತು. ಹೆಸರು ಬೇರೆ. ಧ್ವಜ ಬೇರೆ. ಆದರೆ ಅವೇ ಸದಸ್ಯರು. ಈ ಬಾರಿಯೂ ಹಾಗೆಯೇ ಆದರೆ.. ಆ ರೀತಿ ಆಗದಂತೆ ಕ್ರಮ ತೆಗೆದುಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹೆಜ್ಜೆಯಿಟ್ಟಿದೆ.
ಕೇಂದ್ರ ಸರ್ಕಾರದ ಈ ಆದೇಶ ಪ್ರಶ್ನಿಸಿ ಸಂಘಟನೆಯವರು ಸುಪ್ರೀಂಕೋರ್ಟಿಗೆ ಹೋಗುವ ಸಾಧ್ಯತೆಯೂ ಇದೆ. ಸುಪ್ರೀಂಕೋರ್ಟ್ ವಿಚಾರಣೆ ಕೈಗೆತ್ತಿಕೊಂಡರೆ ಮತ್ತೆ ಈ ಪ್ರಕರಣ ತಿರುವು ಪಡೆಯಲಿದೆ.



