ಸಿದ್ದೇಶ್ವರ ಸ್ವಾಮೀಜಿ ಉತ್ತರ ಕರ್ನಾಟಕದ ಲಕ್ಷಾಂತರ ಭಕ್ತರ ಪಾಲಿಗೆ ಅಪ್ಪಾರು, ಬುದ್ದಿಯೋರು, ಸಿದ್ದಪ್ಪಾಜಿಯಾಗಿದ್ದರು. ಸಿದ್ದೇಶ್ವರ ಸ್ವಾಮೀಜಿಗಳಿಗೆ ಯಾರಾದರೂ ನಮಸ್ಕರಿಸಿದರೆ ಅವರು ಆಶೀರ್ವಾದ ಮಾಡುತ್ತಿರಲಿಲ್ಲ. ಪ್ರತಿಯಾಗಿ ನಮಸ್ಕರಿಸುತ್ತಿದ್ದರು. 



ಕೊನೆಯ ದಿನಗಳಲ್ಲಿ ಆಹಾರವನ್ನು ತ್ಯಜಿಸುತ್ತಾ ಬಂದಿದ್ದ ಸಿದ್ದಪ್ಪಾಜಿ, ಗ್ಲೂಕೋಸ್, ಔಷಧಿಗಳನ್ನೂ ನಿರಾಕರಿಸಿದ್ದರು. ಸಿದ್ದಪ್ಪಾಜಿ ಸಲ್ಲೇಖನ ವ್ರತ ಅನುಸರಿಸಿದ್ದರಾ..? ಹೇಳೋಕಾಗಲ್ಲ. ಆದರೆ ಹಂತ ಹಂತವಾಗಿ ದೇಹಕ್ಕೆ ಅಗತ್ಯವಾದ ಎಲ್ಲವನ್ನೂ ನಿರಾಕರಿಸುತ್ತಾ ಬಂದಿದ್ದ ಬುದ್ದಿಯವರು ಸಾವನ್ನು ಪ್ರೀತಿಯಿಂದ ಆಹ್ವಾನಿಸಿಕೊಂಡಿದ್ದರು.
ತಮ್ಮ ದೇಹವನ್ನು ಮಣ್ಣಿನಲ್ಲಿ ಹೂಳುವ ಬದಲು, ಅಗ್ನಿಕ್ರಿಯೆ ನಡೆಸಬೇಕು. ಯಾವುದೇ ಬಗೆಯ ಸ್ಮಾರಕ ನಿರ್ಮಾಣ ಮಾಡಬಾರದು. ಚಿತಾಭಸ್ವವನ್ನು ಸಾಗರ ಅಥವಾ ಸಮುದ್ರದಲ್ಲಿ ವಿಸರ್ಜನೆ ಮಾಡಬೇಕು ಮತ್ತು ಅಂತ್ಯಕ್ರಿಯೆಯಲ್ಲಿ ಯಾವುದೇ ಶ್ರಾದ್ಧಿಕ ಧಾರ್ಮಿಕ ವಿಧಿ ವಿಧಾನಗಳನ್ನು ಮಾಡುವುದು ಅನಗತ್ಯ ಎಂದು ಸ್ಪಷ್ಟವಾಗಿ ವಿಲ್ ಬರೆದಿಟ್ಟಿದದರು ಸಿದ್ದಪ್ಪಾಜಿ. 2014ರಲ್ಲಿಯೇ ವಿಲ್ ಬರೆದಿಟ್ಟಿದ್ದ ಶ್ರೀಗಳು ಧರ್ಮವನ್ನು ಮೀರಿ ಬದುಕಿದ್ದರು.

ಸಿದ್ದೇಶ್ವರ ಸ್ವಾಮಿಗಳ ವಿಲ್‍ಗೆ ಸಾಕ್ಷಿಯಾಗಿದ್ದವರು ಕರ್ನಾಟಕ ಹೈಕೋರ್ಟ್ ಜಡ್ಜ್ ವಿ.ಎಸ್.ಪಾಚ್ಚಾಪುರ, ವಿಜಯಪುರ ಕೌಟುಂಬಿಕ ನ್ಯಾಯಾಲಯದ ಜಡ್ಜ್ ಎಸ್.ಎಸ್.ಸುಲ್ತಾನಪುರ ಹಾಗೂ ಕೊಲ್ಹಾಪುರದ ಕನ್ಹೇರಿ ಮಠದ ಶ್ರೀ ಕಾಡಸಿದ್ದೇಶ್ವರ ಮಹಾಸ್ವಾಮಿಗಳು.



