ಎಲ್ಲವೂ ಘೋಷಣೆಯಂತೆಯೇ ಆಗಿದ್ದರೆ ಇಷ್ಟು ಹೊತ್ತಿಗೆ ಜೆಡಿಎಸ್‍ನ ಒಂದಷ್ಟು ವಿಧಾನಸಭಾ ಕ್ಷೇತ್ರಗಳಿಗೆ ಟಿಕೆಟ್ ಘೋಷಣೆಯಾಗಬೇಕಿತ್ತು. ನವೆಂಬರ್ 1ರಂದು ಆರಂಭವಾಗಿದ್ದ ಪಂಚರತ್ನ ಯಾತ್ರೆ, ನವೆಂಬರ್ 18ರಂದು ಮುಳಬಾಗಿಲಿನಲ್ಲಿ ಶುರುವಾಗಿದೆ. ಆ ಹೊತ್ತಿನಲ್ಲಿಯೇ ಬಹಿರಂಗವಾಗಬೇಕಿತ್ತು. ಜೆಡಿಎಸ್ ಅಭ್ಯರ್ಥಿಗಳ ಪ್ರಥಮ ಪಟ್ಟಿಯನ್ನೇ ಆ ದಿನವೇ ಬಿಡುಗಡೆ ಮಾಡುತ್ತೇನೆ ಎಂದು ಸ್ವತಃ ಹೆಚ್.ಡಿ.ಕುಮಾರಸ್ವಾಮಿ ಘೋಷಿಸಿದ್ದರು. ಆದರೆ ಆಗಲಿಲ್ಲ.
ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗಿದೆ. ಆದರೆ ನಮ್ಮ ಅಣ್ಣ ರೇವಣ್ಣ ಜ್ಯೋತಿಷ್ಯವನ್ನು ನಾವು ಕೇಳಲೇಬೇಕು. ಅವರ ಪ್ರಕಾರ ಈಗ ಸಮಯ ಚೆನ್ನಾಗಿಲ್ಲ. ಹೀಗಾಗಿ ಅವರು ಹೇಳಿದ ಮೇಲೆಯೇ ಪಟ್ಟಿ ಬಿಡುಗಡೆ ಎಂದಿದ್ದರು ಕುಮಾರಸ್ವಾಮಿ. ಇರಬಹುದೇನೋ.. ಹೆಚ್.ಡಿ.ರೇವಣ್ಣ ಅವರ ಜ್ಯೋತಿಷ್ಯ, ನಂಬಿಕೆಗಳ ಬಗ್ಗೆ ಇಡೀ ರಾಜ್ಯಕ್ಕೇ ಗೊತ್ತು. ವಿಧಾನಸೌಧದ ಮೂಲೆ ಮೂಲೆಗಳಲ್ಲೂ ರೇವಣ್ಣನವರ ಜ್ಯೋತಿಷ್ಯದ ನಂಬಿಕೆಯ ಬಗ್ಗೆ ಕಥೆಗಳಿವೆ. ದೇವೇಗೌಡರ ಕುಟುಂಬದಲ್ಲಿ ಬೇರೆಯದೇನೇ ಇರಲಿ, ದೇವರು, ಜ್ಯೋತಿಷ್ಯಗಳ ವಿಚಾರದಲ್ಲಿ ಮಾತ್ರ ರೇವಣ್ಣನವರು ಹೇಳಿದ್ದೇ ಫೈನಲ್. ಹಾಗಾಗಿ.. ಇರಬಹುದೇನೋ ಎಂದುಕೊಂಡಿದ್ದವರೇ ಹೆಚ್ಚು. ಆದರೆ ಕ್ರಮೇಣ ಬೇರೆ ಸುದ್ದಿಯೇ ಹೊರಬಿದ್ದಿದೆ.
ಜ್ಯೋತಿಷ್ಯವೂ ಟಿಕೆಟ್ ಘೋಷಣೆ ಮಾಡದೇ ಇರುವುದಕ್ಕೆ ಇರುವ ಕಾರಣಗಳಲ್ಲಿ ಒಂದು. ಆದರೆ ಅದೊಂದೇ ಕಾರಣ ಅಲ್ಲ, ಅವುಗಳೇ ಅಲ್ಲದೆ ಇನ್ನೂ ಕೆಲವು ರಾಜಕೀಯ ಕಾರಣಗಳೂ ಇವೆ ಎಂದಿದ್ದಾರೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ. ಎಲ್ಲವನ್ನೂ ನೋಡಿಕೊಂಡು ಸಮಯ ಸಂದರ್ಭ ನೋಡಿಕೊಂಡು ಸೂಕ್ತ ಸಮಯದಲ್ಲಿ ಪಟ್ಟಿ ಬಿಡುಗಡೆ ಮಾಡುತ್ತೇವೆ ಅನ್ನೋದು ಸಿಎಂ ಇಬ್ರಾಹಿಂ ಕೊಡುತ್ತಿರೋ ಸ್ಪಷ್ಟನೆ.
ಇಷ್ಟಕ್ಕೂ ಪಟ್ಟಿ ವಿಳಂಬಕ್ಕೆ ಕಾರಣ ಏನು? ಒನ್ ಲೈನಿನಲ್ಲಿ ಹೇಳಬೇಕೆಂದರೆ.. ಆತಂಕ. ಆತಂಕ. ಆತಂಕ.
ಕಾಂಗ್ರೆಸ್ ಮತ್ತು ಬಿಜೆಪಿ ಎಂದಿನಂತೆ ಜೆಡಿಎಸ್ ಎದುರಾಳಿಗಳು. ಅವರ ನಡೆಯನ್ನೇ ತಿಳಿದುಕೊಳ್ಳದೆ ನಾವು ಅಭ್ಯರ್ಥಿ ಘೋಷಿಸುವುದು ಸೂಕ್ತವಲ್ಲ. ಎದುರಾಳಿಗಳಿಗೆ ರಣತಂತ್ರ ರೂಪಿಸಿಕೊಳ್ಳಲು ಸಮಯಾವಕಾಶ ಕೊಟ್ಟಂತಾಗುತ್ತದೆ. ಈಗಲೇ ಅಭ್ಯರ್ಥಿ ಘೋಷಿಸಿದರೆ ಅಸಮಾಧಾನಿತರನ್ನು ಸೆಳೆಯಲು ಎದುರಾಳಿಗಳಿಗೆ ಸಮಯ ಕೊಟ್ಟಂತಾಗುತ್ತದೆ. ಅಲ್ಲದೆ ಈ ಹಿಂದೆ ಕೆಲವರನ್ನು ಬೇರೆಯವರು ಹೈಜಾಕ್ ಮಾಡಿದ್ದರು. ಅದಕ್ಕೂ ಅವಕಾಶ ಮಾಡಿಕೊಡುವುದು ಬೇಡ ಎಂಬ ವಾದ ಕೇಳಿ ಬಂದಿದೆ.
ಅದಕ್ಕಿಂತ ಪ್ರಮುಖ ಕಾರಣ ಎರಡು ಕ್ಷೇತ್ರಗಳು. ಹಾಸನ ಜಿಲ್ಲೆಯ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಭವಾನಿ ರೇವಣ್ಣ ನಿಲ್ಲುವ ಬಯಕೆ ತೋರಿಸಿದ್ದಾರೆ. ಇದು ಕುಮಾರಸ್ವಾಮಿಯವರನ್ನು ಕನ್‍ಫ್ಯೂಸ್ ಮಾಡಿದೆ. ಅಲ್ಲದೆ ಕುಮಾರಸ್ವಾಮಿಯವರ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರವೂ ಈ ಬಾರಿ ಸರಳವಾಗಿಲ್ಲ. ಸಿ.ಪಿ.ಯೋಗೇಶ್ವರ್ ಪ್ರಬಲರಾಗಿದ್ದಾರೆ. ಮಂಡ್ಯದಲ್ಲಿ ನಿಖಿಲ್ ಇದ್ದಕ್ಕಿದ್ದಂತೆ ಆಕ್ಟಿವ್ ಆಗಿದ್ದಾರೆ. ಒನ್ಸ್ ಎಗೇನ್ ಕುಟುಂಬ ರಾಜಕಾರಣ ಕುಮಾರಸ್ವಾಮಿ ತಾವೇ ಘೋಷಣೆ ಮಾಡಿದ್ದ ಟಿಕೆಟ್ ಘೋಷಣೆ ಯನ್ನು ನುಂಗಿಕೊಳ್ಳುವಂತೆ ಮಾಡಿದೆ.



