ನಟ, ನಿರ್ದೇಶಕ, ನಿರ್ಮಾಪಕ ಪ್ರಕಾಶ್ ರೈ ಇತ್ತೀಚೆಗೆ ಸಿನಿಮಾಗಳಿಗಿಂತ ಹೆಚ್ಚು ರಾಜಕೀಯ ಕಾರಣಗಳಿಂದಲೇ ಹೆಚ್ಚು ಸುದ್ದಿ ಮಾಡುತ್ತಿದ್ದಾರೆ. ಕಳೆದ ಬಾರಿ ಲೋಕಸಭಾ ಚುನಾವಣೆಗೆ ಪಕ್ಷೇತರರಾಗಿ ಸ್ಪರ್ಧಿಸಿ ಠೇವಣಿ ಕಳೆದುಕೊಂಡಿದ್ದ ಪ್ರಕಾಶ್ ರೈ, ಸೋಶಿಯಲ್ ಮೀಡಿಯಾದಲ್ಲಿ ಜಸ್ಟ್ ಆಸ್ಕಿಂಗ್ ಅಭಿಯಾನವನ್ನು ನಡೆಸುತ್ತಾರೆ. ಮೋದಿ ವಿರೋಧಿ ಗುಂಪಿನಲ್ಲಿಯೇ ಹೆಚ್ಚು ಗುರುತಿಸಿಕೊಂಡಿರುವ ಪ್ರಕಾಶ್ ರೈ ನಟಿಸಿರುವ ಚಿತ್ರಗಳ ಸಂಖ್ಯೆ ಹೆಚ್ಚೂ ಕಡಿಮೆ ನಾಲ್ಕುನೂರು. ಪೋಷಕ ನಟರಾದರೂ ಸಂಭಾವನೆ ಕೋಟಿಗಳ ಲೆಕ್ಕದಲ್ಲಿದೆ. ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ.. ಹೀಗೆ ಎಲ್ಲ ಭಾಷೆಗಳಲ್ಲೂ ಚಿರಪರಿಚಿತರಾಗಿರುವ ಕಲಾವಿದ.
ಒಂದು ಕಾಲದಲ್ಲಿ ಪೋಷಕ ನಟ ಪ್ರಕಾಶ್ ರೈ ಕಾಲ್ಶೀಟ್ಗಾಗಿ ಹೀರೋಗಳು ಕಾಯುತ್ತಿದ್ದ ಕಾಲವೂ ಇತ್ತು. ಆದರೆ ಇತ್ತೀಚೆಗೆ ಪ್ರಕಾಶ್ ರೈಗೆ ಆಫರ್ಸ್ ಇಲ್ಲವಂತೆ. ಇಲ್ಲ ಎನ್ನುವುದಕ್ಕಿಂತ ರೈ ಅವರಿಗೆ ಪಾತ್ರ ನೀಡಲು ನಿರ್ಮಾಪಕರು, ನಿರ್ದೇಶಕರು ಹಿಂದೇಟು ಹಾಕುತ್ತಿದ್ದಾರಂತೆ. ಆದರೆ ಅದಕ್ಕೆ ಕಾರಣ ಸಿನಿಮಾ ಅಥವಾ ನಟನೆ ಕಾರಣ ಅಲ್ಲ ಎನ್ನುವುದು ವಿಶೇಷ. ನನ್ನ ರಾಜಕೀಯ ನಿಲುವುಗಳು ವೃತ್ತಿ ಜೀವನದ ಮೇಲೆ ಪರಿಣಾಮ ಬೀರುತ್ತಿವೆ. ಈಗ, ಕೆಲವರು ನನ್ನೊಂದಿಗೆ ಕೆಲಸ ಮಾಡುವುದಿಲ್ಲ. ಏಕೆಂದರೆ ಅವರಿಗೆ ಬೇಡ ಎಂದು ಹೇಳಲಾಗಿದೆ. ನನ್ನೊಂದಿಗೆ ಕೆಲಸ ಮಾಡಿದರೆ, ‘ಅವರುಗಳು’ ಒಪ್ಪುವುದಿಲ್ಲ ಎಂಬ ಚಿಂತೆ ಅವರಿಗೆ ಶುರುವಾಗಿದೆ ಎಂದು ಇತ್ತೀಚೆಗೆ ಹೇಳಿದ್ದಾರೆ ಪ್ರಕಾಶ್ ರೈ. ಹಾಗಂತ ಅವಕಾಶಗಳಿಗಾಗಿ ಗೋಗರೆಯುತ್ತಿಲ್ಲ. ಅದೆಲ್ಲವನ್ನೂ ಕಳೆದುಕೊಳ್ಳುವಷ್ಟು ನಾನು ಬಲಶಾಲಿ ಮತ್ತು ಶ್ರೀಮಂತ. ನನ್ನ ಭಯವು ಯಾರೋ ಒಬ್ಬರ ಶಕ್ತಿಯಾಗಿದೆ ಎಂದು ನಾನು ಯಾವಾಗಲೂ ಭಾವಿಸುತ್ತೇನೆ. ಅದಕ್ಕೆ ನನಗೆ ವಿಷಾದವಿಲ್ಲ. ಸಿನಿಮಾಗಳಲ್ಲಿ ಅವಕಾಶ ಕಡಿಮೆಯಾಗುತ್ತಿರುವುದಕ್ಕೆ ಬೇಸರವೂ ಇಲ್ಲ ಎಂದಿದ್ದಾರೆ ಪ್ರಕಾಶ್ ರೈ.
ಪ್ರಕಾಶ್ ರೈ ಬಡವರೇನಲ್ಲ. ಕೋಟಿ ಕೋಟಿಗಳ ಆಸ್ತಿಯಿದೆ. ನಾನು ಧ್ವನಿಯೆತ್ತುತ್ತೇನೆ. ಬೇರೆಯವರು ಧ್ವನಿ ಎತ್ತುವುದಿಲ್ಲ. ಅದಕ್ಕಾಗಿ ಅವರ ಬಗ್ಗೆ ನನಗೆ ಬೇಸರವೂ ಇಲ್ಲ. ಅದು ಅವರ ಆಯ್ಕೆ. ಅನಿವಾರ್ಯತೆಯೂ ಇರಬಹುದು ಎಂದಿದ್ದಾರೆ ಪ್ರಕಾಶ್ ರೈ. ರಾಜಕೀಯವಾಗಿ ಧ್ವನಿ ಎತ್ತದೇ ಹೋಗಿದ್ದರೆ ಇನ್ನಷ್ಟು ಚಿತ್ರಗಳಲ್ಲಿ ನಟಿಸುತ್ತಿದ್ದೆ. ಒಳ್ಳೆಯ ಕಲಾವಿದ ಎಂದು ಜನರೂ ಗೌರವಿಸುತ್ತಿದ್ದರು. ಆದರೆ ನನಗೆ ಅಷ್ಟೇ ಅಲ್ಲ. ಅದೊಂದೇ ಮುಖ್ಯವಲ್ಲ. ಮುಂದಿನ ದಿನಗಳಲ್ಲಿಯೂ ಜನ ನನ್ನನ್ನು ನೆನಪಿಸಿಕೊಳ್ಳುವುದು ಒಳ್ಳೆಯನಟ ಎಂದು ನನಗೆ ಗೊತ್ತು ಎಂದಿದ್ದಾರೆ ಪ್ರಕಾಶ್ ರೈ.
ಆರಂಭದಲ್ಲಿ ಹಿಂದಿ ಚಿತ್ರರಂಗದವರು ನನ್ನ ರಾಜಕೀಯ ಕಾರಣಗಳಿಂದಾಗಿ ನನ್ನೊಂದಿಗೆ ಕೆಲಸ ಮಾಡಲು ಹೆದರುತ್ತಾರೆ. ಅಂತಹ ಪರಿಸ್ಥಿತಿ ದಕ್ಷಿಣ ಭಾರತ ಚಿತ್ರರಂಗದಲ್ಲಿ ಇಲ್ಲ ಎಂದಿದ್ದರು. ಆದರೆ ಈಗ ದಕ್ಷಿಣ ಭಾರತ ಚಿತ್ರರಂಗದಲ್ಲೂ ಅಂತಹುದೇ ಪರಿಸ್ಥಿತಿ ಉದ್ಭವಿಸಿದೆ ಎಂದು ಪರೋಕ್ಷವಾಗಿ ಹೇಳಿದ್ದಾರೆ.



