ಹಿಂದೂ ಪದ ಪರ್ಷಿಯನ್ ಭಾಷೆಯಿಂದ ಬಂದಿದ್ದು ಇದರ ಅರ್ಥ ಬಹಳ ಅಶ್ಲೀಲವಾಗಿದೆ ಎಂದು ಹೇಳಿಕೆ ನೀಡಿ ವಿವಾದ ಎಬ್ಬಿಸಿದಕೆಪಿಸಿಸಿ ಕಾರ್ಯಾಧ್ಯಕ್ಷ ್ದ ಸತೀಶ್ ಜಾರಕಿಹೊಳಿ ಕ್ಷಮೆ ಕೇಳುವುದಿಲ್ಲ ಎಂದಿದ್ದಾರೆ. ವಿಶೇಷವೆಂದರೆ ಕಾಂಗ್ರೆಸ್ ನಾಯಕರಾದ ರಣದೀಪ್ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ, ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್.. ಯಾರೊಬ್ಬರೂ ಒಪ್ಪಿಲ್ಲ. ಆದರೆ ಸತೀಶ್ ಜಾರಕಿಹೊಳಿಯವರದ್ದು ಮಾತ್ರ ಅದೇ ಹಠಮಾರಿ ಧೋರಣೆ.
ತಾವು ಯಾವುದು ತಪ್ಪು ಹೇಳಿಕೆ ನೀಡಿಲ್ಲ ವೆಬ್ಸೈಟ್ಗಳಲ್ಲಿ, ವಿಕೀಪಿಡಿಯಾದಲ್ಲಿ, ಕೆಲ ಪುಸ್ತಕಗಳಲ್ಲಿ ಏನು ಉಲ್ಲೇಖ ಇದೆಯೋ ಅದನ್ನೇ ಹೇಳಿದ್ದೇನೆ. ತಾವು ಹೇಳಿದ್ದು ತಪ್ಪು ಅಂತಾ ಸಾಬೀತು ಪಡಿಸಿದರೆ ಬಹಿರಂಗ ಕ್ಷಮೆಯಾಚನೆ ಮಾಡುತ್ತೇನೆ. ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಿ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸವಾಲು ಹಾಕಿದ್ದಾರೆ.
ನನ್ನ ಹೇಳಿಕೆ ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲ. ಇದು ವಿವಾದ ಆಗುವಂತಹ ಪ್ರಶ್ನೆ ಇಲ್ಲ, ಅದೇನೂ ನಾನು ಸ್ವಂತ ಹೇಳಿಕೆಯಿಂದ ನಾನು ಹೇಳಿದ್ದಲ್ಲ. ಅದು ಡಿಕ್ಷನರಿಯಲ್ಲಿ ಇದೆ, ಆ ಡಿಕ್ಷನರಿ ನಿಮಗೆ ಕೊಡ್ತೀನಿ. ಬಹಳಷ್ಟು ಜನ ಲೇಖಕರು ತಮ್ಮ ಪುಸ್ತಕಗಳಲ್ಲಿ ಹಿಂದೂ ಪದದ ಅರ್ಥ ಏನು ಅಂತಾ ಉಲ್ಲೇಖ ಮಾಡಿದ್ದಾರೆ. ಅದು ಪರ್ಷಿಯನ್ ಶಬ್ದ ಅಂತಾ ಹೇಳಿದ್ದು ಪುಸ್ತಕ ನೋಡಿ ಹೇಳಿದ್ದು, ಇದರ ಬಗ್ಗೆ ಚರ್ಚೆ ಆಗಬೇಕು ಅಂತಾ ಹೇಳಿದ್ದೇನೆ. ಈ ಶಬ್ದಗಳು ಏಕೆ ಬಂದಿದೆ ಈ ಕೆಟ್ಟ ಮೀನಿಂಗ್ ಯಾರು ಕೊಟ್ರು? ಎಲ್ಲಿ ಕೊಟ್ರು? ಇದರ ಬಗ್ಗೆ ಚರ್ಚೆ ಆಗಲಿ ಅಂತಾ ಅಷ್ಟೇ ಹೇಳಿದ್ದೇನೆ. ಅದನ್ನ ತಿರುಚಿ ಮುರುಚಿ ಹೇಳುವ ಕೆಲಸ ಆಗ್ತಿದೆ, ಅದು ಆಗಬಾರದು ಎನ್ನುವುದು ಸತೀಶ್ ಜಾರಕಿಹೊಳಿ ವಾದ.
ನಾನು ಚರ್ಚೆ ಮಾಡಿ ಅಂದಿದ್ದು ಬಿಟ್ಟು.. ನನ್ನ ಮೇಲೆ ಗೂಬೆ ಕೂರಿಸುವ ಕೆಲಸ ಆಗುತ್ತಿದೆ. ಸಿಎಂ ಬಸವರಾಜ ಬೊಮ್ಮಾಯಿಯವರು ಒಂದು ಕಮಿಟಿ ನೇಮಿಸಿ, ಚರ್ಚೆ ಮಾಡಿ, ವರದಿ ತರಿಸಿಕೊಳ್ಳಲಿ. ನಾನು ಹೇಳಿದ್ದು ತಪ್ಪಾ? ಸತೀಶ್ ಜಾರಕಿಹೊಳಿ ಸ್ವಂತ ವಿಚಾರ, ವೈಯಕ್ತಿಕ ಹೇಳಿಕೆಯಾ? ಈ ರೀತಿ ಮುಂಚೆ ಯಾರೂ ಹೇಳಿಲ್ವಾ ಎಂಬ ಬಗ್ಗೆ ಚರ್ಚೆ ಆಗಲಿ. ಕ್ಷಮೆ ಕೇಳಬೇಕು ಅಂದ್ರೆ ಯಾವ ಆಧಾರದಲ್ಲಿ ಕೇಳಬೇಕು? ಬಿಜೆಪಿಯವರು ಹೇಳಿದಾರೆ ಅಂತಾ ಕೇಳಬೇಕಾ ಯಾವುದೇ ಒಂದು ಸಂಘಟನೆಯವರು ಹೇಳಿದ್ದಾರೆ ಅಂತಾ ಕೇಳಬೇಕಾ? ಬಿಜೆಪಿಯವರದ್ದೇ ಸರ್ಕಾರ ಇದೆ ನೀವು ವರದಿ ತರಿಸಿ ಅದು ಬಂದ್ರೆ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವೆ. ಕ್ಷಮೆ ಅಷ್ಟೇ ಅಲ್ಲ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜಕೀಯ ನಿವೃತ್ತಿ ತಗೆದುಕೊಳ್ಳುವೆ. ಶಾಸಕನಾಗಿಯೇ ಸಮಾಜ ಸೇವೆ ಮಾಡಬೇಕು ಎಂದಿಲ್ಲ. ನಾನು ಹೇಳಿಕೆ ಕೊಟ್ಟ ತಕ್ಷಣ ರಾಜಕೀಯ ಬದಲಾಗಲ್ಲ. ನಾನು ಹೇಳಿದ್ದು ತಪ್ಪಾಗಿದ್ದರೆ ಸರ್ಕಾರ ತಪ್ಪು ಎಂದು ಪ್ರೂವ್ ಮಾಡಲಿ ಎನ್ನುವುದು ಸತೀಶ್ ಜಾರಕಿಹೊಳಿ ಚಾಲೆಂಜ್.
ಇನ್ನು ವೆಬ್ಸೈಟ್ಗಳಲ್ಲಿ ಹಿಂದೂ ಪದದ ಅರ್ಥ ಉಲ್ಲೇಖ ಇರುವ ಬಗ್ಗೆ ದಾಖಲೆ ಬಿಡುಗಡೆ ಮಾಡಿರುವ ಸತೀಶ್ ಜಾರಕಿಹೊಳಿ, ಬಸವ ಭಾರತ ಪಾಕ್ಷಿಕ ಪತ್ರಿಕೆಯಲ್ಲಿ ಬಸವ ತತ್ವ ಪ್ರಚಾರಕ ಡಾ.ಜಿ.ಎಸ್ ಪಾಟೀಲ್ ಬರೆದ ಲೇಖನದ ಪ್ರತಿ ಸಹ ಬಿಡುಗಡೆ ಮಾಡಿದ್ದಾರೆ.
ಬಿಜೆಪಿಯವರು ಸ್ವಾಭಿಮಾನಿ ಹಿಂದೂ ಅಭಿಯಾನ ಶುರು ಮಾಡಿದ್ದಾರೆ. ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ. ಇತ್ತ ಸತೀಶ್ ಜಾರಕಿಹೊಳಿ ಪರ ಐ ಸ್ಟಾಂಡ್ ವಿತ್ ಸತೀಶ್ ಜಾರಕಿಹೊಳಿ ಅಭಿಯಾನ ಶುರುವಾಗಿದೆ.



