ರಾಮನಗರ, ಗೌಡರ ಕುಟುಂಬದ ಅದೃಷ್ಟದ ಕ್ಷೇತ್ರ. ದೇವೇಗೌಡರು ಸೋತಿದ್ದಾಗ ಅವರಿಗೆ ರಾಜಕೀಯ ಶಕ್ತಿ ತುಂಬಿದ್ದು ಇದೇ ರಾಮನಗರ. ಸಾತನೂರು, ಹಾಸನ, ಕನಕಪುರದಲ್ಲಿ ಸೋಲುಂಡಿದ್ದ ದೇವೇಗೌಡರಿಗೆ ಶಕ್ತಿ ನೀಡಿದ್ದು ರಾಮನಗರ. ದೇವೇಗೌಡರ ಅಧಿಕಾರ ಪರ್ವ ಶುರುವಾಗಿದ್ದು ಕೂಡಾ ರಾಮನಗರದಿಂದಲೇ. ದೇವೇಗೌಡರ ಶಕ್ತಿ ಇಡೀ ರಾಜ್ಯಕ್ಕೆ ಗೊತ್ತಾಗಿದ್ದೂ ರಾಮನಗರದಿಂದಲೇ. ಇಲ್ಲಿ ಶಾಸಕರಾಗಿ ಗೆದ್ದು ಸಿಎಂ ಆಗಿದ್ದಾಗಲೇ ಪ್ರಧಾನಿ ಪಟ್ಟವೂ ಅರಸಿಕೊಂಡು ಬಂದಿತ್ತು.

ಅವರಿಗಷ್ಟೇ ಅಲ್ಲ, ಹೆಚ್.ಡಿ.ಕುಮಾರಸ್ವಾಮಿಯವರಿಗೂ ಅಧಿಕಾರ ನೀಡಿದ್ದು ರಾಮನಗರವೇ. ಕುಮಾರಸ್ವಾಮಿ ಮೊದಲಿಗೆ ಶಾಸಕರಾಗಿದ್ದು ಮತ್ತು ಮುಖ್ಯಮಂತ್ರಿಯಾಗಿದ್ದು ರಾಮನಗರ ಶಾಸಕರಾಗಿಯೇ. 2ನೇ ಬಾರಿ ಮತ್ತೊಮ್ಮೆ ಸಿಎಂ ಪಟ್ಟಕ್ಕೇರಿದಾಗಲೂ ರಾಮನಗರ ಮತ್ತು ಚೆನ್ನಪಟ್ಟಣ ಎರಡನ್ನೂ ಗೆದ್ದಿದ್ದರು. ಇಲ್ಲಿ ಕಳೆದ ಚುನಾವಣೆಯಲ್ಲಿ ಎರಡು ಕ್ಷೇತ್ರದಲ್ಲಿ ನಿಂತಿದ್ದರೂ ಪ್ರಚಾರಕ್ಕೆ ಬಂದಿರಲಿಲ್ಲ. ಕೇವಲ ಹೆಚ್‍ಡಿಕೆ ಮೇಲಿನ ಪ್ರೀತಿಯಿಂದ ಎರಡೂ ಕ್ಷೇತ್ರಗಳಲ್ಲಿ ಭರ್ಜರಿಯಾಗಿ ಗೆಲ್ಲಿಸಿದ್ದರು ರಾಮನಗರದ ಜನ. ಆ ನಂತರ ಚೆನ್ನಪಟ್ಟಣ ಉಳಿಸಿಕೊಂಡು ರಾಮನಗರಕ್ಕೆ ಅನಿತಾ ಕುಮಾರಸ್ವಾಮಿಯನ್ನು ಶಾಸಕಿಯನ್ನಾಗಿ ಮಾಡಿದ್ದರು ಕುಮಾರಸ್ವಾಮಿ.

ಮಗನಿಗಾಗಿ ದೇವೇಗೌಡರು ಕ್ಷೇತ್ರ ಬಿಟ್ಟರು. ಪತ್ನಿಗಾಗಿ ಪತಿ ಕುಮಾರಸ್ವಾಮಿ ಕ್ಷೇತ್ರ ಬಿಟ್ಟುಕೊಟ್ಟರು. ಈಗ ಅನಿತಾ ಕುಮಾರಸ್ವಾಮಿ ಕೂಡಾ ಮಗನಿಗಾಗಿ ಕ್ಷೇತ್ರ ಬಿಟ್ಟುಕೊಟ್ಟಿದ್ದಾರೆ ಈಗ ಅದೇ ಅದೃಷ್ಟದ ಕ್ಷೇತ್ರಕ್ಕೆ ನಿಖಿಲ್ ರಂಗಪ್ರವೇಶವಾಗುತ್ತಿದೆ. ಮಂಡ್ಯ ಲೋಕಸಭಾ ಚುನಾವಣೆ ಸೋಲಿನ ಬಳಿಕ ನಿಖಿಲ್ ವಿಧಾನಸಭೆ ಕಣಕ್ಕೆ ಧುಮುಕುತ್ತಿದ್ದಾರೆ. ತಂದೆ ಮತ್ತು ತಾತನಿಗೆ ರಾಜಕೀಯ ಪುನರ್ಜನ್ಮ ನೀಡಿದ ರಾಮನಗರವೇ ಆ ಕ್ಷೇತ್ರ ಎನ್ನುವುದೂ ವಿಶೇಷ. ಅವರಿಗಷ್ಟೇ ಅಲ್ಲ, ಅನಿತಾ ಕುಮಾರಸ್ವಾಮಿಯವರಿಗೂ ಕಳೆದ ಬಾರಿ ಗೆಲುವಿನ ಉಡುಗೊರೆ ಕೊಟ್ಟಿದ್ದೂ ರಾಮನಗರವೇ.
ಹಾಗೆಂದು ಇಲ್ಲಿ ಗೆಲುವು ಸುಲಭವೆಂದೇನು ಹೇಳೋಕಾಗಲ್ಲ. ಕಳೆದ ಚುನಾವಣೆಯಲ್ಲಿ ಇಕ್ಬಾಲ್ ಹುಸೇನ್ ಒಂದೆರಡು ಸುತ್ತುಗಳಲ್ಲಿ ಲೀಡ್ ಕೂಡಾ ಪಡೆದುಕೊಂಡಿದ್ದರು. ಅನಿತಾ ಕುಮಾರಸ್ವಾಮಿ ಎಲೆಕ್ಷನ್ ಎದುರಿಸಿದಾಗ ಮೈತ್ರಿ ಸರ್ಕಾರವಿತ್ತು. ಹೀಗಾಗಿ ಇಕ್ಬಾಲ್ ಹುಸೇನ್ ಪೈಪೋಟಿ ಇರಲಿಲ್ಲ.

ನನ್ನ ಪತಿ ಹಾಗೂ ಮಾವನವರಿಗೆ ನೀಡಿದಂತೆಯೇ ನನ್ನ ಮಗನಿಗೂ ಆಶೀರ್ವಾದ ಮಾಡಿ ಎಂದು ಮನವಿ ಮಾಡಿದ ಅನಿತಾ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿಯನ್ನು ನಿಮ್ಮ ಮಡಿಲಿಗೆ ಹಾಕಿದ್ದೇನೆ. ಮುಂದಿನ ಬಾರಿಯೂ ಶಕ್ತಿ ನೀಡಿ ಹರಸಿ ಎಂದು ಭಾವುಕರಾಗಿ ಹೇಳಿದರು. ನನಗೂ ಗೊತ್ತಿರಲಿಲ್ಲ. ನೇರವಾಗಿ ಸಾರ್ವಜನಿಕವಾಗಿ ಅನಿತಾ ಈ ಘೋಷಣೆ ಮಾಡಿದರು. ಕ್ಷೇತ್ರದ ಜನ ನಿಖಿಲ್‍ನ್ನು ಮನೆ ಮಗನಂತೆ ಭಾವಿಸಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು ಕುಮಾರಸ್ವಾಮಿ. ಮಗ ನಿಖಿಲ್‍ಗೂ ಕೂಡಾ ನಡವಳಿಕೆ, ಶ್ರಮ, ದುಡಿಮೆಯಿಂದ ಈ ಕ್ಷೇತ್ರದ ಜನರ ಪ್ರೀತಿಯನ್ನು ಗೆಲ್ಲೋಕೆ ಶ್ರಮಿಸುವಂತೆ ಹೇಳಿದರು. ಹಣದಿಂದ ಈ ಕ್ಷೇತ್ರದ ಜನರ ಪ್ರೀತಿ ಗೆಲ್ಲೋಕೆ ಸಾಧ್ಯವಿಲ್ಲ ಎಂದು ಕೂಡಾ ಹೇಳಿದರು.

ನಿಖಿಲ್ ಕೂಡಾ ತಾಯಿಯ ಘೋಷಣೆ ಅಚ್ಚರಿ ತಂದಿತೆಂದು ಹೇಳಿದರು. ರಾಮನಗರಕ್ಕೆ ಸೂಕ್ತ ಅಭ್ಯರ್ಥಿ ಎಂದರೆ ಅದು ಕುಮಾರಣ್ಣ. ಆದರೆ ಅವರ ಮಾತನ್ನು ನಾನು ಮೀರುವುದಿಲ್ಲ. ದೊಡ್ಡಗೌಡ್ರು, ಕುಮಾರಣ್ಣನಿಗೆ ನೀಡಿದ ಶಕ್ತಿಯನ್ನೇ ನನಗೂ ನೀಡಿ ಎಂದು ಮನವಿ ಮಾಡಿದರು ನಿಖಿಲ್.
ಅಂದಹಾಗೆ ವೇದಿಕೆಯಲ್ಲಿ ಈ ಮಾತು ಹೇಳಿದ್ದರೂ ಇದು ಅನಿರೀಕ್ಷಿತವೇನೂ ಅಲ್ಲ. ನಿಖಿಲ್ ಅವರ ಮದುವೆ ಮತ್ತಿತರ ಕಾರ್ಯಕ್ರಮಗಳನ್ನು ರಾಮನಗರದಲ್ಲೇ ನೆರವೇರಿಸಿದ್ದರು. ತಮ್ಮ ತೋಟವನ್ನೂ ರಾಮನಗರದಲ್ಲಿಯೇ ಮಾಡಿ ಜನರೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು. ನಿಖಿಲ್ ಕೂಡಾ ಇತ್ತೀಚೆಗೆ ಆಗಾಗ್ಗೆ ರಾಮನಗರಕ್ಕೆ ಭೇಟಿ ನೀಡುತ್ತಲೇ ಇದ್ದರು. ಅಲ್ಲದೆ ಅನಿತಾ ಅವರಿಗೆ ಸ್ವಪಕ್ಷ ಜೆಡಿಎಸ್‍ನಲ್ಲಿಯೇ ವಿರೋಧ ವ್ಯಕ್ತವಾಗಿತ್ತು. ಆಕ್ರೋಶ ವ್ಯಕ್ತವಾಗಿತ್ತು. ಅನಿತಾ ಎಲೆಕ್ಷನ್ನಿಗೆ ನಿಂತರೆ ಕಾಂಗ್ರೆಸ್ ಗೆಲ್ಲುವ ಸಾಧ್ಯತೆಗಳೂ ಇದ್ದವು. ಈ ಎಲ್ಲವುಗಳಿಂದ ತಪ್ಪಿಸಿಕೊಳ್ಳಲು ಕುಮಾರಸ್ವಾಮಿಯವರೇ ಈ ನಡೆಗೆ ಮುಂದಾದರು ಎಂಬ ವಿಶ್ಲೇಷಣೆಯೂ ಇದೆ. ಅಲ್ಲದೆ ಕುಟುಂಬದ ಹೆಣ್ಣು ಮಕ್ಕಳನ್ನು ರಾಜಕೀಯದಿಂದ ಹೊರಗಿಡಬೇಕು ಎಂಬ ದೃಷ್ಟಿಯೂ ಇದೆ. ಅನಿತಾ ಅವರನ್ನು ಹೊರಗಿಟ್ಟರೆ ಆಗ ಭವಾನಿ ರೇವಣ್ಣ ಅವರಿಗೂ ಟಿಕೆಟ್ ನೀಡದೆ ಸುಮ್ಮನಾಗಿಸಬಹುದು ಎಂಬ ಫ್ಯಾಮಿಲಿ ಲೆಕ್ಕಾಚಾರವೂ ಇದೆ ಎನ್ನುತ್ತಿವೆ ಜೆಡಿಎಸ್ ಮೂಲಗಳು. ಒಟ್ಟಿನಲ್ಲೀಗ ಇನ್ನು ಮುಂದೆ ನಿಖಿಲ್ ಎಂಎಲ್‍ಎ ಕ್ಯಾಂಡಿಡೇಟ್ ಆಗುವುದು ನಿಜವಾದಂತಾಯಿತು.

ಅಂದಹಾಗೆ ದೇವೇಗೌಡರ ಕುಟುಂಬದವರು ಇಲ್ಲಿ ಸೊತೇ ಇಲ್ಲ. ದೇವೇಗೌಡರು ಒಮ್ಮೆ, ಕುಮಾರಸ್ವಾಮಿ 3 ಬಾರಿ ಹಾಗೂ ಅನಿತಾ ಕುಮಾರಸ್ವಾಮಿ ಒಮ್ಮೆ ಇಲ್ಲಿಂದಲೇ ಗೆದ್ದಿದ್ದಾರೆ. ಆದರೆ ಗೌಡರ ಕುಟುಂಬ ಹೊರತುಪಡಿಸಿ ಮಿಶ್ರಫಲ ಕಂಡಿದೆ. ಸ್ವತಃ ಅಂಬರೀಷ್ ರಂಗಪ್ರವೇಶವಾಗಿದ್ದು ಕೂಡಾ ರಾಮನಗರದಿಂದಲೇ. ದೇವೇಗೌಡರು ಪ್ರಧಾನಿಯಾದಾಗ ತಮ್ಮ ರಾಮನಗರವನ್ನು ಅಂಬರೀಷ್ ಅವರಿಗೆ ಬಿಟ್ಟುಕೊಟ್ಟಿದ್ದರು. ಆಗ ಅಂಬರೀಷ್ ರಾಜಕೀಯ ಪ್ರವೇಶ ಸಂಚಲನವನ್ನೇ ಸೃಷ್ಟಿಸಿತ್ತು. ದೇವೇಗೌಡರೂ ಸೇರಿದಂತೆ ಜನತಾದಳ ಒಗ್ಗಟ್ಟಾಗಿ ಪ್ರಚಾರ ಮಾಡಿದ್ದರೂ, ದೇವೇಗೌಡರು ಪ್ರಧಾನಿಯಾಗಿದ್ದರೂ ಅಂಬರೀಷ್ ಸೋತು ಹೋಗಿದ್ದರು. ಈಗ ನಿಖಿಲ್ ರಂಗಪ್ರವೇಶವೂ ಅಲ್ಲಿಂದಲೇ ಆಗುತ್ತಿದೆ.



