ಯಡಿಯೂರಪ್ಪ ಅವರನ್ನು ಬದಿಗೆ ಸರಿಸುತ್ತಿದ್ದಾರೆ. ಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎಂಬ ಚರ್ಚೆಗಳ ನಡುವೆಯೇ ಯಡಿಯೂರಪ್ಪ ಅವರಿಗೆ ಹುಟ್ಟುಹಬ್ಬದ ಕಾಣಿಕೆ ನೀಡಲು ಮುಂದಾಗಿದ್ದಾರೆ ನರೇಂದ್ರ ಮೋದಿ. ರಾಜ್ಯ ಬಿಜೆಪಿಯೊಳಗಿನ ಬೆಳವಣಿಗೆ ನೋಡಿದರೆ ಯಡಿಯೂರಪ್ಪರನ್ನು ಕೇವಲ ಉತ್ಸವ ಮೂರ್ತಿಯಾಗಿಸಿಕೊಂಡಿದ್ದಾರೆಯೇ ಹೊರತು ಬೇರೇನೂ ಇಲ್ಲ. ಉಪಾಧ್ಯಕ್ಷರಾಗಿರುವ ವಿಜಯೇಂದ್ರ ಯಡಿಯೂರಪ್ಪ ಪರಿಸ್ಥಿತಿಯೂ ಬಿನ್ನವಾಗಿಲ್ಲ. ಅಮಿತ್ ಶಾ, ಜೆಪಿ ನಡ್ಡಾ ಮೊದಲಾದ ನಾಯಕರೇ ಹೇಳಿ ಹೋದರೂ ಇಲ್ಲಿನ ಲೋಕಲ್ ಗ್ಯಾಂಗ್‍ನಲ್ಲಿ ಅದು ಸಂತೋಷವನ್ನೂ ನೀಡಿಲ್ಲ. ಇದರ ನಡುವೆಯೇ ಬಂದಿರುವ ಸುದ್ದಿ ಇದು. 

ಫೆಬ್ರವರಿ 27. ಯಡಿಯೂರಪ್ಪ ಅವರ ಹುಟ್ಟುಹಬ್ಬ. ಆ ದಿನ 80ನೇ ವಯಸ್ಸಿಗೆ ಕಾಲಿಡುವ ಯಡಿಯೂರಪ್ಪ ಅವರಿಗೆ ಖುದ್ದು ಮೋದಿಯೇ ಕಾಣಿಕೆ ನೀಡಲಿದ್ದಾರೆ. ಅದು ಯಡಿಯೂರಪ್ಪ ಅವರ ಕನಸಾಗಿದ್ದ ಶಿವಮೊಗ್ಗ ಏರ್`ಪೋರ್ಟ್ ಕನಸು. ಆ ದಿನ ಖುದ್ದು ನರೇಂದ್ರ ಮೋದಿಯವರೇ ಬಂದು ಏರ್`ಪೋರ್ಟ್ ಉದ್ಘಾಟಿಸಲಿದ್ದಾರೆ ಎಂದಿರುವುದು ಖುದ್ದು ಯಡಿಯೂರಪ್ಪ. ಇತ್ತೀಚೆಗೆ ದೆಹಲಿಗೆ ಹೋಗಿದ್ದಾಗ ಕಾರ್ಯಕಾರಿಣಿಯಲ್ಲಿ ಬಿಎಸ್ವೈ ಮತ್ತು ಮೋದಿ ನಡುವಿನ ಸುದೀರ್ಘ ಮಾತುಕತೆ ಎಲ್ಲರ ಹುಬ್ಬೇರಿಸಿತ್ತು. ಆ ಮಾತುಕತೆಯೇ ಫಲಿತಾಂಶವೇ ಇದು.



