ದೇಶದ ಹಲವು ದೇಗುಲ, ದೇವಸ್ಥಾನಗಳನ್ನು ಮೊಘಲರೂ ಸೇರಿದಂತೆ ಹಲವು ದೊರೆಗಳು ನಾಶ ಮಾಡಿದ್ದು ಇತಿಹಾಸ. ಘಜ್ನಿ ಮಹಮ್ಮದ್, ಘೋರಿ ಮಹಮ್ಮದ್, ಬಾಬರ್, ಔರಂಗಜೇಬ್, ಕುತ್ಬುದ್ದೀನ್ ಐಬಕ್, ಮಲ್ಲಿಕಾಫರ್, ಅಲ್ಲಾವುದ್ದೀನ್ ಖಿಲ್ಜಿ.. ಹೀಗೆ ಸಂತತಿಗಳು ಬೆಳೆಯುತ್ತಲೇ ಹೋಗುತ್ತವೆ. ಮಥುರಾ, ಕಾಶಿ, ಅಯೋಧ್ಯೆಯ ದೇವಸ್ಥಾನಗಳನ್ನು ಹೇಗೆ ಔರಂಗಜೇಬ್ ನಾಶ ಮಾಡಿದನೋ.. ಹಾಗೆಯೇ ಹಿಂದೂಗಳ ಪವಿತ್ರ ಜ್ಯೋತಿರ್ಲಿಂಗ ಕ್ಷೇತ್ರವಾದ ಉಜ್ಜಯಿನಿಯ ಮಹಾಕಾಳೇಶ್ವರ ದೇಗುಲವೂ ಇಲ್ತಮಷ್ ಎಂಬುವನ ಕಾಲದಲ್ಲಿ ನಾಶವಾಗಿತ್ತು.

ಶಂಸ್ ಉದ್-ದಿನ್ ಇಲ್ತಮಷ್ ಎಂಬುದು ಈತನ ಪೂರ್ತಿ ಹೆಸರು. ಇಲ್ತಮಷ್ ಅಥವಾ ಅಲ್ತಮಷ್ ಎಂದೂ ಕರೆಲ್ಪಡುವ ಈತ ಭಾರತದಲ್ಲಿ ಮುಸಲ್ಮಾನ ಆಡಳಿತ ಜಾರಿಗೆ ತಂದ ಮೊದಲ ದೊರೆ. ಪುಟ್ಟ ಹುಡುಗನಾಗಿದ್ದಾಲೇ ಈತನನ್ನು ಹೆತ್ತವರು ಮಾರಿಬಿಟ್ಟಿದ್ದರು. ಗುಲಾಮಾಗಿದ್ದ ಈತನನ್ನು ನಂತರ ಕುತ್ಬುದ್ದೀನ್ ಐಬಕ್ ಖರೀದಿ ಮಾಡಿದ. ಶೌರ್ಯ ಕ್ರೌರ್ಯಕ್ಕೆ ಹೆಸರುವಾಸಿಯಾದ್ದ ಈತನಿಗೆ ಕುತ್ಬುದ್ದೀನ್ ಐಬಕ್ ತನ್ನ ಮಗಳನ್ನು ಕೊಟ್ಟು ಮದುವೆ ಮಾಡಿದ. ಆತನೂ ಗುಲಾಮನಾಗಿದ್ದು ಅರಸನಾದವನೇ ಆದ್ದರಿಂದ ಇಲ್ತಮಷ್ ಮೇಲೆ ಪ್ರೀತಿಯೂ ಇತ್ತು.
ಕ್ರಿ.ಶ. 1234 -1235ರಲ್ಲಿ ಉಜ್ಜಯಿನಿಯನ್ನು ಗೆದ್ದ ಇಲ್ತಮಷ್ ಇಲ್ಲಿನ ದೇಗುಲಗಳನ್ನು ನಾಶ ಪಡಿಸಿದ. ದೇಗುಲದ ಪಕ್ಕದಲ್ಲೇ ಕೋಟಿತೀರ್ಥ ಕುಂಡಕ್ಕೆ ಜ್ಯೋತಿರ್ಲಿಂಗವನ್ನು ಜಲಧಾರಿಯೊಂದಿಗೆ ಎಸೆದಿದ್ದ. ಅದನ್ನು ಮತ್ತೆ ಪುನರ್ ನಿರ್ಮಾಣ ಮಾಡಿದ್ದು ಮರಾಠರು. ಕ್ರಿ.ಶ.1734ರಲ್ಲಿ ಮರಾಠ ದೊರೆ ಬಾಜಿರಾವ್ ಶಿಂಧೆಯ ಜನರಲ್ ಆಗಿದ್ದ ರಾಮೋಜಿ ಶಿಂಧೆ ಇದನ್ನು ಕಟ್ಟಿಸಲು ಶುರು ಮಾಡಿದ. ನಂತರ ಹಲವು ಮರಾಠಾ ದೊರೆಗಳು ಇದರ ಪುನರ್ ನಿರ್ಮಾಣಕ್ಕೆ ಕೈಜೋಡಿಸಿದರು. 18ನೇ ಶತಮಾನದ 4 ಮತ್ತು 5ನೇ ದಶಕದ ಅವಧಿಯಲ್ಲಿ ಈಗಿರುವ ಮಹಾಕಾಳೇಶ್ವರ ದೇಗುಲ ಕಟ್ಟಲ್ಪಟ್ಟಿತು.



