ದೈವಾರಾಧನೆ ಹಿಂದೂ ಸಂಸ್ಕೃತಿಯೇ ಅಲ್ಲ ಎಂದು ವಿಚಿತ್ರ ವಾದ ಮಂಡಿಸುತ್ತಿರುವ, ಜನ ಮೆಚ್ಚಿದ ಚಿತ್ರದಲ್ಲಿ ಇಲ್ಲದ ವಿವಾದ ಹುಡುಕುತ್ತಿರುವ ನಟ ಚೇತನ್ ಕುಮಾರ್ ಬಗ್ಗೆ ನಾಡಿನ ಜನ ಆಕ್ರೋಶಗೊಂಡಿದ್ದಾರೆ. ಕರಾವಳಿ, ದೈವ, ಪಂಜುರ್ಲಿ, ಗುಳಿಗ, ಭೂತಕೋಲ.. ಇದಾವುದರ ಪರಿಚಯವಿಲ್ಲದವರಿಗೂ ಇದು ಬೇಸರ ತರಿಸಿದೆ. ಇಂತಹ ಚೇತನ್ ವಿರುದ್ಧ ನಟ ಸ್ವರಾಜ್ ಶೆಟ್ಟಿ ಕಿಡಿಕಾರಿದ್ದಾರೆ. ಈ ಸ್ವರಾಜ್ ಶೆಟ್ಟಿ ಯಾರು ಎಂದರೆ ಕಾಂತಾರದ ಗುರುವ.
ಗುರುವ, ಕಾಂತಾರದಲ್ಲಿ ಶಿವನಿಗೆ ಅಣ್ಣ. ವಂಶಪಾರಂಪರಿಕವಾಗಿ ಶಿವ ಮಾಡಬೇಕಿದ್ದ ದೈವನರ್ತಕನ ಪದ್ಧತಿಯನ್ನು ಗುರುವ ಮುಂದುವರೆಸುತ್ತಿರುತ್ತಾನೆ. ಗುರುವನನ್ನು ತುಂಬಾ ಪ್ರೀತಿಸುವ ತಮ್ಮ ಶಿವ ಗುರುವನ ಕೊಲೆಯ ನಂತರ ಧಣಿಯ ವಿರುದ್ಧವೇ ಸಿಡಿದೇಳುತ್ತಾನೆ. ರಿಷಬ್ ಶೆಟ್ಟಿಗೂ ಮೊದಲು ಪಂಜುರ್ಲಿಯಾಗಿ ಗುರುವನ ಪಾತ್ರದಲ್ಲಿ ಅದ್ಭುತ ಅಭಿನಯ ನೀಡಿದ್ದಾರೆ ಸ್ವರಾಜ್ ಶೆಟ್ಟಿ.
ಹಿಂದೂ ಸಂಸ್ಕೃತಿ ಅಲ್ಲ ಅಂತ ಹೇಳುವವರಿಗೆ ಅದು ತುಳುನಾಡಿಗೆ ಬಂದ ಕಥೆಯಾದ್ರೂ ಗೊತ್ತಿದ್ಯಾ ಅನ್ನೋದು ಸ್ವರಾಜ್ ಶೆಟ್ಟಿ ಪ್ರಶ್ನೆ. ನಮ್ಮ ನಂಬಿಕೆಗೆ ಧಕ್ಕೆ ತರುವ ಕೆಲಸ ಮಾಡಬೇಡಿ. ನಮ್ಮ ಪೂರ್ವಜರು ಹೇಳಿದ್ದನ್ನು ನಾವು ಮಾಡಿಕೊಂಡು ಬರ್ತಾ ಇದೀವಿ. ದೈವಾರಾಧನೆ ಮತ್ತು ಕಾಂತಾರದ ವಿಷಯ ಬೇಡ. ಸಿನಿಮಾ ಸಿನಿಮಾವಾಗಿ ಇರಲಿ. ನಟರಾಗಿ ಸಿನಿಮಾ ನೋಡಿ. ಖುಷಿ ಪಡಲಿ. ಅದು ಬಿಟ್ಟು ಇಲ್ಲದ್ದನ್ನು ಹೇಳಿ ಬೇಳೆ ಬೇಯಿಸಿ ಕೊಳ್ಳುವ ಕೆಲಸ ಬೇಡ. ತುಳುನಾಡಿನಲ್ಲಿ ದೈವಾರಾಧನೆ ಬಗ್ಗೆ ದಿಗ್ಗಜರು ಪುಸ್ತಕ ಬರೆದಿದ್ದಾರೆ. ಅಂಥದ್ದನ್ನ ಓದಲಿ, ಅವರೇ ಇವರಿಗೆ ಉತ್ತರ ಕೊಡ್ತಾರೆ. ಕೊರಗಜ್ಜನ ಮೇಲೆ ಗೌರವ ಇದೆ ಅಂತ ಚೇತನ್ ಹೇಳಿದ್ದಾರೆ. ಆದರೆ ದೈವದ ಬಗ್ಗೆ ಗೌರವ ಅಲ್ಲ, ಭಕ್ತಿ ಬರಬೇಕು. ಒಂದೆರಡು ಸಲ ಇವರು ನಮ್ಮ ಭೂತಾರಾಧನೆಗಳಿಗೆ ಬನ್ನಿ. ನೋಡಿ. ದೈವ ನಡೆಯನ್ನ ನಿಂತು ಒಮ್ಮೆ ನೋಡಿದರೆ ಭಕ್ತಿ ಬರಬಹುದು. ಶಿವದೂತ ಗುಳಿಗ ಅನ್ನೋ ನಾಟಕದ ಕಥೆ ಒಂದು ಶಕ್ತಿಯ ಕಥೆ. ಗುಳಿಗನ ಕಥೆಯನ್ನ ಜನರ ಮುಂದೆ ತೆರೆದಿಡೋ ಕೆಲಸ ನಾವು ಮಾಡಿದ್ದೇವೆ. ಧರ್ಮವನ್ನ ಹಾಳು ಮಾಡೋರನ್ನ ಈ ದೈವಗಳು ಬಿಡಲ್ಲ. ಕರಾವಳಿಯ ಎಲ್ಲಾ ದೈವಗಳು ಇದೇ ರೀತಿ ಮಾಡುತ್ತವೆ. ದೈವಗಳು ಭೂಮಿಯಲ್ಲಿ ಇರೋದೇ ಧರ್ಮ ರಕ್ಷಣೆಗಾಗಿ, ಅದನ್ನ ದಾಟಿದ್ರೆ ಉಳಿಗಾಲವಿಲ್ಲ ಎಂದಿದ್ದಾರೆ ಸ್ವರಾಜ್ ಶೆಟ್ಟಿ.
ನಮ್ಮೆಲ್ಲರ ಕಿಚ್ಚನ್ನ ಹಬ್ಬಿಸ್ತಾ ಇದೀರಿ, ಕಾಂತಾರ ಸಿನಿಮಾ ಬಗ್ಗೆ ಮಾತು ಬೇಡ. ಮಂಗಳೂರಿಗೆ ಬಂದು ಪ್ರಶ್ನೆ ಕೇಳುವ ತಾಕತ್ ಇದ್ರೆ ಬಂದು ಮಾತನಾಡಲಿ. ಈ ವಿವಾದ ಸಿನಿಮಾದ ಕಾರಣಕ್ಕೆ ಹುಟ್ಟಿಕೊಂಡಿದ್ದು, ನಮ್ಮದು ಒಂದು ಇರಲಿ ಅಂತ. ಇಷ್ಟು ದಿನ ಇಲ್ಲದ್ದು ಕಾಂತಾರ ಸಿನಿಮಾ ಬಂದ ನಂತರ ಹೇಗೆ ಬಂತು? ಸಿನಿಮಾ ಬಂದು ಇಷ್ಟು ದಿನದ ನಂತರ ವಿವಾದ ಮಾಡ್ತಿದ್ದಾರೆ. ದೈವಾರಾಧನೆ ಬಗ್ಗೆ ಮಾತು ಬೇಡ, ಸಿನಿಮಾ ಬದಿಗಿಟ್ಟು ಮಾತನಾಡಿ. ನಾಳೆ ದೈವಕ್ಕೆ ಕೋಪ ಬಂದ್ರೆ ಅವನು ಮಾತ್ರ ಖಂಡಿತಾ ಬಿಡಲ್ಲ. ಇದರಿಂದ ಸಿನಿಮಾಗೆ ಡ್ಯಾಮೇಜ್ ಇಲ್ಲ, ಇದರಿಂದ ಚೇತನ್ಗೆ ಪಬ್ಲಿಸಿಟಿ ಸಿಗುತ್ತಷ್ಟೆ ಎಂದಿದ್ದಾರೆ ಸ್ವರಾಜ್ ಶೆಟ್ಟಿ.
ಅಂದಹಾಗೆ ಕರಾವಳಿಯ ಕಥೆ ಬಿಡಿ, ಬೇರೆ ಕಡೆಗಳಲ್ಲಿ ನಂಬಿಕೆ ತಾಯಿ ಸಮಾನ ಅಂತಾರೆ. ನಂಬಿಕೆಯನ್ನು ಪ್ರಶ್ನಿಸಬಾರದು. ಇಷ್ಟಕ್ಕೂ ಅದರಿಂದ ಯಾರಿಗೆ ಏನು ಸಮಸ್ಯೆ? ನಂಬಿಕೆ ಇರುವವರು ಭಕ್ತಿಯಿಂದ ಆರಾಧಿಸುತ್ತಾರೆ. ಇಲ್ಲದವರು ಸುಮ್ಮನಿರಬೇಕು. ತಾವೇ ಪ್ರಜ್ಞಾವಂತರು, ವೇದಾಂತಿಗಳು ತಾವೇ ಎಲ್ಲ ತಿಳಿದವರು ಎಂದು ಹೋದರೆ ಹೀಗೆಲ್ಲ ಆಗುತ್ತೆ. ಚೇತನ್ಗೆ ಹಾಗೂ ಆತನ ಮಾತುಗಳನ್ನುಸಮರ್ಥಿಸುವವರಿಗೆ ಇದು ಅರ್ಥವಾಗಬೇಕಿದೆ.



