ಜಯಲಲಿತಾ ಜೀವನದಲ್ಲಿ ಕಂಡ ವೈಭವಗಳದ್ದೇ ಒಂದು ಕಥೆ. ಸಾಧನೆಗಳದ್ದು ಮತ್ತೊಂದು ಕಥೆ. ಆದರೆ ಅವಮಾನಗಳ ಕಥೆ ಇದೆಯಲ್ಲ, ಅದು ಮತ್ತೊಂದು ಮುಖ. 



ಈಗ ಕುಮಾರಸ್ವಾಮಿ ಕೂಡಾ ಅದೇ ಹಾದಿಯಲ್ಲಿದ್ದಾರಾ ಅನ್ನೋ ಪ್ರಶ್ನೆ ಉದ್ಭವವಾಗಿದೆ. ಆದರೆ ಇಲ್ಲಿ ಕುಮಾರಸ್ವಾಮಿಯವರಿಗೆ ಜಯಲಲಿತಾ ಅವರಿಗೆ ಆದ ಅವಮಾನ ಆಗಿಲ್ಲ. ಕುಮಾರಸ್ವಾಮಿಗೆ ಮಾಡುವ ಧೈರ್ಯವೂ ಯಾರಿಗೂ ಇಲ್ಲ ಎನ್ನುವುದು ವಾಸ್ತವ. ಆದರೆ ಈ ನಿರ್ಧಾರಕ್ಕೆ ಕಾರಣ ಸ್ವತಃ ಕುಮಾರಸ್ವಾಮಿ. ಇತ್ತೀಚೆಗೆ ಬೆಳಗಾವಿಯಲ್ಲಿ ಸದನ ನಡೆದಾಗ ಕುಮಾರಸ್ವಾಮಿ ಗೈರು ಹಾಜರಾಗಿದ್ದರು. ತಮ್ಮ ಪಂಚರತ್ನ ಯಾತ್ರೆಯಲ್ಲಿಯೇ ಬ್ಯುಸಿಯಾಗಿದ್ದರು.

ಇತ್ತ ಫೆಬ್ರವರಿಯಲ್ಲಿ ಬಜೆಟ್ ಅಧಿವೇಶನವೂ ನಡೆಯಲಿದ್ದು, ಚುನಾವಣೆ ಹತ್ತಿರವಿರುವುದರಿಂದ ಲೇಖಾನುದಾನ ಮಂಡನೆಯಾಗಲಿದೆ. ಈ ಅಧಿವೇಶನದಿಂದಲೂ ಕುಮಾರಸ್ವಾಮಿ ದೂರ ಉಳಿಯಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅದಕ್ಕೆ ಕಾರಣ ಪಂಚರತ್ನ ಯಾತ್ರೆಯಲ್ಲಿ ಸಿಗುತ್ತಿರುವ ಜನಬೆಂಬಲ.
ಪಂಚರತ್ನ ಯಾತ್ರೆ ಈಗಾಗಲೇ ದಾಖಲೆ ಪುಸ್ತಕ ಸೇರಿದೆ. ಹಾರಗಳ ವಿಶೇಷತೆಯೇ ಪ್ರತ್ಯೇಕ ಏಷ್ಯನ್ ರೆಕಾರ್ಡ್ ಆಗಿದೆ. ಜನರಂತೂ ಅದ್ಭುತ ಎನ್ನುವ ರೀತಿಯಲ್ಲಿ ಕುಮಾರಸ್ವಾಮಿಗೆ ಸ್ವಾಗತ ಕೋರುತ್ತಿದ್ದಾರೆ. ಇದರಿಂದ ಸಂತುಷ್ಟರಾಗಿರುವ ಕುಮಾರಸ್ವಾಮಿ ರಾಜ್ಯಾದ್ಯಂತ ಚುನಾವಣೆ ಯಾತ್ರೆಯನ್ನು ನಡೆಸುವ ಉದ್ದೇಶವಿಟ್ಟುಕೊಂಡು ಹೊರಟಿದ್ದಾರೆ.

ಜೊತೆಗೆ ಜೆಡಿಎಸ್ ಕುರಿತಂತೆ ಅಮಿತ್ ಶಾ ನೀಡಿರುವ ಹೇಳಿಕೆ ಕುಮಾರಸ್ವಾಮಿಯವರ ಮಾತಿಗೆ ಶಕ್ತಿ ನೀಡಿದೆ. ಕಾಂಗ್ರೆಸ್ ನಾಯಕರು ಪದೇ ಪದೇ ತಮ್ಮ ಪಕ್ಷವನ್ನು ಬಿಜೆಪಿಯ ಬಿ ಪಾರ್ಟಿ ಎನ್ನುತ್ತಿದ್ದವರಿಗೆ ಉತ್ತರ ಎನ್ನುವಂತೆ ಅಮಿತ್ ಶಾ ಮಾತು ಬಂದಿದೆ. ಹೀಗಾಗಿ ಯಾತ್ರೆಗೆ ಇನ್ನಷ್ಟು ಶಕ್ತಿ ನೀಡಲು ಕುಮಾರಸ್ವಾಮಿ ನಿರ್ಧರಿಸಿದ್ದಾರೆ. ಹೀಗಾಗಿಯೇ ಸದನಕ್ಕೆ ಬರುವುದೇನಿದ್ದರೂ ಮುಖ್ಯಮಂತ್ರಿಯಾಗಿಯೇ ಎಂದು ನಿರ್ಧರಿಸಿದ್ದಾರಂತೆ ಕುಮಾರಸ್ವಾಮಿ. ಆದರೆ ಇದು ಅಂತೆ ಕಂತೆಗಳ ಕಥೆಯೇ ಹೊರತು ಅಧಿಕೃತ ಸುದ್ದಿಯೇನಲ್ಲ. ಇದು ಕಾರ್ಯಕರ್ತರು ತಮ್ಮ ತಮ್ಮ ನಡುವೆ ಮಾತನಾಡಿಕೊಳ್ಳುತ್ತಿರುವ ಸುದ್ದಿ.



