ಒಂದು..ಎರಡು.. ಹಾಗೂ ಮೂರು ಸರ್ವೇ ಮಾಡುತ್ತೇವೆ. ಮೂರೂ ಸಮೀಕ್ಷೆಗಳಲ್ಲಿ ಯಾರು ಗೆಲ್ಲುತ್ತಾರೆ ಎಂಬ ವರದಿ ಬರುತ್ತದೋ.. ಅವರಿಗೆ ಟಿಕೆಟ್ ಕೊಡುತ್ತೇವೆ. ಹೀಗೆಂದು ಮತ್ತೊಮ್ಮೆ ಸಮೀಕ್ಷೆಗೆ ಕೈಹಾಕಿದೆ ಕಾಂಗ್ರೆಸ್. ಸುನಿಲ್ ಕುನ್ನಗೋಲು ತಂಡ ಮತ್ತೊಮ್ಮೆ ಸರ್ವೆ ಕಾರ್ಯಕ್ಕಿಳಿದಿದೆ. ಬಿಜೆಪಿಯವರಿನ್ನೂ ಅಮಿತ್ ಶಾ, ಮೋದಿ ಅಖಾಡಕ್ಕೆ ಇಳಿಯಲಿ ಎಂದು ಕಾಯುತ್ತಿದ್ದಾರೆ. ಮೀಸಲಾತಿ ಅಸ್ತ್ರ ರಿಲೀಸ್ ಮಾಡಿ, ಜನಸಂಕಲ್ಪ ಯಾತ್ರೆಗೆ ಹೊರಟಿರುವ ಬಿಜೆಪಿ ರಣರಂಗಕ್ಕಿನ್ನೂ ತಂತ್ರ ಪ್ರತಿತಂತ್ರ ಹೆಣೆಯುತ್ತಿಲ್ಲ. ಆದರೆ ರಣರಂಗದಲ್ಲಿ ತುಸು ಮುಂದಿರುವ ಕಾಂಗ್ರೆಸ್‍ಗೆ ನಿಜವಾದ ಟೆನ್ಷನ್ ಕೊಟ್ಟಿರುವುದು ಕುಮಾರಸ್ವಾಮಿ.

ಕುಮಾರಸ್ವಾಮಿ ಇದೇ ಮೊದಲ ಬಾರಿಗೆ ಎಲ್ಲರಿಗಿಂತ ಮೊದಲು 93 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ರಿಲೀಸ್ ಮಾಡಿದ್ದಾರೆ. ಅವರ ಸಮೀಕ್ಷೆಯಲ್ಲಿ ಕಾಂಗ್ರೆಸ್ಸಿಗೆ ಬಹುಮತವಂತೆ ಎಂದರೆ ಅದನ್ನು ಫ್ರೇಮು ಹಾಕಿಕೊಂಡು ಮನೆಯಲ್ಲಿ ಹಾಕಿಕೊಳ್ಳಲಿ ಎಂದಿದ್ದಾರೆ ಕುಮಾರಸ್ವಾಮಿ. ಕುಮಾರಸ್ವಾಮಿ ಪಂಚರತ್ನ ಯಾತ್ರೆಗೆ ಸಿಕ್ಕಿರುವ ಬೆಂಬಲ, ಸೇರುತ್ತಿರುವ ಜನ ಕಾಂಗ್ರೆಸ್ಸಿನಲ್ಲಿ ಆತಂಕ ಹುಟ್ಟಿಸಿದ್ದರೆ ಅಚ್ಚರಿಯಿಲ್ಲ. ಡಿ.ಕೆ.ಶಿವಕುಮಾರ್ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಿದ್ದೇ ಒಕ್ಕಲಿಗರ ಮತ ಸೆಳೆಯಲು. ಅದಕ್ಕೆ ತಕ್ಕಂತೆ ಡಿಕೆ ಕುಮಾರಸ್ವಾಮಿಯವರ ಬಗ್ಗೆ ಒಂದು ಸಾಫ್ಟ್ ಕಾರ್ನರ್ ಇಟ್ಟುಕೊಂಡೇ ಹೋರಾಡುತ್ತಿದ್ದಾರೆ. ದೇವೇಗೌಡರ ಬಗ್ಗೆ ಬಿಡಿ, ಕುಮಾರಸ್ವಾಮಿ ಬಗ್ಗೆಯೂ ಒಂದು ಮಾತು ಆಡುತ್ತಿಲ್ಲ. ದೇವೇಗೌಡರ ಬತ್ತಳಿಕೆಯಲ್ಲಿ ಯಾವ ಅಸ್ತ್ರವಿದೆಯೋ.. ಯಾವಾಗ ಬಿಡುತ್ತಾರೋ.. ರಾಜಕೀಯ ಪರಿಣತರಿಗೆ ಕುತೂಹಲವಿದ್ದರೆ, ಎದುರಾಳಿಗಳಲ್ಲಿ ಸಣ್ಣದೊಂದು ನಡುಕವೂ ಇದೆ. ಯಾಮಾರಿ ಮಾತನಾಡಿದರೆ ಒಕ್ಕಲಿಗರು ಮತ್ತೊಮ್ಮೆ ಜೆಡಿಎಸ್‍ಗೆ ಒಗ್ಗಟ್ಟಾಗಿ ಜೈ ಎಂದರೆ ಎಂಬ ಆತಂಕ. ಒಂದಂತೂ ನಿಜ. ಒಕ್ಕಲಿಗರು ಇವತ್ತಿಗೂ ಇರುವುದು ಜೆಡಿಎಸ್‍ನಲ್ಲಿಯೇ. ಅದು ಕುನ್ನಗೋಲು ಸಮೀಕ್ಷೆಯಲ್ಲೂ ಬಹಿರಂಗವಾಗಿರುವ ಸತ್ಯ. ಕಾಂಗ್ರೆಸ್ಸಿನ ಆತಂಕವೇ ಅದು.
ಇದರ ಜೊತೆಗೆ ಜೆಡಿಎಸ್ ಟಿಕೆಟ್ ಘೋಷಣೆ ಮಾಡುತ್ತಿದ್ದಂತೆಯೇ ನಮಗೂ ಟಿಕೆಟ್ ಘೋಷಿಸಿ ಎಂಬ ಒತ್ತಡ ಕಾಂಗ್ರೆಸ್ಸಿನಲ್ಲಿ ಶುರುವಾಗಿದೆ. ಹಾಲಿ ಶಾಸಕರಿಗೆ ತಮ್ಮ ಕ್ಷೇತ್ರಕ್ಕೆ ಇನ್ನೊಬ್ಬ ಆಕಾಂಕ್ಷಿಯ ಅರ್ಜಿ ಪಡೆದಿದ್ದೇ ತಪ್ಪು ಎನ್ನುವ ವಾದವಿದೆ. ಶಾಮನೂರು ಮೊದಲಾದ ಸೀನಿಯರ್ಸ್, ನಾವು ಅರ್ಜಿ ಹಾಕಲ್ಲ. ಹಾಗೆಯೇ ಕೊಡಿ ಎಂದು ಸವಾಲೂ ಹಾಕಿದ್ದಾರೆ. ಇದರ ಮಧ್ಯೆ ಕಾಂಗ್ರೆಸ್ಸಿಗೆ ಸಿದ್ದರಾಮಯ್ಯ ಇನ್ನು ಕ್ಷೇತ್ರವನ್ನು ಫೈನಲ್ ಮಾಡದೇ ಇರುವುದು ಆತಂಕ ಮೂಡಿಸಿದೆ. ಕಳೆದ ಬಾರಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಎದುರಾಳಿಗಳು ಮೇಲುಗೈ ಸಾಧಿಸಲು ಅವಕಾಶ ಕೊಟ್ಟಿದ್ದ ಸಿದ್ದು, ಈ ಬಾರಿ ಕ್ಷೇತ್ರವನ್ನು ಫೈನಲ್ ಮಾಡದೆಯೇ ಸತಾಯಿಸಿ ಎದುರಾಳಿಗಳ ಮೇಲುಗೈಗೆ ಅವಕಾಶ ಮಾಡಿಕೊಡ್ತಾರಾ ಎನ್ನುವುದು ಎಲ್ಲರ ಆತಂಕ.

ಜನವರಿ 11ರಿಂದ ಸಿದ್ದು ಮತ್ತು ಡಿಕೆ ಇಬ್ಬರೂ ಬಸ್ ಯಾತ್ರೆ ಶುರು ಮಾಡಲಿದ್ದಾರೆ. ಅದಕ್ಕೆ ಮೊದಲೇ ಕ್ಷೇತ್ರ ಫೈನಲ್ ಮಾಡಿ ಎಂದು ಸುರ್ಜೇವಾಲಾ ಹೇಳಿದ್ದಾರಂತೆ. ಸಿದ್ದರಾಮಯ್ಯ ಬಹುತೇಕ ವರುಣಾದಲ್ಲೇ ನಿಲ್ಲಬಹುದು. ಆದರೆ ಮೊದಲೇ ಘೋಷಿಸಿದರೆ ಎದುರಾಳಿಗಳು ಪ್ರಬಲ ಅಭ್ಯರ್ಥಿ ಹಾಕಬಹುದು ಎಂಬ ಆತಂಕ ಅವರದ್ದು. ಕ್ಷೇತ್ರದಲ್ಲಿ ಪ್ರಬಲ ಅಭ್ಯರ್ಥಿಗೇ ಆತಂಕ ಪಟ್ಟರೆ ಇಡೀ ರಾಜ್ಯದಲ್ಲಿ ಪ್ರಬಲ ಪಕ್ಷವಾಗಿ ಗೆಲ್ಲುವುದು ಹೇಗೆ ಎಂಬುದು ಅವರ ಪಕ್ಷದಲ್ಲೇ ಇರುವ ಅವರ ಹಿತಮಿತ ಮಿತ್ರರ ವಾದ.
ಕೊನೆ ಕೊಸರು : ನಾವು ಸುಮ್ಮನಿದ್ದರೂ 140 ಸೀಟು ಗೆಲ್ಲುತ್ತೇವೆ ಎಂದು ಸಿದ್ದರಾಮಯ್ಯ ಅವರೇನೋ ಹೇಳಿದ್ದಾರೆ. ಆದರೆ ಡಿಕೆ ಸುಮ್ಮನಿರುತ್ತಿಲ್ಲ. ಕುಕ್ಕರ್ ಸ್ಪೋಟ ಪ್ರಕರಣದಲ್ಲಿ ಯಾಮಾರಿದ್ದಾರೆ. ಸತೀಶ್ ಜಾರಕಿಹೊಳಿ ಸುಮ್ಮನಿರುವಂತೆ ಕಾಣುತ್ತಿಲ್ಲ. ಜಮೀರ್ ಅಹ್ಮದ್ ಕೂಡಾ ಹಿಂದೆ ಬಿದ್ದಿಲ್ಲ. ಸುಮ್ಮನಿದ್ದರೆ ಗೆಲ್ಲಬಹುದೇನೋ.. ಆದರೆ ಕೆಲವು ವಿಷಯಗಳಲ್ಲಿ ಸುಮ್ಮನಿದ್ದರೇ ಒಳ್ಳೆಯದು. ಎಡವಟ್ಟಾದರೆ ತಲೆಕೆಟ್ಹೋಗುತ್ತೆ..



