ಹೆಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಪಂಚರತ್ನ ಯಾತ್ರೆ ಮುಕ್ತಾಯವಾಗಿದೆ. ಬೆಂಗಳೂರು ಗ್ರಾಮಾಂತರ, ಕೋಲಾರ, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ತುಮಕೂರಿನ ಗಡಿಭಾಗಗಳಲ್ಲಿ ನಡೆದ ಪಂಚರತ್ನ ಸಮಾವೇಶವನ್ನು ದೊಡ್ಡ ಮಟ್ಟದಲ್ಲಿಯೇ ಸಂಘಟಿಸಿ ಆ ಮೂಲಕ ತಮ್ಮ ಶಕ್ತಿಯೇನು ಎಂಬ ಸಂದೇಶವನ್ನೂ ಸಾರಿದ್ದಾರೆ ಹೆಚ್.ಡಿ.ಕುಮಾರಸ್ವಾಮಿ. ಇದು ಕೇವಲ ರಥಯಾತ್ರೆಯಷ್ಟೇ ಅಲ್ಲ, ಪಕ್ಷದ ಕಾರ್ಯಕರ್ತರನ್ನು ಒಗ್ಗೂಡಿಸುವ ಮತ್ತು ಆ ಮೂಲಕ ತಮ್ಮ ಮತಗಳನ್ನು ಗಟ್ಟಿ ಮಾಡಿಕೊಳ್ಳುವ ಗುರಿಯೂ ಹೌದು. ತಮ್ಮ ಪ್ರಾಬಲ್ಯದ ಕ್ಷೇತ್ರಗಳಲ್ಲಿಯೇ ಸಂಚಾರ ಮಾಡಿರುವ ಕುಮಾರಸ್ವಾಮಿ ವಿಶೇಷ ಗುರಿಯನ್ನೂ ಇಟ್ಟುಕೊಂಡಿದ್ದಾರೆ. ಇದರ ನಡುವೆ ರಥಯಾತ್ರೆ ಮುಗಿದ ಮೇಲೆ ಒಂದು ಸಮೀಕ್ಷೆಯನ್ನೂ ನಡೆಸುತ್ತಿದ್ದಾರೆ.

ಕುಮಾರಸ್ವಾಮಿಯವರ ಒಂದು ಟೀಂ ಸಮಾವೇಶದ ಸಮಯದಲ್ಲಿ ಜನರನ್ನು ಭೇಟಿ ಮಾಡುತ್ತೆ. ಅವರಿಂದ ಅಭಿಪ್ರಾಯಗಳನ್ನು ಸಂಗ್ರಹಿಸುತ್ತೆ. ಸಮಾವೇಶ ಮುಗಿಯತ್ತೆ. ಆ ಟೀಮಿನ ಕೆಲಸ ಸಮಾವೇಶ ಆರಂಭಕ್ಕೂ ಮುನ್ನ ಮತ್ತು ಸಮಾವೇಶ ನಡೆಯುವ ಹೊತ್ತಿನಲ್ಲಿ ರೂಪಿತವಾಗುವ ಅಭಿಪ್ರಾಯ ಸಂಗ್ರಹಿಸುವುದು. ಸಮಾವೇಶ ಮುಗಿಯುತ್ತಿದ್ದಂತೆಯೇ ಇನ್ನೊಂದು ತಂಡ ಅದೇ ಜಾಗಕ್ಕೆ ಬರುತ್ತೆ. ಮತ್ತೆ ಜನಾಭಿಪ್ರಾಯ ಸಂಗ್ರಹಕ್ಕೆ ಮುಂದಾಗುತ್ತೆ. ಕ್ಷೇತ್ರದಲ್ಲಿ ಬೇರೆ ಬೇರೆ ವರ್ಗದ ಜನತೆ, ಮಹಿಳೆಯರು, ಯುವಕರು, ವಯೋವೃದ್ಧರು ಸೇರಿದಂತೆ ಎಲ್ಲರಿಂದಲೂ ಮಾಹಿತಿ ಪಡೆದುಕೊಳ್ಳಲಾಗುತ್ತದೆ. ನಂತರ ಎರಡು ಅಭಿಪ್ರಾಯಗಳನ್ನು ಒಗ್ಗೂಡಿಸಲಾಗುತ್ತದೆ. ಪಾಸಿಟಿವ್ ಮತ್ತು ನೆಗೆಟಿವ್ ಎರಡನ್ನೂ ಸೇರಿಸಿಕೊಂಡು ತಾಳೆ ಹಾಕಲಾಗುತ್ತೆ. ಇದರಿಂದ ಕ್ಷೇತ್ರದ ಬಗ್ಗೆ ಚಿತ್ರಣ ಲಭ್ಯವಾಗಲಿದ್ದು, ಪಕ್ಷದಲ್ಲಿನ ನ್ಯೂನತೆಗಳನ್ನು ಸರಿಪಡಿಸಿಕೊಳ್ಳಲು ಸಹಕಾರಿಯಾಗಲಿದೆ. ನ್ಯೂನತೆಗಳನ್ನು ಸರಿಪಡಿಸಿಕೊಂಡು ಪಕ್ಷವನ್ನು ಚುನಾವಣೆ ವೇಳೆಗೆ ಬಲಗೊಳಿಸುವುದು ಸಾಧ್ಯವಾಗಲಿದೆ ಎಂದು ಹೇಳಲಾಗಿದೆ.

ಅದಕ್ಕಿಂತಲೂ ವಿಶೇಷವಾಗಿ ಕುಮಾರಸ್ವಾಮಿಯವರ ಚಿಂತೆಗೀಡು ಮಾಡಿರುವುದು ಎಲ್ಲಿಯೇ ಹೋದರೂ ಸೇರುತ್ತಿರುವ ಜನಸ್ತೋಮ. ಮಾಜಿಯಾಗಿದ್ದರೂ ಕುಮಾರಸ್ವಾಮಿ ಜನಪ್ರಿಯತೆ ಸ್ವಲ್ಪವೂ ಕುಗ್ಗಿಲ್ಲ. ಜನರ ಪ್ರೀತಿಯೂ ಕಡಿಮೆಯಾಗಿಲ್ಲ. ಆದರೆ, ಹಾಗೆ ಸೇರುವ ಜನ ಯಾಕೆ ವೋಟ್ ಹಾಕಲ್ಲ ಎನ್ನುವುದು ಕುಮಾರಸ್ವಾಮಿ ಪ್ರಶ್ನೆ. ಇದಕ್ಕಾಗಿಯೇ ಈ ರೀತಿಯ ಸಮೀಕ್ಷೆ ನಡೆಸುತ್ತಿದ್ದಾರೆ.
ಕುಮಾರಸ್ವಾಮಿ ನಡೆಸುತ್ತಿರುವ ಪಂಚರತ್ನ ಯಾತ್ರೆಯ ಫಲಿತಾಂಶದ ಬಗ್ಗೆ ಅಧ್ಯಯನ ಮಾಡುವುದಕ್ಕೆಂದು ವಿವಿಧ ತಂಡಗಳಿಂದ ರಥಯಾತ್ರೆಯ ಊರುಗಳಲ್ಲಿ ವಿವಿಧ ವರ್ಗದ ಜನರಿಗೆ ಪ್ರಶ್ನಾವಳಿ ರೂಪಿಸಿ ಯಾತ್ರೆಗೆ ಬರುವ ಜನರು ಮುಂದೆ ಮತ ಹಾಕುತ್ತಾರೆಯೇ ಎಂದು ತಿಳಿದುಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ. ಯಾತ್ರೆ ಸಮಯದಲ್ಲಿ ಒಂದು ತಂಡದಿಂದ, ನಂತರ ಇನ್ನೊಂದು ತಂಡದಿಂದ ಸಮೀಕ್ಷೆ ಮಾಡಲಾಗುತ್ತಿದೆ. ಜೆಡಿಎಸ್ ಮತ್ತು ಜನಸಾಮಾನ್ಯರ ನಡುವೆ ಸಂಪರ್ಕ ಕೊರತೆ ಇರುವ ಬಗ್ಗೆ ಈಗಾಗಲೇ ಈ ಸಮೀಕ್ಷೆ ಮಾಹಿತಿ ನೀಡಿದೆ. ಇದರ ನಡುವೆಯೇ ಕುಮಾರಸ್ವಾಮಿ ಹಾರಗಳ ಮೂಲಕ ವಿಭಿನ್ನ ಸಂದೇಶ ರವಾನೆ ಮಾಡುತ್ತಿರುವುದು ವಿಶೇಷ.

ನಾಯಕರು ಹೋದರೆ ಹೂವಿನ ಹಾರ ಹಾಕುವುದು ಮಾಮೂಲಿ. ಈಗ ಕೆಜಿಗಟ್ಟಲೆ ಹಾರ ಹಾಕುವುದು ಕೂಡಾ ಸಾಮಾನ್ಯ. ಜೊತೆಗೆ ಸೇಬಿನ ಹಾರ, ಕೊಬ್ಬರಿ ಹಾರ, ಮಲ್ಲಿಗೆ ಹಾರ, ಬಾದಾಮಿ ಖರ್ಜೂರಗಳಂತಾ ಡ್ರೈಫ್ರೂಟ್ಸ್ ಹಾರವೂ ಆಗಾಗ್ಗೆ ಕಂಡು ಬರುತ್ತದೆ. ಆದರೆ ಕುಮಾರಸ್ವಾಮಿ ಹಾರಗಳಲ್ಲಿಯೇ ಒಂದು ವಿಶೇಷ ಸಂದೇಶ ಕೊಟ್ಟಿದ್ದಾರೆ. ಚಿಕ್ಕಬಳ್ಳಾಪುರದ ಪೋಶೆಟ್ಟಿ ಹಳ್ಳಿಯಲ್ಲಿ ಹೂವು ಮತ್ತು ಸೇಬಿನ ಹಾರದ ಸ್ವಾಗತ ಸಿಕ್ಕರೆ, ತಿಪ್ಪೇನಹಳ್ಳಿ ಗ್ರಾಮದಲ್ಲಿ ಹೆಚ್‍ಡಿಕೆಗೆ ಸಿಕ್ಕಿದ್ದು ದೊಣ್ಣೆ ಮೆಣಸಿಕಾಯಿ/ಬಜ್ಜಿ ಮೆಣಸಿನ ಕಾಯಿ/ಕ್ಯಾಪ್ಸಿಕಂ ಹಾರ. ಕ್ಯಾಪ್ಸಿಕಂ ಆ ಊರಿನ ರೈತರ ಪ್ರಮುಖ ಬೆಳೆಯೂ ಹೌದು. ಸ್ವಾಗತದಲ್ಲಿ ಹೆಣ್ಣು ಮಕ್ಕಳು ಊರಿಗೆ ರಂಗೋಲಿ ಹಾಕಿ ಕುಂಭ ಕಳಶಗಳೊಂದಿಗೆ ಸ್ವಾಗತ ಕೋರುತ್ತಿದ್ದರೆ, ರೈತ ಮಕ್ಕಳದ್ದು ಕುಮಾರಣ್ಣಂಗೇ ಜೈ ಎಂಬ ಜಯಘೋಷ. ಕಾರಹಳ್ಳಿ ಎಂಬ ಗ್ರಾಮದಲ್ಲಿ ಕುಮಾರಸ್ವಾಮಿಗೆ ಸಿಕ್ಕಿದ್ದು ಚಕ್ಕೋತ ಹಣ್ಣಿನ ಹಾರ. ಹುಲಿವೇಷ, ಕಳಸ ಹೊತ್ತ ಮೆರವಣಿಗೆ. ದೇವನಹಳ್ಳಿ ಕ್ಷೇತ್ರದ ವೆಂಕಟಗಿರಿಯಲ್ಲಿ ದ್ರಾಕ್ಷಿ ಹಣ್ಣಿನ ಹಾರ. ಈ ಊರಿನಲ್ಲಿ ದ್ರಾಕ್ಷಿಯೇ ಇಲ್ಲಿನ ರೈತರ ಜೀವ ಮತ್ತು ಜೀವನ. ಬಿಜ್ಜವಾರದಲ್ಲಿಯೂ ಕುಮಾರಸ್ವಾಮಿಗೆ ಸಿಕ್ಕಿದ್ದು ಬಜ್ಜಿ ಮೆಣಸಿನಕಾಯಿ ಹಾರದ ಸ್ವಾಗತ. ಕೆಲವು ರೈತರು ಹೊಂಬಾಳೆಯನ್ನೇ ಕಾಣಿಕೆಯಾಗಿ ಕೊಟ್ಟು ಧನ್ಯರಾಗಿದ್ದೂ ವಿಶೇಷ. ತುಳಸಿಯ ಹಾರ ಒಂದೆಡೆಯಾದರೆ, ಹಲವು ಕಡೆ ಸೇಬು ಹಣ್ಣಿನ ಹಾರದ ಸ್ವಾಗತವಿತ್ತು. ನೆಲಮಂಗಲ ಸೇರಿದಂತೆ ಕೆಲವೆಡೆ ರಾಗಿತೆನೆಯ ಹಾರ.. ಇನ್ನೂ ಕೆಲವೆಡೆ ಮುಸುಕಿನ ಜೋಳದ ಹಾರ…

ಅರೆ.. ಇದರಲ್ಲೇನು ವಿಶೇಷ ಅಂದಿರಾ.. ವಿಶೇಷವಿದೆ. ರಾಗಿ ತೆನೆ, ಮುಸುಕಿನ ಜೋಳ, ದ್ರಾಕ್ಷಿ, ಹೊಂಬಾಳೆ, ಮೆಣಸಿನಕಾಯಿ, ಚಕ್ಕೋತ.. ಹೀಗೆ ಆಯಾ ಪ್ರದೇಶದ ಬೆಳೆಗಳ ಹಾರವೇ ಇದೆ. ಹಾರಗಳನ್ನು ಕೊಟ್ಟಿರುವುದು ರೈತರು. ಆ ಮೂಲಕ ಜೆಡಿಎಸ್ ತನ್ನದು ರೈತರ ಜೊತೆಯಲ್ಲಿರುವ ಪಕ್ಷ ಎಂಬ ಸಂದೇಶ ರವಾನಿಸಿದೆ. ಇಂತಹ ನಡೆಗಳ ಮೂಲಕವೇ ಪಂಚರತ್ನ ಯಾತ್ರೆ, ಸಮಾವೇಶಕ್ಕೆ ಮೊದಲು ಒಂದು ಸಮೀಕ್ಷೆ ಹಾಗೂ ಸಮಾವೇಶ ನಡೆದ ನಂತರ ಮತ್ತೊಂದು ಸಮೀಕ್ಷೆ ನಡೆಸಲಾಗುತ್ತಿದೆ. ವಿಪರ್ಯಾಸವೆಂದರೆ ಇಂತಹ ಸಮೀಕ್ಷೆಗಳನ್ನು ಹಿಂದೆಯೂ ಜೆಡಿಎಸ್ ಮಾಡಿದೆ. ಅತಿ ದೊಡ್ಡ ಸಮಸ್ಯೆ ಜನ ಸಾಮಾನ್ಯರು ಮತ್ತು ಕಾರ್ಯಕರ್ತರ ನಡುವಿನ ಸಂಪರ್ಕದ ಕೊರತೆ. ಜೆಡಿಎಸ್ ಕಾರ್ಯಕರ್ತರು ಹಾಗೂ ನಾಯಕರ ನಡುವಿನ ಸಂಪರ್ಕದ ಕೊರತೆ. ಖುದ್ದು ಕುಮಾರಸ್ವಾಮಿಯೂ ಸೇರಿದಂತೆ ಎಲೆಕ್ಷನ್ ಹೊತ್ತಿನಲ್ಲಿ ಮಾತ್ರವೇ ಆಕ್ಟಿವ್ ಆಗುವ ನಾಯಕರು… ಇಂತಹ ಸಮಸ್ಯೆಗಳನ್ನು ನೀಗಿಕೊಂಡರೆ ಕುಮಾರಸ್ವಾಮಿಯವರ ಕನಸಿನ ಜೆಡಿಎಸ್ ಸ್ವತಂತ್ರವಾಗಿ ಸರ್ಕಾರ ರಚಿಸುವ ಅವಕಾಶ ಸೃಷ್ಟಿಸಿಕೊಳ್ಳಬಹುದೇನೋ..



