ಕೋಲಾರದಲ್ಲಿ ನಿಲ್ಲೋಕೆ ಸಿದ್ಧವಾಗಿರೋ ಸಿದ್ದರಾಮಯ್ಯ 100% ಇಲ್ಲಿಯೇ ಗೆಲ್ಲುತ್ತೇವೆ ಎನ್ನುವ ಮನಸ್ಥಿತಿಯಲ್ಲೇನೂ ಸಿದ್ಧರಾಗಿಲ್ಲ. ಒಂದು ಮೂಲದ ಪ್ರಕಾರ ಇದೂ ಒಂದು ವ್ಯೂಹವೇ. ಕೋಲಾರದಲ್ಲಿಯೇ ಎಲೆಕ್ಷನ್ಗೆ ನಿಲ್ಲುತ್ತೇನೆ ಎಂದು ಕಡೆಯ ಕ್ಷಣದಲ್ಲಿ ಮತ್ತೊಂದು ಕ್ಷೇತ್ರಕ್ಕೆ ಸ್ಪರ್ಧಿಸುವ ತಂತ್ರವೂ ಇದೆಯಂತೆ. ಇದು ಕಾಂಗ್ರೆಸ್ಸಿನೊಳಗೇ ಕೇಳಿ ಬರುತ್ತಿರುವ ಮಾತು. ರಾಜಕೀಯ ಜೀವನದ ಕಟ್ಟ ಕಡೆಯ ಚುನಾವಣೆಯಲ್ಲಿ ಮತ್ತೆ ಕ್ಷೇತ್ರ ಬದಲಿಸಲು ಮುಂದಾಗಿರುವ ಸಿದ್ದುಗೆ ಕೋಲಾರವೂ ಖೆಡ್ಡಾ ಆಗಲಿದೆ ಎಂಬ ಸುಳಿವು ಈಗಾಗಲೇ ಸಿಗುತ್ತಿದೆ. ಮಾಜಿ ಮುಖ್ಯಮಂತ್ರಿ, ಹಾಲಿ ಪ್ರತಿಪಕ್ಷ ನಾಯಕ, ರಾಜ್ಯ ಕಾಂಗ್ರೆಸ್ ಮುಂಚೂಣಿಯ ಸೇನಾಪತಿ, ಮಹಾದಂಡನಾಯಕ ಎನಿಸಿಕೊಂಡಿರೋ ಸಿದ್ದರಾಮಯ್ಯ ಮುಖ್ಯಮಂತ್ರಿ ಆಕಾಂಕ್ಷಿಯೂ ಹೌದು. ಆದರೆ ಅದೇ ಅವರಿಗೆ ಮುಳುವಾದರೂ ಆಶ್ಚರ್ಯವಿಲ್ಲ.
ಕೋಲಾರದ ನೆಲ ಹದವಾಗಿದೆಯಾ ಎಂದು ಸಿದ್ದು ಚೆಕ್ ಮಾಡ್ತಿದ್ರೆ, ಸಿದ್ದರಾಮಯ್ಯನವರನ್ನು ಸೋಲಿಸಲು ಕೋಲಾರ ವ್ಯೂಹ ರೆಡಿಯಾಗಿ ಕಾಯುತ್ತಿದೆ. ಈ ವ್ಯೂಹದಲ್ಲಿ ಬಿಜೆಪಿ, ಜೆಡಿಎಸ್ನವರಷ್ಟೇ ಅಲ್ಲ, ಕಾಂಗ್ರೆಸ್ಸಿಗರೂ ಇದ್ದಾರೆ. ಎಂಥದ್ದೇ ಪ್ರಶ್ನೆ ಬರಲಿ, ಖಡಾಖಡಿ ಎದುರಿಸಿ ಮಾತನಾಡಿದಂತಲ್ಲ, ಎಲೆಕ್ಷನ್ ಎದುರಿಸಿ ಗೆಲ್ಲೋದು. 2018ರಲ್ಲಿ ಚಾಮುಂಡೇಶ್ವರಿಯಲ್ಲಿ ನಡೆದ ಹೋರಾಟವನ್ನು ಮತ್ತು ಸೋಲನ್ನು ಇನ್ನೂ ಸಿದ್ದು ಮರೆತಿಲ್ಲ. ಇವತ್ತಿಗೂ ಚಾಮುಂಡೇಶ್ವರಿಯಲ್ಲಿ ನಿಲ್ಲಲ್ಲ ಎನ್ನುತ್ತಿರುವ ಕಾರಣ ಆ ಸೋಲೇ ಅನ್ನೋದು ಗುಟ್ಟೇನಲ್ಲ. ಅಂದಹಾಗೆ ಸಿದ್ದುಗೆ ಎದುರಾಳಿಯಾಗಲಿರುವವರಲ್ಲಿ ಮುಂಚೂಣಿಯಲ್ಲಿರೋದು ಅವರ ಶಿಷ್ಯನೇ ಆದ ವರ್ತೂರು ಪ್ರಕಾಶ್.
ಒಂದು ಕಾಲದಲ್ಲಿ ಸಿದ್ದರಾಮಯ್ಯನವರ ಆಪ್ತ, ಅತ್ಯಾಪ್ತ, ರಣತಂತ್ರಗಾರನೂ ಆಗಿದ್ದ ವರ್ತೂರು ಪ್ರಕಾಶ್ ಒಂದು ಕಾಲದಲ್ಲಿ ಪಕ್ಷೇತರನಾಗಿ ಗೆದ್ದವರು. ಅದೂ ಒಮ್ಮೆಯಲ್ಲ, ಎರಡು ಬಾರಿ. ಈಗ ಬಿಜೆಪಿ ನಾಯಕ. ಮೇಲಾಗಿ ಕುರುಬ ಸಮುದಾಯಕ್ಕೆ ಸೇರಿದವರು. 2023ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ರೆಡಿಯಾಗಿದ್ದಾರೆ. ನನ್ನ ವಿರುದ್ಧ ಸ್ಪರ್ಧೆ ಮಾಡಿದ್ರೆ ಮಿನಿಮಮ್ 50 ಸಾವಿರ ವೋಟುಗಳಲ್ಲಿ ಸೋಲಿಸುತ್ತೇನೆ ಎನ್ನುತ್ತಿದ್ದಾರೆ. ಸಿದ್ದುಗೆ ಕೋಲಾರ ರಾಜಕೀಯ ಗೊತ್ತಿದೆ. ಅವರು ಅಂತಹ ದುಸ್ಸಾಹಸಕ್ಕೆ ಕೈ ಹಾಕೊಲ್ಲ ಎನ್ನುತ್ತಿರುವ ವರ್ತೂರುಗೆ ಕೋಲಾರ ಕಾಂಗ್ರೆಸ್ಸಿನ ಆಳ-ಅಗಲ-ವಿಸ್ತಾರ-ಓರೆಕೋರೆಗಳೆಲ್ಲ ಚೆನ್ನಾಗಿ ಗೊತ್ತಿದೆ.
ಅವರ ಈ ಮಾತಿಗೆ ಕಾರಣ ಮುನಿಯಪ್ಪ. ದಲಿತ ನಾಯಕ. ಜಿಲ್ಲೆಯವರೇ.ಕೋಲಾರದಿಂದ ಸತತ 7 ಬಾರಿ ಗೆದ್ದು ದೆಹಲಿಗೆ ಹೋಗಿದ್ದ ಮುನಿಯಪ್ಪನವರೇ, ಸಿದ್ದುಗೆ ಒಂದು ಪರೋಕ್ಷ ಎಚ್ಚರಿಕೆ ಕೊಟ್ಟಿದ್ದಾರೆ. ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಸ್ವಲ್ಪ ಪ್ರಾಬ್ಲಮ್ ಇದೆ ಎಂದಿರೋ ಮುನಿಯಪ್ಪ, ಇನ್ ಡೈರೆಕ್ಟ್ ಆಗಿ ಸಿದ್ದುಗೆ ಎಚ್ಚರಿಕೆ ಕೊಟ್ಟಿದ್ದಾರೆ. ಅಲ್ಲಿ ಕೆ.ಎಚ್ ಮುನಿಯಪ್ಪನವರದ್ದೊಂದು ಬಣ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರದ್ದೊಂದು ಬಣ ಇದೆ. ಒಬ್ಬರನ್ನು ಕಂಡ್ರೆ ಒಬ್ರಿಗೆ ಆಗಲ್ಲ. ತಮ್ಮ ಸೋಲಿಗೆ ರಮೇಶ್ ಕುಮಾರ್ ಕಾರಣ ಅನ್ನೋದು ಮುನಿಯಪ್ಪಗೆ ಗೊತ್ತು. ವರ್ತೂರು ಅವರ ಪ್ರಕಾರ ರಮೇಶ್ ಕುಮಾರ್ ಅವರನ್ನ ನಂಬಿ ಬಂದ್ರೆ ಸಿದ್ದುಗೆ ಕೋಲಾರ ರಣರಂಗವಲ್ಲ, ಖೆಡ್ಡಾ ಆಗಲಿದೆ ಅನ್ನೋ ಕಾನ್ಫಿಡೆನ್ಸ್ ಇದೆ. ಜೊತೆಗೆ ಎಚ್.ಡಿಕುಮಾರಸ್ವಾಮಿಯವರನ್ನ ಮರೆಯೋಕೆ ಆಗಲ್ಲ. ರಾಜಕಾರಣದ ತಂತ್ರಗಾರಿಕೆಯಲ್ಲಿ ಪಳಗಿದ ಕೈ. ಗೆಲ್ಲುವುದು ಸಾಧ್ಯವಿಲ್ಲ ಎಂದಾದಾಗ, ಕನಿಷ್ಠ ತಮಗೆ ಆಗದವರನ್ನು ಸೋಲಿಸಬೇಕು ಅನ್ನೋದು ಅವರ ಮಂತ್ರ.
ಅಂದಹಾಗೆ ಕೋಲಾರದಲ್ಲಿ 2008ರಿಂದ ಒಮ್ಮೆಯೂ ಕಾಂಗ್ರೆಸ್ ಗೆದ್ದಿಲ್ಲ.ಅಷ್ಟೇ ಯಾಕೆ 1972ರಿಂದ ಇದುವರೆಗೆ 11 ಎಲೆಕ್ಷನ್ ನಡೆದಿವೆ. ಕಾಂಗ್ರೆಸ್ ಗೆದ್ದಿರೋದು ಕೇವಲ 4ರಲ್ಲಿ. *2004ರಲ್ಲಿ ಕೆ.ಶ್ರೀನಿವಾಸ್ ಗೌಡ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆದ್ದದ್ದೇ ಕೊನೆ. ನಂತರದ ಮೂರೂ ಚುನಾವಣೆಗಳಲ್ಲಿ ಕೋಲಾರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಸೋತಿದ್ದಾರೆ. ಆ ಮೂರು ಚುನಾವಣೆಗಳಲ್ಲಿ ಎರಡು ಬಾರಿ ವರ್ತೂರು ಪ್ರಕಾಶ್ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದಿದ್ದಾರೆ. ಕಳೆದ ಬಾರಿ ಗೆದ್ದಿದ್ದದ್ದು ಜೆಡಿಎಸ್ ಶಾಸಕ ಶ್ರೀನಿವಾಸ್ ಗೌಡ.
ಹೀಗಿರುವಾಗ ಕುಮಾರಸ್ವಾಮಿ ಕಾರಣದಿಂದ ಒಕ್ಕಲಿಗರ ವೋಟು ಕೈತಪ್ಪಿದರೆ, ವರ್ತೂರು ಕಾರಣದಿಂದ ಕುರುಬರ ವೋಟು ಡಿವೈಡ್ ಆದರೆ, ತಮ್ಮದೇ ಕಾರಣದಿಂದ ಹಿಂದುತ್ವದ ವೋಟುಗಳೂ ದೂರವಾದರೆ, ಮುನಿಯಪ್ಪ ಕಾರಣದಿಂದ ದಲಿತರ ವೋಟುಗಳೂ ಮೈನಸ್ ಆದರೆ.. ಕೋಲಾರ ಖೆಡ್ಡಾ ಆಗುತ್ತದೆಯೇ ಹೊರತು, ಹಸ್ತನಾಪುರವಾಗಲ್ಲ.



