ರಜಾಕಾರರ ದಾಳಿ. ಅದನ್ನು ಕರ್ನಾಟಕ ಹಾಗೂ ಭಾರತದ ಇತಿಹಾಸ ಎಂದಿಗೂ ಮರೆಯಲು ಸಾಧ್ಯವಿಲ್ಲ. ರಜಾಕಾರರ ಹಿಂಸೆಯ ಕಥೆಗೂ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಗೂ ಒಂದು ಸಂಬಂಧವಿದೆ. ಭಾರತ ಸ್ವತಂತ್ರ ರಾಷ್ಟ್ರ ಎಂದು ಘೋಷಿಸಿದ ಬೆನ್ನಲ್ಲೇ ಹೈದರಾಬಾದ್ ನಿಜಾಮ ಮಿರ್ ಉಸ್ಮಾನ್ ಅಲಿ ಖಾನ್ ತನ್ನನ್ನು ತಾನು ಸ್ವತಂತ್ರ ಎಂದು ಘೋಷಿಸಿಕೊಂಡಿದ್ದ. ತೆಲಂಗಾಣದ 8, ಮರಾಠವಾಡದ 5 ಹಾಗೂ ಕರ್ನಾಟಕದ 3 ಜಿಲ್ಲೆಗಳು ಈ ನಿಜಾಮನ ವ್ಯಾಪ್ತಿಯಲ್ಲಿದ್ದವು. ಆ ಕಾಲಕ್ಕೆ ವಿಶ್ವದ ಶ್ರೀಮಂತರಲ್ಲಿ ಒಬ್ಬನಾಗಿದ್ದ ನಿಜಾಮ್ ಮೀರ್ ಉಸ್ಮಾನ್ ಅಲಿಗೆ ಬ್ರಿಟಿಷರು, ಪಾಕಿಸ್ತಾನದ ರಾಜಕಾರಣಿಗಳ ಕುಮ್ಮಕ್ಕೂ ಇತ್ತು. ಜೊತೆಗೆ ಆತನಿಗೆ ರಜಾಕಾರರ ಬೆಂಬಲವಿತ್ತು. ಸೋಲರಿಯದ ಅಲ್ಲಾಹುವಿನ ಸೈನಿಕರು ಎಂದು ಕರೆಸಿಕೊಂಡಿದ್ದ ರಜಾಕಾರರು ಕ್ರೌರ್ಯಕ್ಕೆ ಹೆಸರುವಾಸಿಯಾಗಿದ್ದರು.
ಹಿಂದೂಗಳ ಮೇಲೆ ದಾಳಿ ಮಾಡುವುದು, ಲೂಟಿ ಮಾಡುವುದು, ಬೆಳೆ ನಾಶ ಮಾಡುವುದು, ಮನೆಗಳನ್ನು ಸುಡುವುದು ಹಾಗೂ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಮಾಡುವುದು ಇವರ ಯುದ್ಧದ ವೈಖರಿ. ಕಲಬುರ್ಗಿ ಜಿಲ್ಲೆಯಲ್ಲಿ 87 ಗ್ರಾಮಗಳಲ್ಲಿ ದಾಳಿ ಮಾಡಿ 42 ಜನರನ್ನು ಕೊಂದಿದ್ದರು. 36 ದರೋಡೆ ಹಾಗು 34 ಮಹಿಳೆಯರ ಮೇಲೆ ಅತ್ಯಾಚಾರ ಮಾಡಿದ್ದರು. ಬೀದರ್ನಲ್ಲಿ 176 ಗ್ರಾಮಗಳು ಹಿಂಸಾಚಾರಕ್ಕೆ ಗುರಿಯಾಗಿದ್ದವು. 120 ಕೊಲೆ, 23 ಮಹಿಳೆಯರು ಮಾನಭಂಗಕ್ಕೊಳಗಾಗಿದ್ದರು. ರಾಯಚೂರು ಜಿಲ್ಲೆಯಲ್ಲಿ 94 ಗ್ರಾಮಗಳಲ್ಲಿ 25 ಕೊಲೆ ಮಾಡಿ 63 ಮಹಿಳೆಯರ ಮಾನಭಂಗ ಮಾಡಿದ್ದರು. ಕಾಟೊ, ಲೂಟೊ ಔರ್ ಬಾಟೊ ಇವರ ಧ್ಯೇಯವಾಗಿತ್ತು. ಇದು ಇತಿಹಾಸ.
ಆ ಬೆಂಕಿಯಲ್ಲಿ ಬೆಂದು ಹೋದ ಕುಟುಂಬಗಳಲ್ಲಿ ಖರ್ಗೆ ಕುಟುಂಬವೂ ಒಂದು. ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ವರವಟ್ಟಿ ಗ್ರಾಮಕ್ಕೆ ನುಗ್ಗಿದ ರಜಾಕಾರರು ಅಲ್ಲಿ ಗುಡಿಸಲೊಂದಕ್ಕೆ ಬೆಂಕಿಯಿಟ್ಟರು. ಗುಡಿಸಲಲ್ಲಿದ್ದ ತಾಯಿ-ಮಕ್ಕಳು ಸುಟ್ಟು ಬೂದಿಯಾದರು. ಹಾಗೆ ಬೆಂದುಹೋದ ಒಂದು ಕುಟುಂಬ ಮಾಪಣ್ಣನವರದ್ದು. ಹೊರಗೆ ಹೋಗಿದ್ದ ಆತ ವಾಪಸ್ ಬಂದಾಗ ಗುಡಿಸಲು, ಹೆಂಡತಿ ಮಕ್ಕಳ ಬೂದಿಯಷ್ಟೇ ಉಳಿದಿತ್ತು ರೋದಿಸುತ್ತಿದ್ದಾಗ ದೂರದ ಮರವೊಂದರಲ್ಲಿ ಜೋಕಾಲಿಯಲ್ಲಿದ್ದ ಮಗು ಅಳುತ್ತಿತ್ತು. ಆ ಮಗುವೇ ಮಲ್ಲಿಕಾರ್ಜುನ ಖರ್ಗೆ. ಮಗುವನ್ನು ಎದೆಗಪ್ಪಿಕೊಂಡು ಊರು ಬಿಟ್ಟ ಮಾಪಣ್ಣ, ಮತ್ತೆ ಕಲಬುರಗಿಗೆ ಬಂದಿದ್ದು ಸರ್ದಾರ್ ಪಟೇಲರು ಹೈದರಾಬಾದ್ ನಿಜಾಮರನ್ನು ಹೆಡೆಮುರಿ ಕಟ್ಟಿ ಭಾರತಕ್ಕೆ ಸೇರಿಸಿದ ಮೇಲೆ.
ಮಾಪಣ್ಣ ಕಲಬುರಗಿಯ ಎಂ.ಎಸ್.ಕೆ.ಮಿಲ್ನಲ್ಲಿ ಕಾರ್ಮಿಕನಾಗಿ ಕೆಲಸಕ್ಕೆ ಸೇರಿದರು. ಮಗುವನ್ನು ಓದಿಸಿದರು. ಮುಂದೆ ಇದೇ ಮಲ್ಲಿಕಾರ್ಜುನ ಖರ್ಗೆ ಶಾಸಕರಾಗಿ, ಗೃಹ ಮಂತ್ರಿಯಾಗಿ, ಲೋಕಸಭೆ ಸದಸ್ಯರಾಗಿ, ಕೇಂದ್ರ ರೈಲ್ವೆ ಮಂತ್ರಿಯಾಗಿ ಗೆದ್ದರು. ಈಗ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ.

ಖರ್ಗೆ ತಾವಷ್ಟೇ ಬೆಳೆಯಲಿಲ್ಲ. ಪಕ್ಷದಲ್ಲಿ ಜಾತಿಯನ್ನು ನೋಡದೆ ಹಲವರನ್ನು ಬೆಳೆಸಿದರು. ಎಂ.ಬಿ.ಪಾಟೀಲ್ ಈಗಲೂ ಖರ್ಗೆಯವರಿಗೆ ಸಿಕ್ಕರೆ ಕಾಲುಮುಟ್ಟಿ ನಮಸ್ಕರಿಸುತ್ತಾರೆ. ಅಂತಹ ನಾಯಕರ ಸಂಖ್ಯೆ 10ಕ್ಕೂ ಹೆಚ್ಚಿದೆ. ಮುಖ್ಯಮಂತ್ರಿಯಾಗುವ ಎಲ್ಲ ಅರ್ಹತೆಯಿದ್ದೂ ರಾಜ್ಯ ರಾಜಕಾರಣದ ಚೌಕಾಬಾರದಲ್ಲಿ ಅವರ ಕಾಯಿ ಹಣ್ಣಾಗಲಿಲ್ಲ. ಬಂಡಾಯವೆದ್ದಿದ್ದರೆ ಆಗುವುದೂ ಕಷ್ಟವಿರಲಿಲ್ಲ. ಆದರೆ ಖರ್ಗೆ ಪಕ್ಷದ ವಿರುದ್ಧ ಎದುರು ನಿಂತವರಲ್ಲ.
ನೆಹರು ಕುಟುಂಬಕ್ಕೆ ಪರಮನಿಷ್ಠರು. ಅವರ ಮಕ್ಕಳಿಗೆ ಇಟ್ಟಿರುವ ಹೆಸರೂ ಅಷ್ಟೆ. ಒಬ್ಬರು ಪ್ರಿಯಾಂಕ್ ಖರ್ಗೆ. ಮತ್ತೊಬ್ಬರು ರಾಹುಲ್ ಖರ್ಗೆ. ಇನ್ನೊಬ್ಬರು ಪ್ರಿಯದರ್ಶಿನಿ. (ಇಂದಿರಾರ ಮೂಲ ಹೆಸರು) ಮಗದೊಬ್ಬರು ಜಯಶ್ರೀ. ಆ ನಿಷ್ಠೆಯಿಂದಲೇ ಖರ್ಗೆ ಹಲವು ಬಾರಿ ತ್ಯಾಗ ಮಾಡಬೇಕಾಯ್ತು. ಆದರೆ ತ್ಯಾಗಕ್ಕೆ ಸಿದ್ಧರಾದರೇ ಹೊರತು ಯುದ್ಧಕ್ಕೆ ಸಿದ್ಧರಾಗಲಿಲ್ಲ.

ತನ್ನನ್ನು ದಲಿತ ಎಂಬ ಕಾರಣ ನೀಡಿ ಸಿಎಂ ಸ್ಥಾನಕ್ಕೆ ಅರ್ಹ ಅಭ್ಯರ್ಥಿ ಎನ್ನಬೇಡಿ ಎನ್ನುವುದು ಅವರು ಯಾವಾಗಲೂ ಹೇಳುವ ಮಾತು. ದಲಿತ ನಾಯಕ ಎಂದು ಗುರುತಿಸಿಕೊಂಡಿದ್ದರೆ ಖರ್ಗೆ ಇನ್ನೂ ಪ್ರಬಲ ನಾಯಕರಾಗಬಹುದಿತ್ತು. ಆದರೆ ಖರ್ಗೆ ಮನಃಸಾಕ್ಷಿಗೆ ತಕ್ಕಂತೆ ಬದುಕಿದವರು. ಜಾತಿ ನಾಯಕನಾಗುವುದಕ್ಕಿಂತ ಮೇಲೇರಬೇಕು ಎಂದು ಕನಸು ಕಂಡವರು. ಆ ಕನಸು ಈಡೇರಿತೋ. ಇಲ್ಲವೋ.. ರಾಷ್ಟ್ರೀಯ ಪಕ್ಷದ ಅಧ್ಯಕ್ಷರಂತೂ ಆಗಿದ್ದಾರೆ ಆದರೆ.. ನಿಷ್ಠೆ ಮುಂದುವರೆಯಲಿದೆ.



