ದೇಶದ ರಾಜಕೀಯ ವಲಯದಲ್ಲಿ ಎಲ್ಲೆಲ್ಲೂ ಚರ್ಚೆಯಾಗುತ್ತಿರುವ ಪಕ್ಷ ಎಂದರೆ ಅದು ಆಮ್ ಆದ್ಮಿ. ಪಕ್ಷಕ್ಕಿನ್ನೂ 9ರ ಹರೆಯ. ಅದರೆ ಎರಡು ರಾಜ್ಯಗಳಲ್ಲಿ ಅಧಿಕಾರದಲ್ಲಿದೆ. ಮೋದಿ ಅಲೆಯಲ್ಲಿ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಏದುಸಿರು ಬಿಡುತ್ತಿರುವಾಗ, ಸಿಪಿಎಂ, ಸಿಪಿಐ ಹೆಸರಿಗಷ್ಟೇ ರಾಷ್ಟ್ರೀಯ ಪಕ್ಷಗಳಾಗಿರುವಾಗ, ಸಮಾಜವಾದಿ ಪಕ್ಷ, ಆರ್ಜೆಡಿ, ಜೆಡಿಯು, ಡಿಎಂಕೆ, ಅಣ್ಣಾಡಿಎಂಕೆ, ಬಿಜೆಡಿ, ಅಕಾಲಿದಳ, ಟಿಎಂಸಿ, ಟಿಆರ್ಎಸ್(ಈಗ ಬಿಆರ್ಎಸ್), ವೈಎಸ್ಆರ್ ಕಾಂಗ್ರೆಸ್, ಟಿಡಿಪಿ, ಎನ್ಸಿಪಿ, ಶಿವಸೇನಾ.. ಹೀಗೆ ಬಹುತೇಕ ಪಕ್ಷಗಳ ಸ್ಥಿತಿ ಒಂದೇ. ಒಂದು ರಾಜ್ಯ ಬಿಟ್ಟು ಹೊರಗೆ ನೆಲೆ ಕಂಡುಕೊಳ್ಳಲು ಆಗಿಲ್ಲ. ಇನ್ನೊಂದು ರಾಜ್ಯದಲ್ಲಿ ಅಸ್ಥಿತ್ವ ಕಂಡುಕೊಳ್ಳುವುದೇ ಕಷ್ಟವಾಗಿರುವಾಗ ಆಮ್ ಆದ್ಮಿ ಪಕ್ಷ ಕೇವಲ 9 ವರ್ಷಗಳಲ್ಲಿ ಎರಡು ರಾಜ್ಯಗಳಲ್ಲಿ ಅಧಿಕಾರ ಹಿಡಿದಿದೆ.
ಅರವಿಂದ ಕೇಜ್ರಿವಾಲ್ ನಾಯಕತ್ವದಲ್ಲಿ ದೆಹಲಿ ಗೆದ್ದ ಎಎಪಿ, ಹರಿಯಾಣದಲ್ಲೂ ಇತಿಹಾಸ ನಿರ್ಮಿಸಿದೆ. ಈಗ ಗುಜರಾತ್ ಮತ್ತು ಹಿಮಾಚಲ ಪ್ರದೇಶಗಳತ್ತ ಕಣ್ಣು ನೆಟ್ಟಿದೆ. ಕೇಜ್ರಿವಾಲ್ ಅವರಂತೂ ಪ್ರತಿ ಭಾನುವಾರ ಬಹುತೇಕ ಗುಜರಾತ್ನಲ್ಲಿರುತ್ತಾರೆ. ಅದು ಪ್ರಧಾನಿ ಮೋದಿಯ ತವರು ರಾಜ್ಯ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಅಲ್ಲಿಯೇ ಠಕ್ಕರ್ ಕೊಡಬೇಕು ಎಂದು ಕೇಜ್ರಿವಾಲ್ ಹೊರಟಿರುವಾಗಲೇ ಅಮಿತ್ ಶಾ ಶೇ.24ರ ಎಚ್ಚರಿಕೆ ಕೊಟ್ಟಿದ್ದಾರೆ.

ಇತ್ತೀಚೆಗೆ ಅಮಿತ್ ಶಾ ಗುಜರಾತಿಗೆ ಭೇಟಿ ಕೊಟ್ಟಿದ್ದರು. ಈ ವೇಳೆ ಪಕ್ಷದ ಪದಾಧಿಕಾರಿಗಳು, ನಾಯಕರ ಜೊತೆ ಚುನಾವಣೆ ತಂತ್ರಗಾರಿಕೆ ಕುರಿತು ಮಾತನಾಡುತ್ತಿದ್ದಾಗ ಆಮ್ ಆದ್ಮಿ ಬಗ್ಗೆ ಒತ್ತಿ ಒತ್ತಿ ಹೇಳುತ್ತಿದ್ದರು.
ಆಗ ಬಿಜೆಪಿಯ ಸ್ಥಳೀಯ ಲೀಡರ್ ಒಬ್ಬರು ಎದ್ದು ನಿಂತು ಅಂತಹ ಹೆದರಿಕೆಯೇನೂ ಇಲ್ಲ. ಅಬ್ಬಬ್ಬಾ.. ಎಂದರೆ ಅದು ವಿಪಕ್ಷಗಳ ವೋಟು ಪಡೆಯಬೇಕಷ್ಟೆ ಎಂದರಂತೆ. ಅದಕ್ಕೆ ಅಮಿತ್ ಶಾ ಇನ್ನು ಮೂರು ತಿಂಗಳ ಎಲೆಕ್ಷನ್ ಬಗ್ಗೆ ನಾನು ಹೇಳುತ್ತಿಲ್ಲ. ಈಗ ದೇಶದಲ್ಲಿ ಹೆಚ್ಚು ಪ್ರಬಲವಾಗುತ್ತಿರುವ ಬೆಳೆಯುತ್ತಿರುವ ಏಕೈಕ ಪಕ್ಷ ಆಮ್ ಆದ್ಮಿ. 

ಮೊದಲು ಶಿವಸೇನೆಯ ಶಕ್ತಿ ಮುಂಬೈಗಷ್ಟೇ ಸೀಮಿತವಾಗಿತ್ತು. ಆದರೆ 1986ರಲ್ಲಿ ಶರದ್ ಪವಾರ್ ತಮ್ಮ ಕಾಂಗ್ರೆಸ್-ಎಸ್ ಪಕ್ಷವನ್ನು ಕಾಂಗ್ರೆಸ್-ಐ ಜೊತೆಗೆ ವಿಲೀನ ಮಾಡಿದರು. ಆಗ ಶಿವಸೇನೆ ನಿಧಾನವಾಗಿ ಬೇರುಬಿಟ್ಟಿತು. ಅದಾದ ಮೇಲೆ ಎನ್ಸಿಪಿ ಕಟ್ಟಿದರೂ ಶಿವಸೇನೆ ಇವತ್ತಿಗೂ ಭದ್ರವಾಗಿಯೇ ಇದೆ. ಇದನ್ನು ಅರ್ಥ ಮಾಡಿಕೊಳ್ಳಬೇಕು. 2029ರ ಚುನಾವಣೆಗೆ ನಾವು ತಯಾರಿರಬೇಕು ಎಂದರಂತೆ ಅಮಿತ್ ಶಾ. ಅಮಿತ್ ಶಾ ಪ್ರಕಾರ ಆಮ್ ಆದ್ಮಿ ವೋಟಿನ ಶೇರು ಶೇ.24ನ್ನು ದಾಟಿದರೆ ಅದು ಬಿಜೆಪಿಗೆ ಅಪಾಯಕಾರಿ.
ಸದ್ಯಕ್ಕೇನೋ ಇದುವರೆಗೆ ನಡೆದ ಹಲವು ಚುನಾವಣಾ ಪೂರ್ವ ಸಮೀಕ್ಷೆಗಳಲ್ಲಿ ಬಿಜೆಪಿಗೆ ಬಹುಮತ ದೊರೆಯುವ ನಿರೀಕ್ಷೆಯಂತೂ ಇದೆ. ಕಾಂಗ್ರೆಸ್ ನಿಷ್ಕ್ರಿಯವಾಗುತ್ತಿದ್ದು ಕೇಜ್ರಿವಾಲ್ ಪ್ರಬಲರಾಗುತ್ತಿದ್ದಾರೆ ಎನ್ನುವುದು ಚುನಾವಣಾ ತಜ್ಞರ ವಿಶ್ಲೇಷಣೆ. ಆದರೆ ಅದಿನ್ನೂ ಅಧಿಕಾರಕ್ಕೇರುವ ಸ್ಥಿತಿಯಲ್ಲಿಲ್ಲ ಎನ್ನುವ ಮಾತೂ ಅವರಿಂದ ಬರುತ್ತಿದೆ. ಆದರೆ ಮುಂಬರುವ ದಿನಗಳಲ್ಲಿ ಆಮ್ ಆದ್ಮಿ ಪ್ರಬಲ ರಾಷ್ಟ್ರೀಯ ಪಕ್ಷವಾಗುವ ಎಲ್ಲ ಸೂಚನೆಗಳೂ ಇವೆ. ಇತ್ತೀಚೆಗೆ ನಡೆದ ಕೆಲ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಆಮ್ ಆದ್ಮಿ ಹೆಚ್ಚು ಸ್ಥಾನ ಗೆಲ್ಲದೇ ಹೋದರೂ ಮತಗಳಿಕೆ ಪ್ರಮಾಣ ಹೆಚ್ಚಿಸಿಕೊಂಡಿದೆ. ಗುಜರಾತ್ನ ಗಾಂಧಿನಗರ, ಸೂರತ್ ನಗರಪಾಲಿಕೆ, ಪುರಸಭೆ, ನಗರಸಭೆಗಳಲ್ಲಿ 64 ಸ್ಥಾನ ಗೆದ್ದುಕೊಂಡಿದೆ. ಮೊದಲ ಎಲೆಕ್ಷನ್ನಲ್ಲಿಯೇ ಈ ಸಾಧನೆ ಅಮಿತ್ ಶಾ ಕಣ್ಣಿಗೆ ಬಿದ್ದಿದೆ. ತಂತ್ರಗಾರಿಕೆ ಶುರುವಾಗಿದೆ.



