ಕಾಂತಾರ ಚಿತ್ರದ ಸಕ್ಸಸ್‍ನ ಇನ್ನೊಂದು ಮೆಟ್ಟಿಲು ಇದು. ಕಾಂತಾರದ ಯಶಸ್ಸಿನಿಂದಾಗಿ 60 ವರ್ಷ ಮೇಲ್ಪಟ್ಟ ದೈವನರ್ತಕರಿಗೆ 2 ಸಾವಿರ ಮಾಸಾಶನ ನೀಡುವಂತಾಯ್ತು. ದೈವನರ್ತಕರ ಬಗ್ಗೆ ಎಲ್ಲೆಲ್ಲೂ ಗೌರವಯುತ ಪೂಜ್ಯ ಭಾವನೆ ಮೂಡುವಂತಾಯ್ತು. ಈಗ ಮತ್ತೊಂದು ಗೌರವ. ರಿಯಲ್ ಕಾಂತಾರಗೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರ. ಉಡುಪಿ ಜಿಲ್ಲೆಯ ಕಾಪುವಿನ ದೈವ ನರ್ತಕ ಗುಡ್ಡ ಪಾಣಾರ ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರರಾಗಿದ್ದಾರೆ
ದೈವಗಳ ಆರಾಧನಾ ಸೇವೆಯನ್ನೇ ಬದುಕಾಗಿಸಿಕೊಂಡ ದೈವ ನರ್ತಕರು ಮುನ್ನೆಲೆಗೆ ಬರುವಂತಾಗಿದೆ. ಇದೀಗ ಅಪರೂಪದ ದೈವ ನರ್ತಕರಾದ ಗುಡ್ಡ ಪಾಣಾರ ಅವರ ಸೇವೆಯನ್ನು ರಾಜ್ಯ ಸರ್ಕಾರ ಗುರುತಿಸಿದೆ. ಪಿಲಿಕೋಲದಲ್ಲಿ ದೈವ ನರ್ತಕರಾಗಿ ರುವ ಗುಡ್ಡ ಪಾಣರರಿಗೆ ಜಾನಪದ ವಿಭಾಗದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ.

68 ವರ್ಷದ ಗುಡ್ಡ ಪಾಣಾರ ಉಡುಪಿ ಜಿಲ್ಲೆಯ ಕಾಪು ಸಮೀಪದ ಮೂಳೂರಿನವರು. ನಾಣು ಪಾಣಾರ ಮತ್ತು ರುಕ್ಕುಪಾಣಾರ್ತಿ ಮಗ. 25ನೇ ವಯಸ್ಸಿನಿಂದಲೂ ದೈವ ನರ್ತಕ ರಾಗಿರುವ ಗುಡ್ಡ ಪಾಣಾರ ಕಾಪುವಿನಲ್ಲಿ ಎರಡು ವರ್ಷಕ್ಕೊಮ್ಮೆ ನಡೆಯುವ ವಿಶಿಷ್ಟ ಪಿಲಿಕೋಲದಲ್ಲಿ ಪಿಲಿ ಪಾತ್ರಧಾರಿ ಆಗಿ ಜನರ ಗಮನ ಸೆಳೆದಿದ್ದಾರೆ. ಪಿಲಿಕೋಲವೆಂದರೆ ತುಳುನಾಡಿನ ಒಂದು ವಿಶಿಷ್ಟ ಆಚರಣೆ, ಮಾರಿಗುಡಿಯ ಆವರಣದಲ್ಲಿ ಸೇರಿರುವ ಜನರನ್ನು ಫಿಲಿ ಪಾತ್ರಧಾರಿಯಾಗಿ ಅಟ್ಟಾಡಿಸಿಕೊಂಡು ಹೋಗುತ್ತಾ ದೇವರ ಬಗೆಗಿನ ಶ್ರದ್ಧೆ ಹೆಚ್ಚಿಸುವ ರೀತಿಯಲ್ಲಿ , ಏಕಕಾಲದಲ್ಲಿ ಭಯ ಮತ್ತು ಭಕ್ತಿಯನ್ನು ಪ್ರೇರೇಪಿಸುವ ಆರಾಧನಾ ಪದ್ಧತಿಯಾಗಿದೆ. ಈ ಆಚರಣೆ ಅನೇಕ ಜನಪದ ನಂಬಿಕೆಗಳ ಆಗರವಾಗಿದೆ.

ಕಾಂತರಾ ಸಿನಿಮಾದ ಒಂದು ಮನಮೋಹಕ ಸನ್ನಿವೇಶದಲ್ಲಿ ಕಾಣಿಸಿಕೊಂಡ ದೈವಾರಾಧಕ ನಾಗರಾಜ ಪಾಣ ಅವರನ್ನು ಉಡುಪಿ ಜಿಲ್ಲಾಡಳಿತ ಗುರುತಿಸಿದೆ. ಯಾವುದೇ ಅರ್ಜಿ ಹಾಕದೆ ನಾಗರಾಜ ಪಾಣ ಅವರಿಗೆ ಜಿಲ್ಲಾ ಮಟ್ಟದ ಪ್ರಶಸ್ತಿಯ ಗೌರವ ನೀಡಿದೆ. ನಾಗರಾಜ ಪಾಣ ಅವರ ಜನಪದ ಸೊಗಡಿನ ಅದ್ಭುತ ಧ್ವನಿಯನ್ನು ಕಾಂತಾರಾ ಚಿತ್ರದಲ್ಲಿ ಕೇಳಬಹುದು.
ಒಟ್ಟಿನಲ್ಲಿ ಕಾಂತಾರದ ಯಶಸ್ಸು ಹಲವರಿಗೆ ಹಲವು ರೀತಿಯಲ್ಲಿ ಸಹಾಯ ಮಾಡಿದೆ. ಚಿತ್ರದ ಕಲಾವಿದರು, ತಂತ್ರಜ್ಞರು ಎಲ್ಲರನ್ನೂ ಜನ ಗುರುತಿಸುವಂತೆ ಮಾಡಿದೆ.



