ಬ್ರಾಹ್ಮಣರ ಮಾಲೀಕತ್ವದ ಪತ್ರಿಕೆಗಳಿಗೆ ಪ್ರತೀ ತಿಂಗಳೂ ಜಾಹೀರಾತು. ಪತ್ರಿಕೆಗಳ ಮಾಲೀಕರ ಜಾತಿ ಮೂಲ ಹುಡುಕಲು ಹೊರಟಿದೆ ರಾಜ್ಯ ಸರ್ಕಾರ. ಬ್ರಾಹ್ಮಣರ ಪತ್ರಿಕೆಗಳು ಮಾತ್ರವೇ ಪತ್ರಿಕೆಗಳೇ.. ಬೇರೆ ಜಾತಿಯವರ ಪತ್ರಿಕೆ ಪತ್ರಿಕೆಗಳಲ್ಲವೇ.. ಇಂಥಾದ್ದೊಂದು ಟ್ವೀಟ್ ಮಾಡಿದವರು ಪ್ರಿಯಾಂಕ್ ಖರ್ಗೆ. ಇದು ಆರ್.ಎಸ್.ಎಸ್. ಆದೇಶ. ಬೊಮ್ಮಾಯಿಯವರು ಆ ಆದೇಶವನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದಾರೆ ಎಂದು ಟೀಕಿಸಿದ್ದರು. ಅದಕ್ಕೆ ಪ್ರತಿಯಾಗಿ ಸರ್ಕಾರಿ ಅಧಿಸೂಚನೆಯನ್ನೂ ಪ್ರತಿಯಾಗಿ ತೋರಿಸಿದ್ದರು.
ಪ್ರಿಯಾಂಕ್ ಖರ್ಗೆ ಟ್ವೀಟ್ ಮಾಡುವ ಮೊದಲೇ ಸರ್ಕಾರಿ ಆದೇಶ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಬ್ರಾಹ್ಮಣರು, ಬ್ರಾಹ್ಮಣ ಪತ್ರಕರ್ತರು, ಸಂಪಾದಕರನ್ನು ಹಿಗ್ಗಾಮುಗ್ಗಾ ಟೀಕಿಸಲಾಗಿತ್ತು. ಇದಕ್ಕೆಲ್ಲ ಕಾರಣ ಆರ್.ಎಸ್.ಎಸ್. ಎಂದೂ ಜರೆಯಲಾಗಿತ್ತು. ಆದರೆ ಸುದ್ದಿಯೇನು?


ರಾಜ್ಯ ಸರ್ಕಾರದ ವಿಶೇಷ ಜಾಹೀರಾತುಗಳನ್ನು ಸರ್ಕಾರ ನೀಡುವುದು ಸಂಪಾದಕರ ಜಾತಿ ನೋಡಿಯೇ ಎನ್ನುವುದು ಹೊಸದಲ್ಲ.
ಸರ್ಕಾರದ ಅಧಿಕೃತ ಮಾಹಿತಿಯ ಪ್ರಕಾರವೇ ಪರಿಶಿಷ್ಟ ಜಾತಿ ಸಂಪಾದಕರ ಮತ್ತು ಮಾಲೀಕತ್ವದ ಪತ್ರಿಕೆಗಳಿಗೆ ವಾರ್ಷಿಕ 10 ಕೋಟಿ ರೂ. ಪರಿಶಿಷ್ಠ ಪಂಗಡದ ಸಂಪಾದಕರ ಮತ್ತು ಮಾಲೀಕತ್ವದ ಪತ್ರಿಕೆಗಳಿಗೆ ವಾರ್ಷಿಕ 1.20 ಕೋಟಿ ರೂ. ಹಿಂದುಳಿದ ವರ್ಗದವ ಸಂಪಾದಕರ ಮತ್ತು ಮಾಲೀಕತ್ವದ ಪತ್ರಿಕೆಗಳಿಗೆ ವಾರ್ಷಿಕ 20 ಕೋಟಿ ರೂ.
ರಾಜ್ಯ ಗಡಿ ಭಾಗದ ತಾಲ್ಲೂಕುಗಳಿಂದ ಪ್ರಕಟವಾಗುವ ಪತ್ರಿಕೆಗಳಿಗೆ 8 ಕೋಟಿ ರೂ. ನೀಡಲಾಗುತ್ತಿದೆ.


ಅಭಿನಂದನೆ ಮತ್ತು ಸ್ಪಷ್ಟನೆ : ಪರಿಶಿಷ್ಟಜಾತಿ ಹಾಗೂ ಹಿಂದುಳಿದ ವರ್ಗದ ವ್ಯಕ್ತಿಗಳ ಮಾಲೀಕತ್ವದ ಪತ್ರಿಕೆಗಳಿಗೆ ನೀಡುವಂತೆ ಬ್ರಾಹ್ಮಣ ಸಮುದಾಯದ ವ್ಯಕ್ತಿಗಳ ಮಾಲೀಕತ್ವದ ಪತ್ರಿಕೆಗಳಿಗೂ ‘ಪ್ರೋತ್ಸಾಹಕ ಜಾಹೀರಾತು’ ನೀಡಲು ಆದೇಶಿಸಿರುವ ರಾಜ್ಯ ಸರ್ಕಾರಕ್ಕೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಭಿನಂದನೆ ಸಲ್ಲಿಸಿದೆ.
ಇದೇ ವೇಳೆ, ಈ ಸವಲತ್ತು ಕೇವಲ ಬ್ರಾಹ್ಮಣ ಸಮುದಾಯದ ಒಡೆತನದ ಪತ್ರಿಕೆಗಳಿಗಷ್ಟೇ ಸೀಮಿತ ಎಂಬಂತೆ ಬಿಂಬಿಸುತ್ತಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದೆ. ತಮಗೆ ನೀಡಿರುವ ಈ ಸೌಲಭ್ಯದಿಂದ ಯಾವುದೇ ವರ್ಗ ಸೌಲಭ್ಯದಿಂದ ವಂಚಿತವಾಗಿಲ್ಲ. ಎಲ್ಲ ಸಮುದಾಯದವರ ಪತ್ರಿಕೆಗಳಿಗೂ ಜಾಹೀರಾತು ಸಿಗುತ್ತಿದೆ. ಇದೇ ಮೊದಲ ಬಾರಿಗೆ ಬ್ರಾಹ್ಮಣರ ಮಾಲೀಕತ್ವದ ಪತ್ರಿಕೆಗಳು ಸರ್ಕಾರದ ಪ್ರಯೋಜನ ಪಡೆದಿವೆ ಎಂದು ಮಾಹಿತಿ ನೀಡಿದೆ.



