ಸಿಕೆಆರ್ 45. ಇದು ಕಾರ್ ನಂಬರ್. 4 ಬಾರಿ ಸಿಎಂ ಆಗಿರುವ ಯಡಿಯೂರಪ್ಪ ಅವರಿಗೆ ಈ ಕಾರ್ ಮೇಲೆ ವಿಶೇಷ ಪ್ರೀತಿ ಇದೆ. ಈ ಅಂಬಾಸಿಡರ್ ಕಾರುಗಳು ಈಗ ಮಾರುಕಟ್ಟೆಯಲ್ಲೇ ಇಲ್ಲ. ಆದರೆ ಯಡಿಯೂರಪ್ಪ ಈ ಕಾರ್`ನ್ನು ಮಾತ್ರ ಇಟ್ಟುಕೊಂಡಿದ್ದಾರೆ. ಈ ಕಾರಿನ ವಿಶೇಷತೆಯೆಂದರೆ, ಇದು ಯಡಿಯೂರಪ್ಪ ಅವರ ಪಾಲಿಗೆ ಲಕ್ಕಿ ಕಾರ್.
ಈ ಬಾರಿ ಶಿಕಾರಿಪುರದ ಅಭ್ಯರ್ಥಿಯಾಗಿ ವಿಜಯೇಂದ್ರ ಸ್ಪರ್ಧೆ ಮಾಡುತ್ತಿದ್ದಾರೆ. ಈ ಹಿಂದೆ 9 ಬಾರಿ ಯಡಿಯೂರಪ್ಪ ಸ್ಪರ್ಧೆ ಮಾಡಿದ್ದು, ಅಷ್ಟೂ ಚುನಾವಣೆಗಳಲ್ಲಿ ಒಮ್ಮೆ ಮಾತ್ರವೇ ಸೋತಿದ್ದಾರೆ. ವಿಚಿತ್ರವೆಂದರೆ ಸೋತ ಚುನಾವಣೆಯಲ್ಲಿ ಈ ಕಾರಿನಲ್ಲಿ ಹೋಗಿ ನಾಮಪತ್ರ ಸಲ್ಲಿಕೆ ಮಾಡಿರಲಿಲ್ಲವಂತೆ. ಒಟ್ಟಿನಲ್ಲಿ ಯಡಿಯೂರಪ್ಪ ಗೆಲುವಿನ ಅದೃಷ್ಟ ಈ ಕಾರಿಗೆ ಸಿಕ್ಕಿದೆ.
80ರ ದಶಕದಲ್ಲಿ ಯಡಿಯೂರಪ್ಪನವರು ಈ ಕಾರನ್ನು ಖರೀದಿಸಿದ್ದರು. ಈ ಕಾರನ್ನು ಖರೀದಿಸಿದ ಬಳಿಕ ಅವರು ರಾಜಕೀಯವಾಗಿ ಬೆಳೆಯುತ್ತಾ ಬಂದರು. ಯಡಿಯೂರಪ್ಪ ಖರೀದಿಸಿದ ಮೊದಲ ಕಾರ್ ಕೂಡಾ ಇದೇ. ಇದು ಕಾಕತಾಳೀಯವಾಗಿದ್ದರೂ, ಯಡಿಯೂರಪ್ಪ ಕುಟುಂಬ ಇದನ್ನು ‘ಲಕ್ಕಿ ಕಾರು’ ಎಂದು ಬಲವಾಗಿ ನಂಬಿಕೊಂಡಿರುವುದರಿಂದ ಪ್ರತಿ ಬಾರಿ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಕೆಗೆ ಇದೇ ಕಾರಿನಲ್ಲಿ ಯಡಿಯೂರಪ್ಪನವರು ಆಗಮಿಸಿ ನಾಮಪತ್ರ ಸಲ್ಲಿಸುತ್ತಿದ್ದರು. ಈಗಲೂ ಈ ಕಾರು ಸುಸ್ಥಿತಿಯಲ್ಲಿಯೇ ಇದೆ.


ನಾಮಪತ್ರ ಸಲ್ಲಿಕೆಗೂ ಮುನ್ನ ಅವರು ಹುಚ್ಚೂರಾಯಸ್ವಾಮಿ ಮತ್ತು ಗುರುರಾಘವೇಂದ್ರ ದೇವಸ್ಥಾನಗಳಿಗೆ ತೆರಳಿ, ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಅವರ ತಂದೆ ಬಿ.ಎಸ್.ಯಡಿಯೂರಪ್ಪ, ಪತ್ನಿ ಪ್ರೇಮಾ ವಿಜಯೇಂದ್ರ, ಸೋದರ ಬಿ.ವೈ. ರಾಘವೇಂದ್ರ ಅತ್ತಿಗೆ ತೇಜಸ್ವಿನಿ ರಾಘವೇಂದ್ರ, ಸೋದರಿಯರಾದ ಅರುಣಾದೇವಿ ಮತ್ತು ಉಮಾದೇವಿ ಜೊತೆಗಿದ್ದರು. ಬಳಿಕ, ತಮ್ಮ ತಂದೆಯವರಿಗೆ ನಮಸ್ಕರಿಸಿ, ಭರ್ಜರಿ ರೋಡ್ ಶೋ ನಡೆಸಿದರು. ಯಡಿಯೂರಪ್ಪ, ಬಿ.ವೈ.ರಾಘವೇಂದ್ರ, ಗೃಹ ಸಚಿವ ಆರಗ ಜ್ಞಾನೇಂದ್ರ, ಹಲವು ಶಾಸಕರು, ಸಂಸದರು, ಸಚಿವ ಎಂಟಿಬಿ ನಾಗರಾಜ್, ಚಿತ್ರನಟಿ ಶ್ರುತಿ ಮತ್ತಿತರರು ಈ ವೇಳೆ ಹಾಜರಿದ್ದರು.



