ಚಕ್ರವರ್ತಿ ಸೂಲಿಬೆಲೆ. ವಾಗ್ಮಿ, ಚಿಂತಕ. ಅಂಕಣಕಾರ. ಸಮಾಜಸೇವಕ. ಹಿಂದೂ ವಾದಿ. ಯುವ ಬ್ರಿಗೇಡ್ ಮೂಲಕ ರಾಜ್ಯದಾದ್ಯಂತ ನೂರಾರು ಕೆರೆ, ಕಲ್ಯಾಣಿ, ದೇವಸ್ಥಾನಗಳ ಜೀರ್ಣೋದ್ಧಾರ ಮಾಡಿದವರು. ಕೆರೆ, ಕಲ್ಯಾಣಿಗಳ ಜೀರ್ಣೋದ್ಧಾರದಿಂದ ನೀರು ಕಂಡ ನೂರಾರು ಹಳ್ಳಿಗಳಿವೆ. ಬೀಳುವ ಸ್ಥಿತಿಯಲ್ಲಿದ್ದ ಶಾಲೆಗಳಿಗೆ, ಬಸ್ ನಿಲ್ದಾಣಗಳಿಗೆ ಹೊಸ ರೂಪ ಕೊಟ್ಟಿರುವ ಚಕ್ರವರ್ತಿ ಸೂಲಿಬೆಲೆ, ಹಿಂದೂಪರ ವಿಷಯ ಬಂದಾಗ ಖಡಕ್ಕಾಗಿ ನಿಲ್ಲುವವರು. ನೀವು ಒಪ್ಪುತ್ತೀರೋ.. ಬಿಡುತ್ತೀರೋ.. ಅದು ಅವರವರ ಆಯ್ಕೆಗೆ ಬಿಟ್ಟಿದ್ದು. ಆದರೆ ಸೂಲಿಬೆಲೆ ಅಡ್ಡಗೋಡೆಯ ಮೇಲೆ ದೀಪವನ್ನಿಟ್ಟು ಮಾತನಾಡುವವರಂತೂ ಅಲ್ಲ. ಹಿಂದೂ ಪರ ಎಂಬ ಕಾರಣಕ್ಕೇ ಬಿಜೆಪಿ ಪರ ಎಂದೂ ಅಲ್ಲ. ಚಕ್ರವರ್ತಿ ಸೂಲಿಬೆಲೆ ಮೋದಿಯವರ ಪರ ಪ್ರಚಾರ ಮಾಡುತ್ತಾರೆಯೇ ಹೊರತು, ಇನ್ಯಾರ ಪರವೂ ಅಲ್ಲ. ರಾಜ್ಯ ಚುನಾವಣೆಯಲ್ಲಿ ಸೂಲಿಬೆಲೆ ತಮ್ಮ ಪಾಡಿಗೆ ತಾವಿದ್ದು ಬಿಡುತ್ತಾರೆ. ಆಕ್ಟಿವ್ ಆಗುವುದು ಲೋಕಸಭೆ ಚುನಾವಣೆ ವೇಳೆ ಮಾತ್ರ. 2014 ಹಾಗೂ 2019ರಲ್ಲಿ ಯುವ ಬ್ರಿಗೇಡ್ ಮಾಡಿಕೊಂಡು ಪ್ರಚಾರಕ್ಕೆ ಹೊರಡುತ್ತಾರೆ ಸೂಲಿಬೆಲೆ. ಅದು ಮುಗಿದ ಮೇಲೆ ಮತ್ತೆ ಸಮಾಜಸೇವೆಗೆ ಮುಖ ಮಾಡುತ್ತಾರೆ. ಬಿಜೆಪಿಯನ್ನು ಟೀಕಿಸುವ ಖಂಡಿಸುವ ವಿಷಯ ಬಂದಾಗ ಹಿಂದೆ ಮುಂದೆ ನೋಡುವವರೂ ಅಲ್ಲ. ಬಿಜೆಪಿ ಕಾರ್ಯಕರ್ತರ ಹತ್ಯೆ ವಿಷಯದಲ್ಲಿ ನೇರವಾಗಿ ಬಿಜೆಪಿ ನಾಯಕರನ್ನು ಹಿಗ್ಗಾಮುಗ್ಗಾ ಝಾಡಿಸಿದ್ದವರು ಸೂಲಿಬೆಲೆ. ಅಷ್ಟೇ ಅಲ್ಲ, ಪ್ರವಾಹದ ತುರ್ತು ನಿಧಿ ವಿಳಂಬವಾದಾಗ ಕೇಂದ್ರ ಸರ್ಕಾರವನ್ನೂ, ತಾವೇ ಪ್ರೀತಿಸುವ ನರೇಂದ್ರ ಮೋದಿಯನ್ನೂ ಬಿಟ್ಟಿರಲಿಲ್ಲ. ಅಷ್ಟರಮಟ್ಟಿಗೆ ಚಕ್ರವರ್ತಿ ಸೂಲಿಬೆಲೆ ಓಪನ್.
ಅಂತಹ ಸೂಲಿಬೆಲೆ ಹಲಾಲ್ ಕಟ್-ಝಟ್ಕಾ ಕಟ್ ವಿವಾದದಲ್ಲಿ, ಟಿಪ್ಪೂ ಸುಲ್ತಾನ್ ವಿಷಯದಲ್ಲಿ, ಹಿಜಾಬ್ ವಿಚಾರದಲ್ಲಿ, ಗೋ ಹತ್ಯೆ ನಿಷೇಧ ಕಾಯ್ದೆ ವಿಚಾರದಲ್ಲಿ ತಮ್ಮದೇ ನಿಲುವು ತೆಗೆದುಕೊಂಡಿದ್ದಾರೆ. ಅದು ಕಾಂಗ್ರೆಸ್ಸಿಗೆ ಅಪಥ್ಯ ಎನಿಸಿದೆ. ಸೂಲಿಬೆಲೆಯವರಂತೂ ಇತ್ತೀಚೆಗೆ ಸಿದ್ದರಾಮಯ್ಯರನ್ನು ಟೀಕಿಸಿದ್ದ ಶಿಕ್ಷಕರೊಬ್ಬರ ಅಮಾನು ವಿಷಯ, ನಂಜನಗೂಡಿನಲ್ಲಿ ಭಾರತ್ ಮಾತಾ ಕೀ ಜೈ ಎಂದವರಿಗೆ ಚೂರಿ ಹಾಕಿದ ಪ್ರಕರಣ.. ಹೀಗೆ ಹಲವು ವಿಷಯಗಳಲ್ಲಿ ಕಾಂಗ್ರೆಸ್ಸಿನವರ ನಿಲುವುಗಳನ್ನ ಟೀಕಿಸುತ್ತಾ ಇದು ಹಿಟ್ಲರ್ ಸರ್ಕಾರ ಎಂದು ಟೀಕಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಇವರಿಗೇನು ಜನರು ಕೇಸರಿ ಗುತ್ತಿಗೆ ನೀಡಿಲ್ಲ. ಬಿಜೆಪಿ ಸರ್ಕಾರದಲ್ಲಿ ಹಿಜಾಬ್, ಹಲಾಲ್, ಉರಿಗೌಡ ಅಂತೆಲ್ಲ ಸಮಾಜದಲ್ಲಿ ಸಂಘರ್ಷಮಯ ವಾತಾವರಣ ಸೃಷ್ಟಿಸುವ ಕೆಲಸ ಮಾಡಿದ ಬಿಜೆಪಿ, ರಾಜ್ಯದ ಅಭಿವೃದ್ಧಿ ಕಡೆಗಣಿಸಿತು. ರೋಸಿಹೋದ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡಿದೆ. ಸಮಾಜದಲ್ಲಿ ಕೋಮು ಭಾವನೆ ಸೃಷ್ಟಿಸುವ ಚಕ್ರವರ್ತಿ ಸೂಲಿಬೆಲೆ ಆಟ ಇನ್ನು ನಡೆಯದು ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಸರ್ಕಾರದ ಇಂತಹ ಬೆದರಿಕೆಗಳಿಗೆ ಹೆದರುವುದಿಲ್ಲ. ಸಿದ್ದರಾಮಯ್ಯ ಸರ್ಕಾರದವರು ಇಂತಹ ಹೇಳಿಕೆಗಳ ಮೂಲಕ ನಾನು ಹೇಳಿದ್ದ ಹಿಟ್ಲರ್ ಸರ್ಕಾರ ಎಂಬ ಮಾತಿಗೆ ಸಾಕ್ಷಿ ಕೊಡುತ್ತಿದ್ದಾರೆ, ಅಷ್ಟೆ ಎಂದು ಹೇಳಿದ್ದಾರೆ ಚಕ್ರವರ್ತಿ ಸೂಲಿಬೆಲೆ.
ಇಷ್ಟಕ್ಕೂ ಚಕ್ರವರ್ತಿ ಸೂಲಿಬೆಲೆ ಬಿಜೆಪಿ ಸದಸ್ಯರಲ್ಲ. ತಾವು ರಾಜಕೀಯಕ್ಕೆ ಬರುವುದಿಲ್ಲ ಎಂದು ಹಲವು ಬಾರಿ ಬಹಿರಂಗ ವೇದಿಕೆಗಳಲ್ಲಿಯೇ ಹೇಳಿದ್ದಾರೆ. ಹೀಗಿದ್ದರೂ ಚಕ್ರವರ್ತಿ ಸೂಲಿಬೆಲೆ ಮೇಲೆ ಕಾಂಗ್ರೆಸ್ಸಿಗರ ಕಣ್ಯಾಕೆ ಎಂದರೆ.. ಉತ್ತರಗಳೂ ಇವೆ. ಚಕ್ರವರ್ತಿ ಸೂಲಿಬೆಲೆ ಬಿಜೆಪಿ ಪರವಿದ್ದರೂ ಬಿಜೆಪಿ ಪರ ಅಲ್ಲ. ಅವರದ್ದೇನಿದ್ದರೂ ಮೋದಿ ಪರ ರಾಜಕೀಯ. ಜೊತೆಗೆ ಕರ್ನಾಟಕದಲ್ಲಿ ಮೋದಿಯವರನ್ನು ಮನೆ ಮನೆಗೆ ಪರಿಚಯಿಸಿದವರಲ್ಲಿ ಸೂಲಿಬೆಲೆಯವರ ಪಾತ್ರ ದೊಡ್ಡದು. 2014ರಲ್ಲಿ ಶುರುವಾದ ಯುವ ಬ್ರಿಗೇಡ್ ಮೂಲಕ ಪ್ರಚಾರ ಮಾಡಿದ ಸೂಲಿಬೆಲೆ, ಕರ್ನಾಟಕದಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗೆಲ್ಲಲು ಕೊಡುಗೆ ನೀಡಿದ್ದರು. ಅದಾದ ಮೇಲೆ ಮತ್ತೆ ಸೂಲಿಬೆಲೆ ಬಂದಿದ್ದು 2019ರಲ್ಲಿ. ಮತ್ತೊಮ್ಮೆ ಲೋಕಸಭೆ ಚುನಾವಣೆ ವೇಳೆಯಲ್ಲಿಯೇ. ಈಗ 2024ರ ಲೋಕಸಭೆ ಚುನಾವಣೆಗೆ ವೇದಿಕೆ ಸಜ್ಜಾಗಿದೆ. ಸೂಲಿಬೆಲೆ ಮತ್ತೆ ಪ್ರಚಾರಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಇದರ ನಡುವೆ ಯುವ ಬ್ರಿಗೇಡ್ ಹಳ್ಳಿ ಹಳ್ಳಿಗಳನ್ನೂ ಮುಟ್ಟಿದೆ. ಸೂಲಿಬೆಲೆ ಜನಪ್ರಿಯತೆಯೂ ಹೆಚ್ಚಾಗಿದೆ. ಈ ನಡುವೆ ಹೆಂಗ್ ಪುಂಗ್ಲಿ ಅಭಿಯಾನ ನಡೆಯಿತಾದರೂ, ಸೂಲಿಬೆಲೆಯವರ ಯುವ ಬ್ರಿಗೇಡ್ ಗಟ್ಟಿಯಾಗಿಯೇ ಸೂಲಿಬೆಲೆಯವರ ಜೊತೆ ನಿಂತಿತು. ಹೀಗಾಗಿಯೇ ಎಂಬಿ ಪಾಟೀಲ್ ಅಂತಹವರ ಮೂಲಕ ಈ ಹೆಜ್ಜೆ ಇಟ್ಟಿದೆಯಾ ಕಾಂಗ್ರೆಸ್..? ಅನುಮಾನ, ಊಹೆಗಳಷ್ಟೇ. ಅಂದಹಾಗೆ ಕಾನೂನು ವಿರೋಧಿ ಹೇಳಿಕೆ ನೀಡುವುದು, ಕಾನೂನು ವಿರೋಧಿ ಚಟುವಟಿಕೆಗೆ ಆಸ್ಪದ ನೀಡುವ ಕೆಲಸವನ್ನು ಯಾರು ಮಾಡಿದರೂ, ತಪ್ಪು ತಪ್ಪೇ. ಅಂತಹ ತಪ್ಪು ಮಾಡದೇ ಇದ್ದವರನ್ನು ಬಂಧಿಸುವುದು, ಅರೆಸ್ಟ್ ಮಾಡಿಸುತ್ತೇನೆ ಎನ್ನುವುದೂ ಕೂಡಾ ತಪ್ಪೇ. ಸಿದ್ದರಾಮಯ್ಯ ಸರ್ಕಾರದ ಕುರಿತಾದ ಚಕ್ರವರ್ತಿ ಸೂಲಿಬೆಲೆಯವರ ಹೇಳಿಕೆ,ಟೀಕೆ ಸುಳ್ಳಾಗಲಿ ಎಂದೇ ಹಾರೈಸೋಣ.



