ಹೆಚ್.ಡಿ.ದೇವೇಗೌಡ. ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾಗಿದ್ದರೂ.. ರಾಜಕೀಯವನ್ನೂ ಮೀರಿದ ಅಭಿಮಾನಿ ಬಳಗ ಹೊಂದಿರುವ ನಾಯಕ. ಮಾಜಿ ಪ್ರಧಾನಿ. ಒಕ್ಕಲಿಗರ ಪಾಲಿನ ಆರಾಧ್ಯ ದೈವ. ವಯಸ್ಸು 89. ಇತ್ತೀಚೆಗೆ ದೇವೇಗೌಡರ ಆರೋಗ್ಯ ಹದಗೆಡುತ್ತಿದೆ. ವಯೋಸಹಜ ಕಾಯಿಲೆ. ಯಾವುದೇ ದುಶ್ಚಟಗಳಿಲ್ಲದ ದೇವೇಗೌಡರು ಇದ್ದಕ್ಕಿದ್ದಂತೆ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದಾಗ ಸಹಜವಾಗಿಯೇ ತಳಮಳ ಶುರುವಾಗುತ್ತೆ. ಅಂತಹವರಿಗೆಲ್ಲ ದೇವೇಗೌಡರೇ ಖುದ್ದು ಧೈರ್ಯ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ನಾನು ಆಸ್ಪತ್ರೆಗೆ ನಿತ್ಯದ ತಪಾಸಣೆಗಾಗಿ ಬಂದಿದ್ದೆ. ಈ ಬಗ್ಗೆಅಭಿಮಾನಿಗಳು ಯಾವುದೇ ಕಾರಣಕ್ಕೂ ಗಾಬರಿ ಅಥವಾ ಉದ್ವೇಗಕ್ಕೊಳಗಾಗಬೇಕಾಗಿಲ್ಲ. ಒಂದೆರಡು ದಿನಗಳಲ್ಲೇ ನಾನು ಮನೆಗೆ ಮರಳಲಿದ್ದೇನೆ ಎಂದು ತಿಳಿಸಿದ್ದಾರೆ. ಅಂದಹಾಗೆ ಬೇರೆಯವರಂತೆ ಸೋಷಿಯಲ್ ಮೀಡಿಯಾ ನೋಡಿಕೊಳ್ಳೋಕೆ ಇನ್ನೊಬ್ಬರನ್ನು ನೇಮಕ ಮಾಡಿಲ್ಲ ಎನ್ನುವುದು ವಿಶೇಷ. ಹೀಗಾಗಿ ದೇವೇಗೌಡರೇ ಖುದ್ದು ಟ್ವೀಟ್ ಮಾಡಿರುವುದು ಭರವಸೆ ಹುಟ್ಟಿಸಿದೆ.
I have come to the hospital for a routine check up. There is no need for any panic or anxiety. I will be back home in a couple of days.
— H D Deve Gowda (@H_D_Devegowda) February 28, 2023
89 ವರ್ಷ ವಯಸ್ಸಿನ ದೇವೇಗೌಡರು ಊಟ, ವಾಕಿಂಗ್, ಟ್ಯಾಬ್ಲೆಟ್ಸ್ ವಿಚಾರದಲ್ಲಿ ತುಂಬಾ ಕಟ್ಟುನಿಟ್ಟು. ಲವಲವಿಕೆ ಇವತ್ತಿಗೂ ಹಾಗೆಯೇ ಇದೆ. ಯಾವುದೇ ದುಶ್ಚಟಗಳಿಲ್ಲ. ಹೀಗಾಗಿಯೇ ಅವರನ್ನು 24/7 ರಾಜಕಾರಣಿ ಎನ್ನುತ್ತಾರೆ. ಕಳೆದ ವರ್ಷ ಒಮ್ಮೆ ದೇವೇಗೌಡರು ತುಂಬಾ ವೀಕ್ ಆಗಿದ್ದಾರೆ ಎಂಬ ಕಾರಣಕ್ಕೆ ಹಲವು ನಾಯಕರು ದೇವೇಗೌಡರ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು. ತದನಂತರ ಗೌಡರು ಚೇತರಿಸಿಕೊಂಡಿದ್ದರು. ಈ ಬಾರಿ ಕಾಲು ಊತ ಕಾಣಿಸಿಕೊಂಡಿದೆ. ಅದಕ್ಕಾಗಿ ವೈದ್ಯರು ವಿಶ್ರಾಂತಿಯ ಚಿಕಿತ್ಸೆ ನೀಡುತ್ತಿದ್ದಾರೆ.
ದೇವೇಗೌಡರು ಮನೆಯಲ್ಲಿಯೇ ಇರಬಹುದಿತ್ತಲ್ಲ.. ಆಸ್ಪತ್ರೆಗೆ ದಾಖಲಾದರು ಎಂಬ ಕಾರಣವೇ ಕಳವಳ ಹುಟ್ಟಿಸುತ್ತದೆ ಎನ್ನುವುದು ಅಭಿಮಾನಿಗಳ ವಾದ. ಆದರೆ.. ದೇವೇಗೌಡರು ಆಸ್ಪತ್ರೆಯಲ್ಲಿಯೇ ಸೇರುತ್ತಿರುವುದಕ್ಕೂ ಕಾರಣ ಇದೆ. ದೇವೇಗೌಡರು ಮನೆಯಲ್ಲಿದ್ದರೆ ಪ್ರತಿದಿನ ನೂರಾರು ಜನ ಭೇಟಿ ಮಾಡುತ್ತಾರೆ. ಈಗ ಚುನಾವಣೆ ಸಮಯ. ನೂರಾರು ಜನರ ಪಟ್ಟಿ ಈಗ ಸಾವಿರಾರು ಜನರಿಗೆ ಏರಿದೆ. ಪ್ರತಿದಿನ ಸಾವಿರಾರು ಜನ ಭೇಟಿ ನೀಡುತ್ತಿರುವುದರಿಂದ ದೇವೇಗೌಡರಿಗೆ ವಿಶ್ರಾಂತಿಯೂ ಸಿಗುತ್ತಿಲ್ಲ. ಊಟ, ಮಾತ್ರೆ ಆದ ನಂತರ ನಿದ್ರೆ ಮಾಡಬೇಕು. ಅದಕ್ಕೆ ಅವಕಾಶವಾಗುತ್ತಿಲ್ಲ. ಹೀಗಾಗಿಯೇ ವೈದ್ಯರು ದೇವೇಗೌಡರನ್ನು ಆಸ್ಪತ್ರೆಗೆ ಶಿಫ್ಟ್ ಮಾಡಿಸಿದ್ದಾರೆ.
ಮನೆಯಲ್ಲಿ ರೆಸ್ಟ್ ಇಲ್ಲ, ಅಷ್ಟೆ : ಸಿ.ಎಂ.ಇಬ್ರಾಹಿಂ
ದೇವೇಗೌಡರನ್ನು ಪ್ರತಿದಿನ ನೋಡಲು ಬರುವವರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿಯೇ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅದು ರೊಟೀನ್ ಚೆಕಪ್. ಮನೆಯಲ್ಲಿ ರೆಸ್ಟ್ ಸಿಗುತ್ತಿಲ್ಲ. ಅವರು ವಾಪಸ್ ಆದ ನಂತರ ಪಕ್ಷದ ತೀರ್ಮಾನಗಳ ಕುರಿತಂತೆ ಮಾತನಾಡಲಿದ್ದೇವೆ ಎಂದಿದ್ದಾರೆ ಸಿಎಂ ಇಬ್ರಾಹಿಂ.
ಆಸ್ಪತ್ರೆ ಬಳಿ ಹೋಗಬೇಡಿ : ಕುಮಾರಸ್ವಾಮಿ
ದೇವೇಗೌಡರ ಆರೋಗ್ಯದ ಬಗ್ಗೆ ಗಾಬರಿ ಬೇಡ. ಮುಂದಿನ ಚುನಾವಣೆಗೆ ಅವರು ರೆಡಿಯಾಗಿ ಬರಬೇಕು. ವೈದ್ಯರ ಸಲಹೆಯಂತೆ ಆಸ್ಪತ್ರೆಗೆ ಸೇರಿಸಿದ್ದೇವೆ, ಅಷ್ಟೆ. ಇನ್ನೊಂದು ವಾರ ಅಷ್ಟೆ, ಗುಣಮುಖರಾಗಿ ಮನೆಗೆ ಬರುತ್ತಾರೆ. ಅಲ್ಲಿ ಅವರಿಗೆ ವಿಶ್ರಾಂತಿ ಬೇಕಿದೆ. ಆಸ್ಪತ್ರೆ ಬಳಿ ಯಾರೂ ಹೋಗಬೇಡಿ ಎಂದು ಮನವಿ ಮಾಡಿದ್ದಾರೆ ಹೆಚ್.ಡಿ.ಕುಮಾರಸ್ವಾಮಿ.
ಹಾಸನ ಟಿಕೆಟ್ ಕಥೆ ಏನು? ಈ ವಿಷಯ ದೇವೇಗೌಡರು ಆಸ್ಪತ್ರೆಯಿಂದ ವಾಪಸ್ ಆದ ಮೇಲೆ ನಿರ್ಧಾರವಾಗಲಿದೆ. ದೇವೇಗೌಡರೇ ಈ ಕುರಿತು ನಿರ್ಧಾರ ತೆಗೆದುಕೊಳ್ಳಲಿದ್ದಾರೆ.



