ಕಿಚ್ಚ ಸುದೀಪ್ ಅವರ ರಾಜಕೀಯ ಹೆಜ್ಜೆ ಎಲ್ಲೆಡೆ ಚರ್ಚೆಯಾಗುತ್ತಿದೆ. ಎಲ್ಲೆಡೆ ಕೇವಲ ಟೀಕೆಗಳನ್ನೇ ನೋಡುತ್ತಿದ್ದಾರೆ. ತೋರಿಸುತ್ತಿದ್ದಾರೆ. ಆದರೆ ಕೇವಲ ನಷ್ಟವೇನಾ..? ಲಾಭ ಏನೂ ಇಲ್ಲವಾ..? ರಾಜಕೀಯದಲ್ಲಿ ಲಾಭವೇ ಆಗದ ನಿಲುವನ್ನು ಬಿಜೆಪಿಯಾದರೂ ಏಕೆ ತೆಗೆದುಕೊಳ್ಳುತ್ತೆ..? ಇಂಪ್ಯಾಕ್ಟ್ ಕೂಡಾ ಮಾಡದ ನಾಯಕನನ್ನು ದೊಡ್ಡ ಮಟ್ಟದಲ್ಲಿ ಕರೆತರುವುದಕ್ಕೆ ಬಿಜೆಪಿಯವರಿಗೇನು ತಲೆಕೆಟ್ಟಿದೆಯಾ..? ಹೀಗೆ ಪ್ರಶ್ನೆಗಳು ಮೂಡಬಹುದು. ಸುದೀಪ್ ಕೇವಲ ಕಲಾವಿದರಲ್ಲ, ನಿರ್ದೇಶಕರೂ ಹೌದು, ನಿರ್ಮಾಪಕರೂ ಹೌದು. ಉದ್ಯಮಿ, ಸಮಾಜಸೇವಕ, ಒಳ್ಳೆಯ ಬರಹಗಾರ ಎಲ್ಲವೂ ಆಗಿರುವ ಸುದೀಪ್, ದಡ್ಡರೇನಲ್ಲ. ಇಷ್ಟೆಲ್ಲ ಮಾಡುವ ವ್ಯಕ್ತಿ ದಡ್ಡನಾಗಿರಲು ಸಾಧ್ಯವೂ ಇಲ್ಲ. ಹೀಗಿರುವಾಗ ಸುದೀಪ್ ಅವರು ಏಕಾಏಕಿ ಬಿಜೆಪಿಗೆ ಬೆಂಬಲ ಘೋಷಿಸಿ ತಪ್ಪು ಮಾಡಿದರಾ..? ಹಾಗೆ ನೋಡಿದರೆ ರಾಜ್ಯದಲ್ಲೀಗ ಹಲವು ತಜ್ಞರ ಪ್ರಕಾರ ಕಾಂಗ್ರೆಸ್ ಅಲೆ ಇದೆ. ಅವರು ಕಾಂಗ್ರೆಸ್ ತಜ್ಞರೋ.. ನಿರ್ಲಿಪ್ತ ತಜ್ಞರೋ.. ಎನ್ನುವುದು ಬೇರೆಯ ಪ್ರಶ್ನೆ. ಹೀಗಿರುವಾ ಸುದೀಪ್ ನಡೆ ಸರೀನಾ..? ತಪ್ಪಾ..?
ಸುದೀಪ್ ಬಂದರೆ ಬಿಜೆಪಿಗೂ ಇದೆ ಲಾಭ :
ಸುದೀಪ್ ವಾಲ್ಮೀಕಿ ಸಮುದಾಯಕ್ಕೆ ಸೇರಿದವರು. ಹಾಗೆ ನೋಡಿದರೆ ವಾಲ್ಮೀಕಿ ಸಮುದಾಯ ದೊಡ್ಡ ಮಟ್ಟದಲ್ಲಿ ಬಿಜೆಪಿ ಜೊತೆಯಲ್ಲಿದೆ. ಇತ್ತೀಚೆಗೆ ಮೀಸಲಾತಿಯಲ್ಲಿ ಎಸ್ಸಿ, ಎಸ್ಟಿಯವರಿಗೆ ದೊಡ್ಡ ಪ್ರಮಾಣದಲ್ಲಿ ಮೀಸಲಾತಿಯೂ ಸಿಕ್ಕಿದೆ. ವಾಲ್ಮೀಕಿ ಸಮುದಾಯದವರಿಗೆ ಶ್ರೀರಾಮುಲು ದೊಡ್ಡ ನಾಯಕ. ಜಾರಕಿಹೊಳಿ ಕುಟುಂಬದವರು ಪೈಪೋಟಿ ನಡೆಸುತ್ತಿದ್ದರಾದರೂ, ಶ್ರೀರಾಮುಲು ಜೊತೆ ನಿಂತಿರುವ ಪ್ರಮಾಣ ಹೆಚ್ಚು. ಲಿಂಗಾಯತರಿಗೆ ಯಡಿಯೂರಪ್ಪ, ಒಕ್ಕಲಿಗರಿಗೆ ದೇವೇಗೌಡ, ಕುರುಬರಿಗೆ ಸಿದ್ದರಾಮಯ್ಯ, ಮುಸ್ಲಿಮರಿಗೆ ಜಮೀರ್ ಅಹ್ಮದ್ ಹೇಗೋ.. ವಾಲ್ಮೀಕಿ ಜನಾಂಗದವರಿಗೆ ಶ್ರೀರಾಮುಲು ಹಾಗೆ. ಇಂತಹ ಸಮಯದಲ್ಲಿ ಸುದೀಪ್ ಎಂಬ ಸ್ಟಾರ್ ನಟ, ವಾಲ್ಮೀಕಿ ಸಮುದಾಯದವರ ಐಕಾನ್ ಬಿಜೆಪಿಗೆ ಬಂದರೆ ಲಾಭವೇ ಹೊರತು, ನಷ್ಟವಿಲ್ಲ.
ಎಷ್ಟು ಕ್ಷೇತ್ರಗಳಲ್ಲಿ ಬಿಜೆಪಿಗೆ ಪ್ರಾಫಿಟ್..?
ರಾಜ್ಯದ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ವಾಲ್ಮೀಕಿ ಸಮುದಾಯದವರಿದ್ದಾರೆ. ಪ್ರಬಲವಾಗಿದ್ದಾರೆ. ಯುವ ಮತದಾರರನ್ನು ಸೆಳೆಯುವಲ್ಲಿ ಸುದೀಪ್ ಅವರು ಪ್ರಮುಖ ಪಾತ್ರ ವಹಿಸಲಿದ್ದಾರೆ. ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ರಾಯಚೂರು, ಬೆಳಗಾವಿ, ಬಿಜಾಪುರ ಭಾಗಗಳಲ್ಲಿ ಕಾಂಗ್ರೆಸ್ ಮತ ಬುಟ್ಟಿಗೆ ಸುದೀಪ್ ಕೈ ಹಾಕುವ ಸಾಧ್ಯತೆ ದಟ್ಟವಾಗಿದೆ. ಇತ್ತ ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲೂ ವಾಲ್ಮೀಕಿ ಸಮುದಾಯದವರ ಸಂಖ್ಯೆ ದೊಡ್ಡದಾಗಿಯೇ ಇದೆ. ಇಡೀ ರಾಜ್ಯದಲ್ಲಿ ವಾಲ್ಮೀಕಿ ಸಮುದಾಯದವರಿದ್ದಾರೆ. ಆದರೆ 10 ಜಿಲ್ಲೆಯ ಕೆಲವು ಕ್ಷೇತ್ರ ಬಿಟ್ಟರೆ, ಬೇರೆ ಕಡೆ ಗೆಲುವು-ಸೋಲನ್ನು ನಿರ್ಧಾರ ಮಾಡುವ ಮಟ್ಟದ ಸಂಖ್ಯೆಯಲ್ಲಿ ಇಲ್ಲ. ಅಷ್ಟೇ ಅಲ್ಲ, ಸುದೀಪ್ ಅವರು ಬಂದರೆ ಎಸ್ಸಿ, ಎಸ್ಟಿ ಸಮುದಾಯದವರಿಗೆ ಮೀಸಲಾತಿ ವಿಷಯದ ಲಾಭವನ್ನು ಜನರಿಗೆ ಸುಲಭವಾಗಿ ತಲುಪಿಸಬಹುದು ಎಂಬ ಲೆಕ್ಕಾಚಾರವೂ ಇದೆ. ಈ ಎಲ್ಲ ಲೆಕ್ಕಾಚಾರಗಳೂ ವರ್ಕೌಟ್ ಆದರೆ ಸುದೀಪ್ ಅವರ ಆಗಮನದಿಂದ ಬಿಜೆಪಿಗೇ ಲಾಭ. ಇಲ್ಲದೆ ಹೋಗಿದ್ದರೆ ಸುದೀಪ್ ಅವರ ವಿಷಯದಲ್ಲಿ ವಿರೋದ ಪಕ್ಷಗಳ ಐಟಿ ಸೆಲ್ಲುಗಳು ಹಾಗೆ ಮುರಕೊಂಡು ಬೀಳುವ ಅಗತ್ಯವಾದರೂ ಏನಿತ್ತು..?



