ಹಾಸನದಲ್ಲಿ ಡಿಕೆ ಶಿವಕುಮಾರ್ ಮತ್ತು ಡಿಕೆ ಸುರೇಶ್ ಅವರ ವಾಗ್ದಾಳಿಗೆ ತಿರುಗೇಟು ಕೊಟ್ಟಿದ್ದಾರೆ ಹೆಚ್.ಡಿ.ರೇವಣ್ಣ. ಹಾಸನದ ಪ್ರಜಾಧ್ವನಿಯಲ್ಲಿ ಮಾತನಾಡುತ್ತಿದ್ದಾಗ ಡಿಕೆ ಸುರೇಶ್ ಎಷ್ಟೇ ಹಣ, ಅಧಿಕಾರ, ಅಂತಸ್ತಿದ್ದರೂ ಕೊನೆಗೆ ಹೋಗುವುದು ಆರಡಿ ಮೂರಡಿಗೆ ಎಂದು ಹೆಚ್.ಡಿ.ರೇವಣ್ಣ ವಿರುದ್ಧ ಕಿಡಿಕಾರಿದ್ದರು. ಅಲ್ಲಿಯೇ ನಮಗೆ ನೆಮ್ಮದಿಯ ನಿದ್ರೆ ದೊರಕುವುದು ಎಂದಿದ್ದರು ಡಿಕೆ ಬ್ರದರ್ಸ್. ಇದಕ್ಕೆ ತಿರುಗೇಟು ಕೊಟ್ಟಿರುವ ರೇವಣ್ಣ ನನಗೆ ಯೋಚನೆಗಳಿಲ್ಲ. ಮಲಗಿದ ಕೂಡಲೇ ನಿದ್ದೆ ಬರುತ್ತದೆ. ಕಾರಿನಲ್ಲೂ ನಿದ್ರೆ ಮಾಡುತ್ತೇನೆ. ಅವರು ದಪ್ಪ ಇದ್ದಾರೆ ಅವರಿಗೆ ಇನ್ನೊಂದು ಮೂರಡಿ ಜಾಸ್ತಿಯೇ ಇರಲಿ ಎಂದು ಉತ್ತರ ಕೊಟ್ಟಿದ್ದಾರೆ. ಆ ಮೂಲಕ ಡಿಕೆ ಸೋದರರಿಗೆ ಎದುರಾಗಿರುವ ಎಲ್ಲ ಕಾನೂನು ಕಂಟಕಗಳನ್ನೂ ನೆನಪಿಸಿದ್ದಾರೆ. ನಮಗೆ ಆರಡಿ ಬೇಡ, ಇನ್ನೂ ಒಂದು ಅಡಿ ಕಡಿಮೆಯೇ ಇರಲಿ. ಅವರಿಗೆ ಮೂರಡಿ ಜಾಸ್ತಿ ಕೊಡಲಿ ಎಂದು ತಿರುಗೇಟು ಕೊಟ್ಟಿದ್ದಾರೆ.
ಕುಮಾರಣ್ಣ ಧೃತರಾಷ್ಟ್ರರನ್ನು ಜೊತೆಯಲ್ಲಿಟ್ಟುಕೊಂಡರು : ಹೆಚ್.ಡಿ.ರೇವಣ್ಣ
ಕುಮಾರಸ್ವಾಮಿ ಧೃತರಾಷ್ಟ್ರರಂತೆ ಕುಳಿತಿದ್ದೇ ಸರ್ಕಾರ ಬೀಳೋದಕ್ಕೆ ಕಾರಣ ಎಂದಿದ್ದರು ಡಿಕೆ ಬ್ರದರ್ಸ್. ಇದಕ್ಕೂ ತಿರುಗೇಟು ಕೊಟ್ಟಿರುವ ರೇವಣ್ಣ ಕುಮಾರಣ್ಣ ಒಳ್ಳೆಯವರು. ಅವರು ತಮ್ಮ ಅಕ್ಕಪಕ್ಕದಲ್ಲಿ ರಾಮ-ಆಂಜನೇಯರಂತಹವರನ್ನು ಜೊತೆಯಲ್ಲಿಟ್ಟುಕೊಳ್ಳಬೇಕಿತ್ತು. ಆದರೆ ಧೃತರಾಷ್ಟ್ರನನ್ನು ಇಟ್ಟುಕೊಂಡರು. ಆ ಧೃತರಾಷ್ಟ್ರ ಯಾರು ಅನ್ನೋದು ಕುಮಾರಣ್ಣನಿಗೆ ಗೊತ್ತಿದೆ. ಅವರೇ ಹೇಳಬೇಕು ಎಂದಿದ್ದಾರೆ.
ಇದೇ ವೇಳೆ ಶಾಸಕರಾದ ಎ.ಟಿ.ರಾಮಸ್ವಾಮಿ ಮತ್ತು ಕೆ.ಎಂ.ಶಿವಲಿಂಗೇಗೌಡ ಇಬ್ಬರೂ ಕಳೆದೆರಡು ವರ್ಷಗಳಿಂದಲೂ ಕಾಂಗ್ರೆಸ್ ಪಕ್ಷದ ಮನೆ ಬಾಗಿಲು ತಟ್ಟುತ್ತಿರುವುದು ಇಡೀ ರಾಜ್ಯಕ್ಕೆ ತಿಳಿದಿರುವ ವಿಚಾರ. ಹಾಸನ ಕ್ಷೇತ್ರದಲ್ಲಿ ಟಿಕೆಟ್ಗಾಗಿ ಈವರೆಗೂ ಯಾವುದೇ ಶಕ್ತಿ ಪ್ರದರ್ಶನ ಮಾಡಿಲ್ಲ. ಹಾಸನ ಜಿಲ್ಲೆಯಲ್ಲೇ ನಾನು ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಕುರಿತು ಯಾವುದೇ ಪ್ರಸ್ತಾವನೆ ಇಲ್ಲ. ಹಾಸನ ಜಿಲ್ಲೆಯ ಎಲ್ಲಾ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಯನ್ನು ಜೆಡಿಎಸ್ ವರಿಷ್ಠರಾದ, ದೇವೇಗೌಡ ಹಾಗೂ ಕುಮಾರಸ್ವಾಮಿ ಅವರೇ ಜಿಲ್ಲೆಗೆ ಆಗಮಿಸಿ ಕಾರ್ಯಕರ್ತರ ಸಭೆ ಕರೆದು ತೀರ್ಮಾನ ಕೈಗೊಳ್ಳಲಿದ್ದಾರೆ. ಟಿಕೆಟ್ ಹಂಚಿಕೆ ವಿಚಾರವಾಗಿ ನಾನು ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೊಡೆದಾಡಿಕೊಳ್ಳುತ್ತಾರೆ ಎಂದು ಭಾವಿಸಿಕೊಂಡಿದ್ದರೆ ಅದು ಎರಡೂ ರಾಷ್ಟ್ರೀಯ ಪಕ್ಷಗಳ ಭ್ರಮೆ ಎಂದಿದ್ದಾರೆ.



