ರಮ್ಯಾ ಅಲಿಯಾಸ್ ದಿವ್ಯಸ್ಪಂದನ. ಉಪಚುನಾವಣೆಯಲ್ಲಿ ಸಂಸದೆಯಾಗಿ ಗೆದ್ದು, ನಂತರ ಸೋತು ಹೋಗಿದ್ದ ರಮ್ಯಾ, ಮಂಡ್ಯವನ್ನು ಅಕ್ಷರಶಃ ಮರೆತುಬಿಟ್ಟಿದ್ದರು. ಮಂಡ್ಯದಲ್ಲಿ ಮನೆ ಮಾಡುತ್ತೇನೆ ಎಂದಿದ್ದ ರಮ್ಯಾ, ಇದ್ದ ಬಾಡಿಗೆ ಮನೆಯನ್ನೂ ಹೇಳದೆ ಕೇಳದೆ ಖಾಲಿ ಮಾಡಿದ್ದರು. ನಂತರ ಹೆಚ್ಚೂ ಕಡಿಮೆ ದೆಹಲಿಗೆ ಶಿಫ್ಟ್ ಆದವರು, ರಾಷ್ಟ್ರೀಯ ಕಾಂಗ್ರೆಸ್ಸಿನ ಪ್ರಮುಖ ಹುದ್ದೆಯನ್ನೂ ಅಲಂಕರಿಸಿದ್ದರು. ಆನಂತರ ಇದ್ದಕ್ಕಿದ್ದಂತೆ ಕಾಂಗ್ರೆಸ್ಸಿನಿಂದಲೂ ಡಿ-ಆಕ್ಟಿವೇಟ್ ಆದ ರಮ್ಯಾ, ಸೋಷಿಯಲ್ ಮೀಡಿಯಾದಿಂದಲೂ ನಾಪತ್ತೆಯಾಗಿದ್ದರು. ಅದಾದ ಬಳಿಕ ಕಳೆದೊಂದು ವರ್ಷದಿಂದ ಕರ್ನಾಟಕದಲ್ಲಿ ಸಿನಿಮಾ ಮತ್ತು ರಾಜಕೀಯದಲ್ಲಿ ಆಕ್ಟಿವ್ ಆಗಿದ್ದಾರೆ. ಹೌದು, ರಮ್ಯಾ ಮತ್ತೆ ಪೊಲಿಟಿಕಲಿ ಆಕ್ಟಿವ್ ಆಗಿದ್ದಾರೆ. ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯಲ್ಲಿ ಒಂದು ದಿನ ಕಾಣಿಸಿಕೊಂಡಿದ್ದಷ್ಟೇ.. ಆನಂತರ ರಮ್ಯಾ ಮತ್ತೆ ಪೊಲಿಟಿಕಲ್ ಲೈಫ್‍ನ್ನು ಕೂಡಾ ಮತ್ತೊಮ್ಮೆ ಸೋಷಿಯಲ್ ಮೀಡಿಯಾಗಷ್ಟೇ ಸೀಮಿತಗೊಳಿಸಿದ್ದರು. ಇದೀಗ ಅಖಾಡಕ್ಕೆ ಇಳಿದಿದ್ದಾರೆ. ಮಂಡ್ಯದಲ್ಲಿ ಪ್ರಿಯಾಂಕಾ ಗಾಂಧಿ ಜೊತೆ ವೇದಿಕೆ ಹಂಚಿಕೊಂಡಿದ್ದಾರೆ.
ನಂತರ ರಮ್ಯಾ ಅವರಿಗೆ ಎದುರಾದ ಪ್ರಶ್ನೆಗಳೇ ಬೇರೆ..
ಮದುವೆ ಯಾವಾಗ..? ಹುಡುಗ ಯಾರು..?
ಗೌಡ್ರು ಹುಡ್ಗನ್ನ ಹುಡುಕ್ತಾ ಇದ್ದೀನಿ. ನೀವೇ ಗಂಡು ಹುಡುಕಿ. ಸ್ವಯಂವರನಾದ್ರೂ ಮಾಡಿ. ನನಗೂ ನೋಡಿ ನೋಡಿ ಸಾಕಾಗಿ ಹೋಯ್ತು. ಗೌಡ್ರು ಹುಡುಗ ಸಿಗ್ತಾರಾ ಅಂದ್ರೆ ನೋಡಿ..
ಮತ್ತೆ ಸಿನಿಮಾದಲ್ಲಿ ಬ್ಯುಸಿ ಆಗಿದ್ದೀರ..
ಎಷ್ಟು ದಿನ ಸುಮ್ಮನೆ ಇರೋದು. ನಾವೂ ದುಡಿಯಬೇಕು ಅಲ್ವಾ.. ಏನಾದ್ರೂ ಮಾಡಬೇಕಲ್ಲ.. ಪ್ರೊಡಕ್ಷನ್ ಮಾಡ್ತಿದ್ದೀನಿ. ಜೊತೆಗೆ ಉತ್ತರಕಾಂಡ ಸಿನಿಮಾದಲ್ಲಿ ನಟಿಸ್ತಾ ಇದ್ದೀನಿ.
ಮಂಡ್ಯಕ್ಕೆ ಬರಲೇ ಇಲ್ಲ..
ಹಾಗೇನಿಲ್ಲ. ಬರುತ್ತಲೇ ಇರುತ್ತೇನೆ. ಇತ್ತೀಚೆಗೆ ನಿಮಿಷಾಂಬ ದೇವಿಯ ದರ್ಶನಕ್ಕೂ ಬಂದಿದ್ದೆ. ಕ್ಯಾಮೆರಾಗೆ ಸಿಗಲಿಲ್ಲ. ಆಗಾಗ್ಗೆ ಬರುತ್ತಲೇ ಇದ್ದೇನೆ.
ಇಲ್ಲೇ ಮನೆ ಮಾಡುತ್ತೇನೆ ಎಂದಿದ್ದೀರಲ್ಲ..? ಏನಾಯ್ತು..? ಮರೆತು ಬಿಟ್ಟಿರಾ..?
ಹಾಗೇನಿಲ್ಲ. ಮಂಡ್ಯದಲ್ಲೇ ನಮ್ಮ ತಾತನದ್ದು ಒಂದು ತೊಟ್ಟಿಮನೆ ಮಂಡ್ಯದಲ್ಲೇ ಇದೆ. ತಾಯಿಯ ಊರೂ ಮಂಡ್ಯನೇ. ನನಗೂ ಒಂದು ಮನೆ ಮಾಡುವ ಆಸೆ ಇದೆ. ನಾನು ಮಂಡ್ಯದವಳು. ನಾನು ಗೌಡ್ತಿ. ಗೌಡ್ತಿ ಅನ್ನೋದನ್ನ ಯಾರೂ ಕಿತ್ತುಕೊಳ್ಳೋಕೆ ಸಾಧ್ಯ ಇಲ್ಲ.
ಚುನಾವಣೆಗೆ ನಿಲ್ತೀರಾ?
ಸ್ಟಾರ್ ಕ್ಯಾಂಪೇನರ್ ಆಗಿ ಬಂದಿದ್ದೇನೆ. ಪ್ರಚಾರ ಮಾಡುತ್ತೇನೆ. ಚುನಾವಣೆಗೆ ನಿಲ್ಲುವ ಯಾವುದೇ ನಿರ್ಧಾರ ಸದ್ಯಕ್ಕೆ ಮಾಡಿಲ್ಲ. ಮುಂದಿನ ದಿನಗಳಲ್ಲಿ ನೋಡೋಣ.
ಅಂಬರೀಷ್ ಅಂತ್ಯ ಸಂಸ್ಕಾರಕ್ಕೂ ಬರಲಿಲ್ಲ. ಏಕೆ?
ಅಂಬರೀಷ್ ತೀರಿಕೊಂಡಾಗ ನನಗೆ ಟ್ಯೂಮರ್ ಬಂದಿತ್ತು. ಸರ್ಜರಿಯಾಗಿತ್ತು. ಹಾಗಾಗಿ ಬರಲಿಲ್ಲ. ನನಗೆ ಎಲ್ಲವನ್ನೂ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳೋ ಅಭ್ಯಾಸ ಇಲ್ಲ. ಆದರೆ ಸರ್ಜರಿ ವಿಚಾರವನ್ನು ಬರೆದುಕೊಂಡಿದ್ದೆ. ಸರ್ಜರಿ ಆದ ಮೇಲೆ ಆಟೋಇಮ್ಯೂನ್ ಕಂಡಿಷನ್ ಇತ್ತು. ಅವನ್ನೆಲ್ಲ ಬರೆದುಕೊಂಡು ಸಿಂಪಥಿ ಗಿಟ್ಟಿಸುವ ಸ್ವಭಾವ ನನ್ನದಲ್ಲ.



