2018ರ ಚುನಾವಣೆಯನ್ನೊಮ್ಮೆ ನೆನಪು ಮಾಡಿಕೊಳ್ಳಿ. ಸಿದ್ದರಾಮಯ್ಯ, ಪರಮೇಶ್ವರ್ ಅವರಷ್ಟೇ ಅಲ್ಲ, ಖುದ್ದು ರಾಹುಲ್ ಗಾಂಧಿಯೂ ಕೂಡಾ ಜೆಡಿಎಸ್, ಬಿಜೆಪಿಯ ಬಿ ಟೀಂ ಎಂದು ವೇದಿಕೆಯ ಮೇಲೆ ಘೋಷಣೆ ಕೂಗಿದ್ದರು. ರಿಸಲ್ಟ್ ಬಂದ ಮೇಲೆ ಎಲ್ಲ ಉಲ್ಟಾ ಪಲ್ಟಾ. ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಜೆಡಿಎಸ್ ಬಿಜೆಪಿಯ ಬಿ ಟೀಂ ಎಂಬ ಆರೋಪಕ್ಕೆ ಉತ್ತರ ಕೊಡದೆ ನುಣುಚಿಕೊಂಡಿದ್ದ ಕಾಂಗ್ರೆಸ್ ನಾಯಕರು, ಈಗ ಮತ್ತೊಮ್ಮೆ ಅದೇ ಮಾತು ಆಡುತ್ತಿದ್ದಾರೆ.
ಆರಂಭದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿವೆ ಎಂದು ಸಿದ್ದರಾಮಯ್ಯ ಹೇಳಿದಾಗ ಅದನ್ನು ಅಯ್ಯೋ ಬಿಡ್ರಿ.. ಸಿದ್ರಾಮಣ್ಣಂದು ಇದೇ ಆಗಿ ಹೋಯ್ತು.. ಕೊನೇಗ್ ಹೋಗಿ ಅವರ ಕಾಲೇ ಹಿಡೀತಾರೆ ಎಂದು ಟೀಕಿಸಿದ್ದವರೂ ಕೂಡಾ ಇದ್ದರೂ ಇರಬಹುದೇನೋ ಎಂದು ಅಂದುಕೊಳ್ಳೋಕೆ ಕಾರಣ ಸಿಪಿ ಯೋಗೀಶ್ವರ್.


ಈಗ….ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ನಮ್ಮ ವಿರುದ್ಧ ಒಳ ಒಪ್ಪಂದದ ಆರೋಪಗಳನ್ನು ಮಾಡುತ್ತಿದ್ದು, ಬಹುಮತ ಪಡೆಯುವ ಭರವಸೆ ಇಲ್ಲದ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಕಾರಣ ಆತಂಕ ಶುರುವಾಗಿದೆ. ಕಾಂಗ್ರೆಸ್-ಬಿಜೆಪಿ ಒಟ್ಟಾಗಿ ಜೆಡಿಎಸ್ ವಿರುದ್ಧ ಷಡ್ಯಂತ್ರ ರೂಪಿಸಿ ಎ ಟೀಮ್, ಬಿ ಟೀಮ್ನಂತೆ ಕೆಲಸ ಮಾಡುತ್ತಿವೆ. ಎರಡೂ ಪಕ್ಷಗಳಿಗೆ ನಾಚಿಕೆಯಾಗಬೇಕು. ಇನ್ನಾದರೂ ಎರಡು ಪಕ್ಷಗಳು ಒಳ ಒಪ್ಪಂದ ಆರೋಪವನ್ನು ನಿಲ್ಲಿಸಬೇಕು. ಜೆಡಿಎಸ್ ಪಕ್ಷವನ್ನು ಟೀಕೆ ಮಾಡುವುದೇ ನಿತ್ಯ ಕಾಯಕವಾಗಿದೆ. ಬಿಜೆಪಿ-ಕಾಂಗ್ರೆಸ್ಗೆ ಭೀತಿ ಎಷ್ಟಿದೆ ಎನ್ನುವುದಕ್ಕೆ ಇದೇ ಸಾಕ್ಷಿ ಎಂದು ಕಿಡಿಕಾರಿದ್ದಾರೆ ಸ್ವತಃ ಕುಮಾರಸ್ವಾಮಿ.


ಇದೀಗ ಬಿಡುಗಡೆಯಾಗಿರುವ ಎಬಿಪಿ-ಸಿ ವೋಟರ್ ಸಮೀಕ್ಷೆಯನ್ನೂ ಲೇವಡಿ ಮಾಡಿದ್ದಾರೆ. 2018ರಲ್ಲಿ ಸಿವೋಟರ್, ಕಾಂಗ್ರೆಸ್ 120 ಸ್ಥಾನ ಗೆಲ್ಲಲಿದೆ ಎಂದು ಹೇಳಿತ್ತು. ಆದರೆ ಆಗಿದ್ದೇನು ಎನ್ನುವುದು ಕುಮಾರಸ್ವಾಮಿ ಪ್ರಶ್ನೆ. (ವಾಸ್ತವವಾಗಿ 2018ರಲ್ಲಿ ಸಿ ವೋಟರ್ ಕಾಂಗ್ರೆಸ್ ನಂ.1 ಪಕ್ಷವಾಗಲಿದೆ ಎಂದು ಹೇಳಿತ್ತು. 104 ಸೀಟು ಗೆಲ್ಲಲಿದೆ ಎಂದಿತ್ತು. ಬಹುಮತ ಕೊಟ್ಟಿರಲಿಲ್ಲ. ಆದರೆ, ಆ ಸಮೀಕ್ಷೆಯೂ ಸುಳ್ಳಾಗಿ, ಬಿಜೆಪಿ 104 ಸೀಟು ಗೆದ್ದಿದ್ದು ಸತ್ಯ) ಯಾಕ್ ಬೇಕಪ್ಪಾ ಸಾವಾಸ ಎಂಬ ರೀತಿಯಲ್ಲಿ ಈ ವಿಷಯಕ್ಕೆ ಪ್ರತಿಕ್ರಿಯೆಯನ್ನೇ ನೀಡದೆ ಮೌನವಾಗಿರೋದು ಬಿಜೆಪಿ.



