ಬಿಜೆಪಿಗೆ ಬೆಂಬಲ ಘೋಷಿಸಿರುವ ಸುಮಲತಾ ಅಂಬರೀಷ್ ಬಿಜೆಪಿಗೆ ಮಾತ್ರ ಅಧಿಕೃತವಾಗಿ ಸೇರುತ್ತಿಲ್ಲ. ಪಕ್ಷೇತರರಾಗಿ ಗೆದ್ದಿರುವ ಸುಮಲತಾ ಅವರು ವಿಭಿನ್ನವಾದ ಹೆಜ್ಜೆಯನ್ನೇ ಇಟ್ಟಿದ್ದಾರೆ. ಮೋದಿಗೆ ಬೆಂಬಲ ನೀಡುತ್ತೇನೆ. ಅವರು ಇಡಿ ದೇಶವನ್ನು ತಲೆಯೆತ್ತಿ ನೋಡುವಂತೆ ಮಾಡಿದ್ದಾರೆ. ಮಂಡ್ಯ ಜನರಿಗೆ ಬದಲಾವಣೆ ಬೇಕಿದೆ. ಅಭಿವೃದ್ಧಿಯಾಗಬೇಕಿದೆ ಎಂದು ಹೇಳಿರುವ ಸುಮಲತಾ ಅಂಬರೀಷ್ ಬಿಜೆಪಿಗೆ ಅಧಿಕೃತವಾಗಿ ಸೇರದಿದ್ದರೂ, ಬಿಜೆಪಿ ಪರ ನಿಲ್ಲುವ ಘೋಷಣೆ ಮೊಳಗಿಸಿದ್ದಾರೆ. ಅಷ್ಟೇ ಏಕೆ, ಮೋದಿ, ಅಮಿತ್ ಶಾ ಹೇಳಿದರೆ ವಿಧಾನಸಭೆ ಚುನಾವಣೆಗೂ ಸಿದ್ಧ ಎಂದಿದ್ದಾರೆ ಸುಮಲತಾ. ಮೋದಿ, ಅಮಿತ್ ಶಾ ಹೇಳಿದರೆ ವಿಧಾನಸಭೆ ಸ್ಪರ್ಧೆಗೂ ರೆಡಿ ಎಂದಿರೋ ಸುಮಲತಾ ಅಂಬರೀಷ್ ಅವರಿಗೆ ಇರುವ ಅಡ್ಡಿಯಾದರೂ ಏನು? ತಾಂತ್ರಿಕ ತೊಂದರೆ ಎಂದರೆ ಏನದು? ಟೆಕ್ನಿಕಲ್ ಪ್ರಾಬ್ಲಂಗೆ ಒಂದು ಪಕ್ಷದ ಸದಸ್ಯರಿಗೆ ಮಾತ್ರವೇ ಆಲ್ಲವಾ? ಹೀಗೆ ಹಲವು ಪ್ರಶ್ನೆಗಳು ಏಳುತ್ತವೆ.
ಬಿಜೆಪಿಯವರು ನನಗೆ ಚುನಾವಣೆಯಲ್ಲಿ ಬಾಹ್ಯ ಬೆಂಬಲ ಘೋಷಿಸಿದ್ದರು. ಬಹಿರಂಗವಾಗಿ ಮೋದಿಯವರೇ ಬೆಂಬಲ ನೀಡಿದ್ದರು. ಈಗ ನಾನೂ ಕೂಡಾ ಬಾಹ್ಯ ಬೆಂಬಲ ನೀಡುತ್ತಿದ್ದೇನೆ. ಪಕ್ಷ ಸೇರ್ಪಡೆಗೆ ಒಂದು ತಾಂತ್ರಿಕ ಸಮಸ್ಯೆ ಇದೆ. ಹೀಗಾಗಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿಲ್ಲ ಎಂದಿದ್ದಾರೆ ಸುಮಲತಾ.
ಸುಮಲತಾ ಅಂಬರೀಷ್ ಬಿಜೆಪಿ ಸೇರ್ಪಡೆಗೆ ಇರುವ ತಾಂತ್ರಿಕ ತೊಂದರೆ..
ಪಕ್ಷೇತರರು ಯಾವುದೇ ಪಕ್ಷವನ್ನಾದರೂ ಸೇರಬಹುದು. ಗೆದ್ದ ನಂತರ ತಮಗೆ ಇಷ್ಟಬಂದ ರಾಜಕೀಯ ಪಕ್ಷದ ಸದಸ್ಯರಾಗಬಹುದು. ಆ ಪಕ್ಷದ ನೀತಿ ನಿಯಮಾವಳಿಗಳನ್ನು ಒಪ್ಪಿಕೊಳ್ಳಬಹುದು. ಒಮ್ಮೆ ಒಂದು ಪಕ್ಷದ ಸದಸ್ಯರಾದರೆ ಆ ನಂತರ ಅವರು ಸ್ವತಂತ್ರರಾಗಿರುವುದಿಲ್ಲ. ಆ ಪಕ್ಷದ ವಿಪ್ ಸೇರಿದಂತೆ ಹಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಆದರೆ ಅಧಿಕೃತವಾಗಿ ಸೇರ್ಪಡೆಯಾಗಿಲ್ಲದವರಿಗೆ ಯಾವ ಪಕ್ಷಾಂತರ ನಿಯಮ ಎನ್ನುವ ಪ್ರಶ್ನೆ ಎದುರಾಗುವುದು ಸಹಜ.


ಹಾಗಾದರೆ ಬಿಜೆಪಿಗೆ ಬಾಹ್ಯ ಬೆಂಬಲ ನೀಡುವುದು, ಬಿಜೆಪಿ ಪರ ಪ್ರಚಾರ ಮಾಡುವುದು ಪಕ್ಷಾಂತರ ನಿಷೇಧ ಕಾಯ್ದೆ ವ್ಯಾಪ್ತಿಗೆ ಬರುವುದಿಲ್ಲವಾ ಎಂದರೆ ಇಲ್ಲ ಎನ್ನಬಹುದಷ್ಟೇ. ಹಾಗೆ ನೋಡಿದರೆ ಈಗ ಕಾಂಗ್ರೆಸ್‍ನಲ್ಲಿರುವ ಶಿವಲಿಂಗೇಗೌಡ, ಶ್ರೀನಿವಾಸ ಗೌಡ, ಎಟಿ ರಾಮಸ್ವಾಮಿ, ಗುಬ್ಬಿ ಶ್ರೀನಿವಾಸ್ ಈಗಲೂ ಅಧಿಕೃತವಾಗಿ ಜೆಡಿಎಸ್ ಶಾಸಕರೇ. ವಿಧಾನಸಭೆ ಅವಧಿ ಮುಗಿಯುವವರೆಗೆ ಅವರು ತಾಂತ್ರಿಕವಾಗಿ ಜೆಡಿಎಸ್ ಶಾಸಕರು. ಇತ್ತೀಚೆಗೆ ವಿಧಾನಪರಿಷತ್ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿರುವ ಪುಟ್ಟಣ್ಣಯ್ಯ ರಾಜೀನಾಮೆ ನೀಡಿದ್ದೂ ಅದೇ ಕಾರಣಕ್ಕೆ. ಬಿಜೆಪಿ ಸ್ಥಾನಮಾನದಲ್ಲಿದ್ದುಕೊಂಡು ಬೇರೊಂದು ಪಕ್ಷದ ಟಿಕೆಟ್ ಪಡೆದರೆ ಶಾಸಕ ಸ್ಥಾನಕ್ಕೇ ಸಂಚಕಾರ. ಕಾನೂನಿನ ಬಗ್ಗೆ ತಿಳುವಳಿಕೆ ಇರುವ ಕಾರಣಕ್ಕೇ ಸುಮಲತಾ ಅಂಬರೀಷ್ ಅಧಿಕೃತವಾಗಿ ಬಿಜೆಪಿ ಸೇರಿಲ್ಲ.


ಯಾರ ಹತ್ತಿರವಾದರೂ ಹೋಗಿ ನಾನು, ಅಭಿಷೇಕ್ ಅಂಬರೀಶ್ ಭವಿಷ್ಯಕ್ಕೆ ಏನು ಮಾಡಿಕೊಡುತ್ತೀರಾ ಅನ್ನೋ ಮಾತುಗಳನ್ನು ಆಡಿದ್ದರೆ, ನಾನು ಅಂಬರೀಶ್ ಪತ್ನಿಯಾಗಿ ಇರುವುದಕ್ಕೆ ಲಾಯಕ್ಕೇ ಅಲ್ಲ. ಇದು ತಾಯಿ ಚಾಮುಂಡಿ ಮೇಲೆ ಆಣೆ ಒಂದೊಮ್ಮೆ ನಾನು ಕೇಳಿದ್ದೇ ಆದರೆ ಆ ತಾಯಿಯೇ ಉತ್ತರ ಕೊಡುತ್ತಾಳೆ. ಟಿಕೆಟ್ ಕೊಡಿ ಎಂದು ಯಾರನ್ನೂ ಕೇಳಿಲ್ಲ. ಕೇಳಲ್ಲ.
ಅಭಿಷೇಕ್ ಒಪ್ಪುವುದಾದರೆ ಮಂಡ್ಯ ಅಥವಾ ಮದ್ದೂರಿನಿಂದ ಟಿಕೆಟ್ ನೀಡುವುದಾಗಿ ಸ್ವತಃ ಅಭಿಷೇಕ್ಗೂ ಆಫರ್ ನೀಡಲಾಗಿತ್ತು, ಆದರೆ ಅವನು, ನನ್ನ ತಾಯಿ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಒಂದೊಮ್ಮೆ ನಾನು ರಾಜಕೀಯ ಪ್ರವೇಶಿಸಬೇಕೆಂದರೆ ಯಾವುದಾದರೂ ಪಕ್ಷದಲ್ಲಿ ಮೊದಲು ಕಾರ್ಯಕರ್ತನಾಗಿ ಕೆಲಸ ಮಾಡಿ ಆ ನಂತರ ಚುನಾವಣೆ ಬಗ್ಗೆ ಯೋಚಿಸುತ್ತೇನೆ ಎಂದು ಉತ್ತರ ನೀಡಿದ್ದಾನೆ ಎಂದು ಹೇಳಿಕೆ ನೀಡಿದ್ದಾರೆ ಸುಮಲತಾ.
ಚುನಾವಣೆಗೆ ನಿಲ್ಲುವಂತೆ ಎರಡು ಪಕ್ಷಗಳಿಂದ ಅಭಿಷೇಕ್ ಗೆ ಆಹ್ವಾನ ಬಂದಿದ್ದು ನಿಜ. ಅಭಿಷೇಕ್ ಸದ್ಯದಲ್ಲೇ ಮದುವೆ ಆಗಲಿದ್ದಾರೆ. ಅಲ್ಲದೇ, ಸಿನಿಮಾ ರಂಗದಲ್ಲಿ ಸಾಕಷ್ಟು ಅವಕಾಶಗಳಿವೆ. ನಾನು ರಾಜಕಾರಣದಲ್ಲಿ ಇರುವಾಗ, ಅವನು ರಾಜಕೀಯ ಕ್ಷೇತ್ರಕ್ಕೆ ಬರುವುದಿಲ್ಲ ಮತ್ತು ಚುನಾವಣೆಯನ್ನು ಎದುರಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಅಭಿಷೇಕ್ ಅಂಬರೀಷ್ ಮತ್ತು ಅವಿವಾ ಬಿದ್ದಪ್ಪ ನಡುವೆ ನಿಶ್ಚಿತಾರ್ಥವಾಗಿದ್ದು, ಶೀಘ್ರದಲ್ಲೇ ಇಬ್ಬರೂ ಹಸೆಮಣೆ ಏರಲಿದ್ದಾರೆ.



