ದೇವೇಗೌಡರ ಮಾನಸಪುತ್ರನೇ ಆಗಿದ್ದ ವೈಎಸ್`ವಿ ದತ್ತಾ, ಕಡೂರಿನಿಂದ ಗೆದ್ದು ವಿಧಾನಸಭೆ ಪ್ರವೇಶಿಸಿದ್ದವರು. ಆದರೆ ಕಳೆದ ಬಾರಿ ಸೋತಿದ್ದರು. ಕುಮಾರಸ್ವಾಮಿ ಪ್ರಕಾರ ನಮ್ಮ ಮನೆಯಲ್ಲಿ ದೇವೇಗೌಡರು ಮಕ್ಕಳಿಗಿಂತಲೂ ಹೆಚ್ಚು ದತ್ತಾ ಅವರನ್ನೇ ನೆಚ್ಚಿಕೊಂಡಿದ್ದರು. ಹೀಗಿದ್ದ ದತ್ತಾ ಎಲೆಕ್ಷನ್ನಿಗೆ ವರ್ಷಕ್ಕೂ ಮೊದಲೇ ಸಿದ್ದರಾಮಯ್ಯ ಜೊತೆ ಗುರುತಿಸಿಕೊಂಡಿದ್ದರು. ಅಷ್ಟೇ ಅಲ್ಲ, ಕುಮಾರಸ್ವಾಮಿ ವಿರುದ್ಧ ಕೆಂಡಕಾರುವುದಕ್ಕೆ ಶುರು ಮಾಡಿದ್ದರು. ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿದಾಗಲೂ ಅಷ್ಟೆ, ಕುಮಾರಸ್ವಾಮಿಯವರ ವಿರುದ್ಧ ಹರಿಹಾಯ್ದಿದ್ದರು. ದತ್ತಾ ಈ ಬಾರಿ ಕಾಂಗ್ರೆಸ್ ಟಿಕೆಟ್`ನಿಂದ ಸ್ಪರ್ಧೆ ಮಾಡಲಿದ್ದಾರೆ ಎಂದೇ ಎಲ್ಲರೂ ನಂಬಿದ್ದರು. ಆದರೆ, ಆಗಿದ್ದೇ ಬೇರೆ. ಸಿದ್ದರಾಮಯ್ಯ ಬೆಂಬಲ ಇದ್ದರೂ ಟಿಕೆಟ್ ಸಿಗಲಿಲ್ಲ.
ಇದು ದತ್ತಾ ಬೇಸರಕ್ಕೆ ಕಾರಣವಾಗಿದೆ. ದತ್ತಾ ಅವರು ಇತ್ತೀಚೆಗಷ್ಟೇ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದರು. ಟಿಕೆಟ್ಗೆ ಪ್ರಬಲ ಆಕಾಂಕ್ಷಿಯೂ ಆಗಿದ್ದರು. ಜೆಡಿಎಸ್ನಲ್ಲಿದ್ದಾಗ ಕಡೂರು ಕ್ಷೇತ್ರದ ಟಿಕೆಟ್ ದತ್ತಾಗೆ ಖಚಿತವಾಗಿತ್ತು. ಆದರೆ ಇದೀಗ ಜೆಡಿಎಸ್ ಟಿಕೆಟ್ ಘೋಷಣೆಯಾಗಿದ್ದು ಅತ್ತ ಅಲ್ಲೂ ಇಲ್ಲ ಇಲ್ಲೂ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಕಡೂರು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಕೈತಪ್ಪಿದ್ದಕ್ಕೆ ಭಾವುಕರಾದ ದತ್ತಾ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಬೇರೆಯವರಿಗೆ ಕಡೂರು ಟಿಕೆಟ್ ಕೊಟ್ಟಿರುವುದಕ್ಕೆ ಆಕ್ಷೇಪಣೆ ಇಲ್ಲ. ಟಿಕೆಟ್ ಪಡೆದ ವ್ಯಕ್ತಿಯ ಬಗ್ಗೆ ಯಾವುದೇ ಅಸೂಯೆಯೂ ಇಲ್ಲ. ಅವರ ಮೇಲೆ ಅಕ್ರೋಶವಿಲ್ಲ, ಟಿಕೆಟ್ ಸಿಕ್ಕಿರುವವರಿಗೆ ಒಳ್ಳೆಯದಾಗಲಿ ಎಂದು ಅವರು ಹೇಳಿದ್ದಾರೆ.


ಕಡೂರು ತಾಲೂಕಿನ ಯಗಟಿ ಗ್ರಾಮದಲ್ಲಿರುವ ದತ್ತಾ ಮನೆಗೆ ತೆರಳಿ ಅವರ ಮನವೊಲಿಸಲು ಆನಂದ್ ಮುಂದಾಗಿದ್ದರು. ಆದರೆ, ತನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲವೆಂದು ದತ್ತಾ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಭಾನುವಾರ ಬೆಳಗ್ಗೆ ತಮ್ಮ ಹಿತೈಷಿಗಳ, ಬೆಂಬಲಿಗರ ಸಭೆ ಕರೆದಿದ್ದು ಆನಂತರ ತೀರ್ಮಾನ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.
ಇದಕ್ಕೆ ಕಟುವಾಗಿ ಟೀಕಿಸಿರುವ ಕುಮಾರಸ್ವಾಮಿ, ದತ್ತಾ ಯಾರೋ ನನಗೆ ಗೊತ್ತಿಲ್ಲ. ಅವರನ್ನು ನಾವು ತುಂಬಾ ನಂಬಿದ್ದೆವು. ಈಗ ನಮ್ಮನ್ನೇ ಬೈದುಕೊಂಡು ತಿರುಗುತ್ತಿದ್ದಾರೆ. ನನ್ನ ತಂದೆಯವರು, ಅಣ್ಣ, ಎಲ್ಲರೂ ಅವರನ್ನು ನಂಬಿದ್ದರು. ಆ ನಂಬಿಕೆಗೇ ದ್ರೋಹ ಬಗೆದರು ಎಂದಿದ್ದಾರೆ ಕುಮಾರಸ್ವಾಮಿ. ಅತ್ತ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ನಮ್ಮ ಪಕ್ಷದಲ್ಲಿ ಅವರು ಕೊಡುವ ಸ್ಥಾನದಲ್ಲಿದ್ದರು. ಈಗ ಅವರು ಬೇಡುವ ಸ್ಥಾನಕ್ಕೆ ಹೋಗಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.



