2019ರಲ್ಲಿನ ಮಾನಹಾನಿ ಪ್ರಕರಣದಲ್ಲಿ ರಾಹುಲ್ ಗಾಂಧಿ ಅವರು ತಪ್ಪಿತಸ್ಥ ಎಂದು ಗುರುವಾರ ತೀರ್ಪು ನೀಡಿದ್ದ ಸೂರತ್ ನ್ಯಾಯಾಲಯ, ಎರಡು ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಜನಪ್ರತಿನಿಧಿ ಕಾಯ್ದೆ ಅನ್ವಯ ಎರಡು ವರ್ಷ ಶಿಕ್ಷೆಗೆ ಗುರಿಯಾದ ಕಾರಣಕ್ಕೆ ರಾಹುಲ್ ಗಾಂಧಿ ಅವರು ಲೋಕಸಭೆ ಸದಸ್ಯತ್ವ ಕಳೆದುಕೊಂಡಿದ್ದಾರೆ. ಅಧಿಕೃತ ಅಧಿಸೂಚನೆಯೂ ಹೊರಬಂದಿರುವ ಕಾರಣ ಬೇರೆ ಆಯ್ಕೆ ಇಲ್ಲ. ಸದ್ಯಕ್ಕೆ ರಾಹುಲ್ ಗಾಂಧಿ ಮಾಜಿ ಸಂಸದ.
ಕೇರಳದ ವಯನಾಡು ಸಂಸದೀಯ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಲೋಕಸಭೆ ಸದಸ್ಯ ರಾಹುಲ್ ಗಾಂಧಿ ಅವರನ್ನು, ಅವರ ಶಿಕ್ಷೆಯ ದಿನಾಂಕವಾದ ಮಾರ್ಚ್ 23, 2023ರಿಂದ ಲೋಕಸಭೆ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿದೆ. ಜನಪ್ರತಿನಿಧಿ ಕಾಯ್ದೆ 1951ರ ಸೆಕ್ಷನ್ 8ರಲ್ಲಿನ ಭಾರತೀಯ ಸಂವಿಧಾನದ 102 (1)(e) ವಿಧಿಯ ನಿಯಮಗಳ ಅಡಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಲೋಕಸಭೆ ಸಚಿವಾಲಯ ಅಧಿಸೂಚನೆಯಲ್ಲಿ ತಿಳಿಸಿದೆ.


ಮೋದಿಯನ್ನು ಬೈದ ಕಾರಣಕ್ಕಲ್ಲ.. ರಾಹುಲ್ ಗಾಂಧಿಗೆ ಶಿಕ್ಷೆ ಏಕಾಯ್ತು?
ಪ್ರಧಾನಿ ನರೇಂದ್ರ ಮೋದಿಯನ್ನು ಟೀಕಿಸಿದ ಕಾರಣಕ್ಕೆ ರಾಹುಲ್ ಗಾಂಧಿ ಅವರಿಗೆ ಶಿಕ್ಷೆ ವಿಧಿಸಲಾಗಿದೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಕಾಂಗ್ರೆಸ್ಸಿಗರು ಆರೋಪಿಸುತ್ತಿದ್ದಾರೆ. ರಾಹುಲ್ ಗಾಂಧಿಗೆ ಎರಡು ವರ್ಷ ಜೈಲು ಶಿಕ್ಷೆಯಾಗಿದ್ದು, ‘ಪ್ರಧಾನಿ ನರೇಂದ್ರ ಮೋದಿ’ಗೆ ಬೈದಿದ್ದಕ್ಕಾಗಿ ಅಲ್ಲ. ಬದಲಿಗೆ ‘ಮೋದಿ’ ಎಂಬ ಅಡ್ಡ ಹೆಸರಿರುವ ಎಲ್ಲರನ್ನೂ ಸೇರಿಸಿ ಬೈದಿದ್ದಕ್ಕಾಗಿ. ಹೀಗಾಗಿ ಮೋದಿ ಎಂಬ ಅಡ್ಡ ಹೆಸರಿರುವ ಬಿಜೆಪಿ ಶಾಸಕ, ವಕೀಲರೂ ಆಗಿರುವ ಪೂರ್ಣೇಶ್ ಮೋದಿ ಎಂಬುವವರು “ತಮ್ಮ ಸಮುದಾಯಕ್ಕೆ ಅವಮಾನವಾಗಿದೆ” ಎಂದು ಕೋರ್ಟಿಗೆ ಹೋಗಿದ್ದರು.ಶಿಕ್ಷೆಯಾಗಿರುವುದು ಕೂಡಾ ಇದೇ ಕಾರಣಕ್ಕೆ. ಮೋದಿ ಸರ್ ನೇಮ್ ಇದ್ದ, ಮೋದಿ ಸರ್ ನೇಮ್ ಹೆಚ್ಚು ಬಳಸುವ ಸಮುದಾಯದವರು ಕೋರ್ಟಿಗೆ ಹೋಗಿದ್ದಕ್ಕೆ.


ಮೇಲ್ಮನವಿ ಸಲ್ಲಿಸಲು ಕೋರ್ಟ್ 30 ದಿನಗಳ ಕಾಲಾವಕಾಶ ನೀಡಿದೆ. ಹೀಗಿದ್ದರೂ ನಿಯಮಗಳ ಅನ್ವಯ ಕೋರ್ಟ್ ತೀರ್ಪು ಹೊರಬಿದ್ದ ಮರುಕ್ಷಣದಿಂದಲೇ ತೀರ್ಪು ಜಾರಿಯಾಗಲಿದೆ. ಮೆಲ್ಮನವಿ ಸಲ್ಲಿಸಲು ಅವಕಾಶ ನೀಡಿರುವ ಕೋರ್ಟ್ ಜಾಮೀನು ನೀಡಿದ್ದರೂ, ತೀರ್ಪು ಜಾರಿಯಲ್ಲಿದೆ. ಹೀಗಾಗಿ ರಾಹುಲ್ ಗಾಂಧಿ ಅನರ್ಹಗೊಂಡಿದ್ದಾರೆ. ಇನ್ನು ರಾಹುಲ್ ಗಾಂಧಿ ಸೂರತ್ ಕೋರ್ಟ್ ತೀರ್ಪು ಪ್ರಶ್ನಿಸಿ ಮೇಲ್ಮನವಿ ಹೋಗಬಹುದು. ಆಗ ಹೈಕೋರ್ಟ್ ತೀರ್ಪಿಗೆ ತಡೆಯಾಜ್ಞೆ ನೀಡಿ, ವಿಚಾರಣೆ ಕೈಗೆತ್ತಿಕೊಂಡರೆ ಆಗ ಸಹಜವಾಗಿಯೇ ಈಗ ಅನರ್ಹರಾಗಿರುವ ರಾಹುಲ್ ಗಾಂಧಿ ಮತ್ತೆ ಲೋಕಸಭಾ ಸದಸ್ಯರಾಗುತ್ತಾರೆ. ಸಾಮಾನ್ಯವಾಗಿ ಇಂತಹ ಪ್ರಕರಣಗಳನ್ನು 3 ತಿಂಗಳ ಒಳಗೆ ಇತ್ಯರ್ಥ ಪಡಿಸಬೇಕು. ಹಾಗೆಂದು ಇದು ಕಡ್ಡಾಯವೆಂದೇನೂ ಅಲ್ಲ. ಹೈಕೋರ್ಟ್ ತಡೆಯಾಜ್ಞೆಯನ್ನೇ ವಿಸ್ತರಿಸಿದರೆ ತೀರ್ಪು ಬರುವವರೆಗೆ ರಾಹುಲ್ ಗಾಂಧಿ ಸಂಸದ ಸದಸ್ಯತ್ವಕ್ಕೇನೂ ಭಂಗ ಬರುವುದಿಲ್ಲ. ವಿಚಾರಣೆಯೂ ನಡೆದು ರಾಹುಲ್ ಗಾಂಧಿಗೆ ಜೈಲು ಶಿಕ್ಷೆಯಾದರೆ ಆಗ ಸುಪ್ರೀಂಕೋರ್ಟ್ಗೆ ಹೋಗಬೇಕಾಗಿ ಬರಬಹುದು. ಜೈಲಿಗೆ ಹೋಗಬೇಕಾಗಿ ಬಂದರೂ ಆಶ್ಚರ್ಯವಿಲ್ಲ.
ಅಜ್ಜಿ, ಅಮ್ಮನ ಹಾದಿಯಲ್ಲಿ ರಾಹುಲ್ ಗಾಂಧಿ..!
ವಿಶೇಷವೆಂದರೆ ಉತ್ತರ ಪ್ರದೇಶದ ಅಲಹಬಾದ್ ಹೈಕೋರ್ಟಿನಲ್ಲಿ ಇಂದಿರಾ ಗಾಂಧಿ ಚುನಾವಣೆ ಅಕ್ರಮ ನಡೆಸಿದ್ದಕ್ಕಾಗಿ ದೋಷಿ ಎನಿಸಿಕೊಂಡಿದ್ದರು. ಕೋರ್ಟ್ ತೀರ್ಪು ಅನೂರ್ಜಿತಗೊಳಿಸಲೆಂದೇ ಎಮರ್ಜೆನ್ಸಿ ಹೇರಿಕೆಯಾಗಿತ್ತು. ಅದು ಭಾರತದ ಕರಾಳ ಇತಿಹಾಸ. ತಾಯಿ ಸೋನಿಯಾ ಗಾಂಧಿ ಯುಪಿಎ ಅಧ್ಯಕ್ಷರಾಗಿದ್ದಾಗ ಲಾಭದಾಯಕ ಹುದ್ದೆ ಹೊಂದಿದ್ದ ಪ್ರಕರಣದಲ್ಲಿ ರಾಜೀನಾಮೆ ನೀಡಿ, ಮತ್ತೆ ಚುನಾವಣೆ ಎದುರಿಸಿ ಗೆದ್ದು ಬಂದಿದ್ದರು. ಈಗ ಗುಜರಾತ್ ಕೋರ್ಟ್ ತೀರ್ಪಿನಿಂದ ರಾಹುಲ್ ಗಾಂಧಿ ದೋಷಿಯಾಗಿ, ಶಿಕ್ಷೆಗೆ ಗುರಿಯಾಗಿ, ಅನರ್ಹಗೊಂಡಿದ್ಧಾರೆ.



