ಧಾರವಾಡ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲಕರ್ಣಿ. ಆದರೆ ಅವರ ಪರ ನಾಮಪತ್ರ ಸಲ್ಲಿಸಿದ್ದು ಪತ್ನಿ ಶಿವಲೀಲಾ ನಾಮಪತ್ರ ಸಲ್ಲಿಸಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ವಿನಯ ಕುಲಕರ್ಣಿ ಪರವಾಗಿ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದ ಅವರ ಪತ್ನಿ ಶಿವಲೀಲಾ ಕುಲಕರ್ಣಿ ಗುರುವಾರ ಇಡೀ ತಮ್ಮ ಬೆಂಬಲಿಗರ, ಕಾರ್ಯಕರ್ತರ ಪಡೆಯೊಂದಿಗೆ ಭರ್ಜರಿಯಾಗಿ ತಮ್ಮ ಜನಶಕ್ತಿ ಪ್ರದರ್ಶನ ತೋರುವ ಮೂಲಕ ಧಾರವಾಡ ಗ್ರಾಮೀಣ ಕ್ಷೇತ್ರಕ್ಕೆ ಮತ್ತೊಮ್ಮೆ ನಾಮಪತ್ರ ಸಲ್ಲಿಸಿದರು. ಮುರುಘಾಮಠದಿಂದ ಅದ್ಧೂರಿಯಾಗಿ ಶುರುವಾದ ಮೆರವಣಿಗೆ ಸಿಬಿಟಿ ಮೂಲಕ ಸಾಗಿ ಕಲಾಭವನ ವೃತ್ತದ ಮೂಲಕ ಉಪ ವಿಭಾಗಾಧಿಕಾರಿ ಕಚೇರಿಗೆ ಬಂದು ಚುನಾವಣಾಧಿಕಾರಿ ಅಶೋಕ ತೇಲಿ ಅವರಿಗೆ ನಾಮಪತ್ರ ಸಲ್ಲಿಸಲಾಯಿತು.
ವಿನಯ ಕುಲಕರ್ಣಿ ಅವರ ಸ್ಪರ್ಧೆಯಿಂದ ಈಗಾಗಲೇ ಧಾರವಾಡ ಗ್ರಾಮೀಣ ಕ್ಷೇತ್ರ ತೀವ್ರ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿದೆ. ವಿನಯ ಅವರ ಮೇಲಿನ ಅಭಿಮಾನಕ್ಕಾಗಿ ಅವರ ನಾಮಪತ್ರ ಸಲ್ಲಿಕೆ ವೇಳೆ ಹತ್ತು ಸಾವಿರಕ್ಕೂ ಹೆಚ್ಚು ಜನ ಆಗಮಿಸಿ ಉಮೇದುವಾರಿಕೆಗೆ ಸಾಕ್ಷಿಯಾದರು. ಪ್ರತಿಯೊಬ್ಬರ ಕೈಯಲ್ಲಿ ವಿನಯ ಅವರ ಚಿಕ್ಕ ಚಿಕ್ಕ ಕಟೌಟ್ಗಳು ರಾರಾಜಿಸುತ್ತಿದ್ದವು. ಪ್ರತಿಯೊಬ್ಬರೂ ವಿನಯ ಅವರ ಮುಖವಾಡ ಧರಿಸಿ ವಿನಯ ಇಲ್ಲದಿದ್ದರೂ ಅವರಂತೆಯೇ ಗೋಚರಿಸಿ ರಾರಯಲಿಯಲ್ಲಿ ಗಮನಸೆಳೆದರು. ಜತೆಗೆ ಅವರ ಭಾವಚಿತ್ರಕ್ಕೆ ಕ್ಷೀರಾಭಿಷೇಕ ಸಹ ಮಾಡಿದರು.
ವಿನಯ್ ಕುಲಕರ್ಣಿ ಸಂಕಟವೇನು?
ಕೆಲ ವರ್ಷಗಳ ಹಿಂದೆ ಬಿಜೆಪಿ ಮುಖಂಡ ಜಿ.ಪಂ.ಸದಸ್ಯನಾಗಿದ್ದ ಯೋಗೀಶ್ ಗೌಡ ಅವರ ಕೊಲೆಯಾಗಿತ್ತು. ಆ ಕೊಲೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಪ್ರಮುಖ ಆರೋಪಿ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಅರೆಸ್ಟ್ ಆಗಿ ಜೈಲಿನಲ್ಲಿದ್ದ ವಿನಯ್ ಕುಲಕರ್ಣಿ ಜಾಮೀನಿನ ಮೇಲೆ ಹೊರಗಿದ್ದಾರೆ. ಈ ಕೊಲೆ ಆರೋಪದ ಕಾರಣಕ್ಕೇ ಅವರು ಧಾರವಾಡಕ್ಕೆ ಬರಲು ಸಾಧ್ಯವಾಗುತ್ತಿಲ್ಲ. ಈ ಕೊಲೆ ಪ್ರಕರಣದ ಪ್ರಮುಖ ಸಾಕ್ಷಿಗಳು ಸುಮಾರು 80 ಜನ ಧಾರವಾಡ ಮತಕ್ಷೇತ್ರದಲ್ಲಿಯೇ ಇದ್ದಾರೆ. ಹೀಗಿರುವಾಗ ವಿನಯ್ ಕುಲಕರ್ಣಿ ಬಂದರೆ ಅವರು ಹೆದರುತ್ತಾರೆ ಎಂದು ಹೇಳಿ ಕೋರ್ಟ್ ಧಾರವಾಡ ಜಿಲ್ಲೆಗೆ ಬರದಂತೆ ನಿರ್ಬಂಧ ಹೇರಿದೆ.
ವಿಶೇಷವೆಂದರೆ ಕೊಲೆಯಾಗಿದ್ದ ಯೋಗೀಶ್ ಗೌಡ ಬಿಜೆಪಿ ಮುಖಂಡ. ಆಗ ವಿನಯ್ ಕುಲಕರ್ಣಿ ವಿರುದ್ಧ ಹೋರಾಟ ಮಾಡಿದ್ದ ಜಗದೀಶ್ ಶೆಟ್ಟರ್, ಈಗ ವಿನಯ್ ಕುಲಕರ್ಣಿ ಪರ ನಾಮಪತ್ರ ಸಲ್ಲಿಸಲು ಬಂದಿದ್ದ ಪತ್ನಿ ಶಿವಲೀಲಾ ಜೊತೆಯಲ್ಲಿದ್ದು, ಬೆಂಬಲ ಸೂಚಿಸಿದರು.



