ಪರ್ವೇಜ್ ಮುಷರಫ್. ಸಾರ್ವಭೌಮ ದೇಶವೊಂದರ ಅಧ್ಯಕ್ಷನಾಗಿದ್ದವನು. ಸೇನಾಧಿಕಾರಿಯಾಗಿದ್ದವನು. ಅಂತಹವನಿಗೆ ಸತ್ತ, ಖದೀಮ ಎಂಬ ಪದಗಳನ್ನು ಬಳಸುವುದು, ಏಕವಚನ ಬಳಸುವದು ಜರ್ನಲಿಸಂ ಅಲ್ಲ ಎನ್ನುವವರೂ ಇರುತ್ತಾರೆ. ಆದರೆ ಅವನ ದುಸ್ಸಾಹಸಕ್ಕೆ ಭಾರತ ಬಲಿಕೊಟ್ಟಿದ್ದು 524 ಯೋಧರನ್ನು. ಹುತಾತ್ಮರಾದ ಆ ಯೋಧರು, ಅವರ ಕುಟುಂಬ ನಮ್ಮದೇ. ಭಾರತೀಯರದ್ದೇ. ಹೀಗಿರುವಾಗ ಆತನನ್ನು ಶಾಂತಿದೂತ ಎಂದು ಕರೆದಿದ್ದಾನೊಬ್ಬ ಕಾಂಗ್ರೆಸ್ ಮುಖಂಡ.


ಕಾಶ್ಮೀರದಲ್ಲಿರುವ ಕಾರ್ಗಿಲ್ ಪ್ರದೇಶದಲ್ಲಿ ಚಳಿಗಾಲದಲ್ಲಿ ಉಷ್ಣಾಂಶ ಮೈನಸ್ 48 ಡಿಗ್ರಿವರೆಗೂ ಕುಸಿಯುತ್ತದೆ. ಈ ಮೈಕೊರೆವ ಚಳಿಯಲ್ಲಿ ಗಡಿ ಕಾಯುವುದು ಭಾರೀ ಸವಾಲಿನ ಕೆಲಸ. ಹೀಗಾಗಿ ಚಳಿಗಾಲದಲ್ಲಿ ಭಾರತೀಯ ಸೈನಿಕರು ಈ ಪ್ರದೇಶದಿಂದ ಸ್ಥಳಾಂತರ ಆಗುತ್ತಿದ್ದರು. ಮತ್ತೆ ಬೇಸಿಗೆ ಆರಂಭವಾದ ಬಳಿಕ ಅಲ್ಲಿಗೆ ತೆರಳುತ್ತಿದ್ದರು. ಆದೆ ಇದನ್ನೇ ದುರ್ಬಳಕೆ ಮಾಡಿಕೊಂಡ ಪಾಕಿಸ್ತಾನ 1999ರ ಫೆಬ್ರವರಿ ತಿಂಗಳ ಚಳಿಗಾಲದಲ್ಲಿ ತನ್ನ 5000 ಯೋಧರನ್ನು ಭಾರತಕ್ಕೆ ರಹಸ್ಯವಾಗಿ ನುಸುಳಿಸಿತು. ಪಾಕ್ ನುಸುಳುಕೋರರು ಗಡಿ ನಿಯಂತ್ರಣ ರೇಖೆ ದಾಟಿ ಕಾರ್ಗಿಲ್ ಪರ್ವತದ ಶಿಬಿರಗಳನ್ನು ತಮ್ಮ ವಶಕ್ಕೆ ಪಡೆದುಕೊಂಡರು. ಭಾರತ-ಪಾಕ್ ನಡುವೆ ಕಾರ್ಗಿಲ್ ಯುದ್ಧ ಆರಂಭವಾಗಲು ಇದು ಕಾರಣವಾಯಿತು. ಪಾಕ್ ಸೇನೆಯ ಕಿತಾಪತಿಗೆ ಕಾರಣಕರ್ತ ಪಾಕ್ನ ಅಂದಿನ ಸೇನಾ ಮುಖ್ಯಸ್ಥ ಜನರಲ್ ಪರ್ವೇಜ್ ಮುಷರ್ರಫ್. ಅಂದು ತಮ್ಮ ದೇಶದ ಪ್ರಧಾನಿ ನವಾಜ್ ಷರೀಫ್ಗೇ ಮಾಹಿತಿ ನೀಡದೇ ಈ ರಹಸ್ಯ ಕಾರ್ಯಾಚರಣೆಯನ್ನು ಜನರಲ್ ಮುಷರ್ರಫ್ ನಡೆಸಿದ್ದ.


ಅಂತಿಮವಾಗಿ 1999ರ ಜುಲೈ 26ರಂದು ಪಾಕಿಸ್ತಾನದ ವಿರುದ್ಧ ಭಾರತ ವಿಜಯ ಸಾಧಿಸಿತು. ಈ ದುಸ್ಸಾಹಸ ಮಾಡಲು ಹೋಗಿ ಜನರಲ್ ಮುಷರ್ರಫ್ ವಿಶ್ವದ ಮುಂದೆ ಮುಖಭಂಗಕ್ಕೆ ಒಳಗಾಗಬೇಕಾಯಿತು. ಈ ಯುದ್ಧದಲ್ಲಿ ಪಾಕಿಸ್ತಾನದ 700 ಯೋಧರು ಸಾವನ್ನಪ್ಪಿದರೆ, ಭಾರತದ 524 ಯೋಧರು ಹುತಾತ್ಮರಾದರು.


1965ರಲ್ಲಿ ಹಾಗೂ 1971ರಲ್ಲಿ ಪಾಕ್-ಭಾರತ ಯುದ್ಧ ನಡೆದಿದ್ದವು. ಆಗ ಯುವಕರಾಗಿದ್ದ ಜನರಲ್ ಮುಷರ್ರಫ್ ಪಾಕ್ ಸೇನೆಯ ಪರ ಭಾರತದ ವಿರುದ್ಧ ಹೋರಾಡಿದ್ದ. ಬಾಂಗ್ಲಾದೇಶ ವಿಮೋಚನಾ ಯುದ್ಧದಲ್ಲಿ ಭಾರತಕ್ಕೆ ಶರಣಾಗಿದ್ದ 90 ಸಾವಿರಕ್ಕೂ ಹೆಚ್ಚು ಪಾಕಿಸ್ತಾನದ ಸೈನಿಕರಲ್ಲಿ ಮುಷರಫ್ ಕೂಡಾ ಒಬ್ಬ. ಕಾರ್ಗಿಲ್ ಅಷ್ಟೇ ಅಲ್ಲ, ಸಂಸತ್ ಮೇಲೆ ದಾಳಿ ನಡೆದಾಗಲೂ ಮುಷರಫ್ ಎಂಬ ಈ ದೂರ್ತನೇ ಪಾಕ್ ಅಧ್ಯಕ್ಷ.


ಶಶಿತರೂರ್ ಕಣ್ಣಿಗೆ ಮುಷರಫ್ ಶಾಂತಿದೂತ : ರಾಜಕೀಯಕ್ಕಾಗಿ ಯಾರನ್ನು ಬೇಕಾದರೂ ಓಲೈಸುವ ರಾಜಕಾರಣಿಗಳು ಮುಷರಫ್‍ನನ್ನೂ ಹಾಡಿ ಹೊಗಳಿದ್ದಾರೆ. 2002-2007ರ ಅವಧಿಯಲ್ಲಿ ವೈರಿಯಾಗಿದ್ದವರು ಆಮೇಲೆ ಶಾಂತಿಯ ಪ್ರಬಲ ನೈಜಶಕ್ತಿಯಾಗಿ ಪರಿವರ್ತಿತವಾಗಿದ್ದರು. ನಾನು ವಿಶ್ವಸಂಸ್ಥೆಯಲ್ಲಿದ್ದಾಗ ವರ್ಷಕ್ಕೊಮ್ಮೆಯಾದರೂ ಭೇಟಿಯಾಗುತ್ತಿದೆ. ಅವರು ಚತುರಮತಿ. ಸೂಕ್ಷ್ಮ ಹಾಗೂ ವ್ಯೂಹಾತ್ಮಕ ಚಿಂತನೆಗಳಲ್ಲಿ ಅವರಿಗೆ ಸ್ಪಷ್ಟತೆಯಿತ್ತು. ಎರಡೂ ದೇಶಗಳ ಮಧ್ಯೆ ಶಾಂತಿಸ್ಥಾಪನೆಯಾಗಬೇಕೆಂದು ನಿಜವಾಗಿ ಬಯಸಿದ್ದರು. ಇದು ಶಶಿ ತರೂರ್ ಮಾಡಿರುವ ಟ್ವೀಟ್. ಈಗ ಕಾಂಗ್ರೆಸ್ ಸಂಸದ. ಅವರಷ್ಟೇ ಅಲ್ಲ, ಜಮ್ಮುಕಾಶ್ಮೀರದ ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಕೂಡಾ ಕಾಶ್ಮೀರ ವಿವಾದ ಇತ್ಯರ್ಥಕ್ಕೆ ಪ್ರಾಮಾಣಿಕವಾಗಿ ಪ್ರಯತ್ನ ಪಟ್ಟಿದ್ದರು ಎಂದು ಶ್ಲಾಘಿಸಿದ್ದಾರೆ. ಇಂತಹ ಇನ್ನೂ ಹಲವರು ಚಿಂತಕರು, ಬುದ್ದಿಜೀವಿಗಳ ಹೆಸರಲ್ಲಿ ಆಹಾ.. ಓಹೋ.. ಎಂದು ಪ್ರಶಂಸಿದ್ದಾರೆ.





