ಬೇರೆ ರಾಜಕಾರಣಿಗಳ ಮಕ್ಕಳಿಗೂ ಟಿಕೆಟ್ ಇಲ್ಲ ಎಂದಾದರೆ ನಮ್ಮ ಮಕ್ಕಳಿಗೂ ಬೇಡ. ಪ್ರತಿಯೊಬ್ಬರಿಗೂ ಮಕ್ಕಳ ಮೇಲೆ ಪ್ರೀತಿ ಇರುತ್ತದೆ. ಹಾಗಂತ ನಾನು ಯಾವತ್ತೂ ಮಕ್ಕಳನ್ನು ರಾಜಕಾರಣಕ್ಕೆ ತಂದವನಲ್ಲ. ಬೇರೆ ರಾಜಕಾರಣಿಗಳ ಮಕ್ಕಳಿಗೆ ಟಿಕೆಟ್ ಇಲ್ಲ ಎನ್ನುವುದಾದರೆ ನಮಗೂ ಬೇಡ. ಮಗನಿಗೆ ಅವಕಾಶ ಸಿಗಬೇಕು ಎಂದು ಹಣೆಬರಹ ಇದ್ದರೆ ಟಿಕೆಟ್ ಸಿಗುತ್ತದೆ.
ವಸತಿ ಸಚಿವರೂ ಆಗಿರುವ ವಿ. ಸೋಮಣ್ಣ ಅವರ ಈ ಒಂದು ಮಾತು ಸಂಚಲನವನ್ನೇ ಸೃಷ್ಟಿಸಿದೆ. ಬೇರೆ ರಾಜಕಾರಣಿಗಳ ಮಕ್ಕಳು ಅಧಿಕಾರದಲ್ಲಿ ಇರಬಹುದು. ಆದರೆ, ನಮ್ಮ ಮಕ್ಕಳು ಇರಬಾರದಾ? ನನಗೇನೂ ಪುತ್ರ ವ್ಯಾಮೋಹ ಇಲ್ಲ. ಅವನು ಪಾಪ ಡಾಕ್ಟರ್. ಅವನಿಗೂ ಅವನದೇ ಆದ ಭಾವನೆಗಳು ಇರುತ್ತವೆ. ನಾನು ಟಿಕೆಟ್ ಕೇಳಿಯೇ ಇಲ್ಲ. ನನಗೇನು ನೀತಿ ಮಾಡುತ್ತಾರೆಯೋ ಅದನ್ನೇ ಎಲ್ಲರಿಗೂ ಮಾಡಬೇಕು ಎನ್ನುವುದು ಸೋಮಣ್ಣ ಷರತ್ತು.
ಕಾಂಗ್ರೆಸ್ ಸೇರುತ್ತಿದ್ದೀರಂತೆ ಎನ್ನುವ ಪ್ರಶ್ನೆಗೆ ಎಂದಿನಂತೆ ಸೋಮಣ್ಣ ಇಲ್ಲ ಅಥವಾ ಹೌದು ಎನ್ನುತ್ತಿಲ್ಲ. ನನಗೆ ಅಸಮಾಧಾನ ಇದೆ ಎಂದು ಎಲ್ಲಿಯಾದರೂ ಹೇಳಿದ್ದೇನೆಯೇ? ನನ್ನ ಮಗನಿಗೆ ಟಿಕೆಟ್ ಕೇಳಿದ್ದೇನೆಯೇ? ನಾಲ್ಕು ಗೋಡೆ ಮಧ್ಯೆ ಯಾರಿಗೆ, ಏನು ಹೇಳಬೇಕೋ ಅದನ್ನು ಹೇಳಿದ್ದೇನೆ. ರಾಜಕಾರಣದಲ್ಲಿ ಕವಲುದಾರಿಗಳು ಇರುತ್ತವೆ. ನಾನೇನೂ ಸನ್ಯಾಸಿಯಲ್ಲ. ಚುನಾವಣೆಗೆ ಬಿಜೆಪಿ ಟಿಕೆಟ್ ನೀಡಿದರೆ ನಿಂತುಕೊಳ್ಳುತ್ತೇನೆ. ಇಲ್ಲದಿದ್ದರೆ ಇಲ್ಲ ಎನ್ನುವ ಮೂಲಕ ನಾನು ಹೋದರೆ ಹೋದೇನು ಎಂಬ ಸುಳಿವು ಕೊಟ್ಟಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಾವೆಲ್ಲ ಸ್ನೇಹಿತರು. ನಾವು ಒಟ್ಟಿಗೆ ಕೆಲಸ ಮಾಡಿದ್ದೇವೆ. ಅವರವರ ಕೆಲಸ ಅವರು ಮಾಡುತ್ತಾರೆ. ನನ್ನ ಕೆಲಸ ನಾನು ಮಾಡುತ್ತಿದ್ದೇನೆ. ಬಿಜೆಪಿಯಲ್ಲಿ ಬೇಸರ ಇದೆ ಎಂದು ಹೇಳಿಲ್ಲ. ಕಾಂಗ್ರೆಸ್ ಮುಖಂಡರ ಪ್ರೀತಿಗೆ ಬೇಡ ಎಂದಿದ್ದೇನಾ? ಎಂದಿರುವ ಸೋಮಣ್ಣ ತಾವು ಬೆಂಗಳೂರಿಗೆ ಮಾತ್ರ ಸೀಮಿತ ಅಲ್ಲ ಎನ್ನುತ್ತಿದ್ದಾರೆ.
ನನ್ನನ್ನು ಬೆಂಗಳೂರಿಗೆ ಮಾತ್ರ ಯಾಕೆ ಸೀಮಿತ ಮಾಡುತ್ತಿದ್ದೀರಿ? ನನಗೆ ಕೊಟ್ಟ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸಿದ್ದೇನೆ. ಉಪಚುನಾವಣೆ, ತುಮಕೂರು ಲೋಕಸಭೆಯಲ್ಲಿ ಗೆಲ್ಲಿಸಿಕೊಂಡು ಬಂದಿದ್ದೇನೆ. ಮೊದಲು ಕಾಂಗ್ರೆಸ್ನಲ್ಲಿಯೇ ಇದ್ದೆ. ಜನತಾಪಕ್ಷ, ಜನತಾದಳದಲ್ಲಿಯೂ ಕೆಲಸ ಮಾಡಿದ್ದೇನೆ. ನಾಲ್ಕು ಗೋಡೆ ಮಧ್ಯೆ ಯಾರಿಗೆ ಏನು ಹೇಳಬೇಕೋ ಅದನ್ನು ಹೇಳಿದ್ದೇನೆ. ರಾಜಕಾರಣಿಗಳಿಗೆ ಬದ್ಧತೆ ಇರಬೇಕು ಎಂದಿರೋ ಸೋಮಣ್ಣ ಬಾಣ ಬಿಟ್ಟಿರುವುದು ಮಾತ್ರ ವಿಜಯೇಂದ್ರ ಯಡಿಯೂರಪ್ಪ ಅವರಿಗೆ ಎನ್ನಲಾಗುತ್ತಿದೆ.
ಹೈಕಮಾಂಡ್ ಪ್ರಾಬ್ಲಂ ಏನು?
ಆಕ್ಚುಯಲಿ ವಿವಾದದ ಮೂಲವೇ ವಿಜಯೇಂದ್ರ ಅವರ ಬಗ್ಗೆ ಸೋಮಣ್ಣ ಅವರಿಗೆ ಇರುವ ಅಸಮಾಧಾನ. ವಿಜಯೇಂದ್ರ ಅವರಿಗೂ ಅಷ್ಟೆ. ಸೋಮಣ್ಣ ಪ್ರಭಾವಿ ಲಿಂಗಾಯತ ಮುಖಂಡ ಹೌದಾದರೂ ಯಡಿಯೂರಪ್ಪ ಅವರಷ್ಟಲ್ಲ ಎನ್ನುವುದು ಬಿಜೆಪಿ ವರಿಷ್ಠರಿಗೂ ಗೊತ್ತು. ಈಗ ಯಡಿಯೂರಪ್ಪ ಸ್ಪರ್ಧಾ ರಾಜಕೀಯಕ್ಕೆ ಗುಡ್ ಬೈ ಎಂದಿದ್ದಾರೆ. ಶಿಕಾರಿಪುರಕ್ಕೆ ತಮ್ಮ ಮಗನನ್ನೇ ಕ್ಯಾಂಡಿಡೇಟ್ ಆಗಿಯೂ ಘೋಷಿಸಿದ್ದಾರೆ. ಈಗ ಅದನ್ನು ತಪ್ಪಿಸೋಕೆ ಸಾಧ್ಯವಿಲ್ಲ. ತಪ್ಪಿಸಿದರೆ ಬೀಳುವ ಹೊಡೆತದ ಅಂದಾಜು ಹೈಕಮಾಂಡಿಗೂ ಇದೆ. ಹಾಗಂತ ಸೋಮಣ್ಣ ಅವರನ್ನೂ ಬಿಟ್ಟು ಕೊಡೋಕೆ ಆಗಲ್ಲ. ಆದರೆ ಸೋಮಣ್ಣ ಮತ್ತು ಅವರ ಮಗನ ಶಕ್ತಿ ಎಷ್ಟು ಎಂಬುದರ ಅಂದಾಜಿನ ಜೊತೆ ಕ್ಷೇತ್ರದ ಸಮೀಕ್ಷೆಗಳನ್ನು ಆಧರಿಸಿ ಟಿಕೆಟ್ ನೀಡಲು ಬಿಜೆಪಿ ಮುಂದಾಗಿದೆ. ಆದರೆ ಒಂದಂತೂ ಸತ್ಯ. ಬಿಜೆಪಿಯಲ್ಲಿ ಬೀದಿ ಜಗಳಗಳು ಈಗ ಓಪನ್ ಆಗಿ ನಡೆಯುತ್ತಿವೆ. ಇದು ಬಿಜೆಪಿ ಒಳ್ಳೆಯ ಬೆಳವಣಿಗೆ ಅಲ್ಲ.



