ರಾಜ್ಯದ ಕಾಂಗ್ರೆಸ್ ಸರ್ಕಾರ ಗೃಹಲಕ್ಷ್ಮೀ (Gruhalakshmi) ಯೋಜನೆ ಘೋಷಿಸಿದೆ. ಪ್ರತಿ ತಿಂಗಳೂ ಮನೆಯ ಯಜಮಾನಿಯ ಖಾತೆಗೆ 2 ಸಾವಿರ ರೂ, ಕೊಡುವುದಾಗಿ ಘೋಷಿಸಿತ್ತು. ಹಾಗೆ ಘೋಷಿಸಿಯೇ ಅಧಿಕಾರಕ್ಕೆ ಬಂತು. ಆದರೆ ಹರಿಯಾಣ ಬಿಜೆಪಿ ಅವಿವಾಹಿತ ಗಂಡಸರಿಗೆ (Unmarried male) ಪಿಂಚಣಿ ಸ್ಕೀಮ್ ಘೋಷಣೆ ಮಾಡಿದೆ.
ಅವಿವಾಹಿತ ಗಂಡಸರು (Unmarried male) ಹಾಗೂ ವಿದುರರಿಗೆ (ಪತ್ನಿಯನ್ನು ಕಳೆದುಕೊಂಡವರು) ಮಾಸಿಕ ತಲಾ 2750 ರೂ. ನೀಡುವುದಾಗಿ ಘೋಷಿಸಿದೆ (Hariyana BJP) ಹರಿಯಾಣ ಬಿಜೆಪಿ. ಈ ಭತ್ಯೆ ಪಡೆಯುವುದಕ್ಕೆ ಗಂಡಸರಿಗೆ ಮದುವೆಯಾಗಿರಬಾರದು ಅಥವಾ ಮದುವೆಯಾಗಿ ಪತ್ನಿ ನಿಧನವಾಗಿರಬೇಕು. ವಯಸ್ಸು 40 ದಾಟಿರಬೇಕು. 60 ಮೀರಿರಬಾರದು. ವಾರ್ಷಿಕ ವರಮಾನ 3 ಲಕ್ಷದ ಒಳಗೆ ಇರಬೇಕು. ಅಂದಹಾಗೆ ಈ ಯೋಜನೆ ಲಾಭ 60 ವರ್ಷದವರೆಗೆ ಮಾತ್ರ. 60 ವಯಸ್ಸು ದಾಟಿದ ಮೇಲೆ ಹೇಗಿದ್ದರೂ ವೃದ್ದಾಪ್ಯ ವೇತನ ಬರುತ್ತದೆ. ಹೀಗಾಗಿಯೆ ಈ ರೀತಿಯ ಘೋಷಣೆ ಮಾಡಲಾಗಿದೆ.
ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ಅವರು ಅವಿವಾಹಿತರಿಗೂ ಪಿಂಚಣಿ ಸಿಗುವ ಯೋಜನೆಯನ್ನು ಜಾರಿಗೆ ತರುವುದಾಗಿ ಘೋಷಣೆ ಮಾಡಿದ್ದಾರೆ. ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುತ್ತಿದ್ದು, ರಾಜ್ಯ ಸರ್ಕಾರ ಆದಷ್ಟು ಬೇಗ ಪಿಂಚಣಿ ಯೋಜನೆಯನ್ನು ಜಾರಿಗೆ ತರುವುದಾಗಿ ಸಿಎಂ ಸ್ಪಷ್ಟಪಡಿಸಿದ್ದಾರೆ. 2024ಕ್ಕೆ ಹರಿಯಾಣದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಅದಕ್ಕೂ ಮುನ್ನವೇ ಹರಿಯಾಣದ ಅವಿವಾಹಿತರು ಪಿಂಚಣಿ ಯೋಜನೆಯ ಫಲಾನುಭವಿಗಳಾಗುವ ಸಾಧ್ಯತೆ ಇದೆ.



