ನಾನೇ ಹಾಸನದಿಂದ ಸ್ಪರ್ಧೆ ಮಾಡ್ತೀನಿ. ಹಾಸನ ನಮ್ಮ ಕರ್ಮಭೂಮಿ. ಇಲ್ಲೇ ನಿಂತು ನಮ್ಮ ಕುಟುಂಬದ ವಿರುದ್ದ ಯಾರೋ ಸವಾಲು ಹಾಕ್ತಾರೆ ಅಂದ್ರೆ ಏನರ್ಥ. ಇದಕ್ಕೆ ಇತಿಶ್ರೀ ಹಾಕಲೇ ಬೇಕು.
ಪದೇ ಪದೇ ನಮ್ಮ ಕುಟುಂಬವನ್ನು ಕೆಣಕ್ತಾ ಇದ್ರೆ ನೋಡಿಕೊಂಡು ಸುಮ್ಮನಿರಬೇಕಾ.? ಹೀಗಂತ ಹೆಚ್.ಡಿ.ರೇವಣ್ಣ ಕೇಳಿದ್ದಾರಂತೆ. ಅದೂ ಕುಮಾರಸ್ವಾಮಿಯವರ ಬಳಿ.
ಹಾಸನದಲ್ಲಿ ನಾವೇನೂ ಸುಮ್ನೆ ಮತ ಕೇಳ್ತಾ ಇಲ್ಲ. ಅಭಿವೃದ್ಧಿ ಮಾಡಿದೀವಿ, ಕೂಲಿ ಕೊಡಿ ಅಂತಾ ಕೇಳೋಣ. ನಾವೇನೂ ರಾಜಕಾರಣದಲ್ಲಿ ಎಳಸಲ್ಲ. ಮೊದಲ ಬಾರಿ ಶಾಸಕ ನಾಗಿರೋ ಒಬ್ಬ ವ್ಯಕ್ತಿ ಹಾಕೋ ಸವಾಲಿಗೆ ನಾವು ಅಂಜಬೇಕಾ.? ಇದನ್ನು ಸಹಿಸಿಕೊಂಡು ಇರೋಕಾಗಲ್ಲ. ಹೀಗೆ ಹೇಳಿರುವ ರೇವಣ್ಣ ಪ್ರೀತಂ ಗೌಡ ಸವಾಲನ್ನು ಸೀರಿಯಸ್ ಆಗಿಯೇ ತೆಗೆದುಕೊಂಡಿದ್ದಾರಂತೆ. ಅಲ್ಲಿಗೆ ಹಾಸನ ಜಟಾಪಟಿ ಹೊಸ ತಿರುವು ಪಡೆಯುತ್ತಿದೆ.
ಟೀಕೆಗಳಿಗೆ ಅಂಜುತ್ತಾ ಇದ್ರೆ ರಾಜಕಾರಣ ಮಾಡಲು ಆಗಲ್ಲ. ಪ್ರೀತಂ ಗೌಡ ಸವಾಲಿಗೆ ಉತ್ತರ ಕೊಡಲೇ ಬೇಕಿದೆ. ಎಲ್ಲ ಪಕ್ಷಗಳಲ್ಲೂ ಕುಟುಂಬ ರಾಜಕಾರಣ ಇದೆ. ಇಲ್ಲವಾದ್ರೆ ನಾಳೆ ಜಿಲ್ಲೆಯಲ್ಲಿ ರಾಜಕಾರಣ ಮಾಡಲು ಕಷ್ಟ ವಾಗಲಿದೆ. ಸ್ವರೂಪ್ ಗೆ ಬೇಕಾದ್ರೆ ನಾನು ಮನ ಒಲಿಸುತ್ತೇನೆ. ಮುಂದೆ ರಾಜಕಾರಣ ದಲ್ಲಿ ಸ್ವರೂಪ್ ಗೆ ಸ್ಥಾನಮಾನ ಕೊಡೋಣ.. ಹೀಗೆ ರೇವಣ್ಣ ಸ್ವರೂಪ್ ಅವರನ್ನು ಮನವೊಲಿಸುವ ಜವಾಬ್ದಾರಿನ್ನೂ ತೆಗೆದುಕೊಂಡಿರುವ ರೇವಣ್ಣ, ಹಾಸನ ಜೆಡಿಎಸ್ನಲ್ಲಿ ಗಂಡ-ಹೆಂಡತಿ ರಣರೋಚಕ ರಾಜಕೀಯಕ್ಕೆ ರಣರೋಚಕ ತಿರುವು ಕೊಟ್ಟಿದ್ದಾರೆ.
ಹಾಸನದ ಜೆಡಿಎಸ್ ಟಿಕೆಟ್ ಕದನ ಒಂದರ್ಥದಲ್ಲಿ ಬಿಡಿಸಲಾರದ ಒಗಟಾಗಿದ್ದು, ರೇವಣ್ಣ, ಭವಾನಿ, ಸ್ವರೂಪ್.. ಮೂವರಲ್ಲಿ ಯಾರಿಗೆ ಟಿಕೆಟ್.. ಈ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.. ಮೂವರೂ ಈಗ ಕ್ಷೇತ್ರದಲ್ಲಿ ಫುಲ್ ಌಕ್ಟಿವ್ ಆಗಿದ್ದಾರೆ. ಟಿಕೆಟ್ ನಿರೀಕ್ಷೆಯಲ್ಲಿರುವ ಭವಾನಿ, ಗೌಡರ ಹುಟ್ಟೂರು ಹರದನಹಳ್ಳಿಯ ದೇವೇಶ್ವರನಿಗೆ ಪತಿ ರೇವಣ್ಣ ಜೊತೆ ಬಂದು ಭವಾನಿ ಪೂಜೆ ಸಲ್ಲಿಸಿದ್ರೆ.. ದೊಡ್ಡಪುರದ ರಾಮೇಶ್ವರ ದೇಗುಲದಲ್ಲಿ ಭವಾನಿ ಬೆಂಬಲಿಗರು ಪೂಜೆ ಸಲ್ಲಿಸಿದ್ದಾರೆ. ರೇವಣ್ಣ-ಭವಾನಿ ದಂಪತಿ ಮತ್ತು ಭವಾನಿ ಬೆಂಬಲಿಗರ ಪೂಜೆ ಹಿಂದೆ ಟಿಕೆಟ್ ಬೇಡಿಕೆ ಇದೆ ಅನ್ನೋದ್ರಲ್ಲಿ ಆನುಮಾನವಿಲ್ಲ.. ಹಾಗಿದ್ದರೆ ಹಾಸನ ಟಿಕೆಟ್ ಭವಾನಿಗೆ ಫಿಕ್ಸಾ..?
ಈ ಪ್ರಶ್ನೆಗೆ ಸ್ವತಃ ರೇವಣ್ಣ ಬಹಿರಂಗವಾಗಿ ಉತ್ತರ ಕೊಡಲ್ಲ. ಕುಮಾರಣ್ಣ ಏನ್ ಡೈರೆಕ್ಷನ್ ಕೊಡ್ತಾರೋ ಅದರಂತೆ ನಡೀತಿವಿ ಎನ್ನುವುದು ರೇವಣ್ಣ ಓಪನ್ ಸ್ಟೇಟ್ಮೆಂಟ್. ಈ ಬಗ್ಗೆ ಶಿವಮೊಗ್ಗದಲ್ಲಿ ಪ್ರತಿಕ್ರಿಯಿಸಿದ ಎಚ್ಡಿಕೆ ಕೂಡ ಟಿಕೆಟ್ ಗುಟ್ಟು ಬಿಟ್ಟುಕೊಟ್ಟಿಲ್ಲ.. ಪಕ್ಷ ಸಂಘಟನೆಗೆ ಭವಾನಿ ರೇವಣ್ಣ ಕುಟುಂಬ ಕ್ಷೇತ್ರದಲ್ಲಿ ಌಕ್ಟಿವ್ ಆಗಿದೆ ಎಂದಿರೋ ಎಚ್ಡಿಕೆ ಸಸ್ಪೆನ್ಸ್ ಕ್ಲಿಯರ್ ಮಾಡಿಲ್ಲ.
ರೇವಣ್ಣ ಹಾಸನದಲ್ಲಿ.. ಭಾವನಿ ರೇವಣ್ಣ ಹೊಳೆನರಸೀಪುರದಲ್ಲಿ ಸ್ಪರ್ಧಿಸುತ್ತಾರೆ ಅನ್ನೋ ಚರ್ಚೆಯೂ ಇದೆ.. ಇಂಥ ಹಲವು ಸಾಧ್ಯಾಸಾಧ್ಯತೆಗಳ ಚರ್ಚೆ ನಡೆಯುತ್ತಿರುವಾಗಲೇ, ಗೊಂದಲಕ್ಕೆ ತೆರೆ ಎಳೆಯಲು ಕುಮಾರಸ್ವಾಮಿ ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಭಾನುವಾರ ಬೆಂಗಳೂರಿನಲ್ಲಿ ಹಾಸನ ಕ್ಷೇತ್ರದ ಟಿಕೆಟ್ ಹಂಚಿಕೆ ಬಗ್ಗೆ ಅಭಿಪ್ರಾಯ ಸಂಗ್ರಹ ಮಾಡಲು ಹಾಸನ ಕ್ಷೇತ್ರದ ಪ್ರಮುಖ ಕಾರ್ಯಕರ್ತರು,ಮುಖಂಡರ ಸಭೆ ಕರೆದಿದ್ದಾರೆ. ಮಾಜಿ ಜಿಪಂ ಸದಸ್ಯರು, ತಾಪಂ ಮಾಜಿ ಸದಸ್ಯರು, ಗ್ರಾಮಪಂಚಾಯ್ತಿ ವ್ಯಾಪ್ತಿಯ 300ಕ್ಕೂ ಹೆಚ್ಚು ಪ್ರಮುಖರಿಗೆ ಕುಮಾರಸ್ವಾಮಿ ಕಚೇರಿಯಿಂದಲೇ ಫೋನ್ ಹೋಗಿದೆ. ಸಭೆಯಲ್ಲಿ ಅಭ್ಯರ್ಥಿ ಯಾರಾದರೆ ಗೆಲುವು ಸುಲಭವಾಗಲಿದೆ, ಭಿನ್ನಮತ ಮೊಳಗಲಿದೆಯೇ ಎಂಬುದರ ಜೊತೆಯಲ್ಲಿಯೇ ಗೌಪ್ಯ ಸಮೀಕ್ಷೆ ಕೂಡಾ ನಡೆಸಿದ್ದಾರಂತೆ. ಏಪ್ರಿಲ್ 4, ಏಪ್ರಿಲ್ 12, ಏಪ್ರಿಲ್ 18ರ ಶಿವರಾತ್ರಿ ನಂತರ ಮತ್ತೊಮ್ಮೆ ಮುಹೂರ್ತ ಫಿಕ್ಸ್ ಆಗಿದೆ. ಗೊಂದಲ ಬಗೆಹರಿಯುತ್ತಾ?



