ಟಿಪ್ಪು ಸುಲ್ತಾನ್. ಸ್ವಾತಂತ್ರ್ಯ ಹೋರಾಟಗಾರನೋ.. ಫ್ರೆಂಚರು, ಅರಬ್ಬರಿಗೆ ರಾಜ್ಯವನ್ನು ಅಡ ಇಡಲು ಮುಂದಾಗಿದ್ದನೋ.. ಮತಾಂಧನೋ.. ಸರ್ವಧರ್ಮ ಪ್ರೇಮಿಯೋ.. ಕ್ರೂರಿಯೋ.. ಅಭಿವೃದ್ಧಿ ಹರಿಕಾರನೋ.. ಟಿಪ್ಪು ವೀರಮರಣ ಹೊಂದಿದನೋ.. ಒಕ್ಕಲಿಲಗರಾದ ಉರಿಗೌಡ ಹಾಗೂ ನಂಜೇಗೌಡರು ಕೊಂದರೋ.. ಇದು ಕಳೆದ ಕೆಲವು ವರ್ಷಗಳಿಂದ ಚರ್ಚೆಯಾಗುತ್ತಿದೆ. ಕಾಂಗ್ರೆಸ್ಸಿಗರು ನಿಜ ಇತಿಹಾಸ ಮುಚ್ಚಿಟ್ಟರು ಎನ್ನುತ್ತಿರುವ ಬಿಜೆಪಿ ಉರಿಗೌಡ ಮತ್ತು ನಂಜೇಗೌಡರೇ ಟಿಪ್ಪುವನ್ನು ಕೊಂದರು ಎನ್ನುತ್ತಿದೆ. ದಾಖಲೆಗಳಿಗೆ ಎನ್ನುತ್ತಿದೆಯೇ ಹೊರತು ದಾಖಲೆಗಳನ್ನು ತೋರಿಸುತ್ತಿಲ್ಲ. ದಾಖಲೆಗಳು ಇರುವುದೇ ಆದರೆ ತೋರಿಸದೆ ಮುಚ್ಚಿಟ್ಟಿರುವುದಾದರೂ ಏಕೆ? ಈ ಪ್ರಶ್ನೆಗೂ ಉತ್ತರ ಇಲ್ಲ.
ಇತ್ತೀಚೆಗೆ ಬೆಂಗಳೂರು ಮತ್ತು ಮೈಸೂರು ಎಕ್ಸ್ ಪ್ರೆಸ್ ಹೈವೇ ಉದ್ಘಾಟನೆಗೆ ಉರಿಗೌಡ ಮತ್ತು ನಂಜೇಗೌಡ ಎಂಬ ಹೆಸರಿನ ದ್ವಾರ ನಿರ್ಮಾಣ ಮಾಡಲಾಗಿತ್ತು. ವಿರೋಧ ಬಂದ ಹಿನ್ನೆಲೆಯಲ್ಲಿ ರಾತ್ರೋರಾತ್ರಿ ದ್ವಾರದ ಹೆಸರನ್ನೇ ಬದಲಿಸಿ ಬಾಲಗಂಗಾಧರ ನಾಥ ಸ್ವಾಮೀಜಿ ದ್ವಾರ ಎಂದು ಬದಲಿಸಲಾಯಿತು. ಇದಾದ ನಂತರ ಕಾಂಗ್ರೆಸ್ ಮತ್ತು ಜೆಡಿಎಸ್‍ನವರ ಉರಿಗೌಡ ಮತ್ತು ನಂಜೇಗೌಡ ಎಂಬ ವ್ಯಕ್ತಿಗಳೇ ಇರಲಿಲ್ಲ. ಅದು ಬಿಜೆಪಿಯವರೇ ಸೃಷ್ಟಿಸಿದ ಸುಳ್ಳು ಹಾಗೂ ಕಪೋಲಕಲ್ಪಿತ ಇತಿಹಾಸ ಎಂಬ ವಾದಕ್ಕೆ ಪುಷ್ಠಿ ಕೊಟ್ಟಿದೆ. ಕಾಂಗ್ರೆಸ್ಸಿಗರ ಈ ವಾದಕ್ಕೆ ಬುದ್ದಿಜೀವಿಗಳ, ಚಿಂತಕರ ಬೆಂಬಲವೂ ಇದೆ.
ಇತಿಹಾಸ ತಿರುಚಿ ಕಪೋಲಕಲ್ಪಿತ ಪಾತ್ರಗಳನ್ನು ಸೃಷ್ಟಿಸಿ, ಕೋಮುದ್ವೇಷದ ವಿಷಬೀಜ ಬಿತ್ತಿ, ಅದನ್ನು ಹೆಮ್ಮರವಾಗಿ ಬೆಳೆಯಲು ತನು-ಮನ-ಧನವನ್ನೆಲ್ಲ ಅರ್ಪಿಸುವ ಪಕ್ಷವೇ ಬಿಜೆಪಿ. ಈಗ ಒಕ್ಕಲಿಗರ ಹೆಗಲ ಮೇಲೆ ಕೋವಿ ಇಟ್ಟು ಹೊಸ ಸುಳ್ಳಿನಕಥೆ ಸೃಷ್ಟಿ ಮಾಡಿ ಅಸಲಿ ಇತಿಹಾಸವನ್ನು ಕೊಲ್ಲುವ ಹುನ್ನಾರ ನಡೆಸಿದೆ.1/11#ಒಕ್ಕಲಿಗರ_ಮೆಲೆ_ಬಿಜೆಪಿ_ವಕ್ರದೃಷ್ಟಿ
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) March 14, 2023
ದ್ವಾರದ ಹೆಸರು ಬದಲಿಸಬಾರದಿತ್ತು ಎನ್ನುತ್ತಿರುವ ಸಿಟಿ ರವಿ, ಅಶ್ವತ್ಥ್ ನಾರಾಯಣ್ ಕೂಡಾ ಅಷ್ಟೆ, ಕಾಂಗ್ರೆಸ್ಸಿಗರ ವಾದ ಸುಳ್ಳು ಎನ್ನುತ್ತಾರೆಯೇ ನಿಜವಾದ ಇತಿಹಾಸದ ದಾಖಲೆಗಳನ್ನು ತೋರಿಸುವ ಮಾತನ್ನಾಡುತ್ತಿಲ್ಲ. ದಾಖಲೆಗಳಿದ್ದರೆ ತಾನೇ ತೋರಿಸುವುದಕ್ಕೆ ಎನ್ನುವುದು ಬುದ್ದಿಜೀವಿಗಳ ಲೇವಡಿ ಮತ್ತು ಕಾಮಿಡಿ.
ಇದೀಗ ಕುಮಾರಸ್ವಾಮಿ ಟಿಪ್ಪುವನ್ನು ಕೊಂದ ಕಳಂಕವನ್ನು ಒಕ್ಕಲಗರ ತಲೆಗೆ ಕಟ್ಟಬೇಡಿ ಎನ್ನುವ ಮೂಲಕ ಬೇರೆಯದೇ ಹೆಜ್ಜೆ ಇಟ್ಟಿದ್ದಾರೆ. ಒಕ್ಕಲಿಗರ ಹೆಗಲ ಮೇಲೆ ಕೋವಿ ಇಟ್ಟು ಸುಳ್ಳಿನ ಕಥೆ ಸೃಷ್ಟಿಸಿ, ಅಸಲಿ ಇತಿಹಾಸವನ್ನು ಕೊಲ್ಲುವ ಹುನ್ನಾರವನ್ನು ಬಿಜೆಪಿ ನಡೆಸಿದೆ. ಟಿಪ್ಪುವನ್ನು ಕೊಂದವರೆಂದು ಉರಿಗೌಡ, ನಂಜೇಗೌಡ ಹೆಸರು ಸೃಷ್ಟಿ ಮಾಡಲಾಗಿದೆ. ಒಕ್ಕಲಿಗ ಕಾಲ್ಪನಿಕ ಹೆಸರು ಸೃಷ್ಟಿಸಿ ಮಹಾದ್ವಾರಕ್ಕೆ ಇಟ್ಟಿದ್ದು ಅಪಮಾನ, ಅದರಲ್ಲೂ ಸಮಸ್ತ ಒಕ್ಕಲಿಗರ ಕುಲಕ್ಕೆ ಮಾಡಿದ ಘೋರ ಅಪಮಾನ. ಮಹಾದ್ವಾರದಲ್ಲಿ ಇದ್ದ ಬಾಲಗಂಗಾಧರನಾಥಶ್ರೀ ಹೆಸರು ಮುಚ್ಚಿಟ್ಟು. ಆ ಜಾಗದಲ್ಲಿ ಕಾಲ್ಪನಿಕ ಪಾತ್ರಗಳ ಹೆಸರು ಹಾಕಿದ ದುರುದ್ದೇಶವೇನು? ಇದು ಬಾಲಗಂಗಾಧರನಾಥ ಸ್ವಾಮೀಜಿಗೆ ಮಾಡಿದ ಅಪಮಾನ. ದ್ವೇಷದ ನಡೆಯಿಂದ ಒಕ್ಕಲಿಗರ ಮನ ಗೆಲ್ಲಬಹುದೆಂಬ ಭ್ರಮೆಯಲ್ಲಿದೆ. ಇಂತಹ ಲಜ್ಜಗೇಡಿ ನಡೆ ಬಿಜೆಪಿ ಸರ್ಕಾರದ ನೀಚ ರಾಜಕಾರಣಕ್ಕೆ ಸಾಕ್ಷಿ. ಮೋದಿ ಮೆಚ್ಚಿಸಲು ಉರಿಗೌಡ, ನಂಜೇಗೌಡ ಹೆಸರು ಸೃಷ್ಟಿಸಲಾಯ್ತಾ? ಆ ಷಡ್ಯಂತ್ರಕ್ಕೆ ರಾಜ್ಯ ಸರ್ಕಾರದ ಒಪ್ಪಿಗೆಯೂ ಇತ್ತಾ? ಇಲ್ಲವೇ? ಇಂಥ ಹೊಣೆಗೇಡಿ ಕೃತ್ಯದ ಬಗ್ಗೆ ಪ್ರಧಾನಿ ಕಚೇರಿಗೂ ಮಾಹಿತಿ ಇತ್ತಾ? ಸುಳ್ಳಿಗೆ ಆಯಸ್ಸು ಕಡಿಮೆ ಎನ್ನುವ ಮೂಲಕ ತಿರುಗೇಟು ಕೊಟ್ಟಿದ್ದಾರೆ.



