ಜಾತ್ಯತೀತ ಜನತಾ ದಳ, ಜಾತ್ಯತೀತ ಪಕ್ಷವಲ್ಲ. ಅದು ಬಿಜೆಪಿಯ ಬಿ ಟೀಂ. 2018ರ ಚುನಾವಣೆಯಲ್ಲಿ ಈ ಮಾತನ್ನು ಖುದ್ದು ರಾಹುಲ್ ಗಾಂಧಿ ಹೇಳಿದ್ದರು. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಕೂಡಾ ಹೇಳಿದ್ದರು. ಕಾಂಗ್ರೆಸ್ಸಿನ ಹಲವು ನಾಯಕರು ಈ ಮಾತನ್ನು ಹೇಳಿದ್ದರು.


ಈಗ ಈ ಮಾತನ್ನು ಮತ್ತೊಮ್ಮೆ ಚಾಲ್ತಿಗೆ ತಂದಿದ್ದಾರೆ, ಸಿದ್ದರಾಮಯ್ಯ. ಜೆಡಿಎಸ್ ಬಿಜೆಪಿಯ ಬೀ ಟೀಂ ಎನ್ನುವುದು ಅವರ ವಾದ. ಅವರ ಜೊತೆ ಸುರ್ಜೇವಾಲಾ ಕೂಡಾ ಇದೇ ಮಾತು ಹೇಳಿರೋದು ಅಣ್ಣ-ತಮ್ಮ ಇಬ್ಬರನ್ನೂ ಕೆರಳಿಸಿದೆ. ಅಣ್ಣ ರೇವಣ್ಣ ಹಾಗೂ ತಮ್ಮ ಕುಮಾರಸ್ವಾಮಿ ಇಬ್ಬರೂ ರೊಚ್ಚಿಗೆದ್ದಿದ್ದಾರೆ. ಇವುಗಳಿಗೆಲ್ಲ ಜೆಡಿಎಸ್ ಈ ಬಾರಿ ದೊಡ್ಡದಾಗಿಯೇ ಉತ್ತರ ಕೊಟ್ಟಿದೆ. ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಹೆಚ್.ಡಿ.ರೇವಣ್ಣ ಇಬ್ಬರೂ ಉತ್ತರ ಕೊಟ್ಟಿದ್ದಾರೆ.


ಹೆಚ್.ಡಿ.ರೇವಣ್ಣ : ಯಾರು ಯಾರಿಗೆ ಬಿ ಟೀಮು? ಕಾಂಗ್ರೆಸ್ ಪಕ್ಷವೆ ಬಿಜೆಪಿಯ ಬಿ ಟೀಂ. ನಮ್ಮ ಜೊತೆ ಮೈತ್ರಿ ಮಾಡಿಕೊಂಡು ಬಿಜೆಪಿಗೆ ಅನುಕೂಲವಾಗುವಂತೆ ನಡೆದುಕೊಂಡವರು ಇದೇ ಕಾಂಗ್ರೆಸ್. 17 ಶಾಸಕರನ್ನು ಪಕ್ಷ ಬಿಟ್ಟು ಬಿಜೆಪಿಗೆ ಹೋಗಲು ಹೇಳಿದ್ದು ಯಾರು? ಧರ್ಮಸ್ಥಳದಲ್ಲಿ ಕುಳಿತು ಕುಮಾರಸ್ವಾಮಿ ಸರ್ಕಾರದ ವಿರುದ್ಧ ಸಂಚು ಮಾಡಿದ್ದು ಯಾರು? ಮಂಜುನಾಥನ ಮುಂದೆ ಆಣೆ ಮಾಡಿ. ದೇವೇಗೌಡರನ್ನು ತುಮಕೂರಿನಲ್ಲಿ ನಿಲ್ಲಿ ಎಂದು ನಿಲ್ಲಿಸಿ, ಸೋಲಿಸಿದ್ದು ಯಾರು? ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಕಾರಣರಾಗಿದ್ದು ಯಾರು? ಕಾಂಗ್ರೆಸ್ಸಿಗರೇ ಅಲ್ಲವೇ? ಮುನಿಯಪ್ಪ, ಪರಮೇಶ್ವರ್, ಖರ್ಗೆ ಇವರೆನ್ನೆಲ್ಲ ಸೋಲಿಸಿದ್ದು ಯಾರು? ಜೆಡಿಎಸ್ ವಿಸರ್ಜನೆ ಮಾತು ಬಿಟ್ಟು, ಕಾಂಗ್ರೆಸ್`ನ್ನೇ ಬಿಜೆಪಿ ಜೊತೆ ವಿಲೀನ ಮಾಡಿ.


ಹೆಚ್.ಡಿ.ಕುಮಾರಸ್ವಾಮಿ : ಬಿ ಟೀಂ ಭಾಗವತಿಕೆ ಇಲ್ಲಿಗೇ ನಿಲ್ಲಿಸಿದರೆ ಉತ್ತಮ. ಇಲ್ಲವಾದರೆ ಮುಂದಿನ ಪರಿಣಾಮಗಳಿಗೆ ನೀವೇ ಹೊಣೆ. ರಾಜ್ಯದಲ್ಲಿ ಜಾತ್ಯತೀತ ಶಕ್ತಿ ದುರ್ಬಲವಾದರೆ ನೀವೇ ಹೊಣೆ. ಸುರ್ಜೇವಾಲ ಅವರೇ, ಬಿಜೆಪಿಯ ಬಿ ಟೀಂ ಕ್ಯಾಪ್ಟನ್ ಯಾರು ಎನ್ನುವುದು ಗೊತ್ತಿಲ್ಲವೇ? ಗೊತ್ತಿಲ್ಲದಿದ್ದರೆ ನಿಮ್ಮ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಕೇಳಬಾರದಿತ್ತೇ? ಅವರಿಗೆ ಬಿಜೆಪಿ ಬಿ ಟೀಂನ ಕ್ಯಾಪ್ಟನ್ ಯಾರು ಅನ್ನೋದು ಗೊತ್ತು. ನಿಮ್ಮನ್ನೇನೋ ಪ್ರಜ್ಞಾವಂತ ರಾಜಕಾರಣಿ ಎಂದುಕೊಂಡಿದ್ದೆ. ನೀವೂ ಸಿದ್ದಭಾಷಣ ಓದುವವರೇನಾ? ಬೇಕಾದರೆ ನಿಮ್ಮ ಸಿದ್ಧಪುರುಷರ ಜೊತೆ ಬನ್ನಿ. ಚರ್ಚೆ ಮಾಡೋಣ. ಡೇಟು, ಟೈಮ್ ನಾನೇ ಫಿಕ್ಸ್ ಮಾಡ್ಲಾ? ನೀವೇ ಮಾಡ್ತೀರಾ?
ಅಂದಹಾಗೆ ಜೆಡಿಎಸ್ ಬಿಜೆಪಿಯ ಬಿ ಟೀಂ ಎಂಬ ಅರೋಪ ಹೊತ್ತಿರುವುದು ಇದೇ ಮೊದಲ ಬಾರಿ ಅಲ್ಲ. ಆದರೆ ಜೆಡಿಎಸ್ ಕಾಂಗ್ರೆಸ್ ಜೊತೆ ಎರಡು ಬಾರಿ ಹಾಗೂ ಬಿಜೆಪಿ ಜೊತೆ ಒಂದು ಬಾರಿ ಸರ್ಕಾರ ನಡೆಸಿದ ಇತಿಹಾಸವಿದೆ. ಕಳೆದ ಬಾರಿಯೂ ಜೆಡಿಎಸ್`ನ್ನು ಬಿಜೆಪಿಯ ಬಿ ಟೀಂ ಎನ್ನಲಾಗಿತ್ತು. ಆದರೆ ಕಾಂಗ್ರೆಸ್ ಮತ್ತು ಬಿಜೆಪಿಯ ಬಿ ಟೀಂ ಎಂದು ಕರೆಸಿಕೊಂಡಿದ್ದ ಜೆಡಿಎಸ್ ಒಟ್ಟಿಗೇ ಸರ್ಕಾರ ರಚಿಸಿದ್ದವು. ಅದಾದ ಮೇಲೆ ನಡೆದಿದ್ದು ಬೇರೆಯದೇ ಕಥೆ.
ಕಾಂಗ್ರೆಸ್ ಜೆಡಿಎಸ್ ಪಕ್ಷವನ್ನಷ್ಟೇ ಅಲ್ಲ, ಓವೈಸಿಯವರ ಎಐಐಎಂ ಪಕ್ಷವನ್ನು ಕೂಡಾ ಬಿಜೆಪಿಯ ಬಿ ಟೀಂ ಎನ್ನುತ್ತಾರೆ. ಗುಜರಾತಿನಲ್ಲಿ ಆಮ್ ಆದ್ಮಿ ಬಿಜೆಪಿಯ ಬಿ ಟೀಂ ಆಗಿತ್ತಂತೆ. ಅಂದಹಾಗೆ ಎರಡೂ ಪಕ್ಷಗಳ ಜೊತೆ ಸರ್ಕಾರ ರಚಿಸಿದವರ ಪಟ್ಟಿ ಮತ್ತು ಪಕ್ಷಗಳ ಹೆಸರು ಇಡೀ ದೇಶಕ್ಕೆ ಗೊತ್ತು.
ಎರಡೂ ಪಕ್ಷಗಳ ಜೊತೆ ಮಿತ್ರರಾಗಿದ್ದ ಪಕ್ಷಗಳು ಇವು : ತಮಿಳುನಾಡಿನಲ್ಲಿ ಡಿಎಂಕೆ, ಅಣ್ಣಾಡಿಎಂಕೆ, ವೈಕೋ. ಆಂಧ್ರಪ್ರದೇಶದಲ್ಲಿ ತೆಲುಗುದೇಶಂ. ಕರ್ನಾಟದಲ್ಲಿ ಜೆಡಿಎಸ್. ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಮತ್ತಿ ಬಿಎಸ್`ಪಿ. ಬಿಹಾರದಲ್ಲಿ ಜೆಡಿಯು. ಆರ್.ಜೆ.ಡಿ. ಜಮ್ಮುಕಾಶ್ಮೀರದಲ್ಲಿ ಪಿಡಿಪಿ ಮತ್ತು ನ್ಯಾಷನಲ್ ಕಾನ್ಫರೆನ್ಸ್. ಮಹಾರಾಷ್ಟ್ರದಲ್ಲಿ ಶಿವಸೇನೆ.



