ಬಿಜೆಪಿ ಈ ಬಾರಿ ಕಳೆದುಕೊಂಡಿದ್ದು ಕೇವಲ ಸೀಟುಗಳನ್ನಲ್ಲ. ಗೌರವವನ್ನೂ ಕೂಡಾ. ವಿಚಿತ್ರವೆಂದರೆ ಈ ರೀತಿಯಲ್ಲಿ ಸೋಲುತ್ತಿರುವುದು ಬಿಜೆಪಿಗೆ ಹೊಸದೇನೂ ಅಲ್ಲ. ಮೊದಲು ಇಂತಹ ಸಮಸ್ಯೆಗಳಿದ್ದುದು ಕಾಂಗ್ರೆಸ್ಸಿನಲ್ಲಿ. ಆದರೆ ಈ ಬಾರಿ ಡಿಕೆ ಶಿವಕುಮಾರ್-ಸಿದ್ದರಾಮಯ್ಯ ಜೋಡಿ ಮೊದಲು ಪಕ್ಷವನ್ನು ಅಧಿಕಾರಕ್ಕೆ ತರೋಣ, ಮಿಕ್ಕಿದ್ದು ಆಮೇಲೆ ಎಂದು ಹೊರಟರು. ಈಗ ಏನೋ ಒಂದು ಫೈನಲ್ ಆಗಿದೆ. ಅಲ್ಲೂ ಹೋರಾಟವಾಗಿದೆ. ಆದರೆ ನಂಬರ್ ಇದೆ. ಆದರೆ, ಬಿಜೆಪಿಯಲ್ಲಿ..
ಗೆದ್ದಿರೋದು 66 ಸೀಟು. ನೋಡಿ.. ನೋಡಿ.. ನಮ್ಮ ವೋಟ್ ಶೇರ್ ಎಷ್ಟಿತ್ತೋ ಅಷ್ಟೇ ಇದೆ ಎಂದು ಹಲ್ಲುಕಿರಿಯುವ ನಾಯಕರಿಗೇನು ಕೊರತೆ ಇಲ್ಲ. ವಾಸ್ತವ ಇಷ್ಟೆ, ಮಧ್ಯ ಕರ್ನಾಟಕ, ಕಿತ್ತೂರು ಕರ್ನಾಟಕದಲ್ಲಿ ಹೋದ ವೋಟ್ ಶೇರ್, ಹಳೆ ಮೈಸೂರು ಭಾಗದಲ್ಲಿ ಬಂದಿದೆ. ಬಿಜೆಪಿ ಇಲಿ ಗೆಲ್ಲೋಕೆ ಸಾಧ್ಯವಾಗಿಲ್ಲ. ಆದರೆ ಜೆಡಿಎಸ್`ನ್ನು ಸೋಲಿಸಿ ಕಾಂಗ್ರೆಸ್`ನ್ನು ಗೆಲ್ಲಿಸಿದೆ. ವೋಟ್ ಶೇರ್ ಅಷ್ಟೇ ಇರೋದರ ಹಿಂದಿರೋ ನಿಜವಾದ ಕಾರಣ ಇಷ್ಟೆ. ಈಗ ಸೋಮಣ್ಣ ವಿಚಾರಕ್ಕೆ ಬರೋಣ.
ಚಾಮರಾಜಗರ ಮತ್ತು ವರುಣಾ. ಎರಡೂ ಕ್ಷೇತ್ರದಲ್ಲಿ ಸೋಮಣ್ಣ ಸ್ಪರ್ಧೆಗಿಳಿದಾಗ, ಎರಡೂ ಕಡೆ ಸೋಮಣ್ಣ ಸೋಲ್ತಾರೆ ಎಂಬ ಯಾವ ನಿರೀಕ್ಷೆಯೂ ಇರಲಿಲ್ಲ. ಎರಡರಲ್ಲಿ ಒಂದಾದರೂ ಗೆಲ್ತಾರೆ ಎಂದುಕೊಂಡಿದ್ದವರೇ ಹೆಚ್ಚು. ಎರಡೂ ಕಡೆ ಸೋತರು. ಹೀನಾಯವಾಗಿ. ಸೋಲಿಸಿದ್ದು ಯಾರು?
ಸೋಮಣ್ಣ ಅವರಿಗೆ ಯಾರು ಎಂದು ಗೊತ್ತಂತೆ. ಹೆಸರು ಹೇಳಲ್ವಂತೆ. ಅವರ ಸಮುದಾಯದವರೇ ಅಂತೆ. ಅಂದ್ರೆ ಲಿಂಗಾಯತರು ಸೋಲಿಸಿದರು ಎನ್ನುವುದು ಆರೋಪ. ಇಲ್ಲಿ ಯಡಿಯೂರಪ್ಪ ಬಂದು ಪ್ರಚಾರ ಮಾಡಿದ್ದರು. ಸೋಮಣ್ಣ ಅವರನ್ನು ಗೆಲ್ಲಿಸುವ ಹೊಣೆ ನನ್ನದು ಎಂದಿದ್ದರು. ಆದರೂ ಸೋತರು. ಸೋತ ಮೇಲೆ, ಯಡಿಯೂರಪ್ಪ ಫೋನ್ ಮಾಡಿ ಸಮಾಧಾನ ಮಾಡಿಲ್ಲ ಅನ್ನೋ ಸೋಮಣ್ಣ, ನಂಗೆ ಸಮಾಧಾನ ಮಾಡೋದು ಬೇಕಿಲ್ಲ ಅನ್ನುತ್ತಾರಾದರೂ ಒಳಗಿನ ಆಸೆ ಮಿನುಗುತ್ತದೆ.
ಅತ್ತ ಪ್ರಭು ಚೌಹಾಣ್ ಅವರಂತೂ ಕೇಂದ್ರ ಸಚಿವ ಭಗವಂತ್ ಖೂಬಾ ಅವರ ಮೇಲೆ ಮುಗಿ ಬಿದ್ದಿದ್ದಾರೆ. ಬೀದರ್`ನ ಔರಾದ್ ಕ್ಷೇತ್ರದಲ್ಲಿ ಪ್ರಭು ಚೌಹಾಣ್ ಸೋತಿಲ್ಲ. ಗೆದ್ದಿದ್ದಾರೆ. ಆದರೂ ಖೂಬಾ ವಿರುದ್ಧ ಗುಡುಗುತ್ತಿದ್ದಾರೆಂದರೆ ನಿಜಕ್ಕೂ ಸಮಸ್ಯೆ ಆಗಿದೆಯಾ..? ಸಮಸ್ಯೆ ಸರಳವಾಗಿಲ್ಲ. ಅವರು ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲರಿಗೆ ದೂರು ಕೊಡ್ತಾರಂತೆ.
ಇತ್ತ ವಿಜಯಪುರ, ಬಾಗಲಕೋಟೆಯಲ್ಲಿ ಯತ್ನಾಳ್ ಅವರು ಗೆದ್ದರೂ, ಅವರದ್ದೇ ಪಕ್ಷದವರನ್ನು ಸೋಲಿಸಿದ್ದಾರೆ. ಸುಮಾರು ಐವರು ಅಭ್ಯರ್ಥಿಗಳ ಸೋಲಿಗೆ ಯತ್ನಾಳ್ ಕಾರಣ ಎನ್ನುವ ಆರೋಪಗಳಿವೆ.
ಹಾವೇರಿಯಲ್ಲಿ ಗೆದ್ದಿದ್ದು ಸಿಎಂ ಬಸವರಾಜ ಬೊಮ್ಮಾಯಿ ಮಾತ್ರ. ಉಳಿದೆಡೆ ಸೋತಿದ್ದೇಕೆ ಎಂದು ಹುಡುಕಲು ಹೊರಟರೆ, ಸ್ವತಃ ಬೊಮ್ಮಾಯಿ ಮಾಡಿದ ತಂತ್ರಗಳು, ಮಾಡಿದ ಎಡವಟ್ಟುಗಳು, ಬಿದ್ದ ಪ್ರತಿಯೇಟುಗಳ ಕಥೆ ಇನ್ನೊಂದೇ ಇದೆ. ಶ್ರೀರಾಮುಲು, ರೇಣುಕಾಚಾರ್ಯ, ಕರಾವಳಿಯಲ್ಲಿ ಪುತ್ತೂರು, ಕಾರ್ಕಳ, ಶಿರಸಿ, ಕಾರವಾರದಂತಹ ಹಿಂದುತ್ವದ ಕ್ಷೇತ್ರಗಳಲ್ಲಿಯೂ ಬಿಜೆಪಿ ಏದುಸಿರು ಬಿಟ್ಟಿದೆ. ಶಿವಮೊಗ್ಗದಲ್ಲಿಯೂ ಕೂಡಾ ವಿಜಯೇಂದ್ರ ಗೆಲುವನ್ನು ಅಷ್ಟು ಕಡಿಮೆ ಅಂತರದ ಗೆಲುವನ್ನು ನಿರೀಕ್ಷೆ ಮಾಡಿರಲಿಲ್ಲ. ಒಟ್ಟಿನಲ್ಲಿ ಬಿಜೆಪಿಯವರು ಅವರ ಕಾಲು ಇವರು ಎಳೆಯೋಕೆ ಹೋಗಿ, ಇವರ ಕಾಲನ್ನು ಅವರು ಎಳೆಯೋಕೆ ಹೋಗಿ ಹಳ್ಳಕ್ಕಲ್ಲ, ಪ್ರಪಾತಕ್ಕೇ ಬಿದ್ದಿದ್ದಾರೆ. ಕಾಲು ಎಳೆಯುವವರು ಯಾವಾಗಲೂ ಕಾಲ ಕೆಳಗೇ ಇರುತ್ತಾರೆ ಅನ್ನೋದು ಸಿನಿಮಾ ಡೈಲಾಗ್ ಅಷ್ಟೇ ಅಲ್ಲ, ವಾಸ್ತವವೂ ಹೌದು. ಅಂತಹ ತಪ್ಪನ್ನು ಮಾಡಿಕೊಂಡೇ ಕಾಂಗ್ರೆಸ್ ದಾರಿ ತಪ್ಪಿತ್ತು. ಈಗ ಬಿಜೆಪಿ ಅದೇ ಹಾದಿಯಲ್ಲಿ ಸಾಗುತ್ತಿದೆ.



