ಒಂದು ಸೋಲು ಏನನ್ನು ಬೇಕಾದರೂ ಬದಲಿಸಬಲ್ಲದು. ಸೋತಾಗ ಕೆಲವರು ವಿಶ್ವಾಸವನ್ನೇ ಕಳೆದುಕೊಂಡರೆ, ಕೆಲವರು ತಪ್ಪು ಎಲ್ಲಾಗಿದೆ ಎಂದು ಹುಡುಕಿ ತಪ್ಪು ತಿದ್ದಿಕೊಳ್ಳುತ್ತಾರೆ. ಬಿಜೆಪಿ ಮಾಡಿದ್ದೂ ಅದನ್ನೇ. ಕರ್ನಾಟಕದಲ್ಲಿ ಆದ ಸೋಲು, ಅನುಭವಿಸಿದ ಹಿನ್ನಡೆ ಎಲ್ಲವುಗಳಿಂದಲೂ ಪಾಠ ಕಲಿತ ಬಿಜೆಪಿ, ಇದೀಗ ಅಸಾಧ್ಯ ಎನ್ನುವಂತಿದ್ದ ಗೆಲುವನ್ನೂ ಭರ್ಜರಿಯಾಗಿ ಗೆದ್ದು ಬೀಗಿದೆ. ಗುಜರಾತಿನಲ್ಲಿ ಬಿಜೆಪಿ, ಕರ್ನಾಟಕದ ಮಾದರಿಯಲ್ಲೇ ಪ್ರಯೋಗ ಮಾಡಿ ಗೆದ್ದಿತ್ತು. ಆದರೆ ಅದು ಮೋದಿ ಮತ್ತು ಅಮಿತ್ ಶಾ ಇಬ್ಬರಿಗೂ ತವರು ರಾಜ್ಯ. ಅಲ್ಲಿ ಅವರೇ ನಾಯಕರು. ಅದು ಕರ್ನಾಟಕದಲ್ಲಿ ಆಗಲಿಲ್ಲ. ಅಂತಹ ಸ್ಥಿತಿಯಲ್ಲಿ ಕರ್ನಾಟಕದ ಸೋಲು ಬಿಜೆಪಿ ನಾಯಕರಿಗೆ ಪಾಠವನ್ನೂ ಕಲಿಸಿತ್ತು.
ಸಿಎಂ ಬದಲಾವಣೆ ಮಾಡಲಿಲ್ಲ : ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಬದಲಿಸಲಾಗುತ್ತದೆ ಎಂಬ ಸುದ್ದಿ ಜೂನ್ ತಿಂಗಳಲ್ಲಿಯೇ ಹರಿದಾಡಿತ್ತು. ಆಡಳಿತ ವಿರೋಧಿ ಅಲೆ ಇರುವುದರಿಂದ ಹಾಗೂ ಸಾಮಾನ್ಯವಾಗಿ ಜನರ ಅಭಿಪ್ರಾಯವು ಸಿಎಂ ವಿರುದ್ಧ ಉಂಟಾಗಿರುವುದರಿಂದ ಅವರನ್ನು ಬದಲಿಸುವುದು ಸೂಕ್ತ ಎಂಬ ಅಭಿಪ್ರಾಯಕ್ಕೆ ಬರಲಾಗಿದೆ ಎನ್ನಲಾಗಿತ್ತು. ಚೌಹಾಣ್ ಮಾತ್ರವಲ್ಲದೆ, ಇನ್ನೂ ಕೆಲವು ಹಿರಿಯ ನಾಯಕರನ್ನು ಬಿಜೆಪಿ ಈ ಬಾರಿ ಒತ್ತಾಯಪೂರ್ವಕವಾಗಿಯೇ ಕಣಕ್ಕಿಳಿಸಿತ್ತು. ಅನುಭವಿಗಳ ಪ್ರಭಾವಳಿಯ ಲಾಭ ಬಿಜೆಪಿಗೆ ಸಿಕ್ಕಿದೆ ಎನ್ನಲಾಗಿದೆ. ಕರ್ನಾಟಕದಲ್ಲಿ ಮಾಡಿದಂತೆ ಯಡಿಯೂರಪ್ಪ ಅವರನ್ನು ಕೆಳಗಿಳಿಸಿ ಹೊಸ ಸಿಎಂ ಅಧಿಕಾರಕ್ಕೆ ತರಲಿಲ್ಲ.
ವಯಸ್ಸಿನ ಲೆಕ್ಕ ನೋಡಲೇ ಇಲ್ಲ : ಮಧ್ಯಪ್ರದೇಶ, ರಾಜಸ್ತಾನ ಹಾಗೂ ಛತ್ತೀಸ್ʻಘಡದಲ್ಲಿ ಗೆಲುವನ್ನೇ ಮಾನದಂಡವಾಗಿಟ್ಟುಕೊಂಡು ಟಿಕೆಟ್ ನೀಡಲಾಯಿತು. ಕರ್ನಾಟಕದಲ್ಲಿ ಮಾಡಿದಂತೆ ವಯಸ್ಸಾದವರಿಗೆ ಟಿಕೆಟ್ ಇಲ್ಲ ಎನ್ನುವುದನ್ನು ಪಾಲಿಸಲಿಲ್ಲ. 70 ಅಲ್ಲ, 80 ದಾಟಿದವರಿಗೂ ಟಿಕೆಟ್ ಕೊಟ್ಟು ಗೆಲ್ಲಿಸಿಕೊಳ್ಳಲಾಯಿತು.
ಸ್ಥಳೀಯ ನಾಯಕರೇ ನಿರ್ಣಾಯಕ : ಟಿಕೆಟ್ ಹಂಚಿಕೆ ಮಾಡುವಾಗಲೂ ಕರ್ನಾಟಕದಲ್ಲಿ ಮಾಡಿದಂತೆ ದೆಹಲಿಯಲ್ಲಿ ಟಿಕೆಟ್ ಘೋಷಣೆ ಮಾಡಿದರೂ, ಸ್ಥಳೀಯರ ಅಭಿಪ್ರಾಯಕ್ಕೆ ಮನ್ನಣೆ ನೀಡಿಯೇ ಟಿಕೆಟ್ ಕೊಡಲಾಯಿತು. ಕರ್ನಾಟಕದಲ್ಲಿ ಲೋಕಲ್ ಕಾರ್ಯಕರ್ತರಿಗೂ ಅಚ್ಚರಿ ಕೊಟ್ಟು ಟಿಕೆಟ್ ಘೋಷಿಸಿದ್ದ ತಪ್ಪನ್ನು ನಾಲ್ಕೂ ರಾಜ್ಯಗಳಲ್ಲಿ ಮಾಡಲಿಲ್ಲ.
ಅಭ್ಯರ್ಥಿಗಳ ಹೆಸರೂ ಮೊದಲೇ ಸಿಕ್ಕಿತ್ತು : ರ್ನಾಟಕ ಚುನಾವಣೆಯಲ್ಲಿ ಚುನಾವಣೆ ದಿನಾಂಕ ಹತ್ತಿರ ಬಂದರೂ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡದೆ ಗೊಂದಲ ಸೃಷ್ಟಿಸಿದ್ದ ಕೇಸರಿ ಪಕ್ಷ, ಪ್ರಚಾರಕ್ಕೆ ಹೆಚ್ಚು ದಿನಗಳ ಅವಕಾಶವನ್ನೇ ನೀಡಲಿಲ್ಲ ಎಂಬುದು ಅನೇಕ ಅಭ್ಯರ್ಥಿಗಳ ಬೇಸರಕ್ಕೆ ಕಾರಣವಾಗಿತ್ತು. ಆದರೆ ಮಧ್ಯಪ್ರದೇಶದಲ್ಲಿ ಈ ತಪ್ಪನ್ನು ತಿದ್ದಿಕೊಂಡಿದ್ದ ಬಿಜೆಪಿ, ಚುನಾವಣೆ ಘೋಷಣೆಗೂ ಮುನ್ನವೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಆರಂಭಿಸಿತ್ತು.
ಚುನಾವಣೆ ಘೋಷಣೆಯ ಎರಡು ತಿಂಗಳ ಮುಂಚೆ, ಆಗಸ್ಟ್‌ನಲ್ಲಿಯೇ ಬಿಜೆಪಿ 39 ಅಭ್ಯರ್ಥಿಗಳ ಮೊದಲ ಪಟ್ಟಿ ಘೋಷಣೆ ಮಾಡಿತ್ತು. ಸೆಪ್ಟಂಬರ್ 25 ಮತ್ತು 26ರಂದು ತಲಾ 40 ಅಭ್ಯರ್ಥಿಗಳ ಎರಡು ಪಟ್ಟಿಗಳನ್ನು ಬಿಡುಗಡೆ ಮಾಡಿತ್ತು. ನಾಲ್ಕನೇ ಪಟ್ಟಿಯನ್ನು ಅಕ್ಟೋಬರ್ 9ರಂದು ಬಿಡುಗಡೆ ಮಾಡಿತ್ತು. ಇದರಲ್ಲಿ 57 ಅಭ್ಯರ್ಥಿಗಳ ಹೆಸರಿದ್ದವು. ಉಳಿದ ಅಭ್ಯರ್ಥಿಗಳ ಹೆಸರು ಚುನಾವಣೆ ಘೋಷಣೆ ಬಳಿಕ ಬಹಿರಂಗವಾಗಿತ್ತು. ಇದರಿಂದ ಅಭ್ಯರ್ಥಿಗಳಿಗೆ ತಳಮಟ್ಟದಿಂದ ಪಕ್ಷವನ್ನು ಸಂಘಟಿಸಿ, ಪ್ರಚಾರ ನಡೆಸಲು ಸಾಕಷ್ಟು ಸಮಯ ದೊರಕಿತ್ತು. ಅಷ್ಟೇ ಅಲ್ಲದೆ, ಕೇಂದ್ರದಲ್ಲಿ ಸಚಿವರಾಗಿರುವವರು ಮತ್ತು ಸಂಸದರನ್ನು ಕೂಡ ಬಿಜೆಪಿ ಅಖಾಡಕ್ಕೆ ಇಳಿಸಿತ್ತು. ಪಕ್ಷದ ಒಳಗಿನ ಕಚ್ಚಾಟವನ್ನು ಸರಿಪಡಿಸಿ, ಕೊನೆಯ ಕ್ಷಣದ ಬಂಡಾಯಕ್ಕೆ ಹೆಚ್ಚಿನ ಅವಕಾಶ ನೀಡದಂತೆ ಸರಿಪಡಿಸುವಲ್ಲಿ ಯಶಸ್ವಿಯಾಗಿತ್ತು.
ಗ್ಯಾರಂಟಿ ವರ್ಸಸ್ ಗ್ಯಾರಂಟಿ : ಕಾಂಗ್ರೆಸ್ ಕೊಟ್ಟ ಗ್ಯಾರಂಟಿಗಳಿಗೆ ಪ್ರತಿಯಾಗಿ ಬಿಜೆಪಿ ಕೂಡಾ ಹಲವು ಗ್ಯಾರಂಟಿ ಘೋಷಿಸಿತು. ಇದಕ್ಕೆ ಮೋದಿಯೇ ಗ್ಯಾರಂಟಿ ಎಂಬ ಘೋಷಣೆ ಕೆಲಸ ಮಾಡಿತು.
ಮೋದಿ ಮತ್ತು ಹಿಂದುತ್ವ : ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರದೇಶದಲ್ಲಿ ಸತತ ಪ್ರಚಾರಗಳನ್ನು ನಡೆಸಿದ್ದರು. ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಅಸ್ಸಾಂ ಸಿಎಂ ಹಿಮಾಂತ ಬಿಸ್ವ ಶರ್ಮಾ, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಕೂಡ ಪಕ್ಷದ ಸಲುವಾಗಿ ಓಡಾಡಿ, ಬೃಹತ್ ಸಭೆಗಳನ್ನು ನಡೆಸಿದ್ದರು. ಮೋದಿ ಅಭಿವೃದ್ಧಿಯ ಮಾತು ಹೇಳುತ್ತಿದ್ದರೆ, ಯೋಗಿ, ಹಿಮಂತ್ ಬಿಸ್ವಾಸ್ ಶರ್ಮಾ ಮೊದಲಾದವರು ಹಿಂದುತ್ವದ ಐಕಾನ್ ಆಗಿ ಗೆಲ್ಲಿಸಿದರು. ಚುನಾವಣೆಯ ಬಹಿರಂಗ ಪ್ರಚಾರಕ್ಕೆ ತೆರೆಬೀಳುವ ಕೊನೆಯ 10 ದಿನಗಳಲ್ಲಿ ಮೋದಿ ಅವರು 15 ಸಮಾವೇಶಗಳಲ್ಲಿ ಭಾಗವಹಿಸಿದ್ದರು. ರಾಜ್ಯ ನಾಯಕರಂತೂ ಎಡೆಬಿಡದೆ ಪ್ರಚಾರ ಕಾರ್ಯಗಳಲ್ಲಿ ಭಾಗವಹಿಸಿದ್ದರು. ಸಿಎಂ ಚೌಹಾಣ್ ಅವರಂತೂ ರಾಜ್ಯದ ಉದ್ದಗಲಕ್ಕೂ ಓಡಾಡಿ 165 ಸಮಾವೇಶಗಳನ್ನು ನಡೆಸಿದ್ದರು. ಕಾಂಗ್ರೆಸ್ ಮಾಜಿ ನಾಯಕ ಹಾಗೂ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಸುಮಾರು 80 ಸಭೆಗಳಲ್ಲಿ ಭಾಗವಹಿಸಿದ್ದರು.



