ಮಂಡ್ಯದಲ್ಲಿ ಬೆಂಕಿ ಬಿರುಗಾಳಿಯಾಗುತ್ತಿದೆ. ಚುನಾವಣೆ ಸಮೀಪ ಬಂದಾಗಿನಿಂದಲೂ ಕಾಂಗ್ರೆಸ್ ಒಂದು ಲೆಕ್ಕದ ಪ್ರಕಾರ ಮುಂಚೂಣಿಯಲ್ಲಿದೆ. ಹಾಗಂತ ಎಲ್ಲವೂ ಸರಿಯಾಗಿದೆ ಎಂದರ್ಥವಲ್ಲ. ಹಲವು ಭಿನ್ನಮತಗಳಿವೆ. ಸಿಎಂ ಯಾರಾಗಬೇಕು ಎಂಬುದೇ ದೊಡ್ಡ ಚರ್ಚೆಯಾಗುತ್ತಿದೆ. ಒಕ್ಕಲಿಗರ ನಡುವೆ ಹೋದಾಗ ಡಿಕೆ ಶಿವಕುಮಾರ್, ಬೆಂಬಲಿಗರ ನಡುವೆ ಹೋದಾಗ ಸಿದ್ದರಾಮಯ್ಯ ಪರ ಘೋಷಣೆಗಳು ಮೊಳಗುತ್ತಿವೆ. ಮೊದ ಮೊದಲು ಸಿಡಿಮಿಡಿಯಾಗುತ್ತಿದ್ದ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಇಬ್ಬರೂ ಆಸೆ ಇಟ್ಟುಕೊಳ್ಳೋದ್ರಲ್ಲಿ ತಪ್ಪೇನಿದೆ. ಮೊದಲು ಪಕ್ಷ ಗೆಲ್ಲಿಸೋಣ, ಆಮೇಲೆ ಶಾಸಕರೇ ಫೈನಲ್ ಮಾಡ್ತಾರೆ ಎನ್ನುವ ಮೂಲಕ ಬೆಂಕಿಯನ್ನು ತಣ್ಣಗಾಗಿಸಿದ್ದಾರೆ. ಆದರೆ ಕಾರ್ಯಕರ್ತರದ್ದು ಹಾಗಲ್ಲ. ಕಾರ್ಯಕರ್ತರ ಕಷ್ಟವೇ ಬೇರೆ.


ಮಂಡ್ಯದಲ್ಲಿ ಇದ್ದಕ್ಕಿದ್ದಂತೆ ಕೆಸಿಎನ್ ಬಿರುಗಾಳಿಯೆದ್ದಿತು. ಜೆಡಿಎಸ್‍ನಲ್ಲಿದ್ದ, ನಂತರ ಬಿಜೆಪಿಗೆ ಹೋದ ಸಚಿವ ನಾರಾಯಣ ಗೌಡ ಇದ್ದಕ್ಕಿದ್ದಂತೆ ಕಾಂಗ್ರೆಸ್ ಸೇರುವ ಮಾತನ್ನಾಡಿದರು. ಮಂಡ್ಯ ಕಾಂಗ್ರೆಸ್ ಹೊತ್ತಿ ಉರಿಯಿತು. ಮಂಡ್ಯದಲ್ಲಿ ಪಕ್ಷಾಂತರ ರಾಜಕಾರಣ ಬಿರುಸುಗೊಂಡಿದ್ದು, ಬಿಜೆಪಿ ಸಚಿವರೇ ಕಾಂಗ್ರೆಸ್ ಸೇರ್ಪಡೆಗೆ ಸಿದ್ಧತೆ ನಡೆಸುತ್ತಿರುವುದು ಕಾಂಗ್ರೆಸ್ಸಿಗರ ಆಕ್ರೋಶಕ್ಕೆ ಕಾರಣವಾಗಿದೆ. ಕೆ.ಆರ್.ಪೇಟೆ ಕಾಂಗ್ರೆಸ್ನಲ್ಲಿ ಆರು ಮಂದಿ ಆಕಾಂಕ್ಷಿತರಿದ್ದು, ಅವರಲ್ಲೇ ಟಿಕೆಟ್ಗಾಗಿ ಪೈಪೋಟಿ ನಡೆಯುತ್ತಿದೆ. ಈ ಹಂತದಲ್ಲಿ ನಾರಾಯಣ ಗೌಡರ ಹೆಸರು ಕೇಳಿ ಬಂದಿದ್ದೇ ಆಕ್ರೋಶಕ್ಕೆ ಕಾರಣ. ಕಳೆದ ಹದಿನೈದು ವರ್ಷಗಳಿಂದ ಕೆ.ಸಿ.ನಾರಾಯಣಗೌಡರ ವಿರುದ್ಧ ಕೆಲಸ ಮಾಡಿಕೊಂಡು ಬಂದಿದ್ದ ಕಾಂಗ್ರೆಸ್ ಕಾರ್ಯಕರ್ತರು ಸಹಜವಾಗಿಯೇ ಕೆರಳಿದ್ದಾರೆ. ಕೆಸಿ ನಾರಾಯಣ ಗೌಡರನ್ನು ಓಕೆ ಮಾಡಿರುವುದು ಡಿಕೆ ಶಿವಕುಮಾರ್ ಎನ್ನಲಾಗಿದ್ದು, ಅವರೇ ಖುದ್ದಾಗಿ ಕಾರ್ಯಕರ್ತರನ್ನು ಸಮಾಧಾನ ಪಡಿಸಲಿದ್ದಾರೆ ಎನ್ನಲಾಗಿದೆ. ಆದರೆ ಕೆಸಿಎನ್ ಪ್ರವೇಶಕ್ಕೆ ಸಿದ್ದರಾಮಯ್ಯ ಒಪ್ಪಿಲ್ಲ. ಆದರ ಖರ್ಗೆಯವರೇ ಗೆಲ್ಲುವ ಕ್ಯಾಂಡಿಡೇಟ್ ಬಿಡುವುದು ಬೇಡ ಎಂದು ಹೇಳಿದ ಕಾರಣಕ್ಕೆ ಸಿದ್ದರಾಮಯ್ಯ ಮೌನ ಸಮ್ಮತಿ ಸೂಚಿಸಿದ್ದಾರೆ ಎನ್ನಲಾಗಿದೆ


ಕೆ.ಆರ್ ಪೇಟೆ ಕ್ಷೇತ್ರದಲ್ಲಿ ಜೆಡಿಎಸ್ ಈಗಾಗಲೇ ಎಚ್.ಟಿ.ಮಂಜು ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಇದು ಮತ್ತೋರ್ವ ಟಿಕೆಟ್ ಆಕಾಂಕ್ಷಿ ಬಿ.ಎಲ್.ದೇವರಾಜು ಆಕ್ರೋಶಕ್ಕೆ ಕಾರಣವಾಗಿದೆ. ಬಿಜೆಪಿ ಸಚಿವ ಕೆ.ಸಿ.ನಾರಾಯಣಗೌಡರನ್ನೇ ಅಭ್ಯರ್ಥಿಯನ್ನಾಗಿ ಜಿಲ್ಲೆಯೊಳಗೆ ತನ್ನ ಅಸ್ತಿತ್ವ ಮುಂದುವರೆಸಿಕೊಳ್ಳುವ ಸಿದ್ಧತೆಯಲ್ಲಿದೆ. ಅಲ್ಲಿ ಇಲ್ಲಿ ಎಂದು ಹಾರಾಡಿದ್ದ ನಾರಾಯಣ ಗೌಡ ಇದ್ದಕ್ಕಿದ್ದಂತೆ ಮತ್ತೊಮ್ಮೆ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಪ್ರತ್ಯಕ್ಷವಾಗುತ್ತಿದ್ದಾರೆ.


ಹಾಸನದಲ್ಲಿ ಪರಿಸ್ಥಿತಿ ಇನ್ನೊಂದು ರೀತಿ ಇದೆ. ಅರಸೀಕೆರೆಯಲ್ಲಿ ಶಾಸಕ ಶಿವಲಿಂಗೇ ಗೌಡರು ಕಾಂಗ್ರೆಸ್ಸಿಗೆ ಬರುತ್ತಿದ್ದಾರೆ. ಸ್ವತಃ ಸಿದ್ದರಾಮಯ್ಯ ಓಕೆ ಮಾಡಿರುವ ಕ್ಯಾಂಡಿಡೇಟ್ ಶಿವಲಿಂಗೇಗೌಡ. ಅದು ಕಾಂಗ್ರೆಸ್ ಚುನಾವಣೆ ಟಿಕೆಟ್ ಕೊಡುವ ವಿಚಾರ ಶುರುವಾಗುವುದಕ್ಕೂ ಮೊದಲೇ ಮಾತುಕತೆಯಾಗಿತ್ತು. ಹೀಗಿದ್ದರೂ ನಮ್ಮ ಬಳಿ ಟಿಕೆಟ್‍ಗೆ ಅರ್ಜಿ ಪಡೆದಿದ್ದೇಕೆ ಎನ್ನುವುದು ಅರ್ಜಿ ಹಾಕಿರುವವರ ಪ್ರಶ್ನೆ. ಹೀಗಾಗಿಯೇ ಕಳೆದ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮಾಜಿ ಶಾಸಕ ಬಸವರಾಜು ಪುತ್ರ ಜಿ.ಬಿ.ಶಶಿಧರ್ ಪಕ್ಷಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಶಶಿಧರ್ ಅವರ ಕಳೆದ ಬಾರಿ ಅರಸೀಕೆರೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದವರು. 53 ಸಾವಿರಕ್ಕೂ ಹೆಚ್ಚು ಮತ ಪಡೆದು ಪ್ರಬಲ ಪೈಪೋಟಿ ಕೊಟ್ಟಿದ್ದವರು.


ಅತ್ತ ಈಗಲೂ ಬಿಜೆಪಿಯಲ್ಲಿಯೇ ಇರುವ ಮಾಜಿ ಶಾಸಕ ಎ.ಮಂಜು `ಈ ಬಾರಿ ಅರಕಲಗೂಡು ಕ್ಷೇತ್ರದಲ್ಲಿ ನಾನೇ ಜೆಡಿಎಸ್ ಅಭ್ಯರ್ಥಿ’ ಎಂದು ಘೋಷಿಸಿದ್ದಾರೆ. ಈಗ ಜೆಡಿಎಸ್ ಕಾರ್ಯಕರ್ತರ ಕಷ್ಟವೇ ಬೇರೆ. ಕುಮಾರಸ್ವಾಮಿ ರೇವಣ್ಣ ಅವರೇನೋ ಅಡ್ಜಸ್ಟ್ ಮಾಡಿಕೊಳ್ತಾರೆ. ಇವರ ಪರವಾಗಿ, ವಿರುದ್ಧವಾಗಿ ಹೋರಾಟ ಮಾಡಿದ್ದ ನಾವೇನು ಮಾಡಬೇಕು ಅನ್ನೋದು ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಪಕ್ಷಗಳ ಕಾರ್ಯಕರ್ತರ ಪ್ರಶ್ನೆ.
ಒಟ್ಟಿನಲ್ಲಿ ನಾಯಕರು ಗಾಳಿ ಬಂದ ಕಡೆ ತೂರಿಕೋ ಎಂದು ತೂರಿಕೊಳ್ಳುತ್ತಾರೆ. ಕಾರ್ಯಕರ್ತರು ಹಾಗಲ್ಲ. ನಾಯಕರ ಮನಸ್ಸು ಮತ್ತು ಪಕ್ಷ ಬದಲಾದಂತೆ ಕಾರ್ಯಕರ್ತರು ಚೇಂಜ್ ಆಗೋಕೆ ಆಗಲ್ಲ. ಗ್ರೌಂಡ್ ಲೆವೆಲ್ ಕಾರ್ಯಕರ್ತರ ಕಷ್ಟವೇ ಬೇರೆ. ಆ ಕಷ್ಟ, ಸಂಕಟ ಮೂರೂ ಪಕ್ಷಗಳ ಕಾರ್ಯಕರ್ತರಲ್ಲಿದೆ. ಕೆಲವರಂತು ರಾಜಕೀಯದ ಸಹವಾಸವೇ ಬೇಡ ಎಂದು ದೂರವಾಗಿದ್ದಾರೆ.



