ವಿಜಯಪುರ ನಗರ. ಈ ಕ್ಷೇತ್ರ ಇಡೀ ರಾಜ್ಯದಲ್ಲಿ ಸದ್ದು ಮಾಡುತ್ತಿರುವುದೇ ಬಸನಗೌಡ ಪಾಟೀಲ ಯತ್ನಾಳ್ ಅವರಿಂದ. ಓಪನ್ ಆಗಿ ಹಿಂದೂಗಳ ಪರ ಹೇಳಿಕೆ ನೀಡುವ ಯತ್ನಾಶ್, ಬಹಿರಂಗವಾಗಿಯೇ ಮುಸ್ಲಿಮರ ವಿರುದ್ಧವೂ ಕಿಡಿ ಕಾರುತ್ತಾರೆ. ನನಗೆ ಮುಸ್ಲಿಮರ ವೋಟುಗಳು ಬೇಡ ಎಂದು ವೇದಿಕೆಗಳಲ್ಲಿ ಹೇಳಿದ ರಾಜ್ಯದ ಕೆಲವೇ ಬಿಜೆಪಿ ನಾಯಕರಲ್ಲಿ ಒಬ್ಬರು. ಯತ್ನಾಳ್ ಎಂದರೇನೇ ವಿವಾದ. ಈ ವಿವಾದ ಪುರುಷ ಯತ್ನಾಳ್, ರಾಜ್ಯದಲ್ಲಿ ಯಡಿಯೂರಪ್ಪ ವಿರುದ್ಧವೂ ಗುಡುಗಿದ್ದವರು. ಸಿಎಂ ಪೋಸ್ಟಿಗೆ ಎರಡೂವರೆ ಸಾವಿರ ಕೋಟಿ ಬೇಕು ಎಂದು ಹೇಳಿ, ಕಾಂಗ್ರೆಸ್ ಹಾಗೂ ಜೆಡಿಎಸ್`ಗೆ ಭಯಂಕರ ಆಹಾರ ಒದಗಿಸಿದ್ದವರು. ಈಗ ಅವರಿಗೇ ಶಾಕ್.
ವಿಜಯಪುರ ನಗರದ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಬಂದೇನವಾಜ್ ಮಹಾಬರಿ ಅವರು ಇದೀಗ ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ. ಅಲ್ಲದೇ ಕಾಂಗ್ರೆಸ್ ಅಭ್ಯರ್ಥಿ ನಿಂದ ಅಬ್ದುಲ್ ಹಮೀದ್ ಮುಶ್ರೀಫ್ಗೆ ಬೆಂಬಲ ಘೋಷಿಸಿದ್ದಾರೆ. ನಗರ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷಕ್ಕೆ ಸಂಘಟನೆ ಇಲ್ಲ, ಕಾರ್ಯಕರ್ತರ ಪಡೆ ಇಲ್ಲ. ಎರಡು ದಿನ ಪ್ರಚಾರ ನಡೆಸಿದಾಗ ಯಾವುದೇ ಉತ್ತಮ ಪ್ರತಿಕ್ರಿಯೆ ಸಿಕ್ಕಿಲ್ಲ. ಹೀಗಾಗಿ ಕಣದಿಂದ ಹಿಂದಕ್ಕೆ ಸರಿದಿದ್ದೇನೆ. ವಿಜಯಪುರ ನಗರ ಕ್ಷೇತ್ರದಲ್ಲಿ ಕಾಂಗ್ರೆಸ್ಗೆ ಬೆಂಬಲ ನೀಡುತ್ತೇನೆ ಎಂದಿದಾರೆ ಬಂದೇನವಾಜ್ ಮಹಾಬರಿ.
ಈ ಹಿಂದೆ ಬಸನಗೌಡ ಪಾಟೀಲ್ ಯತ್ನಾಳ್ ಜೆಡಿಎಸ್ ಪಕ್ಷ ಸೇರಿ ಸಂಘಟನೆಯನ್ನ ಹಾಳು ಮಾಡಿದ್ದಾರೆ. ಹೀಗಾಗಿ ಕ್ಷೇತ್ರದಲ್ಲಿ ಜೆಡಿಎಸ್ ಸಂಘಟನೆ ಇಲ್ಲ ಎನ್ನವುದು ಅವರ ವಾದ.
ಯತ್ನಾಳ್`ಗೇಕೆ ಟೆನ್ಷನ್ ?
ಕಳೆದ ಬಾರಿಯ ರಿಸಲ್ಟ್`ನಲ್ಲಿ ಯತ್ನಾಳ್ ಅವರೇನೋ ಗೆದ್ದಿದ್ದು. ಗೆಲುವಿನ ಅಂತರ ಜಸ್ಟ್ 6413. 6 ಸಾವಿರಕ್ಕೂ ಹೆಚ್ಚು ಅಂತರ ಎನ್ನುವುದು ಓಕೆ ಎನ್ನುವ ಗೆಲುವು ಅಷ್ಟೆ. ಏಕೆಂದರೆ 2013ರಲ್ಲಿ ಜೆಡಿಎಸ್`ನಿಂದ ಕಣಕ್ಕಿಳಿದಿದ್ದಾಗ ಯತ್ನಾಳ್ ಸೋತಿದ್ದರು ಕೂಡಾ. ಗೆದ್ದಿದ್ದು ಬಿಜೆಪಿಗೆ ವಾಪಸ್ ಆದ ಮೇಲೆ.
2013ರಲ್ಲಿ ಕಾಂಗ್ರೆಸ್ನ ಮಕ್ಬುಲ್ ಎಸ್ ಭಗವಾನ್ 48,615 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರೆ, ಈಗ ಬಿಜೆಪಿ ಶಾಸಕರಾಗಿರುವ ಬಸನಗೌಡ ಪಾಟೀಲ್ ಯತ್ನಾಳ್ ಜೆಡಿಎಸ್ನಿಂದ ಸ್ಪರ್ಧಿಸಿ 39,235 ಮತ ಪಡೆದು ಸೋಲು ಅನುಭವಿಸಿದ್ದರು. ಬಿಜೆಪಿಯಿಂದ ಅಪ್ಪು ಪಟ್ಟಣಶೆಟ್ಟಿ ಅವರು 26,235 ಮತ ಪಡೆದು ತೀವ್ರ ಫೈಟ್ ನೀಡಿದ್ದರು.
2018ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಸನಗೌಡ ಪಾಟೀಲ್ ಯತ್ನಾಳ್ 76,308 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಕಾಂಗ್ರೆಸ್ನ ಅಬ್ದುಲ್ ಹಮೀದ್ ಮುಷ್ರಿಫ್ 69,895 ಮತ ಪಡೆಯುವುದರೊಂದಿಗೆ ಸೋಲು ಅನುಭವಿಸಿದ್ದರು.
ಕ್ಷೇತ್ರದ ಜಾತಿ ಲೆಕ್ಕ : ಕ್ಷೇತ್ರದಲ್ಲಿ ಇತ್ತೀಚಿನ ಮಾಹಿತಿಯಂತೆ 2,62,645 ಮತದಾರರು ಇದ್ದು, ಮುಸ್ಲಿಮರು 67 ಸಾವಿರ, ಲಿಂಗಾಯಿತರು 53 ಸಾವಿರ, ಎಸ್ಸಿ ಎಸ್ಟಿ ಸಮುದಾಯದ 37 ಸಾವಿರ, ಗಾಣಿಗರು 20 ಸಾವಿರ, ಬ್ರಾಹ್ಮಣರು 15 ಸಾವಿರ ಮತದಾರರಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್`ನಿಂದ ಮುಸ್ಲಿಂ ಅಭ್ಯರ್ಥಿಗಳೇ ನಿಂತಾಗ ವೋಟುಗಳು ಡಿವೈಡ್ ಆಗುತ್ತವೆ. ನಾನು ಗೆಲ್ಲಬಹುದು ಎಂಬ ಲೆಕ್ಕಾಚಾರದಲ್ಲಿದ್ದ ಯತ್ನಾಳ್ ಅವರಿಗೆ ಜೆಡಿಎಸ್ ಅಭ್ಯರ್ಥಿ ಕಾಂಗ್ರೆಸ್ಸಿಗೆ ಬೆಂಬಲ ನೀಡಿರುವುದು ಡಬಲ್ ಶಾಕ್ ಎಂದರೆ ಸುಳ್ಳಲ್ಲ.



