ಸುದೀಪ್ ಅವರು ತಪ್ಪು ಹೆಜ್ಜೆ ಇಟ್ಟರಾ..? ಈಗಲೇ ಹೇಳೋಕೆ ಆಗಲ್ಲ. ಆದರೆ ಸೋಷಿಯಲ್ ಮೀಡಿಯಾ ನೋಡುತ್ತಿದ್ದರೆ ಸುದೀಪ್ ಅವರ ರಾಜಕೀಯದ ಹೆಜ್ಜೆ, ಕಿಚ್ಚನ ಅಭಿಮಾನಿಗಳಿಗೂ ಇಷ್ಟವಾಗಿಲ್ಲ. ಸುದೀಪ್ ಈ ಹಿಂದೆ ಯಾರಿಗೂ ಪ್ರಚಾರ ಮಾಡಿರಲಿಲ್ಲವಾ..? ಹೌದು, ಮಾಡಿದ್ದಾರೆ. ಅದು ವೈಯಕ್ತಿಕ ನೆಲೆಯಲ್ಲಿ. ರಾಜೂಗೌಡ, ಮುನಿರತ್ನ, ಶ್ರೀರಾಮುಲು.. ಹೀಗೆ ಆಗ ಮುನಿರತ್ನ ಕಾಂಗ್ರೆಸ್ಸಿನಲ್ಲೇ ಇದ್ದರು. ಆದರೆ ಇದು ಹಾಗಲ್ಲ. ಹಾಗಾಗಿಲ್ಲ.
ನಟನಾಗಿದ್ದಾಗ ಪ್ರೀತಿಸುವುದೇ ಬೇರೆ. ಕಲಾವಿದನಾಗಿದ್ದಾಗ ಆರಾಧಿಸುವುದೇ ಬೇರೆ. ಆದರೆ ರಾಜಕೀಯ ಹಾಗಲ್ಲ. ಅಲ್ಲಿಗೆ ಬರುತ್ತೇನೆ ಎಂದರೆ ಕೆಸರು, ಹೊಲಸು ಎರಚೋಕೆ ಜನ ಕಾಯ್ತಿರುತ್ತಾರೆ. ಪಾಲಿಟಿಕ್ಸ್ ಈಸ್ ನಾಟ್ ಕ್ಲೀನ್. ರಾಜಕೀಯಕ್ಕೆ ಬಂದು ಶುದ್ಧನಾಗಿ, ಶುಭ್ರನಾಗಿ ಇರುವವರು ಇಲ್ಲವೇ ಇಲ್ಲ. ಸುದೀಪ್ ಅವರಿಗೂ ಈ ಅನುಭವ ಮೊದಲ ದಿನದಲ್ಲೇ ಆಗಿದೆ.
I strongly believe this is a Fake news spread by the desperate ,loosing BJP in Karnataka. @KicchaSudeep is far more sensible Citizen to fall prey ..ಕರ್ನಾಟಕದಲ್ಲಿ ಸೋಲುವ ಭಯದಲ್ಲಿ .. ಭ್ರಷ್ಟ BJP ಹರಡುತ್ತಿರುವ ಸುಳ್ಳು ಸುದ್ದಿ ಎಂದು ನಾನು ನಂಬುತ್ತೇನೆ .. ನಮ್ಮ ಕಿಚ್ಚ ಮಾರಿಕೊಳ್ಳುವವರಲ್ಲ #justasking https://t.co/kIRmFczTIO
— Prakash Raj (@prakashraaj) April 5, 2023
ಸುದೀಪ್ ಬಿಜೆಪಿಗೆ ಸೇರ್ತಾರಂತೆ ಎನ್ನುವ ಸುದ್ದಿ ಖಚಿತವಾಗುವ ಮೊದಲೇ ನಟ ಪ್ರಕಾಶ್ ರೈ, ಸುದೀಪ್ ಮಾರಿಕೊಳ್ಳುವವರಲ್ಲ ಎಂದಿದ್ದರು. ಆ ಮೂಲಕ ಬಿಜೆಪಿ ಸೇರಿದರೆ ಮಾರಿಕೊಂಡಿರುತ್ತಾರೆ ಎಂಬ ಸಿಗ್ನಲ್`ನ್ನೂ ಕೊಟ್ಟಿದ್ದರು. ಸುದೀಪ್ ಏನೇ ಮಾತನಾಡಿರಲಿ, ಅವರೀಗ ಬಿಜೆಪಿ ನಾಯಕರಲ್ಲಿ ಒಬ್ಬರು. ಸುದೀಪ್ ಬಿಜೆಪಿಯ ಪ್ರಾಥಮಿಕ ಸದಸ್ಯರಲ್ಲದೇ ಇರಬಹುದು. ನಾನು ಬೊಮ್ಮಾಯಿ ಮಾಮ ಪರವಾಗಿರುತ್ತೇನೆ. ಅವರು ನನ್ನ ಕಷ್ಟ ಕಾಲದಲ್ಲಿ ಆಗಿರುವವರು. ನಾನು ಇಲ್ಲಿ ನಿಲುವುಗಳನ್ನು ತೆಗೆದುಕೊಳ್ಳುವುದಿಲ್ಲ. ನಾನು ಬಿಜೆಪಿ ಸೇರುತ್ತಿಲ್ಲ. ಸ್ಪರ್ಧೆ ಮಾಡುತ್ತಿಲ್ಲ.. ಹೀಗೆ ಯಾವ ಕಾರಣಗಳನ್ನೇ ಕೊಟ್ಟರೂ, ಸುದೀಪ್ ಉತ್ತರ ಕೊಡುವುದಕ್ಕೆ ಚೆನ್ನಾಗಿರುತ್ತದೆಯೇ ಹೊರತು, ಸುದೀಪ್ ಒಬ್ಬ ಬಿಜೆಪಿ `ನಾಯಕ’ನಾಗಿ ಹೊರಹೊಮ್ಮಿದ್ದಾರೆ. ಈ ವಿಷಯ ಹೊರಬಿದ್ದಿದ್ದೇ ತಡ.. ಹೇಗೆಲ್ಲ ಸುದೀಪ್ ಅವರನ್ನು ಟೀಕೆಗೆ ಗುರಿ ಮಾಡಬಹುದೋ.. ಎಲ್ಲವೂ ಆಗುತ್ತಿದೆ.
ಸುದೀಪ್ ಆರಂಭದ ದಿನಗಳಲ್ಲಿ ಕಿಚ್ಚ ಎಂಬ ಸಿನಿಮಾದಲ್ಲಿ ನಟಿಸಿದ್ದರು. ಆ ಚಿತ್ರದಲ್ಲಿ ನಿರುದ್ಯೋಗಿ ಯುವಕನೊಬ್ಬ ಕಾರ್ಪೊರೇಟರ್, ಎಮ್‍ಎಲ್‍ಎ, ಸಿಎಂ ಆಗುವ ಕಥೆ ಇತ್ತು. ಆ ಚಿತ್ರದ ಕ್ಲೈಮಾಕ್ಸ್‍ನಲ್ಲಿ ಶಾಸಕರನ್ನು ಕಾಸು ಕೊಟ್ಟು ಖರೀದಿ ಮಾಡುವವರನ್ನು ಟೀಕಿಸುವ ಡೈಲಾಗ್ ಇತ್ತು. ಮೊದಲಿಗೆ ಹೊರ ಬಂದಿದ್ದೇ ಆ ವಿಡಿಯೋ.
ಅದಾದ ಮೇಲೆ ಪ್ರಕಾಶ್ ರೈ ನನಗೆ ಕಳವಳವಾಗಿದೆ. ಆತಂಕವಾಗಿದೆ. ನೋವಾಗಿದೆ ಎಂದು ಹೇಳಿಕೆ ನೀಡಿದರೆ, ಸೋಷಿಯಲ್ ಮೀಡಿಯಾದಲ್ಲಂತೂ ಸುದೀಪ್ ಅವರನ್ನು ಹೇಗೆಲ್ಲ ಬೇಕೋ ಅಷ್ಟೂ ಲೇವಡಿ ಮಾಡಿಬಿಡಿದರು.
ಸುದೀಪ್ ಅವರು ವಾಲ್ಮೀಕಿ ಜನಾಂಗದವರು. ಗೊತ್ತಿಲ್ಲದ ವಿಷಯವೇನೂ ಅಲ್ಲ. ರಾಜಕೀಯಕ್ಕೆ ಬರುತ್ತೇನೆ ಎಂದು ಸುದೀಪ್ ಹೇಳುತ್ತಿದ್ದಂತೆಯೇ ಜಾತಿಯನ್ನು ಎಳೆದು ತಂದು ಟೀಕೆ ಮಾಡಿದರು.
ಸುದೀಪ್ ಕಟ್ಟಾ ಅಭಿಮಾನಿಗಳೂ ಕೂಡಾ ಬೇಸರ ಪಟ್ಟುಕೊಂಡರು. ಸೋಷಿಯಲ್ ಮೀಡಿಯಾದಲ್ಲಿ ಸುದೀಪ್ ರಾಜಕೀಯಕ್ಕೆ ಬರುವುದು ಬೇಡ ಎಂಬುದು ಟ್ರೆಂಡ್ ಆಗಿತ್ತು.
ಇನ್ನು ಬಿಜೆಪಿ ಬೆಂಬಲಿಗರು ಇದು ಯಾವ ರೀತಿಯ ನಡೆ. ಒಂದೋ ಅಧಿಕೃತವಾಗಿ ಸೇರಿಬಿಡಿ. ಈ ರೀತಿ ಅಡ್ಡಗೋಡೆ ಮೇಲೆ ದೀಪ ಇಟ್ಟು ಆಟವಾಡಬೇಡಿ ಎಂದರೆ, ಬಿಜೆಪಿ ವಿರೋಧಿಗಳೂ ಕೂಡಾ ಇದೇ ಮಾತು ಹೇಳಿದ್ದು ವಿಶೇಷ. ಎರಡೂ ಕಡೆ ಇಲ್ಲದವರು ಸುದೀಪ್ ಅವರಿಗೆ ರಾಜಕೀಯ ಪಕ್ಷವನ್ನು ಆಯ್ಕೆ ಮಾಡಿಕೊಳ್ಳಲು ಹಕ್ಕಿದೆ. ಅಧಿಕಾರ ಇದೆ. ಆದರೆ ಅದನ್ನು ಸ್ಪಷ್ಟವಾಗಿ ಹೇಳಬೇಕು ಎಂದರು.


ರಾಜಕೀಯಕ್ಕೆ ಬರುತ್ತೇನೆ ಎಂದು ನಿರ್ಧಾರ ಮಾಡಿದ ಮೇಲೆ ಫೇಸ್ ಮಾಡಲೇಬೇಕು. ಕೆಸರು ಎರಚುತ್ತಾರೆ. ಒರೆಸಿಕೊಳ್ಳಲೇಬೇಕು. ಯಾವ್ಯಾವುದೋ ಸಂದರ್ಭದಲ್ಲಿ ಯಾವ ಕಾರಣಕ್ಕೋ ಮಾತನಾಡಿದ್ದ ವಿಡಿಯೋಗಳಿಗೆ ರಾಜಕೀಯದ ಟಚ್ ಕೊಟ್ಟು ಓಪನ್ ಮಾಡುತ್ತಾರೆ. ಟೀಕಿಸ್ತಾರೆ. ಟೀಕೆ ಸಹಿಸಿಕೊಳ್ಳಲೇಬೇಕು. ಏಕೆಂದರೆ ಇದು ರಾಜಕೀಯ.
ಅಂದಹಾಗೆ ಸುದೀಪ್ ಅಭಿಮಾನಿಗಳೂ ಇದನ್ನ ಡಾ.ರಾಜ್, ಪುನೀತ್ ಅವರಿಗೆ ಹೋಲಿಸುತ್ತಿದ್ದಾರೆ. ಡಾ.ರಾಜ್ ಕುಮಾರ್ ವಿಷಯ ಬಿಡಿ, ಇಂದಿರಾ ಗಾಂಧಿ ವಿರುದ್ಧ ಸ್ಪರ್ಧೆ ಮಾಡಿ ಎಂದಾಗ ಈ ರಾಜಕೀಯದವರ ಸಹವಾಸವೇ ಬೇಡ ಎಂದು ನಾಮಪತ್ರ ಸಲ್ಲಿಕೆ ಮುಗಿಯುವವರೆಗೆ ರಾಜಕಾರಣಿಗಳ ಕೈಗೇ ಸಿಕ್ಕಿರಲಿಲ್ಲ. ಇನ್ನು ಪುನೀತ್ ರಾಜಕುಮಾರ್ ಅವರ ವಿಷಯ ಇನ್ನೂ ವಿಭಿನ್ನ. ಅತ್ತಿಗೆ ಗೀತಾ ಶಿವರಾಜ್ ಕುಮಾರ್ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಿದಾಗ ಅತ್ತಿಗೆಗೆ ಶುಭ ಕೋರುತ್ತೇನೆ. ಆದರೆ ನಾನು ಪ್ರಚಾರ ಮಾಡಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರು. ಆಗ ಶಿವಣ್ಣ ಮಾತ್ರ ಪತ್ನಿ ಗೀತಾ ಅವರ ಪರ ಪ್ರಚಾರ ಮಾಡಿದ್ದರು. ಅಂದಹಾಗೆ ಸುಮಲತಾ ವಿಷಯದಲ್ಲೂ ಅಷ್ಟೆ, ಸುಮಲತಾ ಮತ್ತು ನಿಖಿಲ್ ಇಬ್ಬರಿಗೂ ಶುಭ ಕೋರಿದ್ದರು. ರಾಜಕೀಯವಾಗಿ ಅಂತರ ಕಾಯ್ದುಕೊಂಡು ಇದು ನಮಗಲ್ಲ ಎನ್ನುತ್ತಿದ್ದರು ಪುನೀತ್. ಈಗ ಸುದೀಪ್ ಅವರನ್ನೂ ಆ ನೆಲೆಗಟ್ಟಿನಲ್ಲಿಯೇ ಕಿಚ್ಚನ ಫ್ಯಾನ್ಸ್ ನೋಡುತ್ತಿದ್ದಾರೆ.



