ನಿನ್ನ ಖಾಸಗಿ ವಿಡಿಯೋ ಲೀಕ್ ಮಾಡುತ್ತೇನೆ. ನಿನ್ನ ದುಬೈ ಹುಡ್ಗಿ, ಪಂಜಾಬಿ ಹುಡ್ಗಿ, ಜೆಪಿ ನಗರ ಹುಡ್ಗಿ, ಚೆನ್ನೈ ಹುಡ್ಗಿ ಎಲ್ಲರ ವಿಡಿಯೋಗಳೂ ಹೊರಬರುತ್ತವೆ. ಇದು ಬೆದರಿಕೆ ಅಲ್ಲ.. ಎಂದೆಲ್ಲ ಬರೆದು ಕೆಟ್ಟ ಕೆಟ್ಟ ಪದಗಳಲ್ಲಿ ಬೈದು ಪತ್ರ ಬರೆದಿದ್ದವನ ಒಂದೊಂದೇ ಕ್ಲೂ ಹೊರಬರುತ್ತಿವೆ. ನೋಡುತ್ತಿದ್ದರೆ ಇದು ಯಾರೋ ಒಬ್ಬ ಸುದೀಪ್ ಮೇಲಿನ ಸಿಟ್ಟಿಗೋ… ಆಕ್ರೋಶಕ್ಕೋ ಹಾಕಿರುವ ಬೆದರಿಕೆ ಪತ್ರದಂತೆ ಕಾಣುತ್ತಿಲ್ಲ. ಬೆದರಿಕೆ ಹಾಕಿದ್ದವನ ತನಿಖೆ ಚುರುಕಾಗಿ ಸಾಗುತ್ತಿದೆ. ಖದೀಮ ಯಾರೆಂದು ಇನ್ನೂ ಗೊತ್ತಾಗಿಲ್ಲ. ಸಿಸಿಬಿ ತನ್ನ ತನಿಖೆ ಮುಂದುವರಿಸಿದ್ದು, ಕೇಸ್ನಲ್ಲಿ ಒಂದೊಂದೇ ಸುಳಿವುಗಳು ದೊರೆಯುತ್ತಿವೆ. ನಟ ಸುದೀಪ್ಗೆ ಬೆದರಿಕೆ ಪತ್ರ ನೀಡಲು ಸ್ವಿಫ್ಟ್ ಕಾರು ಬಳಕೆ ಮಾಡಲಾಗಿದೆ ಎಂಬುದನ್ನು ಸಿಸಿಬಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ಆದರೆ, ಕಾರಿನ ನಂಬರ್ ಪ್ಲೇಟ್ ಅನ್ನು ದುಷ್ಕರ್ಮಿಗಳು ಬದಲಿಸಿದ್ದಾರೆ. ಬೆಂಗಳೂರಿನ ದೊಮ್ಮಲೂರು ಪೋಸ್ಟ್ ಆಫೀಸ್ಗೆ ಸ್ವಿಫ್ಟ್ ಕಾರಿನಲ್ಲಿ ಆರೋಪಿಗಳು ಬಂದಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸ್ವಿಫ್ಟ್ ಕಾರಿನಲ್ಲಿ ಬಂದು ಪೋಸ್ಟ್ ಬಾಕ್ಸ್ಗೆ ಪತ್ರ ಹಾಕಲಾಗಿದೆ. ಈ ದೃಶ್ಯಾವಳಿಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಸ್ವಿಫ್ಟ್ ಕಾರು ಬೆಂಗಳೂರಿನ ಕೆಂಗೇರಿ ಬಳಿಯ ವ್ಯಕ್ತಿಗೆ ಸೇರಿದ್ದು, ವಿಚಾರಣೆ ಮಾಡಿದಾಗ ಆತನಿಗೂ ಪತ್ರಕ್ಕೂ ಸಂಬಂಧ ಇಲ್ಲ ಎನ್ನುವುದು ಗೊತ್ತಾಗಿದೆ. ಇದು ಗೊತ್ತಾಗಿ ಪೊಲೀಸರೂ ಶಾಕ್ ಆಗಿದ್ದಾರೆ. ಆರೋಪಿಗಳು ಸ್ವಿಫ್ಟ್ ಕಾರಿಗೆ ನಕಲಿ ನಂಬರ್ ಪ್ಲೇಟ್ ಬಳಸಿ ನಟ ಕಿಚ್ಚ ಸುದೀಪ್ಗೆ ಬೆದರಿಕೆ ಪತ್ರ ಪೋಸ್ಟ್ ಮಾಡಲು ಬಳಸಿದ್ದಾರೆ. . ಸದ್ಯ, ಈ ಸುಳಿವು ದೊರೆತಿದ್ದು, ಆರೋಪಿಗಳು ಯಾರು ಎನ್ನುವುದು ಇನ್ನಷ್ಟೇ ಪತ್ತೆಯಾಗಬೇಕಿದೆ.


ಈ ಎಲ್ಲವನ್ನೂ ನೋಡುತ್ತಿದ್ದರೆ ಆ ಖದೀಮ ಕೇವಲ ಸಿಟ್ಟಿನಲ್ಲಿ ಮಾಡಿರುವ ಕೆಲಸ ಅದಲ್ಲ. ಸ್ವಿಫ್ಟ್ ಕಾರ್ ಇದೆ ಎಂದರೆ ಆತ ಒಂದು ಮಟ್ಟಿಗೆ ಸ್ಥಿತಿವಂತನೇ ಇರಬೇಕು. ಸಿಸಿಟಿವಿ ವಿಡಿಯೋ ಪ್ರಕಾರ ವಿಡಿಯೋದಲ್ಲಿ ಮುಖ ಗುರುತು ಸಿಕ್ಕದಷ್ಟು ಮರೆಮಾಚಿದ್ದಾರೆ. ಆತನ ಜೊತೆ ಇನ್ನೂ ಕೆಲವರಿದ್ದಾರೆ. ಜೊತೆಗೆ ಕಾರ್ ನಂಬರ್ ಪ್ಲೇಟ್ ಮಾಡುವಷ್ಟು ಯೋಚನೆಯನ್ನೂ ಮಾಡಿದ್ದಾನೆ ಎಂದರೆ ಇದೊಂದು ವ್ಯವಸ್ಥಿತ ಸಂಚು ಎಂದು ಗೊತ್ತಾಗುತ್ತಿದೆ.



