ಇದು ಹೊಸದಲ್ಲ. ಬಹುಶಃ ಇದು ಕೊನೆಯೂ ಅಲ್ಲ. ಪ್ರತಿ ಚುನಾವಣೆ ಬಂದಾಗಲೂ ಕಿಚ್ಚ ಸುದೀಪ್ ರಾಜಕೀಯಕ್ಕೆ ಬರುತ್ತಾರೆ ಎಂಬ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬುವುದು.. ಎಲೆಕ್ಷನ್ ಮುಗಿದ ನಂತರ ತಣ್ಣಗಾಗುವುದು ಹೊಸದಲ್ಲ. ಇದೀಗ ಸುದೀಪ್ ಅವರ ಮನೆಗೆ ಖುದ್ದು ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್ ಭೇಟಿ ನೀಡಿ ಮಾತುಕತೆ ನಡೆಸುವ ಮೂಲಕ ಭಾರಿ ಸುದ್ದಿಯಾಗಿದೆ. ಭೇಟಿ ಮಾಡಿದ ಫೋಟೋವನ್ನು ಡಿಕೆ ಹಾಕಿದ್ದೇ ತಡ, ಸುದೀಪ್ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುದ್ದಿ ಬಿರುಗಾಳಿಯಂತೆ ಹಬ್ಬಿತು.
ಚಿತ್ರದುರ್ಗವಂತೆ..ಹೊಳಲ್ಕೆರೆಯಂತೆ..ಶಿವಮೊಗ್ಗವಂತೆ.. ಹೀಗೆ.. ಸುದ್ದಿ ಹಬ್ಬಿಸಿದವರು ಕ್ಷೇತ್ರಗಳನ್ನೂ ಆಯ್ಕೆ ಮಾಡಿಬಿಟ್ಟರು. ಇನ್ನೇನು ಸುದೀಪ್ ಅವರನ್ನು ಪಕ್ಷದ ವೇದಿಕೆಗೆ ಆಹ್ವಾನ ಮಾಡಿಕೊಳ್ಳೋಕೆ ಕಾಂಗ್ರೆಸ್ ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಖುದ್ದು ರಾಹುಲ್ ಗಾಂಧಿ, ಸುದೀಪ್ ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳಲಿದ್ದಾರೆ ಎಂದೆಲ್ಲ ಸುದ್ದಿ ಹಬ್ಬಿತು. ಅವೆಲ್ಲವುಗಳಿಗೂ ಫುಲ್ ಸ್ಟಾಪ್ ಇಟ್ಟಿದ್ದು ಖುದ್ದು ಡಿಕೆ ಶಿವಕುಮಾರ್.


ಸುದ್ದಿ ಸ್ಫೋಟದ ನಂತರ ಖುದ್ದು ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿ ಚಿತ್ರರಂಗ ಎದುರಿಸುತ್ತಿರುವ ಸಮಸ್ಯೆ ಹಾಗೂ ಪರಿಹಾರಗಳ ಕುರಿತು ಸುದೀಪ್ ಅವರ ಜೊತೆ ಚರ್ಚೆ ನಡೆಸಿದೆ. ಚುನಾವಣೆಗೆ ಮುನ್ನ ಪ್ರಣಾಳಿಕೆ ಸಿದ್ಧ ಪಡಿಸಬೇಕು. ಈ ಕುರಿತು ಹೆಚ್ಚಿನ ಮಾಹಿತಿಯೂ ಬೇಕಿತ್ತು. ನಮ್ಮ ವಿಶೇಷ ಪ್ರಣಾಳಿಕೆಯಲ್ಲಿ ಚಿತ್ರರಂಗದ ಸಮಸ್ಯೆಗಳ ಕುರಿತು ಪರಿಹಾರ ನೀಡಲಿದ್ದೇವೆ. ಕೊರೊನಾ ಅವಧಿಯಲ್ಲಿ ರಾಜ್ಯ ಸರ್ಕಾರ ಚಿತ್ರರಂಗಕ್ಕೆ ಸೂಕ್ತವಾಗಿ ಸ್ಪಂದಿಸಿಲ್ಲ. ಅವೆಲ್ಲವುಗಳಿಗೂ ಪರಿಹಾರ ಹುಡುಕಿ ಪ್ರಣಾಳಿಕೆ ಸಿದ್ಧ ಮಾಡಬೇಕಿತ್ತು ಎಂದರು ಡಿಕೆ ಶಿವಕುಮಾರ್. ಆ ಮೂಲಕ ಸುದೀಪ್ ಕಾಂಗ್ರೆಸ್ ಸೇರ್ಪಡೆ ಸುದ್ದಿಯನ್ನು ನಿರಾಕರಿಸಿದರು. ಸುದೀಪ್ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುದ್ದಿಗೆ ತೆರೆ ಎಳೆದರು.
ಸುದೀಪ್ ರಾಜಕೀಯ ಸುದ್ದಿ ಹಬ್ಬೋದ್ಯಾಕೆ?
ಸುದೀಪ್ ಅವರಿಗೆ ರಾಜಕೀಯ ಸ್ನೇಹ ಸಂಬಂಧಗಗಳು ಇವತ್ತಿನದ್ದೇನಲ್ಲ. ಸಿನಿಮಾ ರಂಗಕ್ಕೆ ಬರುವ ಮೊದಲಿನಿಂದಲೂ ಇದೆ. ಭಾವಿ ಸಿಎಂ ಎಂದೇ ಬಿಂಬಿಸಿಕೊಳ್ಳುತ್ತಿರುವ ಕಾಂಗ್ರೆಸ್ಸಿನ ಸಿದ್ದರಾಮಯ್ಯ ಜೊತೆ ಬಾಂಧವ್ಯ ಚೆನ್ನಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಪ್ರೀತಿಯಿಂದ ಮಾಮ ಎಂದೇ ಕರೆಯುವಷ್ಟು ಆತ್ಮೀಯತೆ ಇದೆ. ಇಂತಾದ್ದೊಂದು ಬಾಂಧವ್ಯ ಯಡಿಯೂರಪ್ಪನವರ ಜೊತೆಯಲ್ಲೂ ಇತ್ತು. ಕಾಂಗ್ರೆಸ್ಸಿನ ಡಿಕೆ ಶಿವಕುಮಾರ್ ಜೊತೆ, ಬಿಜೆಪಿ ಸಚಿವ ಸುಧಾಕರ್, ಮುನಿರತ್ನ ಸೇರಿದಂತೆ ಹಲವರ ಜೊತೆ ಸ್ನೇಹವೂ ಇದೆ. ಮಾಜಿ ಸಿಎಂ, ಜೆಡಿಎಸ್ಸಿನ ಕುಮಾರಸ್ವಾಮಿ ಜೊತೆಯಲ್ಲೂ ಉತ್ತಮ ಗೆಳೆತನ ಇಟ್ಟುಕೊಂಡಿದ್ದಾರೆ.






ಆರೋಗ್ಯ ಸಚಿವರೂ ಆಗಿರುವ ಈಗ ಬಿಜೆಪಿಯಲ್ಲಿರುವ ಪ್ರಭಾವಿ ನಾಯಕ ಡಾ.ಕೆ.ಸುಧಾಕರ್ ಸುದೀಪ್ ಕಾಂಗ್ರೆಸ್ ಸೇರುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಸುದೀಪ್ ಯಾವ ಪಕ್ಷಕ್ಕೇ ಸೇರಲಿ, ಅವರಿಂದ ಪಕ್ಷಕ್ಕೆ ಲಾಭವಿದೆ ಎಂದಿದ್ದಾರೆ. ನಾವೂ ಕಾದು ನೋಡೋಣ ಎನ್ನುವ ಮೂಲಕ ಬಿಜೆಪಿಯವರೂ ಸುದೀಪ್ ಅವರಿಗೆ ಪಕ್ಷ ಸೇರುವ ಆಹ್ವಾನ ಕೊಟ್ಟಿರುವ ಬಗ್ಗೆ ಪರೋಕ್ಷವಾಗಿ ಸುಳಿವು ಕೊಟ್ಟಿದ್ದಾರೆ.


ಸುದೀಪ್ ಅವರ ಸಮುದಾಯದವರೇ ಆಗಿರುವ ಸತೀಶ್ ಜಾರಕಿಹೊಳಗೆ ಸುದೀಪ್ ಅವರು ಕಾಂಗ್ರೆಸ್ಸಿಗೆ ಬಂದರೆ ಸ್ವಾಗತ ಎಂದಿದ್ದಾರೆ. ಸತೀಶ್ ಜಾರಕಿಹೊಳಿ ರಾಜ್ಯ ಕಾಂಗ್ರೆಸ್ಸಿನ ಕಾರ್ಯಾಧ್ಯಕ್ಷರೂ ಹೌದು. ಇದರ ಜೊತೆ ಒಂದು ವಿಚಿತ್ರ ಹೇಳಿಕೆಯನ್ನೂ ಕೊಟ್ಟಿದ್ದಾರೆ. ಕಾಂಗ್ರೆಸ್ ಯಾವತ್ತಿಗೂ ಸಿನಿಮಾ ನಟರನ್ನು ತಂದು ಪ್ರಚಾರ ಮಾಡಿಸಿಲ್ಲ ಎಂಬ ತಮಾಷೆಯ ವಿಷಯ ಹೇಳಿದ್ದಾರೆ.



