ನೋಡ್ತಾ ಇರಿ, ಅಕಸ್ಮಾತ್ ಬಿಜೆಪಿಗೆ ಬಹುಮತ ಬಂದರೆ ಪ್ರಹ್ಲಾದ್ ಜೋಷಿಯೇ ಸಿಎಂ. 8 ಜನ ಡಿಸಿಎಂ. ಆರ್.ಎಸ್.ಎಸ್. ಸಭೆಯಲ್ಲಿ ಈ ಬಗ್ಗೆ ನಿರ್ಧಾರವಾಗಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದೇ ತಡ, ಇಡೀ ರಾಜ್ಯದ ರಾಜಕೀಯ ಸರಕ್ಕಂತ ತಿರುಗಿದೆ. ಸಿಎಂ ಬಸವರಾಜ ಬೊಮ್ಮಾಯಿಯಿಂದ ಹಿಡಿದು, ರಾಜ್ಯ ಬಿಜೆಪಿಯ ನಾಯಕರೆಲ್ಲ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಇಷ್ಟಕ್ಕೇ ಸುಮ್ಮನಾಗಿಲ್ಲ, ಪ್ರಹ್ಲಾದ್ ಜೋಷಿ ನಾಥೂರಾಮ್ ಗೋಡ್ಸೆ, ಪೇಶ್ವೆಯವರ ಸಮುದಾಯದವರು. ಗಾಂಧೀಜಿಯನ್ನು ಕೊಂದ ಸಮುದಾಯದವರು. ದೇಶಸ್ಥ, ಚಿತ್ಪಾವನ ಬ್ರಾಹ್ಮಣರು ಎಂಬ ಹೇಳಿಕೆ ಬೆಂಕಿಯನ್ನೇ ಉಗುಳುವಂತೆ ಮಾಡಿದೆ. ಬ್ರಾಹ್ಮಣ ಮಹಾಸಭಾ, ಪೇಜಾವರ ಶ್ರೀಗಳು, ಮಂತ್ರಾಲಯದ ಶ್ರೀಗಳು ಸೇರಿದಂತೆ ಹಲವು ಮಠಾಧೀಶರು ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ಅವರ ಪ್ರತಿಕ್ರಿಯೆ ಹೆಚ್ಚಿನದಾಗಿ ಬ್ರಾಹ್ಮಣರನ್ನು ದೂಷಿಸಿರುವುದಕ್ಕೇ ಹೊರತು, ಪ್ರಹ್ಲಾದ್ ಜೋಷಿಯ ಸಮರ್ಥನೆಗೆ ಅಲ್ಲ. ಅವಕಾಶ, ಅರ್ಹತೆ ಇದ್ದರೆ ಆಗಲಿ ಬಿಡಿ ಎನ್ನುತ್ತಲೇ ಒಂದು ಸಮುದಾಯವನ್ನು ಟೀಕಿಸುವುದು ಒಳ್ಳೆಯ ಬೆಳವಣಿಗೆ ಅಲ್ಲ. ದೇವೇಗೌಡರ ಮಗನಿಂದ ಇದನ್ನು ನಿರೀಕ್ಷೆ ಮಾಡಿರಲಿಲ್ಲ ಎಂದಿದ್ದಾರೆ. ಆದರೆ ಬಿಜೆಪಿಯವರಿಗೆ ಹೊಡೆಯುತ್ತಿರುವುದು ಬೇರೆಯದೇ ವಾಸನೆ. ನೀಡುತ್ತಿರುವುದು ಬೇರೆಯದೇ ಎಚ್ಚರಿಕೆ. ಕುಮಾರಸ್ವಾಮಿ ಮಾತಿನ ಹಿಂದೆ ಇರುವುದು ಪಕ್ಕಾ ತಂತ್ರಗಾರಿಕೆಯೇ ಹೊರತು ಬೇರೇನಲ್ಲ ಎನ್ನವುದು ಅವರ ವಾದ.


ಕುಮಾರಸ್ವಾಮಿ ಸ್ಟೇಟ್ಮೆಂಟ್ ವಿಷಯಕ್ಕೆ ಬಂದರೆ ಕಾಂಗ್ರೆಸ್ ಒಂದು ಅಂತರ ಕಾಯ್ದುಕೊಂಡೇ ಇದೆ. ದಿನೇಶ್ ಗುಂಡೂರಾವ್ ಒಂದು ಜಾತಿಯನ್ನು ಎಳೆದು ತರಬಾರದು ಎಂದು ಸೇಫ್ ಗೇಮ್ ಆಡಿದ್ದಾರೆ. ಡಿಕೆ ಶಿವಕುಮಾರ್ ಗೊತ್ತೇ ಇಲ್ಲ ಎಂಬಂತೆ ಇದ್ದರೆ, ಸಿದ್ದರಾಮಯ್ಯ ಮಾತ್ರ ಒಪ್ಪಿಯೂ ಒಪ್ಪದಂತೆ ಜಾಣ ನಡೆಯಿಟ್ಟಿದ್ದಾರೆ. ಕುಮಾರಸ್ವಾಮಿ ಮಾತಿಗೆ ಸಹಮತ ಇಲ್ಲ. ಆದರೆ ಸಿಎಂ ಯಾರಾಗಬೇಕು ಎಂದು ಬಿಜೆಪಿಯಲ್ಲಿ ತೀರ್ಮಾನ ಮಾಡುವುದು ಆರ್.ಎಸ್.ಎಸ್. ಆದರೆ ಅವರಿಗೆ ಅವಕಾಶ ಕೊಡಲ್ಲ. ನಾವು ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತೇವೆ ಎನ್ನುವುದು ಸಿದ್ದರಾಮಯ್ಯ ಮಾತು. ಕುಮಾರಸ್ವಾಮಿಯವರ ಜೆಡಿಎಸ್, ಹಳೆ ಮೈಸೂರು ಭಾಗ ಬಿಟ್ಟರೆ ಉಳಿದೆಡೆ ಬಲಶಾಲಿಯಲ್ಲ. ಹೆಚ್ಡಿಕೆ ಹೇಳಿಕೆಯಿಂದ ಲಾಭವಾದರೆ ಬಿಜೆಪಿಗೆ ಉತ್ತರ ಕರ್ನಾಟಕ ಸೇರಿದಂತೆ ಎಲ್ಲ ಕ್ಷೇತ್ರದಲ್ಲಿ ನೇರ ಎದುರಾಳಿಯಾಗಿರುವ ತನಗೇ ಎನ್ನುವುದು ಕಾಂಗ್ರೆಸ್ ನಂಬಿಕೆ. ಅಂದರೆ ಆಟವಾಡದೇ ಗೆಲ್ಲುವ ಆಟ.


ಕುಮಾರಸ್ವಾಮಿ ಮೊದಲ ಬಾರಿ ಹೇಳಿದಾಗ ಇದು ಲಿಂಗಾಯತರು, ಒಕ್ಕಲಿಗರು, ದಲಿತರು, ಎಲ್ಲರಿಗೂ ಎಚ್ಚರಿಕೆ ಎಂಬ ಪದ ಬಳಸಿದ್ದರು. ಇದೇ ಕುಮಾರಸ್ವಾಮಿಯವರ ತಂತ್ರಗಾರಿಕೆ. ಬಿಜೆಪಿ ಜೊತೆಯಲ್ಲಿರುವ ದೊಡ್ಡ ದೊಡ್ಡ ಸಮುದಾಯಗಳನ್ನು ಒಡೆಯುವುದೇ ಕುಮಾರಸ್ವಾಮಿಯವರ ಮಾತಿನ ಹಿಂದಿರುವ ತಂತ್ರ ಎನ್ನುವುದು ಅವರ ವಾದ. ರಾಜ್ಯ ಬಿಜೆಪಿಗೆ ದೊಡ್ಡ ಶಕ್ತಿ ಲಿಂಗಾಯತರು ಹಾಗೂ ದಲಿತರಲ್ಲಿ ಎಡಗೈ ದಲಿತರು. ಅವರನ್ನು ಹೇಗಾದರೂ ಮಾಡಿ ಪಕ್ಷದತ್ತ ಸೆಳೆದುಕೊಂಡರೆ ಲಾಭ ಎನ್ನುವ ಗುರಿಯಿಟ್ಟುಕೊಂಡೇ ಕುಮಾರಸ್ವಾಮಿ ಬಾಣ ಹೂಡಿದ್ದಾರೆ ಎನ್ನುವುದು ಬಿಜೆಪಿ ನಾಯಕರ ವಾದ.
ಬಿಜೆಪಿಗೆ ಇದನ್ನು ಬಹಿರಂಗವಾಗಿ ಹೇಳುವುದಕ್ಕೆ ಇರುವ ಪ್ರಾಬ್ಲಂ ಏನು?
ಇದು ಇನ್ನೂ ಇಂಟ್ರೆಸ್ಟಿಂಗ್. ಬಿಜೆಪಿಗೆ ಲಿಂಗಾಯತರು ಜೊತೆಗೆ ನಿಂತಿರುವುದರ ಹಿಂದಿನ ಶಕ್ತಿ ಯಡಿಯೂರಪ್ಪನವರು. ಯಡಿಯೂರಪ್ಪನವರು ಏನೇ ಹೇಳಿದರೂ ಅವರನ್ನು ಅಧಿಕಾರದಿಂದ ದೂರ ಮಾಡಿದರು ಎನ್ನುವ ಸಿಟ್ಟು ಲಿಂಗಾಯತರಲ್ಲಿದೆ. ಅದಕ್ಕೆ ತಕ್ಕಂತೆ ಯಡಿಯೂರಪ್ಪನವರ ಮಗ ವಿಜಯೇಂದ್ರ ಯಡಿಯೂರಪ್ಪ ಅವರಿಗೆ ಜನಬೆಂಬಲ ವ್ಯಕ್ತವಾಗುತ್ತಿದ್ದರೂ ಸೂಕ್ತ ಸ್ಥಾನ ಮಾನ ಗೌರವ ಸಿಕ್ಕಿಲ್ಲ ಎನ್ನುವುದೂ ನಿಜ. ಇದನ್ನು ಸುಳ್ಳು ಮಾಡಬೇಕೆಂದಾದರೆ ವಿಜಯೇಂದ್ರ ಅವರಿಗೆ ಪಕ್ಷದಲ್ಲಿ ಗೌರವಯುತ ಸ್ಥಾನ ಕೊಡಬೇಕು. ಕೊಟ್ಟರೆ ಒಂದು ಪ್ರಾಬ್ಲಂ. ಕೊಡದೇ ಹೋದರೆ ಇನ್ನೊಂದು ಪ್ರಾಬ್ಲಂ. ಕುಮಾರಸ್ವಾಮಿ ಈಗಾಗಲೇ ಪರೋಕ್ಷವಾಗಿ ಇದರ ಹಿಂದಿರೋದು ಬಿ.ಎಲ್.ಸಂತೋಷ್ ಎಂದು ಹೇಳಿದ್ದಾರೆ. ಅದು ರಾಜಕೀಯ ನಾಯಕರ ಆಸುಪಾಸಿನಲ್ಲಿ ಓಡಾಡುವವರಿಗೆ ಮಾತ್ರ ಗೊತ್ತಿರುವ ಬಹಿರಂಗ ಗುಟ್ಟು. ಅಂದಹಾಗೆ ಬಿ.ಎಲ್.ಸಂತೋಷ್ ಮತ್ತು ಪ್ರಹ್ಲಾದ್ ಜೋಶಿ ಇಬ್ಬರೂ ಬ್ರಾಹ್ಮಣರೇ.


ಈಗ ಪ್ರಹ್ಲಾದ್ ಜೋಷಿಯವರೋ ಸೆಂಟ್ರಲ್ ಮಿನಿಸ್ಟರ್. ಇಲ್ಲ..ಇಲ್ಲ..ಅವರನ್ನು ಸಿಎಂ ಮಾಡೋಕೆ ಆಗಲ್ಲ. ಬ್ರಾಹ್ಮಣರಿಗೆ ಸಿಎಂ ಪಟ್ಟ ಕೊಡಲ್ಲ ಎಂದು ಹೇಳಿಕೆ ನೀಡಿದರೆ.. ಏಕೆ.. ಅವರಿಗೆ ಅರ್ಹತೆ ಇಲ್ಲವಾ? ಕೊಟ್ಟರೆ ಏನು ತಪ್ಪು ಎಂಬ ಪ್ರಶ್ನೆ ಏಳುತ್ತದೆ. ಉತ್ತರ ಕೊಡೋಕೆ ಆಗಲ್ಲ. ರಾಜ್ಯದಲ್ಲಿ ಬಹುಪಾಲು ಬ್ರಾಹ್ಮಣರು ಕೂಡಾ ಬಿಜೆಪಿ ವೋಟರ್ಸ್. ಜೋಷಿಯವರನ್ನೇ ಸಿಎಂ ಮಾಡುತ್ತೇವೆ ಎನ್ನುವುದು ಸೃಷ್ಟಿಸುವ ಪ್ರಮಾದದ ಅರಿವು ಬಿಜೆಪಿ ನಾಯಕರಿಗೆ ಇದೆ. ಏನೂ ಮಾತನಾಡದಿದ್ದರೆ ಆಗ ಹಂತ ಹಂತವಾಗಿ ಬಿಜೆಪಿ ಬುಟ್ಟಿಯಲ್ಲಿರುವ ಖಾಯಂ ಮತದಾರರು ದೂರ ಹೋಗುತ್ತಾರೆ. ದೊಡ್ಡ ಮಟ್ಟದಲ್ಲಿ ಲಿಂಗಾಯತರು ಹಾಗೂ ದಲಿತರ ಮತ ದೂರವಾಗುತ್ತವೆ. ಇದು ಉಗುಳಲೂ ಆಗದ.. ನುಂಗಲೂ ಆಗದ ಸ್ಥಿತಿ. ಬೆಂಕಿ ಹೊತ್ತಿದೆ. ನೀರು ಹಾಕಿಕೊಳ್ಳೋಕೆ ನೀರಿದ್ದರೂ ಸಾಧ್ಯವಿಲ್ಲ.
ಫೈನಲ್ ಲಾಸ್ ಯಾರಿಗೆ?
ಈಗ ಆಗಿರುವ ಡ್ಯಾಮೇಜ್ ಕಂಟ್ರೋಲ್ ಮಾಡೋಕೆ ಅವಕಾಶಗಳಿಲ್ಲ ಎಂದಲ್ಲ. ಆದರೆ ಕುಮಾರಸ್ವಾಮಿ ಒಂದು ಮಾತಿನ ಮೂಲಕ ಇಬ್ಬರಿಗೆ ಅವಕಾಶ ಸಿಕ್ಕರೂ ಒಪ್ಪಿಕೊಳ್ಳದಂತೆ ಮಾಡಿದ್ದಾರೆ. ಯಡಿಯೂರಪ್ಪ ಹೊರತು ಪಡಿಸಿ ಸಿಎಂ ಯಾರಾಗಬೇಕು ಎಂಬ ಪ್ರಶ್ನೆ ಎದುರಾದಾಗಲೆಲ್ಲ ಬಿ.ಎಲ್.ಸಂತೋಷ್ ಮತ್ತು ಪ್ರಹ್ಲಾದ್ ಜೋಶಿಯವರ ಹೆಸರು ಕಡ್ಡಾಯವಾಗಿ ಕೇಳಿ ಬರುತ್ತಿತ್ತು. ಅಕಸ್ಮಾತ್.. ಎಲೆಕ್ಷನ್ನಿನಲ್ಲಿ ಬಿಜೆಪಿಗೆ ಬಹುಮತ ಬಂದರೂ ಕೂಡಾ ಇವರಿಬ್ಬರೂ ತಮಗೆ ಸಿಎಂ ಪದವಿ ಬೇಡ ಎನ್ನಬೇಕು. ಅಷ್ಟರಮಟ್ಟಿಗೆ ಇವರಿಬ್ಬರಿಗೆ ನಷ್ಟ ಎನ್ನುವುದು ರಾಜಕೀಯ ಪಂಡಿತರ ವಾದ.



