ಪ್ರಮೋದ್ ಮುತಾಲಿಕ್. ಕಟ್ಟರ್ ಹಿಂದುತ್ವ ವಾದಿಗಳಿಗೆ ಈ ಹೆಸರೇ ಸ್ಪೂರ್ತಿ. ಪ್ರೇರಣೆ. ಜಾತ್ಯತೀತವಾದಿಗಳಿಗೆ ಈ ಹೆಸರೇ ಅಪಥ್ಯ. ವಾಟಾಳ್ ನಾಗರಾಜ್ ಅವರನ್ನು ಹೇಗೆ ಬೆಂಗಳೂರು ಪೊಲೀಸರು ಎತ್ತಿ ತೂಗಿ ಲಾಲಿ ಹಾಡಿ ತೊಟ್ಟಿಲು ತೂಗಿದ್ದಾರೋ ಅದಕ್ಕಿಂತ ಹೆಚ್ಚು ಪೊಲೀಸರ ಜೊತೆ ಒಡನಾಟ ಇಟ್ಟುಕೊಂಡವರು ಮುತಾಲಿಕ್. ಇವರ ಹೋರಾಟಗಳು ಪ್ರತಿಭಟನೆ, ಧಿಕ್ಕಾರ, ಪೊಲೀಸರ ಅರೆಸ್ಟ್, ಜೀಪು, ವ್ಯಾನುಗಳಲ್ಲಿ ತುಂಬಿಕೊಂಡು ಹೋಗಿ ಬಿಡುವುದಕ್ಕೆ ಮುಗಿಯುವುದಿಲ್ಲ. ಜೈಲಿಗೂ ಹೋಗಿದ್ದಾರೆ. ಕಸ್ಟಡಿ ಎದುರಿಸಿದ್ಧಾರೆ. ಶ್ರೀರಾಮಸೇನೆ ಅಧ್ಯಕ್ಷರೂ ಆಗಿರುವ ಪ್ರಮೋದ್ ಮುತಾಲಿಕ್ ಇತ್ತೀಚೆಗೆ ಬಿಜೆಪಿಗೂ ಸೇರಿದ್ದರು. ಬೆಳಗ್ಗೆ ಪಕ್ಷಕ್ಕೆ ಸೇರಿಸಿಕೊಂಡಿದ್ದ ಬಿಜೆಪಿ, ಮಧ್ಯಾಹ್ನದ ಹೊತ್ತಿಗೆ ಇಲ್ಲ ಇಲ್ಲ, ಮುತಾಲಿಕ್ ನಮ್ಮ ಸದಸ್ಯರಲ್ಲ ಎಂದಿತ್ತು.
ಈಗ ಮುತಾಲಿಕ್ ಉಡುಪಿ ಜಿಲ್ಲೆಯ ಕಾರ್ಕಳದಿಂದ ಪಕ್ಷೇತರ ಅಭ್ಯರ್ಥಿ. ಅವರ ಎದುರಾಳಿ ಕಾರ್ಕಳದ ಬಿಜೆಪಿ ಶಾಸಕ ಸುನಿಲ್ ಕುಮಾರ್.
ಅಂದಹಾಗೆ ಮುತಾಲಿಕ್ ಎಷ್ಟು ಕೋಟಿ ಆಸ್ತಿ ಮಾಡಿದ್ದಾರೆ..? ಕಾರುಗಳೆಷ್ಟಿವೆ..? ಬಂಗಲೆಗಳೆಷ್ಟಿವೆ..? ಕಾಂಪ್ಲೆಕ್ಸ್ ಎಷ್ಟಿವೆ..? ಚಿನ್ನ ಬಂಗಾರ ಎಷ್ಟಿಟ್ಟುಕೊಂಡಿದ್ದಾರೆ..? ಕೃಷಿ ಭೂಮಿ ಎಷ್ಟು? ವಾಣಿಜ್ಯ ಭೂಮಿ ಎಷ್ಟು..? ಎಲ್ಲೆಲ್ಲಿ ಷೇರುಗಳಿವೆ..? ಯಾರಿಗೆ ಎಷ್ಟು ಕೋಟಿ ಸಾಲ ಕೊಟ್ಟಿದ್ದಾರೆ..? ಎಷ್ಟು ಕೋಟಿ ಸಾಲ ಇವರ ಮೇಲಿದೆ..? ಈ ಎಲ್ಲ ಪ್ರಶ್ನೆಗಳಿಗೂ ಮುತಾಲಿಕ್ ನಾಮಪತ್ರ ಸಲ್ಲಿಕೆ ವೇಳೆ ಸಲ್ಲಿಸಿರುವ ಅಫಿಡವಿಟ್ನಲ್ಲಿ ಉತ್ತರ ಕೊಟ್ಟಿದ್ಧಾರೆ.
ಮುತಾಲಿಕ್ ಅವರ ಒಟ್ಟಾರೆ ಆಸ್ತಿ ಮೌಲ್ಯ 10,500 ರೂ. ಕ್ಯಾಷ್ ಮತ್ತು 2,63,500 ರೂ. ಡೆಪಾಸಿಟ್ಟು. ಅಷ್ಟೆ. ಸಾಲ ಮಾಡಿಲ್ಲ. ಸಾಲ ಕೊಟ್ಟಿಲ್ಲ. ಕೊಡುವುದಕ್ಕೆ ಹಣವೂ ಇಲ್ಲ. ಕಾರು ಇಲ್ಲ. ಮನೆಯೂ ಇಲ್ಲ. ಬೇರೆ ಆಸ್ತಿಗಳೂ ಇಲ್ಲ. ಆದರೆ ರಾಜ್ಯದ 7 ಕಡೆ ಕೇಸುಗಳಿವೆ. ಎಲ್ಲವೂ ಕೋಮು ಸೌಹಾರ್ದ ಕದಡಿದ ಆರೋಪ, ಧಾರ್ಮಿಕ ಭಾವನೆಗೆ ಧಕ್ಕೆ ಇಂತಹ ಕೇಸುಗಳೇ.
ಯಾದಗಿರಿ ಠಾಣೆ (ಪ್ರಚೋದನಾಕಾರಿ ಭಾಷಣ ಮತ್ತು ಸಶಸ್ತ್ರ ಕಾಯ್ದೆ ಉಲ್ಲಂಘನೆ), ಶೃಂಗೇರಿ ಠಾಣೆ (ಮಾನನಷ್ಟ ಮೊಕದ್ದಮೆ), ಬೆಂಗಳೂರು ಹೈಗ್ರೌಂಡ್ಸ್ ಠಾಣೆ (ಪ್ರಚೋದನಾಕಾರಿ ಭಾಷಣ, ಜೀವ ಬೆದರಿಕೆ, ಧರ್ಮಗಳ ನಡುವೆ ದ್ವೇಷ ಭಾವನೆ, ಧಾರ್ಮಿಕ ಭಾವನೆಗೆ ಧಕ್ಕೆ), ಬಬಲೇಶ್ವರ ಠಾಣೆ (ದಾರ್ಮಿಕ ಭಾವನೆಗೆ ಧಕ್ಕೆ ಮತ್ತು ಅವಾಚ್ಯ ಶಬ್ದಗಳಿಂದ ನಿಂದನೆ), ಬಾಗಲಕೋಟೆಯ ನವಸಾಗರ ಠಾಣೆ (ಧಾರ್ಮಿಕ ಭಾವನೆಗಳಿಗೆ ಧಕ್ಕೆ, ಪ್ರಚೋದನೆ, ಕೋಮು ಗಲಭೆ, ಜೀವ ಬೆದರಿಕೆ), ಜೇವರ್ಗಿ ಠಾಣೆ (ಧಾರ್ಮಿಕ ಭಾವನೆಗೆ ಧಕ್ಕೆ, ಪ್ರಚೋದನೆ, ಕೋಮು ಗಲಭೆ, ಜೀವ ಬೆದರಿಕೆ), ಮುರುಡೇಶ್ವರ ಠಾಣೆ (ಮತೀಯ ಭಾವನೆಗೆ ಧಕ್ಕೆ, ಪ್ರಚೋದನಕಾರಿ ಹೇಳಿಕೆ, ಅವಹೇಳನ, ಆದೇಶ ಉಲ್ಲಂಘನೆ) ಸೇರಿ ಒಟ್ಟು 7 ಪ್ರಕರಣಗಳು ಪ್ರಮೋದ್ ಮುತಾಲಿಕ್ ಮೇಲಿವೆ.
ಆದಾಯದ ಮೂಲ ದೇಣಿಗೆ ಸಂಗ್ರಹ. ಉದ್ಯೋಗ ಸಮಾಜಸೇವೆ ಎಂದು ಅಫಿಡವಿಟ್ ಕೊಟ್ಟಿದ್ದಾರೆ ಮುತಾಲಿಕ್. ಅಂದಹಾಗೆ ಈಗ ಸಚಿವರಾಗಿರುವ, ಮುತಾಲಿಕ್ ಅವರಿಗೆ ಪ್ರತಿಸ್ಪರ್ಧಿಯಗಿರುವ ಸುನಿಲ್ ಕುಮಾರ್, ಒಂದು ಕಾಲದಲ್ಲಿ ಮುತಾಲಿಕ್ ಜೊತೆಯಲ್ಲೆ ಇದ್ದವರು. ಇವರನ್ನು ಗುರು-ಶಿಷ್ಯರ ಯುದ್ಧ ಎಂದೇ ಹೇಳಬಹುದು.



